‘ಕ್ರೀಡಾಕೂಟ ನಾಮಕಾವಸ್ಥೆ ಆಗದಿರಲಿ’

7

‘ಕ್ರೀಡಾಕೂಟ ನಾಮಕಾವಸ್ಥೆ ಆಗದಿರಲಿ’

Published:
Updated:

ಚಿತ್ರದುರ್ಗ: ಜಿಲ್ಲಾಮಟ್ಟದ ಕ್ರೀಡಾಕೂಟಗಳು ರಾಜ್ಯಮಟ್ಟಕ್ಕೆ ಉತ್ತಮ ಕ್ರೀಡಾಪಟುಗಳನ್ನು ತಯಾರು ಮಾಡುವಂತಿರಬೇಕೇ ಹೊರತು ನಾಮಕಾವಸ್ಥೆ ಕ್ರೀಡಾಕೂಟಗಳು ಆಗಬಾರದು ಎಂದು ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.ನಗರದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಹೊಳಲ್ಕೆರೆಯ ಎಂ.ಎಂ.ಸರ್ಕಾರಿ ಪದವಿಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.ಕ್ರೀಡೆಗಳು ದೈವತ್ವ ಗುಣದಿಂದ ಲಭಿಸಿರುವ ವರವಾಗಿದೆ. ಜಿಲ್ಲೆಯಲ್ಲಿ ಕ್ರೀಡಾಪ್ರತಿಭೆಗಳು ಸಾಕಷ್ಟು ಮಂದಿ ಇದ್ದು, ಈ ಹಿಂದೆ ರಾಜ್ಯಕ್ಕೆ ಕೀರ್ತಿ ತಂದುಕೊಟ್ಟ ಹಿರಿಮೆ ಅವರಿಗೆ ಸಲ್ಲಬೇಕು. ಅಂತಹ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯದಿರುವುದು ವಿಷಾದದ ಸಂಗತಿ ಎಂದರು.ಸಂವಿಧಾನ ಬದ್ಧವಾಗಿ ಕ್ರೀಡಾ ಹಾಗೂ ಶಿಕ್ಷಣ ಇಲಾಖೆಗಳು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು. ಆದರೆ, ನಮ್ಮಲ್ಲಿ ಸರ್ಕಾರದಿಂದ ತಾಲ್ಲೂಕು ಮಟ್ಟಕ್ಕೆ ಕೇವಲ ` 3ಸಾವಿರ ಹಾಗೂ ಜಿಲ್ಲಾ ಮಟ್ಟಕ್ಕೆ ` 15ಸಾವಿರ ಅನುದಾನ ಮಾತ್ರ ದೊರೆಯುತ್ತಿದ್ದು, ಕ್ರೀಡಾ ಚಟುವಟಿಕೆಗಳಿಗೆ ಸಮರ್ಪಕ ಅನುದಾನ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಜಿಲ್ಲಾ ಉಸ್ತುವಾರಿ ಸಚಿವಎಚ್‌.ಆಂಜನೇಯ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ದೃಶ್ಯ ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗಿ ಉತ್ತಮ ಭವಿಷ್ಯ ಹಾಳು ಮಾಡಿಕೊಳ್ಳುವ ಬದಲು ಕ್ರೀಡೆ ಹಾಗೂ ಶಿಕ್ಷಣದ ಕಡೆ ಹೆಚ್ಚಿನ ಗಮನಹರಿಸಿ ಸಾಧನೆಯತ್ತ ದಾಪುಗಾಲಿಡಬೇಕು ಎಂದು ಸಲಹೆ ನೀಡಿದರು.ಜಿಲ್ಲೆಯ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದರು.ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಇಂದಿರಾ, ಯುವ ಜನಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಇಂದಿರಾದೇವಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಜಿ.ಶಿವಣ್ಣ, ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್‌, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ದೈಹಿಕ ಶಿಕ್ಷಕರು ಹಾಜರಿದ್ದರು.ಬಾಲಕ–ಬಾಲಕಿಯರ 25 ಗುಂಪು ಆಟಗಳು ನಡೆಯಲಿದ್ದು, ಜಿಲ್ಲಾಮಟ್ಟಕ್ಕೆ ಆಯ್ಕೆಯಾದ 68 ಕಾಲೇಜಿನ 450 ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಂಚಾಲಕ ಜ್ಞಾನಮೂರ್ತಿತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry