‘ಗಾಂಧಿ’ ಹಾದಿಯ ಪಥಿಕ: ಸುರೇಂದ್ರ ಕೌಲಗಿ

7
ವ್ಯಕ್ತಿ

‘ಗಾಂಧಿ’ ಹಾದಿಯ ಪಥಿಕ: ಸುರೇಂದ್ರ ಕೌಲಗಿ

Published:
Updated:

ಪ್ರಶಸ್ತಿ ಬಂದರೆ ಸಂಭ್ರಮ ಆಗಬೇಕಾದ್ದು ಸಹಜ. ಆದರೆ ‘ಆ ಮಟ್ಟ ತಲುಪಲು ನಾನೇನೂ ಮಾಡಿಲ್ಲವಲ್ಲ’ ಎಂದು ಕೊರಗುವವರು ನಮ್ಮ ಮಧ್ಯೆಯೇ ಇರುವುದು ಸೋಜಿಗ. ಅವರು ಸುರೇಂದ್ರ ಕೌಲಗಿ. ಗಾಂಧೀವಾದ, ಗಾಂಧಿ ಸಿದ್ಧಾಂತ, ಮೌಲ್ಯ, ಆದರ್ಶ ಎಂಬಿತ್ಯಾದಿ ಪದಪುಂಜಗಳೆಲ್ಲ ಬರೀ ತೋರಿಕೆಗೆ ಸೀಮಿತವಾದ ಇಂದಿನ ಸಮಯದಲ್ಲಿ, ಗಾಂಧಿ ಹೇಗೆ ಪ್ರಸ್ತುತ ಎಂಬುದನ್ನು ಕೌಲಗಿ ತೋರಿಸಿಕೊಡುತ್ತಿದ್ದಾರೆ. ಪ್ರಸ್ತುತ ಸಾಲಿನ ರಾಷ್ಟ್ರೀಯ ಮಟ್ಟದ ‘ಜಮ್ನಲಾಲ್‌ ಬಜಾಜ್‌’ ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಾಗ ಪತ್ನಿ ಗಿರಿಜಮ್ಮ ಅವರಿಗೆ ಸುರೇಂದ್ರ ಅವರು ನೀಡಿದ ಪ್ರತಿಕ್ರಿಯೆ: ‘ನಂಗೆ ಖುಷಿಯಾಗಲಿಲ್ಲ. ಆ ಪ್ರಶಸ್ತಿಯ ಮಟ್ಟಕ್ಕೆ ಅಥವಾ ಈಗಾಗಲೇ ಪಡೆದಿರೋ ದೊಡ್ಡವರ ಮಟ್ಟಕ್ಕೆ ನಾನೇನು ಮಾಡಿಲ್ಲ ಅನಿಸ್ತಿದೆ’.ಉತ್ತರ ಕರ್ನಾಟಕದ ಸಾಮಾನ್ಯ ಕುಟುಂಬದ ಹುಡುಗನೊಬ್ಬ, ಆದರ್ಶಗಳ ಬೆನ್ನುಬಿದ್ದು ತನ್ನ ಜೀವಮಾನದುದ್ದಕ್ಕೂ ಅದೇ ದಾರಿಯಲ್ಲಿ ನಡೆಯುತ್ತ ಬಂದಿರುವುದು ವಿಸ್ಮಯಗೊಳಿಸುವಂಥದು. ಹಾಗೆಂದು ಅವರು ಹಳೆಯ ಕಾಲಮಾನಕ್ಕೆ ಜೋತು ಬಿದ್ದಿಲ್ಲ. ಹೊಸ ತಲೆಮಾರಿನ ಜತೆ ಸಂವಾದ ನಡೆಸುತ್ತ, ಪ್ರಸ್ತುತ ಕಾಲಕ್ಕೂ ಹೊಂದಿಕೊಂಡು ಬದುಕುತ್ತಿದ್ದಾರೆ.ಧಾರವಾಡ ಜಿಲ್ಲೆಯ ಗುಡಿಗೇರಿ ಗ್ರಾಮದ ವೆಂಕಟೇಶ ಕೌಲಗಿ ಹಾಗೂ ಪದ್ಮಾಬಾಯಿ ಅವರ ಪುತ್ರನಾಗಿ ಸುರೇಂದ್ರ ಜನಿಸಿದರು. ಬಾಲ್ಯದಿಂದಲೇ ಪತ್ರಿಕೆಗಳಲ್ಲಿನ ಲೇಖನಗಳನ್ನು ಓದುವುದು ರೂಢಿಸಿಕೊಂಡ ಸುರೇಂದ್ರ, ರಾಷ್ಟ್ರೀಯತೆ ಪ್ರತಿಪಾದಿಸುವ ಲೇಖನಗಳಿಂದ ಪ್ರಭಾವಿತರಾಗಿದ್ದರು. ವಿದ್ಯಾರ್ಥಿ ದೆಸೆಯಲ್ಲೇ ಅವರು ಕರ್ನಾಟಕ ಏಕೀಕರಣ ವಿಚಾರದಿಂದ ಪ್ರೇರಿತರಾಗಿ, ‘ಕರ್ನಾಟಕದ ಅವಿಭಾಜ್ಯ ಅಂಗ ಬೆಳಗಾವಿ’ ಎಂದು ಪ್ರತಿಪಾದಿಸಿ ಬರೆದ ಕೆಲವು ಪತ್ರಗಳು ಇಂಗ್ಲಿಷ್‌ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಮೆಟ್ರಿಕ್ ಬಳಿಕ ಕಾಲೇಜು ಸೇರಿದರೂ, ಬಡತನದಿಂದಾಗಿ ಕಾಲೇಜು ಶಿಕ್ಷಣ ಅರ್ಧಕ್ಕೇ ನಿಂತಿತು. ಅಲ್ಲಿಂದ ಅವರು ಔಪಚಾರಿಕ ಶಿಕ್ಷಣಕ್ಕಿಂತ ಜೀವನ ಶಾಲೆ ಮತ್ತು ಸಾಮಾಜಿಕ ವರ್ತಮಾನದ ಗರಡಿಯಲ್ಲೇ ‘ಶಿಕ್ಷಣ’ ಪಡೆಯುವಂತಾಯಿತು.ಗಾಂಧೀವಾದದ ಜಾಡಿನಲ್ಲಿ ಹೆಜ್ಜೆ ಹಾಕುತ್ತಿರುವ ಸುರೇಂದ್ರ ಕೌಲಗಿ ಅವರ ಬದುಕು ಹಲವು ವಿಶಿಷ್ಟ ಅನುಭವಗಳ ಗುಚ್ಛ. ತಾರುಣ್ಯದಲ್ಲೇ ಅವರಿಗೆ ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರ ಕಾರ್ಯದರ್ಶಿಯಾಗಿ ಕೆಲಸ ಮಾಡುವ ಅನುಭವ ಸಿಕ್ಕಿತು. ‘ಆಗಿನ್ನೂ ನಾನು ಬೌದ್ಧಿಕವಾಗಿ ಅಷ್ಟೊಂದು ಪ್ರಬುದ್ಧ ಆಗಿರಲಿಲ್ಲ. ಅವರ ಮೂಲಕ ನಾನು ಬೆಳೆದೆನೇ ಹೊರತೂ ಬೆಳೆದ ಬಳಿಕ ಅವರ ಬಳಿಗೆ ಹೋಗಲಿಲ್ಲ ಎಂಬುದೇ ನನ್ನ ದೊಡ್ಡ ಕೊರಗು’ ಎಂದು ಆ ದಿನಗಳನ್ನು ನೆನೆಯುತ್ತಾರೆ.ಐದು ವರ್ಷಗಳ ಆ ಅವಧಿಯಲ್ಲಿ ಜೆಪಿ ಹಾಗೂ ಅವರ ಪತ್ನಿ ಪ್ರಭಾವತಿ ವ್ಯಕ್ತಿತ್ವ ಸುರೇಂದ್ರ ಅವರನ್ನು ಸಾಕಷ್ಟು ಪ್ರಭಾವಿಸಿದೆ. ಅದರಲ್ಲೂ ಅವರಿಬ್ಬರು ಅಳವಡಿಸಿಕೊಂಡಿದ್ದ ಶಿಸ್ತು ಬೆರಗು ಮೂಡಿಸಿದೆ. ‘ಬಟ್ಟೆ ತೊಳೆಯುವುದೆಂದರೆ ಬರೀ ಒಂದು ಕೆಲಸ ಎಂದುಕೊಂಡಿದ್ದ ನಮಗೆ, ಅದನ್ನು ಶಿಸ್ತಿನಿಂದ ಹೇಗೆ ಮಾಡಬೇಕು ಅಂತ ಹೇಳಿಕೊಟ್ಟಿದ್ದೇ ಪ್ರಭಾವತಿಯವರು’ ಎನ್ನುತ್ತಾರೆ ಸುರೇಂದ್ರ. ಒಮ್ಮೆ ಅವರು ಕಸಗುಡಿಸುತ್ತಿರುವಾಗ ಕಿಟಕಿ ಮೂಲಕ ನೋಡಿದ ಜೆಪಿ, ಹೊರಗೆ ಬಂದು ಪೊರಕೆ ತೆಗೆದುಕೊಂಡು ‘...ಹಾಗಲ್ಲ.ಹೀಗೆ’ ಎಂದು ಕಸಗುಡಿಸುವ ಬಗೆಯನ್ನು ತೋರಿಸಿದರಂತೆ! ತಾವು ಜೈಲಿನಲ್ಲಿ ಇದ್ದಾಗ ಇದನ್ನು ಕಲಿತಿದ್ದಾಗಿ ಜೆಪಿ ಹೇಳಿದ್ದರಂತೆ. ವಿನೋಬಾ ಭಾವೆ ಅವರ ಜತೆ ಭೂದಾನ ಚಳವಳಿಯಲ್ಲೂ ಸುರೇಂದ್ರ ಭಾಗಿಯಾಗಿದ್ದಾರೆ.ಸಮುದಾಯ, ಗ್ರಾಮೀಣ ಅಭಿವೃದ್ಧಿ ಚಟುವಟಿಕೆಗಳಿಗೆ ಸ್ಪಷ್ಟ ರೂಪು ಕೊಡುವ ಉದ್ದೇಶದಿಂದ ಸುರೇಂದ್ರ ಕೌಲಗಿ ಅವರು 1960ರಲ್ಲಿ ಮೇಲುಕೋಟೆಯಲ್ಲಿ ‘ಜನಪದ ಸೇವಾ ಟ್ರಸ್ಟ್‌’ ಸ್ಥಾಪಿಸಿದರು. ದುರ್ಬಲರಿಗೆ ಚೈತನ್ಯ ನೀಡುವ ಹಲವು ಕಾರ್ಯಕ್ರಮಗಳನ್ನು ನಡೆಸುವುದು ಅವರ ಉದ್ದೇಶವಾಗಿತ್ತು. ಟ್ರಸ್ಟ್‌ನ ನೆರಳಲ್ಲೇ ಅಂಗವಿಕಲ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ವಸತಿ ಸೌಲಭ್ಯ ನೀಡುವ ‘ಕರುಣಾಗೃಹ’ (1963) ಆರಂಭವಾಯಿತು.ಅಹಿಂಸಾತ್ಮಕ ಜೀವನ ವಿಧಾನಗಳ ಹುಡುಕಾಟಕ್ಕೆ ಪ್ರೇರೇಪಣೆ ನೀಡುವ ‘ಹೊಸ ಜೀವನ ದಾರಿ’ಗೆ ಚಾಲನೆ ನೀಡಿದರು. ಗಾಂಧೀಜಿ ಅಂದಮೇಲೆ ಖಾದಿ ಇರಲೇಬೇಕಲ್ಲ? ಚರಕ ಹಾಗೂ ಕೈಮಗ್ಗದ ಚಟುವಟಿಕೆಗಳನ್ನು ಅಪಾರವಾಗಿ ಪ್ರೀತಿಸುವ ಕೌಲಗಿಯವರು, 1980ರಲ್ಲಿ ಖಾದಿ ಗ್ರಾಮೋದ್ಯೋಗದ ತರಬೇತಿ ಹಾಗೂ ಉತ್ಪಾದನಾ ಕೇಂದ್ರ ಸ್ಥಾಪಿಸಿದರು. ನಶಿಸುತ್ತಿರುವ ಖಾದಿ ಕೌಶಲಕ್ಕೆ ಮತ್ತೆ ಜೀವ ಕೊಡುವ ಉದ್ದೇಶದಿಂದ ಆರಂಭವಾದ ಈ ಕೇಂದ್ರದಲ್ಲಿ ಬ್ಯಾಗ್‌, ಕುರ್ತಾ, ರಜಾಯಿ ಇತರ ಉತ್ಪನ್ನಗಳು ಸಿದ್ಧಗೊಳ್ಳುತ್ತಿವೆ.ಕತ್ತಲೆಯಲ್ಲಿ ಮುಳುಗಿದ ಜಗತ್ತಿಗೆ ಗಾಂಧಿ ತತ್ವಗಳು ಖಂಡಿತ ಬೆಳಕು ನೀಡಬಲ್ಲವು ಎಂಬುದು ಸುರೇಂದ್ರ ಕೌಲಗಿಯವರ ಅಚಲ ವಿಶ್ವಾಸ. ‘ಈಗೇನೋ ಜಗತ್ತು ಗಾಂಧಿ ತತ್ವದಿಂದ ದೂರ ಸರಿದಂತೆ ಕಾಣುತ್ತಿದೆ. ಆದರೆ ಇದು ತಿರುಗುವ ಚಕ್ರದಂತೆ. ಮೇಲೆ ಹೋಗಿರುವುದು ಕೆಳಕ್ಕೆ ಬರಲೇಬೇಕಲ್ಲ?’ ಎನ್ನುತ್ತಾರೆ. ಯಾವುದೇ ವಿಷಯ ಕುರಿತು ಆಳ ಹಾಗೂ ಗಂಭೀರವಾಗಿ ಯೋಚಿಸುತ್ತ ಹೋದರೆ ಅದು ಗಾಂಧಿಯನ್ನು ತಲುಪುತ್ತದೆ ಎಂಬುದು ಕೌಲಗಿಯವರ ಪ್ರತಿಪಾದನೆ.ಈಗ ನಾವು ನೋಡುತ್ತಿರುವಂತೆ, ಭೋಗದಲ್ಲಿ ಮುಳುಗಿದ ಜಗತ್ತು ಅದರಿಂದ ಹೊರಬರಲು ಯತ್ನಿಸುತ್ತದೆ. ಸತತ ಪ್ರಯತ್ನಗಳ ಬಳಿಕ ಕಾಣಿಸುವ ವಿಚಾರ ಗಾಂಧಿ ಮಾರ್ಗ ಬಿಟ್ಟು ಬೇರೊಂದಾಗಿರುವುದಿಲ್ಲ ಎಂದು ಅವರು ಪ್ರತಿಪಾದಿಸುತ್ತಾರೆ. ಟಿಮ್ ಜಾಕ್ಸನ್‌ ಅವರ ‘ಪ್ರಾಸ್ಪೆರಿಟಿ ವಿತೌಟ್ ಗ್ರೋಥ್’ ಪುಸ್ತಕವನ್ನು ಓದಿದ ಬಳಿಕ ‘ಅರೆ!ಜಾಕ್ಸನ್‌ ಕೂಡ ಗಾಂಧಿ ಹೇಳಿದ್ದನ್ನೇ ಹೇಳಿದ್ದಾನಲ್ಲ?’ ಅನಿಸಿದೆ. ಜಗತ್ತನ್ನು ಕಾಡುವ ಎಲ್ಲ ಸಮಸ್ಯೆಗಳಿಗೆ ಚರಕದಲ್ಲಿ ಉತ್ತರವಿದೆ. ಹೀಗಾಗಿ ಅದು ಬರೀ ನೂಲುವ ಯಂತ್ರವಲ್ಲ; ಅದೊಂದು ಮೌಲ್ಯ ಎಂಬ ನಂಬಿಕೆ ಅವರದು.

ಸುರೇಂದ್ರ ಅವರು ಆರಂಭಿಸಿದ ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್‌ನ ಕಾರ್ಯಚಟುವಟಿಕೆಗಳನ್ನು ಪುತ್ರ ಸಂತೋಷ ಕೌಲಗಿ ಅಷ್ಟೇ ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಹಾಗೆ ನೋಡಿದರೆ, ಸಂತೋಷ ಅವರು ಗಾಂಧಿಯಿಂದ ದೂರ ಹೋಗುವ ಪ್ರಯತ್ನ ನಡೆಸಿದವರೇ!‘ನಾನು ಸುಸ್ಥಿರ ಕೃಷಿ ಅಧ್ಯಯನ ಮಾಡುತ್ತಿದ್ದಾಗ ಅಚ್ಚರಿಗಳ ಕಂತೆಯಂತೆ ಕಂಡಿದ್ದು ಜಪಾನಿನ ಸಹಜ ಕೃಷಿ ಋಷಿ ಮಸನೊಬು ಫುಕುವೊಕ. ಆತನಿಗೆ ಖ್ಯಾತಿ ತಂದು ಕೊಟ್ಟಿದ್ದು ‘ಒಂದು ಹುಲ್ಲಿನ ಕ್ರಾಂತಿ’ ಪುಸ್ತಕ. ತನ್ನ ಕೃಷಿ ವಿಧಾನ ಗಾಂಧಿ ವಿಚಾರಕ್ಕೆ ಸಮಾನವಾದುದು ಎಂದು ಫುಕುವೊಕ ಹೇಳಿದ್ದು ಗೊತ್ತಾಗಿ ನಾನು ಮತ್ತೆ ಗಾಂಧಿಯತ್ತ ಹೊರಳಿದೆ’ ಎಂದು ಸಂತೋಷ ನೆನಪಿಸಿಕೊಳ್ಳುತ್ತಾರೆ.ಎರಡು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ಈಗ ಚೇತರಿಸಿಕೊಂಡಿರುವ ಕೌಲಗಿಯವರು, ಟ್ರಸ್ಟ್‌ನ ಎಲ್ಲ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ. ಸತತವಾಗಿ ಪ್ರಕಟಿಸುತ್ತಾ ಬಂದಿರುವ ‘ಜನಪದ ವಿಚಾರ’ವನ್ನೂ ತಾವೇ ಸಂಪಾದಿಸಿ ಪ್ರಕಟಿಸುತ್ತಿದ್ದಾರೆ. ಬೆಳಿಗ್ಗೆ ಪತ್ರಿಕೆಗಳನ್ನು ಓದುತ್ತ ಅದರಲ್ಲಿರುವ ಕೆಲ ವರದಿಗಳನ್ನು ಕಂಡು ಕೋಪಗೊಂಡು ‘ಥತ್ತೇರಿ...’ ಎಂದು ಬೈದು ಎದ್ದು ಹೊರಡುತ್ತಾರೆ.ಹಾಗೆಂದು ಅವರಲ್ಲಿ ನಿರಾಶೆ ಖಂಡಿತ ಇಲ್ಲ. ಪಕ್ಕದಲ್ಲಿರುವ ಚರಕ ಅವರ ಕಣ್ಣಿಗೆ ಗಾಂಧಿ ಮೌಲ್ಯಗಳ ಉದಾತ್ತ ಪ್ರತಿಮೆಯಂತೆ ಕಾಣಿಸುತ್ತದೆ. 80ರ ವಯಸ್ಸಿನಲ್ಲಿ ಈಗಲೂ ತಮ್ಮ ಜತೆ ಇನ್ನೊಬ್ಬ ಕೈಜೋಡಿಸಿದರೆ ಸಾಕು; ಪ್ರಪಂಚವನ್ನೇ ಬದಲಾಯಿಸಿಬಿಡುವೆ ಎಂಬ ಅವರ ಅದಮ್ಯ ಉತ್ಸಾಹದ ಹಿಂದಿನ ಪ್ರೇರಕ ಶಕ್ತಿ ಗಾಂಧೀಜಿ ಅಲ್ಲದೇ ಇನ್ನಾರು?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry