‘ಗಿರಿಬಾಲೆ’ ನೂರರ ಸ್ಮರಣೆ

7

‘ಗಿರಿಬಾಲೆ’ ನೂರರ ಸ್ಮರಣೆ

Published:
Updated:

ಗಿರಿಬಾಲೆಯವರ ಬದುಕು ಮತ್ತು ಬರಹ ಎರಡೂ ಅನೇಕ ಅತಿರೇಕಗಳ ನಡುವೆ ಹೊಯ್ದಾಟಗಳ ಮೂಲಕವೇ ಸಂಭವಿಸಿದ್ದುದನ್ನು ಕಾಣಬಹುದು. ಮಹಾ ರಾಣಿಯ ಅಷ್ಟೈಶ್ವರ್ಯದ ಉಪ್ಪರಿಗೆ ಏರಿಕುಳಿತಾಕೆಗೆ ಮನೆಬಿಟ್ಟು ನೆಲಕ್ಕೆ, ಹೊರಜಗತ್ತಿಗೆ ಬರಲು ಆಗದಂಥ ನಿರ್ಬಂಧ. ಅಂಥ ಸೆರೆಯೊಳಗಿಂದಲೇ ವಿಕಾಸಗೊಳ್ಳುವ ಸೃಷ್ಟಿಶೀಲತೆ. ಬದುಕಿನಲ್ಲಿರದ ದಾಂಪತ್ಯದ ಸುಖ, ಕಥೆಗಳಲ್ಲೂ ಕನಸ ಕಲ್ಪನೆಯಾಗುವುದು. ಸ್ವಂತಕ್ಕೆ ಸಿಗದ ತಾಯ್ತನದ ಅನುಭವ ಆಳವಾದ ವಾತ್ಸಲ್ಯದಾಹವಾಗಿ ಕಥೆಗಳ ಒಳಗೆ ಮೈತಳೆಯುವುದು. ಇದು ಸರಸ್ವತಿಬಾಯಿ ರಾಜವಾಡೆ (೧೯೧೩-–೧೯೯೪) ಅವರ ನೂರರ ಸ್ಮರಣೆ.ಪ್ರಪಂಚವನ್ನು, ಬದುಕನ್ನು, ತನ್ನನ್ನು, ಮನುಷ್ಯ ಸಂಬಂಧಗಳನ್ನು ಹೆಣ್ಣು ನೋಡುವ ರೀತಿ, ಗ್ರಹಿಸುವ ಕ್ರಮ ಹಾಗೂ ಅನುಭವಗಳನ್ನು ಕಲೆ, ಸಾಹಿತ್ಯಗಳಲ್ಲಿ ಅಭಿವ್ಯಕ್ತಿಸುವ ರೀತಿಗಳು ಯಾವತ್ತೂ ವಿಶಿಷ್ಟವೇ ಆಗಿರುತ್ತವೆ. ಈ ವಿಶಿಷ್ಟತೆಯು ಮಹಿಳೆಯರ ಬದುಕಿನ ಚಟುವಟಿಕೆಗಳಲ್ಲಿ, ಅವರ ಜೀವನಶ್ರದ್ಧೆಯಲ್ಲಿ, ಶ್ರಮಭರಿತ ಕಾಯಕತತ್ವದಲ್ಲಿ ಮತ್ತು ಎಂಥ ಕಷ್ಟಗಳನ್ನೂ, ಅಡ್ಡಿಗಳನ್ನೂ ಎದುರಿಸಿಯೂ ಬದುಕುವ ತ್ರಾಣದಲ್ಲಿ ದಿನ ದಿನವೂ ಪ್ರಕಟವಾಗುತ್ತಲೂ ಇರುತ್ತವೆ. ಆ ವಿಶಿಷ್ಟ ಶಕ್ತಿಯನ್ನು ಬರಹದ ಮೂಲಕವೂ ಬದುಕಿನ ಕ್ರಿಯೆಗಳಲ್ಲೂ ಹೆಚ್ಚಾಗಿ ಪ್ರಕಟಿಸಿದಂಥ ನಮ್ಮ ಹಳೆಯ ಪೀಳಿಗೆಯ ಲೇಖಕಿಯರು ಅನೇಕರು. ಅವರ ನಡುವೆ ತಮ್ಮ ಅನನ್ಯತೆಯಿಂದ ನಮ್ಮಲ್ಲಿ ಬೆರಗು ಮತ್ತು ಒಲವನ್ನು ಒಟ್ಟಿಗೇ ಹುಟ್ಟಿಸುವ ಅಪರೂಪದ ಮಹಿಳೆ ಸರಸ್ವತಿಬಾಯಿ ರಾಜವಾಡೆಯವರು. ಅವರು ಜನಿಸಿ ಇದೇ ಅಕ್ಟೋಬರ್‌೩ಕ್ಕೆ ನೂರು ವರ್ಷಗಳಾದವು. ಈ ಹೊತ್ತಿನಲ್ಲಿ ಅವರನ್ನು ನೆನೆದು, ಮನನ ಮಾಡಿ, ಅವರ ಚೇತನದ ಬೆಳಕು ನಮ್ಮೆಡೆಗೆ ಬರಲಿ ಎಂದು ಕೋರಬೇಕಿದೆ.ಸರಸ್ವತಿ ಬಾಯಿ ರಾಜವಾಡೆ ೧೯೧೩ರಲ್ಲಿ ಹುಟ್ಟಿ ಬೆಳೆದದ್ದು ದಕ್ಷಿಣ ಕನ್ನಡಜಿಲ್ಲೆಯ ಅಂದಿನ ಉಡುಪಿಯ ಬಳಿಯ ಬಳಂಜಾಲ ಎಂಬ ಹಳ್ಳಿಯಲ್ಲಿ. ಅವರ ತಂದೆ ಹರಿಕಥೆದಾಸ ವೃತ್ತಿಯ ನಾರಾಯಣರಾಯರು. ತಾಯಿ ಕಮಲಾ ಬಾಯಿ. ಸರಸ್ವತಿಯವರ ಜನನವೇ ಒಂದು ವಿಚಿತ್ರ ಯೋಗ. ಮೂವತ್ತೈದು ವರ್ಷದ ವಿಧುರ ನಾರಾಯಣರಾಯರು ಹರಿಕಥೆ ಮಾಡುವಾಗ ಎದುರಿಗೆ ಅಮ್ಮನ ತೊಡೆಯ ಮೇಲೆ ಕುಳಿತು ಕೇಳುತ್ತಿದ್ದ ಏಳು ವರ್ಷದ ಕನ್ಯೆಯನ್ನು ಮದುವೆಯಗಲು ಬಯಸಿದ್ದಕ್ಕೆ ಕಾರಣ ಮನೆಯಲ್ಲಿ ಹೆಣ್ಣುದಿಕ್ಕಿಲ್ಲ, ಬೇಯಿಸಿಹಾಕುವವರು ಯಾರೂ ಇಲ್ಲ ಎಂಬುದು. ಬಳಿಕ ಆ ಹುಡುಗಿ ದೊಡ್ಡವಳಾಗಿ ಗಂಡನ ಮನೆಗೆ ಹೋದಮೇಲೆ ಬೇಗನೇ ತಾಯಿಯಾಗುವುದು ಆ ಪತಿಗೆ ಬೇಕಿರಲಿಲ್ಲ. ಎರಡೆರಡು ಬಾರ ಮದ್ದು ಕುಡಿಸಿ ಗರ್ಭವಿಳಿಸಲು ಅವರು ಯತ್ನಿಸಿದರೂ ಆದು ದಕ್ಕದೇ ಹೋಯಿತು. ಮೂರನೆಯ ಬಾರಿಗೆ ಹೆಂಡತಿಯೇ ವಿರೋಧಿಸಿ, ಜನರ ಸೇರಿಸಿ ಗದ್ದಲಮಾಡಿ ಆ ಪತಿಗೆ ಛೀಮಾರಿ ಹಾಕಿಸಿದ್ದರಿಂದ ಕೂಸೇನೋ ಉಳಿಯಿತು. ಆದರೆ ಅದರ ತಂದೆ ಅವಮಾನಿತರಾಗಿ ಮನೆಬಿಟ್ಟು ಹೋದಾತ ಮತ್ತೆಂದೂ ಬರಲೇ ಇಲ್ಲ. ಅಂತೂ ‘ಪಿತಾ ರಕ್ಷತಿ ಕೌಮಾರ್ಯೇ’ ಎನ್ನುವ ಮನುವಾಕ್ಯ ಸರಸ್ವತಿಗೆ ನಿಜವಾಗಲಿಲ್ಲ.ಎಳೆಯ ಬಾಲಕಿಗೆ ಶಾಲೆಯ ಓದಿನಲ್ಲಿ ಎಷ್ಟು ಆಸಕ್ತಿ ಇದ್ದರೂ ಕಡುಬಡತನದಲ್ಲಿ, ಮನೆಗೆಲಸ ಮಾಡಿ ಮಗಳನ್ನೂ ತನ್ನನ್ನೂ ನೋಡಿಕೊಳ್ಳಬೇಕಾಗಿದ್ದಾಗ ತಾಯಿಯ ಸಮಸ್ತ ಕೋಪಕ್ಕೂ ಈ ಮಗಳೇ ಬಲಿ. ‘ಬಡತನದ ಒಲಿಯಾಗ ಕರುಳಿನ ಕೊಲಿಯಾಗ’ ಎಂದು ಬೇಂದ್ರೆ ಹಾಡಿರುವುದೂ ಇಲ್ಲಿ ತಿರುವು ಮುರುವು ಆಯಿತು. ಆ ತಾಯಿಯ ಉಗುರು ಮೊನೆಯಷ್ಟು ಪ್ರೀತಿಯೂ ಬಾಲಕಿ ಸರಸ್ವತಿಗೆ ಸಿಗಲಿಲ್ಲ. ತಾಯಿ ಮತ್ತು ಸೋದರ ಮಾವನಿಂದ ಸಿಕ್ಕಿದ್ದೆಲ್ಲ ಹಗೆತನವೇ. ನಿಜವಾಗಿ ಅಕ್ಕರೆ ಎರೆದಾಕೆ ಅಜ್ಜಿಯೊಬ್ಬಳೆ.ಸರಸ್ವತಿಯ ಬಾಲ್ಯ ಮತ್ತು ಕಿಶೋರತನಗಳೂ ಅಸಾಧಾರಣವೇ. ಅಮ್ಮನಂತೆ ಹೆರವರ ಮನೆಗೆಲಸ ಮಾಡಿ, ಹೂವುಕಟ್ಟಿ ಮಾರಿ ಇತ್ಯಾದಿ ಪಟ್ಟ ಬವಣೆಗಳಿಗೆ ಲೆಕ್ಕವಿಲ್ಲ. ಆದರೆ ಏನೇ ಬಂದರೂ ಪರಿಸ್ಥಿತಿಯನ್ನು ಉಪಾಯವಾಗಿ ಬಳಸಿಕೊಂಡು ಬೇಕಾದ್ದನ್ನು ಮಾಡುವ ಜಾಣತನವೂ ಬಾಲ್ಯದಿಂದಲೇ ಅವರಿಗೆ ದಕ್ಕಿದ್ದ ಗುಣ. ಅಪರೂಪದ ಚೆಲುವೆಯಾಗಿದ್ದ ಈ ಹುಡುಗಿಗೆ ಅಲ್ಪಕಾಲ ರಂಗಭೂಮಿಯಲ್ಲಿ ನಟಿಸುವ ಅವಕಾಶ, ಮುಂಬಯಿಯಲ್ಲಿ ಮೂಕಿ ಚಲನಚಿತ್ರಗಳಲ್ಲಿ ಪಾತ್ರಮಾಡುವ ಅನುಭವ, ವಾದ್ಯಗೋಷ್ಠಿಯ ಜೊತೆ ಹಾಡುಗಾರಳಾಗಿ ಭಾರತವಿಡೀ ಸಂಚರಿಸಿದ ಅನುಭವ– ಎಲ್ಲವೂ ಹದಿ ಹರೆಯದಲ್ಲೇ ಒದಗಿತು. ಆದರೆ ಕೊನೆಗೆ ಎಲ್ಲೂ ನೆಲೆ ನಿಲ್ಲದೆ ಬರಿಗೈಯ್ಯಾಗಿ ಮತ್ತೆ ಅದೇ ಬಡತನದ್ದೇ ಮನೆಗೆ ಮರಳಿದ್ದೂ ಆಯಿತು.ಸರಸ್ವತಿಯವರ ಬದುಕಿಗೆ ೧೮೦ ಡಿಗ್ರಿಗಳ ತಿರುವು ಕೊಟ್ಟದ್ದು ಅವರ ಮದುವೆ. ಬಾಲಕಿಯಾಗಿದ್ದಾಗ ಬಡತನದ ಬೇಗೆಯನ್ನು ತಾಳಲಾರದೆ ದೇವಿಯಲ್ಲಿ ಬೇಡಿಕೊಂಡಿದ್ದು ನನಗೆ ಕಲೆಕ್ಟರ್ ಗಂಡನನ್ನು ಕೊಡು, ತುಂಬಾ ಶ್ರೀಮಂತೆಯನ್ನಾಗಿ ಮಾಡು ಎಂದು. ಆ ಹಂಬಲ ಈಡೇರಿತು. ಅಂಬಿಕಾಪತಿ ರಾವ್ ಶಾಸ್ತ್ರಿ ರಾಜವಾಡೆ ಎಂಬ ಅತ್ಯುನ್ನತ ಅಧಿಕಾರಿಯೊಬ್ಬರು ಹದಿನೈದರ ಸರಸ್ವತಿಯ ಕೈ ಹಿಡಿದರು. ವ್ಯತ್ಯಾಸ ಇಷ್ಟೇ, ಅವರು ೫೫ ವರ್ಷಗಳ ವಿಧುರರು. ಬದುಕಿನ ತುಂಬಾ ಬೇಕಾದಷ್ಟು ಸಂಪತ್ತು ತುಂಬಿತು. ಈ ಪತಿಯೊಂದಿಗೆ ತಂಜಾವೂರು, ಮದರಾಸು, ಸಿಂಗಾಪುರ, ಬೆಂಗಳೂರು ನಗರಗಳಲ್ಲಿ ಶ್ರೀಮತಿ ರಾಜವಾಡೆಯವರ ಪರಿಭ್ರಮಣದ ಬದುಕು ತಿರುಗಿತು.ಸಿರಿತನವು ಸಂಸಾರವನ್ನು ಸಹವಾಸವಾಗಿ ಮಾಡಿತೇ ಹೊರತು ಅದು ಅಂತರಂಗಕ್ಕೆ ಒಬ್ಬ ಸಂಗಾತಿಯನ್ನು ತರಲಿಲ್ಲ. ಪತಿಯಿದ್ದೂ ಇಲ್ಲದಹಾಗೆ, ಅರಮನೆಯ ಉಪ್ಪರಿಗೆಯ ರಾಣಿತನವಿದ್ದರೂ ಕೆಳಗಿಳಿಯುವ ಸ್ವಾತಂತ್ರ್ಯವಿಲ್ಲದೆ ಪರಮ ಏಕಾಕಿತನದಲ್ಲಿ ಸರಸ್ವತಿಯವರ ಸ್ವಾಧ್ಯಾಯದ ಆಸಕ್ತಿ ಅವರೊಳಗಿನ ಸೃಜನಶೀಲತೆಯನ್ನು ಅರಳಿಸಿತು. ಮುಂದಿನ ಬದುಕಿಗೆ ಅದೇ ಅವರಿಗೆ ನಿಜವಾಗಿ ಆಧಾರ ಶಕ್ತಿಯೂ ಆಯಿತೆನ್ನಬೇಕು. ‘ಭರ್ತಾ ರಕ್ಷತಿ ಯೌವನೇ’! ನಿಜವೇ ಸರಿ. ಆ ಭರ್ತನು ಅಕ್ಷರಶಃ ಹೊರಬದುಕಿನಿಂದ ಈಕೆಯನ್ನು ಕಾಪಿಟ್ಟರು. ಆದರೆ ತಾವೇ ಭಾಷೆಗಳನ್ನು ಕಲಿಸಿ, ಬಯಸಿದಷ್ಟೂ ಪುಸ್ತಕಗಳನ್ನು ಅವರಿಗೆ ಒದಗಿಸುತ್ತಿದ್ದರು. ಓದಿ ಓದಿ ಸರಸ್ವತಿಯ ಕಲ್ಪನಾ ಲೋಕ ಅರಳತೊಡಗಿದಾಗ ತಾನೂ ಕತೆಗಳನ್ನು, ಲೇಖನಗಳನ್ನು ಬರೆಯಲು ಆರಂಭಿಸಿದರು. ಗುಟ್ಟಾಗಿ ಪತ್ರಿಕೆಗೂ ಕಳುಹಿಸಿದರು. ಪ್ರಕಟವಾದಾಗ ಎಲ್ಲಿ ಪತಿ ಕೋಪಗೊಂಡಾರೋ ಎಂಬ ಅಳುಕು. ಆದರೆ ಶ್ರೀ ರಾಜವಾಡೆ ಆಕೆಯು ಬರೆಯುವುದನ್ನು ಪ್ರೋತ್ಸಾಹಿಸಿದರು. ಹೀಗೆ  ಸರಸ್ವತಿಬಾಯಿ ರಾಜವಾಡೆಯವರ ಸಾಹಿತ್ಯಕ ‘ಉದ್ಯಾನ’ ಚಿಗುರೊಡೆಯಿತು.ಅವರ ಪ್ರಬಂಧಗಳು ೧೯೨೮ರಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಅವರ ಮೊತ್ತಮೊದಲ ಕಥೆ ‘ನನ್ನ ಅಜ್ಞಾನ’ ಮರುವರ್ಷ ಅಂದರೆ ೧9೨೯ ರಲ್ಲಿ ‘ಕಂಠೀರವ’ ಪತ್ರಿಕೆಯಲ್ಲಿ ಬೆಳಕು ಕಂಡಿತು. ಅಲ್ಲಿಂದ ಮುಂದೆ ‘ಅಂತರಂಗ’, ‘ನವಯುಗ’, ‘ಉಷಾ’, ‘ರಾಯಭಾರಿ’, ‘ನವಭಾರತ’ ಮುಂತಾದ ಅನೇಕ ಪತ್ರಿಕೆಗಳಿಗಾಗಿ ಲೇಖನಗಳನ್ನು, ಕತೆಗಳನ್ನು, ವಿಮರ್ಶೆಗಳನ್ನು, ನಾಟಕಗಳನ್ನು ಹಾಗೂ ಅನುವಾದಗಳನ್ನು ಅವರು ಬರೆದು ಒದಗಿಸಿದರು. ‘ನಿಸರ್ಗ’ ಎನ್ನುವ ಲೈಂಗಿಕ ಆರೋಗ್ಯ ಕುರಿತ ಪತ್ರಿಕೆಗೆ ಸ್ವಂತ ಹೆಸರಿನಿಂದ ಬರೆಯಲು ಪುರುಷರೂ ಹಿಂಜರಿಯುತ್ತಿದ್ದಾಗ ನಿಜನಾಮದಿಂದಲೇ ಸತತವಾಗಿ ಬರೆದ ದಿಟ್ಟೆ ಆಕೆ. ‘ಕಥಾವಳಿ’ ಪತ್ರಿಕೆಯಲ್ಲಿ ಅವರು ಏಳುವರ್ಷ ಕಾಲ ‘ಅಕ್ಕನ ಓಲೆಗಳು’ ಎಂಬ ಮಹಿಳಾ ವಿಭಾಗಕ್ಕೆ ಸಂಪಾದಕಿಯಾಗಿದ್ದರು. ಆ ಅನುಭವವೇ ಅವರನ್ನು ‘ಸುಪ್ರಭಾತ’ ಎನ್ನುವ ಮಹಿಳಾಪರವಾದ ಪತ್ರಿಕೆಯನ್ನು ಪ್ರಾರಂಭಿಸಲು ಪ್ರೇರಕವಾಯಿತು. ಅವರ ಬರಹದ ಒಟ್ಟು  ಪ್ರಮಾಣ ಆ ಕಾಲದ ಯಾವ ಕತೆಗಾರ್ತಿಯರಿಗೂ ಮೀರಿದುದೇ ಆಗಿತ್ತು. ೬೩ ಸಣ್ಣ ಕತೆಗಳು, ೫೫ ಪ್ರಬಂಧಗಳು, ೭ ನಾಟಕಗಳು, ೨೩ ಕವನಗಳು ಮತ್ತು ನಾಲ್ಕು ಸ್ತೋತ್ರ ರೂಪದ ರಚನೆಗಳನ್ನು ಅವರು ರಚಿಸಿದ್ದರೆಂಬುದು ತಿಳಿದುಬರುತ್ತದೆ. ‘ಸುಪ್ರಭಾತ’ ಮಹಿಳೆಯರೆಲ್ಲರ ಬದುಕಿಗೂ ಹೊಸ ಬೆಳಗನ್ನು ತರಲಿ ಎನ್ನುವ ಆಶಯದಿಂದ ಹೊಮ್ಮಿತ್ತು. ಅದರ ಅಂಕಣಗಳು ಅತ್ಯಂತ ಜೀವನಪರವಾಗಿರುತ್ತಿದ್ದವು. ಆ ಪತ್ರಿಕೆಯಿಂದ ಅನೇಕ ಹೊಸ ಮಹಿಳೆಯರಿಗೆ ಬರಹಕ್ಕೆ ಪ್ರವೇಶವೂ ಸಿಕ್ಕಿತ್ತು. ಪತ್ರಿಕೆಗೆ ತಾವೇ ಹಣಹೂಡಿ ಹೊರಡಿಸುವಷ್ಟು ಸಂಪತ್ತು ಗಿರಿಬಾಲೆಯವರಿಗೆ ಇದ್ದರೂ ಸಾರ್ವಜನಿಕರೂ ಒಂದು ಸಾಮಾಜಿಕ ಕ್ರಿಯೆಯಲ್ಲಿ ಪಾಲುಗೊಳ್ಳುವ ಜವಾಬ್ದಾರಿ ಹೊಂದಲಿ ಎಂದು ಅವರು ಅದಕ್ಕೆ ಜನರಿಂದ ಚಂದಾ ಪಡೆಯುತ್ತಿದ್ದರು. ಇಷ್ಟಾಗಿಯೂ ೧೯೫೨ರಲ್ಲಿ ಶುರುವಾದ ಪತ್ರಿಕೆ ಒಂದುವರ್ಷದ ಬಳಿಕ ನಿಂತು ಹೋಯಿತು. ಅವರಿಗೆ ಹಿರಿಯ ಅಣ್ಣ, ಗುರು, ತಂದೆಯಂತೆ ದಾರಿತೋರಿಸುತ್ತಿದ್ದ ಗೋವಿಂದ ಪೈ ಅವರಿಗೆ ಸೃಷ್ಟಿಶೀಲ ಬರಹಗಾರರು ಪತ್ರಿಕೋದ್ಯಮಕ್ಕೆ ತೊಡಗುವುದು ಹಾನಿಕರ ಎನ್ನುವ ವಿಚಾರವಿದ್ದು, ಅದನ್ನು ಗಿರಿಬಾಲೆಯವರಿಗೂ  ಸಲಹೆಯಿತ್ತಿದ್ದರು. ಆ ವಿಚಾರವನ್ನು ಒಪ್ಪಿಯೋ ಏನೋ ಅಂತೂ ಪತ್ರಿಕೆಯನ್ನು ಇವರು ನಿಲ್ಲಿಸಿದರು. ಪಿತೃಸಂಸ್ಕೃತಿಯ ಕೈ ಹೆಣ್ಣನ್ನು ಹರಸಿದರೂ ಕಷ್ಟ, ನಾಶ ಮಾಡಿದರೂ ಕಷ್ಟ.೧೯೮೭ರಲ್ಲಿ ಟಿ.ಎಸ್. ಶ್ರೀವಳ್ಳಿಯವರು ಬರೆದಿದ್ದ ‘ಗಿರಿಬಾಲೆ - ಒಂದು ನೆನಪು’ ಎಂಬ ಲೇಖನ ‘ಅಚಲ’ ಮಹಿಳಾ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಮತ್ತು ಡಾ. ವಿಜಯಾ ದಬ್ಬೆಯವರ ‘ಮಹಿಳೆ ಸಾಹಿತ್ಯ ಸಮಾಜ’ (೧೯೮೯) ಪುಸ್ತಕದಲ್ಲಿ ‘ಪತ್ರಕರ್ತೆಯಾಗಿ ಗಿರಿಬಾಲೆ’ ಎನ್ನುವ ಲೇಖನ ಪ್ರಕಟವಾಯಿತು. ಅವುಗಳಿಂದಾಗಿ ಸರಸ್ವತಿಬಾಯಿ ರಾಜವಾಡೆಯವರ ಬಗ್ಗೆ ನನ್ನ ಆಸಕ್ತಿ ಹುಟ್ಟಿತು. ಅವರ ಮೊದಲ ಎರಡು ಕಥಾ ಸಂಕಲನಗಳಾದ ‘ಆಹುತಿ ಇತ್ಯಾದಿ ಕತೆಗಳು’ (೧೯೩೮,) ಮತ್ತು ‘ಕದಂಬ’ (೧೯೪೭) ಅವರ ನಿಜನಾಮದಲ್ಲೇ ಪ್ರಕಟವಾಗಿದ್ದವು. ಆದರೆ ಪತ್ರಿಕೆಗಳಿಗೆ ಬರೆಯುವಾಗ ಅವರು ‘ಗಿರಿಬಾಲೆ’, ‘ವೀಣಾಪಾಣಿ’, ‘ಯು.ಸರಸ್ವತಿ’, ‘ವಿಶಾಖಾ’ ಮುಂತಾದ ಹೆಸರುಗಳಿಂದ ಬರೆಯುತ್ತಿದ್ದು ಅವುಗಳ ಪೈಕಿ ಗಿರಿಬಾಲೆ ಎನ್ನುವ ಹೆಸರು ಗಟ್ಟಿಯಾಗಿ ಅವರಿಗೆ ಅಂಟಿಕೊಂಡಿತು.೧೯೮೦ರ ದಶಕದಲ್ಲಿ ಗಿರಿಬಾಲೆಯವರ ಕೆಲವು ಪ್ರಬಂಧಗಳಿಂದ ಅವರ ಸಾಹಿತ್ಯ ಧೋರಣೆಯನ್ನು ಅರ್ಥಮಾಡಿಕೊಳ್ಳಲು ನಾನು ಸ್ತ್ರೀವಾದಿ ದೃಷ್ಟಿಯಿಂದ ಯತ್ನಿಸಿದ್ದೆನು. ‘ಪ್ರತಿಯೊಬ್ಬ ಮಹಿಳೆಗೂ ಪುರುಷರಂತೆಯೇ ಜೀವನ ಕ್ಷೇತ್ರದಲ್ಲಿ ಅವಕಾಶ ದೊರೆಯಬೇಕು. ವೈಯಕ್ತಿಕ ಸಾಮಾಜಿಕ ಮತ್ತು ಮಾನುಷಿಕ ಅಧಿಕಾರಗಳಲ್ಲಿ ಸ್ತ್ರೀ ಪುರುಷರಲ್ಲಿ ಸಮಾನ ವ್ಯವಹಾರವಿರಬೇಕು. ಪುರುಷರ ನೈತಿಕ, ವ್ಯಾವಹಾರಿಕ ಮತ್ತು ಸಾಮಾಜಿಕ ನಿಯಮಗಳಿಗೆ ಸ್ತ್ರೀಯರು ಒಳಗಾಗಬೇಕು. ಪತ್ರಿಕೆಗಳಲ್ಲಿ ಮಾತ್ರವಲ್ಲ, ಆಚರಣೆಗೂ ಬರಬೇಕು’ ಎಂದು ಲೇಖನವೊಂದರಲ್ಲಿ ಅವರು ಬರೆದಿದ್ದಾರೆ. (ಪ್ರಕಾಶ ಪತ್ರಿಕೆ-೧೯೪೯). ಅವರ ಸಮಸ್ತ ಬರಹಕ್ಕೂ ಸ್ತ್ರೀಯೇ ಕೇಂದ್ರ. ಹಾಗೆಯೇ ನಲವತ್ತರ ದಶಕದಲ್ಲಿದ್ದ ಪ್ರಗತಿಶೀಲ ಚಳವಳಿಗಾರ ಲೇಖಕರ ವಿಚಾರಗಳು ಅವರನ್ನು ಪ್ರಭಾವಿಸಿದ್ದವು. ‘ಸಾಹಿತ್ಯವು ಗಗನವಾಣಿ ಯಾಗಬಾರದು. ಅದು ಜನಜೀವನದ ಪ್ರತಿಬಿಂಬ. ಅದು ಜನರಿಗೆ ಪ್ರಗತಿಗೆ ನೆರವಾಗಬೇಕು. ಹಾಗಿರಬೇಕಾದರೆ ಅವರ ಸ್ವಾತಂತ್ರ್ಯಾಭಿಲಾಷೆ, ಕೃಷಿಕೋದ್ಧಾರ ಮೊದಲಾದ ಬಾಳುವೆಯ ಕೂಗುಗಳೇ ಅಲ್ಲಿ ಧ್ವನಿಸುತ್ತಿರಬೇಕು’ ಎಂದು ಅವರು ಸ್ಪಷ್ಟವಾಗಿ ಪ್ರಗತಿಶೀಲ ಲೇಖಕರ ರೀತಿಯಲ್ಲಿ ಕರೆ ನೀಡಿದ್ದರು. ಅವರ ಮೊದಲ ಎರಡೂ ಸಂಕಲನಗಳ ಕಥೆಗಳನ್ನು ಓದಿದರೆ ಅಲ್ಲಿ ಕೆಳಜಾತಿ ವರ್ಗಗಳ ಜನರು, ಭೂಹೀನ ರೈತಾಪಿ ಜನಗಳು, ಕಾರ್ಮಿಕ ಕೂಲಿಗಾರರ, ನಿರ್ಗತಿಕರ ಬವಣೆಗಳೇ ಢಾಳಾಗಿ ಚಿತ್ರಿತವಾಗಿರುತ್ತವೆ.ಉಳ್ಳವರು, ಶ್ರೀಮಂತ ಜಮೀನುದಾರರು, ಮಠಾಧೀಶರ ಸ್ವಾರ್ಥ, ದೌರ್ಜನ್ಯ, ಲಂಪಟತನಗಳಿಂದ ಮಹಿಳೆಯರು ಶೋಷಿತರಾಗುವ ಬಹುರೂಪಗಳನ್ನು ಆ ಕಥೆಗಳಲ್ಲಿ ಮುನ್ನೆಲೆಗೆ ತರಲಾಗಿರುತ್ತದೆ. ಮಾತ್ರವಲ್ಲ, ವೈಯಕ್ತಿಕ ದೋಷ ದೌರ್ಬಲ್ಯಗಳ ಮೂಲವು ಸಮಾಜದ ಬೇಜವಾಬ್ದಾರಿತನವೇ ಎಂಬ ಎಚ್ಚರಿಸುವ ವಿಧಾನವೂ ಅಲ್ಲಿದೆ. ಈ ಎಲ್ಲ ಕಾರಣಗಳಿಂದ ಆ ಕಾಲಕ್ಕೆ ಸರಸ್ವತಿಬಾಯಿ ಅವರು ಒಬ್ಬ ಪ್ರಗತಿಶೀಲ ಲೇಖಕಿಯಾಗಿಯೇ ಆ ಕಾಲಕ್ಕೆ ನನಗೆ ಕಾಣಿಸಿದ್ದರು.ಆದರೆ ೨೦೦೮ರಲ್ಲಿ ವೈದೇಹಿಯವರು ಗಿರಿಬಾಲೆಯವರ ಆತ್ಮಕಥೆಯನ್ನು ಅದ್ಭುತವಾದ ಕಥನವಾಗಿಸಿ ‘ಮುಂತಾದ ಕೆಲ ಪುಟಗಳು’ ಅನ್ನು ಹೊರತಂದ ಮೇಲೆ ಆ ಲೇಖಕಿಯ ನನ್ನೊಳಗಿದ್ದ ಚಿತ್ರ ಪೂರ್ತಿಯಾಗಿ ಬದಲಾಯಿತು. ಅವರು ಎಂಥ ಅಪರೂಪದ ಧೀಮಂತ ಮಹಿಳೆ, ಎಷ್ಟೆಲ್ಲ ವೈವಿಧ್ಯಮಯ ಜೀವನ ಅವರು ಕಂಡಿದ್ದರು ಎನ್ನುವುದು ಅರಿವಾಯಿತು. ಅವರ  ಬದುಕಿನ ಉತ್ತರಾರ್ಧದಲ್ಲಿ ಸಂಪೂರ್ಣವಾಗಿ ಅವರೊಬ್ಬ ಶಾರದಾ ದೇವಿಯ ಭಕ್ತೆಯಾಗಿಬಿಟ್ಟ ಪರಿಯನ್ನು ಬುದ್ಧಿಯಿಂದ ತಿಳಿಯಬಹುದೇ ಹೊರತು ಅನುಭವವಾಗಿ ಅರಿಯಲು ಅಸಾಧ್ಯ. ಅವರಾಗಿ ತಮ್ಮ ತುಂಬು ಸಾಹಿತ್ಯಲೋಕವನ್ನು ಏನೂ ಅಲ್ಲವೆಂದು ಬದಿಗೆ ಸರಿಸಿಬಿಟ್ಟರು. ಸೃಜನಶೀಲ ಚೇತನ ತನ್ನ ಅತ್ತ್ಯುನ್ನತಿಗೆ ಏರಬೇಕಾಗಿದ್ದ ಹೊತ್ತಿನಲ್ಲೇ ಅದನ್ನು ತಾವಾಗಿ ಮೊಟಕು ಗೊಳಿಸಿಕೊಂಡರು. ‘ಸುಪ್ರಭಾತ’ದಂಥ ಮಹಿಳಾ ಪತ್ರಿಕೆಯ ಮೂಲಕ ಅನೇಕ ಹೊಸ ಲೇಖಕಿಯರಿಗೆ ಬರಹದ ದ್ವಾರವನ್ನು ಉದ್ಘಾಟಿಸಿದ್ದ ಲೇಖಕ ಗೋವಿಂದ ಪೈ ಅವರಿಂದ ಅದನ್ನು ನಿಲ್ಲಿಸೆನ್ನುವ ಸೂಚನೆ ಬಂದಾಗ ಯಾವುದೇ ತಳಮಳವಿಲ್ಲದೆ ಒಂದೇ ವರ್ಷದಲ್ಲಿ ನಿಲ್ಲಿಸಿಬಿಟ್ಟರು. ಈ ಯಾವುದನ್ನೂ ವಿವರಿಸಲು ವ್ಯಾಖ್ಯಾನಿಸಲು ಆತ್ಮಕಥನದಲ್ಲೂ ಅವರು ನಿರಾಕರಿಸಿದ್ದಾರೆ, ಸಾಲದ್ದಕ್ಕೆ ವೈದೇಹಿಗೆ ಮಾತಿನ ಭರಾಟೆಯಲ್ಲಿ ತಾವು ಹೇಳಿದ್ದ ಎಷ್ಟೋ ವಾಸ್ತವಾಂಶಗಳನ್ನು ಪ್ರಕಟಿಸಕೂಡದು ಎಂದು ಕಟ್ಟನ್ನೂ ವಿಧಿಸಿದ್ದಾರೆ. ಹೀಗಾಗಿ ಇಂದಿನ ಲೇಖಕಿಯರಿಗೆ ಸಿಗಬಹುದಾಗಿದ್ದ ಸೃಜನಶೀಲತೆಯ ಅನನ್ಯ ಸ್ವರೂಪವೊಂದು ಅನಾವರಣಗೊಳ್ಳದೆ ಉಳಿದು ಹೋದದ್ದು ನಿಜಕ್ಕೂ ವಿಷಾದದ ಸಂಗತಿಯೇ.ಹಾಗಿದ್ದರೂ ನಾವು ಈಹೊತ್ತು ಅವರನ್ನು ಕುರಿತು ವಿಚಾರ ಮಾಡಿದಲ್ಲಿ ಗಿರಿಬಾಲೆಯವರ ಬದುಕು ಮತ್ತು ಬರಹ ಎರಡೂ ಅನೇಕ ಅತಿರೇಕಗಳ ನಡುವೆ ಹೊಯ್ದಾಟಗಳ ಮೂಲಕವೇ ಸಂಭವಿಸಿದ್ದುದನ್ನು ಕಾಣಬಹುದು. ಹಸಿವೆಯಿಂದ ಬಿಡುಗಡೆಯೇ ಕಾಣದಂಥ ನಿರ್ಗತಿಕತೆ ಒಂದೆಡೆ; ಬಾಲ್ಯ ಸಹಜ ಖುಷಿ, ಉತ್ಸಾಹ, ಉಪಾಯಗಾರಿಕೆ, ಚುರುಕುತನ ಇನ್ನೊಂದುಕಡೆ. ಮಹಾ ರಾಣಿಯ ಅಷ್ಟೈಶ್ವರ್ಯದ ಉಪ್ಪರಿಗೆ ಏರಿಕುಳಿತಾಕೆಗೆ ಮನೆಬಿಟ್ಟು ನೆಲಕ್ಕೆ, ಹೊರಜಗತ್ತಿಗೆ ಬರಲು ಆಗದಂಥ ನಿರ್ಬಂಧ. ಅದೂ ಹದಿಹರಯದಲ್ಲೇ ಊರೂರು ತಿರುಗಿ ಬಂದಿದ್ದ ಘಾಟಿ ಅನುಭವಗಳಿದ್ದ ಹೆಣ್ಣು ಘನತೆಯ ಗೌರಮ್ಮನಾಗಿ ಬಾಳುವ ಸ್ಠಿತಿ. ಅಂಥ ಸೆರೆಯೊಳಗಿಂದಲೇ ವಿಕಾಸಗೊಳ್ಳುವ ಸೃಷ್ಟಿಶೀಲತೆ. ಬದುಕಿನಲ್ಲಿರದ ದಾಂಪತ್ಯದ ಸುಖ, ಕಥೆಗಳಲ್ಲೂ ಕನಸ ಕಲ್ಪನೆಯಾಗುವುದು.ಸ್ವಂತಕ್ಕೆ ಸಿಗದ ತಾಯ್ತನದ ಅನುಭವ ಆಳವಾದ ವಾತ್ಸಲ್ಯದಾಹವಾಗಿ ಕಥೆಗಳ ಒಳಗೆ ಮೈದಳೆಯುವುದು. ಅತ್ಯಂತ ಒಳ್ಳೆಯ ಪ್ರಶಂಸಕರು, ಕಂಡರೆ ಆಗದಂಥ ಮಹನೀಯರೂ ಅವರಿಗೆ ಸಾಹಿತ್ಯದ ಜಗತ್ತಿನಲ್ಲಿ ಒಟ್ಟಿಗೇ ಮುಖಾಮುಖಿಯಾಗುತ್ತಾರೆ. ಮೆಚ್ಚಿದ್ದ ಮನಸ್ಸುಗಳೇ ಒಂದು ರೀತಿಯಲ್ಲಿ ಮುಂದುವರೆಯಲು ಅಡ್ಡಿಯನ್ನೂ ಒಡ್ಡುತ್ತವೆ. ಅತಿ ಕಟು ವಾಸ್ತವಗಳ ಜೀವನವನ್ನು ಸಾಹಿತ್ಯದಲ್ಲಿ ಪ್ರತಿಬಿಂಬಿಸಲು ಹೊರಟಾಕೆ ನಡುವೆಯೇ ಮಂಗಳ ಹಾಡಿ ದೇವಿಯ ಸ್ತೋತ್ರದಲ್ಲಿ ಮುಳುಗಿ ಲೋಕದ ಎಲ್ಲರ ಹಿತಚಿಂತಕಿಯಾಗಿ ಮಾತೃಭಾವದಲ್ಲಿ- ಗಿರಿಬಾಲೆ ಬಯಸಿದ್ದಂತೆಯೇ-  ಮೈಮರೆಯುತ್ತಾಳೆ... ನಿದ್ದೆಮಾಡಿ ಮೈಯ ಬಿಟ್ಟು ಮುದ್ದುಮಾಟದ ಕನಸಿನೂರಿಗೆ ಸದ್ದು ಮಾಡಗೆ ಹೋಗಿಯೇ ಬಿಡುತ್ತಾಳೆ...

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry