‘ಗದಗ–ಹೊಟಗಿ ಜೋಡಿ ರೈಲು ಮಾರ್ಗ’

7

‘ಗದಗ–ಹೊಟಗಿ ಜೋಡಿ ರೈಲು ಮಾರ್ಗ’

Published:
Updated:

ವಿಜಾಪುರ: ‘ಗದಗ ಮತ್ತು ಸೋಲಾಪುರದ ಹೊಟಗಿ ಮಧ್ಯೆ ಜೋಡಿ ರೈಲು ಮಾರ್ಗ ನಿರ್ಮಿಸಲು ಕೇಂದ್ರ ಸರ್ಕಾರ ಸಮ್ಮತಿಸಿದ್ದು, ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಸಿದ್ಧತೆ ಆರಂಭಿಸಿದೆ’ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ಈ ಜೋಡಿ ರೈಲು ಮಾರ್ಗ ಆಗಬೇಕು ಎಂಬುದು ಜನತೆಯ ಬಹುದಿನಗಳ ಆಸೆಯಾಗಿತ್ತು. ಬಸವನ ಬಾಗೇವಾಡಿ ತಾಲ್ಲೂಕಿನ ಕೂಡಗಿಯಲ್ಲಿ 4000 ಮೆಗಾ ವಾಟ್‌ ಸಾಮರ್ಥ್ಯದ ಉಷ್ಣ ವಿದ್ಯುತ್‌ ಸ್ಥಾವರ ಸ್ಥಾಪನೆಯಾಗುತ್ತಿರುವುದರಿಂದ ಈ ಬೇಡಿಕೆಗೆ ಬಲ ಬಂದಿದೆ ಎಂದು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕೂಡಗಿ ಉಷ್ಣ ವಿದ್ಯುತ್‌ ಸ್ಥಾವರಕ್ಕೆ ಕಲ್ಲಿದ್ದಲು ಸಾಗಿಸಲು ಗೋವಾದಿಂದ ಕೂಡಗಿಯವರೆಗೆ ಹೊಸ ರೈಲು ಮಾರ್ಗ ನಿರ್ಮಿಸಲು ಚಿಂತಿಸಲಾಗಿತ್ತು. ಕಾಮಗಾರಿ ತ್ವರಿತವಾಗಿ ಆಗಲಿ ಎಂಬ ಕಾರಣಕ್ಕೆ ಗದಗ–ಹೊಟಗಿ ಮಾರ್ಗ ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ ಎಂದರು.‘ಈ ಕುರಿತು ನಾನು ಪ್ರಧಾನಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದೆ. ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ರೈಲ್ವೆ ಸಚಿವರಾದ ನಂತರ ಅವರನ್ನು ಖುದ್ದಾಗಿ ಭೇಟಿಯಾಗಿ ಚರ್ಚಿಸಿದ್ದೇನೆ. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರಾಜ್ಯ ಸರ್ಕಾರ ಎಷ್ಟು ಬೇಗ ಭೂಮಿ ಒದಗಿಸಿಕೊಡುತ್ತದೆಯೋ ಅಷ್ಟು ಬೇಗ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.‘ಈ ಮಾರ್ಗಕ್ಕೆ ಅಗತ್ಯವಿರುವ ಭೂ ಸ್ವಾಧೀನ ಮತ್ತಿತರ ಪ್ರಕ್ರಿಯೆ ಶೀಘ್ರ ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಂಗನಾಥ ಅವರಿಗೆ ವಿನಂತಿಸಿದ್ದು, ಆ ನಿಟ್ಟಿನಲ್ಲಿ ಅವರೂ ಕಾರ್ಯೋನ್ಮುಖರಾಗಿದ್ದಾರೆ’ ಎಂದರು.ರೈಲ್ವೆ ಮೇಲ್ಸೇತುವೆ: ‘ವಿಜಾಪುರದ ಇಬ್ರಾಹಿಂಪೂರ ಮತ್ತು ವಜ್ರ ಹನುಮಾನ ನಗರದಲ್ಲಿರುವ ರೈಲ್ವೆ ಲೇವಲ್‌ ಕ್ರಾಸಿಂಗ್‌ಗೆ ಮೇಲ್ಸೇತುವೆ ನಿರ್ಮಿಸಲು ನಾನು ಬದ್ಧ. ಬೆಂಗಳೂರಿಗೆ ಹೋಗುವ ರೈಲಿನ ವೇಳೆ ಬದಲಾಯಿಸಲು ನಾಲ್ಕು ವರ್ಷ ಬೇಕಾಯಿತು. ಕೆಲ ತೊಡಕುಗಳಿದ್ದು, ನನ್ನ ಈ ಅವಧಿಯಲ್ಲಿ ಮೇಲ್ಸೇತುವೆ ಕಾಮಗಾರಿ ಮುಗಿಸುತ್ತೇನೆ ಎಂದು ಭರವಸೆ ನೀಡುವುದಿಲ್ಲ’ ಎಂದು ಜಿಗಜಿಣಗಿ ಹೇಳಿದರು.ಪ್ರಸ್ತಾವ ಸಲ್ಲಿಸಿಲ್ಲ: ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆ ಹಾನಿಯಾಗಿ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಅವರಿಗೆ ನೆರವು ನೀಡುವಂತೆ ಕೇಂದ್ರ ಕೃಷಿ ಸಚಿವ ಶರದ್‌ ಪವಾರ ಅವರನ್ನು ಭೇಟಿಯಾಗಿ ವಿನಂತಿಸಿದ್ದೇವೆ. ಆದರೆ, ರಾಜ್ಯ ಸರ್ಕಾರ ಇನ್ನೂ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಯಡಿಯೂರಪ್ಪ ಬಂದರೆ ಸ್ವಾಗತ

ವಿಜಾಪುರ: ‘ರಾಜಕಾರಣ ನಿಂತ ನೀರಲ್ಲ. ಯಡಿಯೂರಪ್ಪ ಅವರನ್ನು ನಾನು ಹಿಂದೆ ವಿರೋಧಿಸಿದ್ದೆ. ಅವರಾಗಿಯೇ ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇನೆ’ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

‘ಕಳೆದ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯನ್ನಾಗಿ ಎಲ್‌.ಕೆ. ಅಡ್ವಾಣಿ ಅವರನ್ನು ಘೋಷಿಸಲಾಗಿತ್ತು. ಆದರೆ, ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಈಗ ಜನರ ಬಯಕೆಯಂತೆ ನರೇಂದ್ರ ಮೋದಿ ಅವರಿಗೆ ಅವಕಾಶ  ನೀಡಿ ದೇಶದಲ್ಲಿ ಹೊಸ ಅಧ್ಯಾಯ ಆರಂಭಿಸಲಾಗಿದೆ. ಇದು ಅಡ್ವಾಣಿ ಅವರನ್ನು ಕಡೆಗಣಿಸಿದಂತಲ್ಲ’ ಎಂದು ಸಮರ್ಥಿಸಿಕೊಂಡರು.‘ನಾನು ಕಾಂಗ್ರೆಸ್‌ ಸೇರುವುದಿಲ್ಲ. ಕಾಂಗ್ರೆಸ್ಸಿಗರು ಹೊಟ್ಟಿಕಿಚ್ಚಿನಿಂದ ನನ್ನ ಹೆಸರು ಕೆಡಿಸಲು ಅಪಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ಮೇಲೆ ನನಗೆ ವಿಶ್ವಾಸವೇ ಇಲ್ಲ. ಬಿಜೆಪಿ ಟಿಕೆಟ್‌ ಕೊಟ್ಟರೆ ಮತ್ತೊಂದು ಅವಧಿಗೆ ಸ್ಪರ್ಧಿಸುತ್ತೇನೆ’ ಎಂದು ಜಿಗಜಿಣಗಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry