‘ಕ್ರಾಂತಿ’ಯ ಪ್ರತಿಭಟನಾ ಗೀತೆಗಳು

7

‘ಕ್ರಾಂತಿ’ಯ ಪ್ರತಿಭಟನಾ ಗೀತೆಗಳು

Published:
Updated:

ಸಾಮಾಜಿಕ ಅಸಮಾನತೆ , ತುಳಿತಕ್ಕೊಳಗಾದ ಕಾರ್ಮಿಕರು ಮತ್ತು ಅವರ ಸಂಘಟನೆಗಳು, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಜಾತಿ ವ್ಯವಸ್ಥೆ ಈ ನಾಲ್ಕು ವಿಷಯಗಳ ಕುರಿತು ದೇಶದಾದ್ಯಂತ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ ‘ಕ್ರಾಂತಿ’.

ದೇಶದ ಪ್ರತಿಷ್ಠಿತ ಕಾನೂನು ಶಾಲೆ ‘ನ್ಯಾಷನಲ್‌ ಲಾ ಸ್ಕೂಲ್‌’ನಲ್ಲಿ ಈಗಷ್ಟೇ ಕಾನೂನು ಪದವಿ ಪೂರೈಸಿರುವ ಸಹನಾ ಮತ್ತು ಪ್ರೇಮ್‌ ಎಂಬ ಇಬ್ಬರ ಕನಸು ಇದು. ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆಯಾದರೂ ಇಲ್ಲಿ ಅಸಮಾನತೆ, ದೌರ್ಜನ್ಯ, ಹಕ್ಕುಗಳ ಉಲ್ಲಂಘನೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಇದು ಸಮಾಜಕ್ಕೆ ಅಂಟಿದ ಶಾಪ. ಯುವಕರಲ್ಲಿ ಈ ಕುರಿತು ಜಾಗೃತಿ ಮೂಡಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿಷ್ಠಗೊಳಿಸಬಹುದು ಎಂಬ ಉದ್ದೇಶವನ್ನಿಟ್ಟುಕೊಂಡು ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.‘‘ಕಳೆದ ತಿಂಗಳು ಜುಲೈ 19ರಿಂದ ‘ಕ್ರಾಂತಿ’ ಸಕ್ರಿಯವಾಗಿದೆ. ಸಮಾಜಕ್ಕೆ ಪಿಡುಗಾಗಿ ಪರಿಣಮಿಸಿರುವ ಕೆಲವೊಂದು ಸೂಕ್ಷ್ಮ ವಿಷಯಗಳನ್ನಿಟ್ಟುಕೊಂಡು ವಿದ್ಯಾರ್ಥಿಗಳ ಜೊತೆ ಸಂವಾದ/ಸಮ್ಮೇಳನ ನಡೆಸಬೇಕು ಎಂಬುದು ನಮ್ಮ ಮೊದಲಿನ ಯೋಚನೆಯಾಗಿತ್ತು. ಆದರೆ, ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಬರೀ ಸಂವಾದ ನಡೆಸುವುದರ ಬದಲು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ನಮ್ಮ ಸಂಸ್ಕೃತಿ, ಕಲೆಯ ಸ್ಪರ್ಶ ನೀಡಿದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದು ಎನಿಸಿತು.

ಆಗಿನಿಂದ ನಾವು ಅಸಮಾನತೆ, ಕಾರ್ಮಿಕ ಸಂಘಟನೆ, ಮಾನವ ಹಕ್ಕುಗಳು, ಜಾತಿ ಸಂಬಂಧಿ ಸಮಸ್ಯೆಗಳನ್ನು ಬಿಂಬಿಸುವ ಸಾಕ್ಷ್ಯಚಿತ್ರ, ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ನಮ್ಮ ಈ ಕಾರ್ಯವನ್ನು ಅನೇಕ ಖ್ಯಾತನಾಮರು ಬೆಂಬಲಿಸುತ್ತಾ ಬಂದಿದ್ದಾರೆ’’ ಎಂದು ಹೇಳುತ್ತಾರೆ ಸಹನಾ.ಅಂದಹಾಗೆ, ಬೆಂಗಳೂರು, ಮೈಸೂರು, ದೆಹಲಿ, ಕೋಲ್ಕತ್ತಾ, ಜೋಧ್‌ಪುರ್‌, ಕಟಕ್‌ ಮೊದಲಾದ ನಗರಗಳಲ್ಲಿ ‘ಕ್ರಾಂತಿ’ಯ ಹೆಜ್ಜೆಗುರುತುಗಳು ಮೂಡಿವೆ. ಸೆಪ್ಟೆಂಬರ್‌ 7 ಮತ್ತು 8ರಂದು ‘ಕ್ರಾಂತಿ’ ದೊಡ್ಡದೊಂದು ಕಾರ್ಯಕ್ರಮವನ್ನು ನಗರದಲ್ಲಿ ಹಮ್ಮಿಕೊಂಡಿದೆ. ‘ಸಾಂಗ್ಸ್‌ ಆಫ್‌ ಪ್ರೊಟೆಕ್ಷನ್‌’ ಎಂಬುದು ಕಾರ್ಯಕ್ರಮದ ಹೆಸರು.

ಶನಿವಾರ ಸಂಜೆ 4ಕ್ಕೆ ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರದ ಸಂಸ ಆ್ಯಂಪಿ ಥಿಯೇಟರ್‌ನಲ್ಲಿ ಆರಂಭಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ತಮಿಳುನಾಡಿನ ಕಬೀರ್‌ ಕಲಾ ಮಂಚ್‌, ಮಕ್ಕೈ ಮಂದ್ರಂ ಮತ್ತು ಸಾಂಬಾಜೀ ಭಗತ್‌ ಅವರು ಪ್ರತಿಭಟನಾ ಗೀತೆಗಳನ್ನು ಹಾಡಲಿದ್ದಾರೆ. ಮೈನವಿರೇಳಿಸುವ ಕ್ರಾಂತಿ ಗೀತೆಗಳನ್ನು ಹಾಡುವುದರ ಜೊತೆಗೆ ಅವರು ಸಾರ್ವಜನಿಕರೊಂದಿಗೆ ಚರ್ಚೆ ಕೂಡ ನಡೆಸಲಿದ್ದಾರೆ. ಇವರ ಕ್ರಾಂತಿ ಗೀತೆಗಳು ಮೇಲಿನ ನಾಲ್ಕು ವಿಷಯಕ್ಕೆ ಸಂಬಂಧಿಸಿದ್ದಾಗಿರುತ್ತವೆ.ಭಾನುವಾರ ಬೆಳಿಗ್ಗೆ 10ಕ್ಕೆ ‘ರೀಲ್‌ ರೆವಲ್ಯೂಷನ್’ ಎಂಬ ಕಾರ್ಯಕ್ರಮವಿರುತ್ತದೆ. ಖ್ಯಾತ ನಟ ಆನಂದ್‌ ಪಟವರ್ಧನ್‌ ಅವರ ಚಿತ್ರಗಳಿಗೆ ಸಂಬಂಧಿಸಿದಂತಹ ಚರ್ಚೆ ಮತ್ತು ‘ಜೈ ಭೀಮ್‌ ಕಾಮ್ರೆಡ್‌’ ಪ್ರದರ್ಶನ ಏರ್ಪಡಿಸಲಾಗಿದೆ. ಇವರ ಜತೆ ತರು ದಾಲ್ಮಿಯಾ ವೇದಿಕೆ ಹಂಚಿಕೊಳ್ಳಲಿದ್ದಾರೆ.‘ಯುವ ಜನತೆ ಮತ್ತು ವಿದ್ಯಾರ್ಥಿಗಳನ್ನೇ ನಾವು ಗಮನದಲ್ಲಿಟ್ಟುಕೊಂಡು ನಾವು ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಸಾರ್ವಜನಿಕರೆಲ್ಲರೂ ಮುಕ್ತವಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ನಮ್ಮ ಈ ಕಾರ್ಯಕ್ರಮಕ್ಕೆ ಕರ್ನಾಟಕ ವಿದ್ಯಾರ್ಥಿ ಸಂಘಟನೆ, ಪೆಡೆಸ್ಟ್ರಿಯನ್‌ ಪಿಕ್ಚರ್ಸ್‌ನ ದೀಪು, ಖ್ಯಾತ ಛಾಯಾಗ್ರಾಹಕ ಜಾವೇದ್‌ ಇಕ್ಬಾಲ್‌, ಆನಂದ್‌ ಪಟವರ್ಧನ್‌ ಮೊದಲಾದ ಖ್ಯಾತನಾಮರು, ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವರು ಬೆಂಬಲಿಸಿ ಪ್ರೋತ್ಸಾಹಿಸಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ಸಹನಾ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry