‘ಗಾಲ್ಫ್‌ ಸಜ್ಜನರ ಆಟ’

7

‘ಗಾಲ್ಫ್‌ ಸಜ್ಜನರ ಆಟ’

Published:
Updated:
‘ಗಾಲ್ಫ್‌ ಸಜ್ಜನರ ಆಟ’

ಸೈಯದ್‌ ಕಿರ್ಮಾನಿ ಎಂದಾಕ್ಷಣ ನೆನಪಾಗುವುದು ಕ್ರಿಕೆಟ್‌. ಅವರ ವಿಕೆಟ್ ಕೀಪಿಂಗ್‌ ಶೈಲಿ ಹಾಗೂ ಆಟದ ಸೊಬಗು. ಅವರಿಗೆ ಗಾಲ್ಫ್‌ನಲ್ಲೂ ಹೆಚ್ಚು ಆಸಕ್ತಿ ಇದೆ ಎಂಬುದು ಅವರ ಆಪ್ತ ವಲಯದ ಕೆಲವರಿಗಷ್ಟೇ ಗೊತ್ತಿರುವ ಸಂಗತಿ. ಅವರು ತಮ್ಮ ಗಾಲ್ಫ್‌ ಪ್ರೀತಿಯನ್ನು ಹಂಚಿಕೊಂಡಿದ್ದು ಹೀಗೆ:

‘ನಾನು ಬಹಳಷ್ಟು ವರ್ಷ ಕ್ರಿಕೆಟ್‌ ಆಡಿದ್ದೇನೆ. ಆಗ ಗಾಲ್ಫ್‌ ಆಡುವುದು ಸುಲಭ ಎಂದುಕೊಂಡಿದ್ದೆ. ಆದರೆ ಈಗ ಅದಕ್ಕೆ ಬೇಕಿರುವ ಶ್ರಮ ಎಂಥದು ಎಂಬುದು ಅರ್ಥವಾಗಿದೆ. ಕ್ರಿಕೆಟ್‌ಗಿಂತ ಅದು ಹೇಗೆ ಭಿನ್ನ ಎಂಬುದನ್ನು ಅರಿತಿದ್ದೇನೆ. ಪ್ರತಿ ಬಾರಿ ಆಡುವಾಗಲೂ ಟೈಗರ್‌ ವುಡ್ ಆವರ ಆಟದ ಶೈಲಿಯನ್ನೇ ಅನುಕರಿಸುತ್ತೇನೆ’ ಎಂದು ಮುಗುಳ್ನಗುತ್ತಾರೆ ಕಿರ್ಮಾನಿ.ಎಲ್ಲಾ ಆಟಗಳನ್ನು ಗಮನಿಸುವ ಅವರು ಗಾಲ್ಫ್‌ ಆಟವನ್ನು ಹೆಚ್ಚು  ಪ್ರೀತಿಸುತ್ತಾರೆ. ‘ಗಾಲ್ಫ್‌ ಇಷ್ಟಪಡಲು ಕಾರಣ ಮೈದಾನದಲ್ಲಿನ ಹಸಿರು ಪರಿಸರ. ಅಲ್ಲಿರುವಂಥ ಸ್ವಚ್ಛಗಾಳಿ ಇನ್ನೆಲ್ಲಿ ಸಿಗಬೇಕು’ ಎಂದು ಪ್ರಶ್ನೆ ಮಾಡುತ್ತಾರೆ. ‘ಗಾಲ್ಫ್‌  ಸಜ್ಜನರ ಆಟ. ಅದು ಬಹಳಷ್ಟು ತಂತ್ರಗಾರಿಕೆಯನ್ನು ಒಳಗೊಂಡಿದೆ. ಅಲ್ಲಿ ಯಾವುದೇ ಟ್ರಾಫಿಕ್ ಕಿರಿಕಿರಿ ಇರುವುದಿಲ್ಲ, ಪರಿಸರ ಮಾಲಿನ್ಯವಿಲ್ಲ. ಮನಸ್ಸು ಸಂಪೂರ್ಣ ಶಾಂತಚಿತ್ತವಾಗಿ ಇರುತ್ತದೆ’ ಎಂದು ಮಾತು ಸೇರಿಸುತ್ತಾರೆ.‘ರಾಜ್ಯದಲ್ಲಿ ಕ್ರೀಡೆಯನ್ನು ಸ್ವಲ್ಪ ಉತ್ತಮಪಡಿಸಬೇಕಿದೆ. ನಮ್ಮ ಅಸೋಸಿಯೇಷನ್ ಜಿಲ್ಲಾ ಮಟ್ಟದ ಪ್ರತಿಭೆಗಳನ್ನು ಗುರುತಿಸುವಲ್ಲಿ ಮುಂದಾಗಬೇಕಿದೆ. ಕರ್ನಾಟಕದಲ್ಲೂ ಕ್ರಿಕೆಟ್ ಅನ್ನು ಅಭಿವೃದ್ಧಿಪಡಿಸಬೇಕಿದೆ. 14ರಿಂದ 19 ವರ್ಷದೊಳಗಿವರಿಗೆ ತರಬೇತಿ ನೀಡಬೇಕು. ತರಬೇತುದಾರರು ಕೂಡ ಸ್ಥಳೀಯ ಭಾಷೆಗಳಲ್ಲಿ ಹೇಳಿಕೊಡಬೇಕು. ಬದಲಿಗೆ ಯಾವುದೇ ಮಿತಿಯನ್ನು ಹಾಕಿಕೊಳ್ಳಬಾರದು’ ಎಂದು ಸಲಹೆ ನೀಡುತ್ತಾರೆ ಕಿರ್ಮಾನಿ.ನಿಮ್ಮ ಯಶಸ್ಸಿನ ಗುಟ್ಟೇನು ಎಂಬ ಪ್ರಶ್ನೆಗೆ ಅವರು ಉತ್ತರಿಸುವುದು ಹೀಗೆ; ‘ನನ್ನಲ್ಲಿನ ಕ್ರೀಡಾ ಪ್ರತಿಭೆ ದೇವರು ನೀಡಿದ ವರದಾನ. ಆದರೆ ಬಹಳ ಶ್ರಮಪಡಬೇಕು. ಪ್ರಮಾಣಿಕವಾಗಿ ತೊಡಗಿಸಿಕೊಳ್ಳಬೇಕು. ಆಗಷ್ಟೇ ಸಾಧನೆ ಮಾಡಲು ಸಾಧ್ಯ’.

ಕಿರ್ಮಾನಿ ಸಿನಿಮಾ ರಂಗವನ್ನೂ ಪ್ರವೇಶಿಸಿದ್ದಾರೆ ‘ಕಭಿ ಅಜ್‌ನಭಿ ಥೆ’ ಚಿತ್ರದಲ್ಲಿ ಅವರು ಭೂಗತಲೋಕದ ಪಾತಕಿಯ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಇದರ ಜೊತೆಗೆ ‘ಮಳವಿಲ್ಲಿನಟ್ಟಂ ವರೆ’ ಎಂಬ ಮಲಯಾಳಂ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರಿಕೆಟಿಗನೊಬ್ಬನ ಬದುಕಿನ ಕಥೆ ಇರುವ  ಆ ಚಿತ್ರ ಸದ್ಯದಲ್ಲೇ ತೆರೆಕಾಣಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry