‘ಗುರು ’ವಿಗೆ ರಂಗ ನಮನ

7

‘ಗುರು ’ವಿಗೆ ರಂಗ ನಮನ

Published:
Updated:

ಕನ್ನಡ ರಂಗಭೂಮಿಗೆ ಚಲನಶೀಲತೆಯನ್ನು, ದೇಸಿತನದ ಕಲೆಗಾರಿಕೆಯನ್ನು ತಮ್ಮ ಜೀವಪರ ಪ್ರತಿಭೆಯ ಮೂಲಕ ಮರುಪೂರಣ ಮಾಡುವ ಮೂಲಕ ಹೊಸ ಭಾಷ್ಯ ಬರೆದ ಸಿ.ಜಿ. ಕೃಷ್ಣಸ್ವಾಮಿ (ಸಿಜಿಕೆ) ಅವರಿಗೆ ನಿಜ ಅರ್ಥದ ರಂಗನಮನ ಸಲ್ಲುತ್ತಿದೆ. ಕನ್ನಡದ ಸಂದರ್ಭದಲ್ಲಿ ಆಧುನಿಕತೆಯ ನೆಲೆಗಟ್ಟಿನಲ್ಲಿ ಕಸುಬುದಾರಿಕೆಯನ್ನು ಉಣಿಸಿದ ಮುಂಚೂಣಿ ಹೆಸರು ಸಿಜಿಕೆ. ಹಾಗಾಗಿಯೇ ಅವರು ‘ರಂಗಗುರು’. ಇಂತಹ ಗುರುವಿಗೆ, ಅವರೇ ಹುಟ್ಟುಹಾಕಿದ ‘ರಂಗನಿರಂತರ’ ಸಂಸ್ಥೆ ರಂಗಪ್ರೇಮಿಗಳ ಸಹಯೋಗದಲ್ಲಿ ಜ. 11ರಿಂದ 17ರವರೆಗೆ ಏಳು ದಿನಗಳ ರಾಷ್ಟ್ರೀಯ ರಂಗೋತ್ಸವವನ್ನು ಸಮರ್ಪಿಸುತ್ತಿದೆ.ರಂಗಭೂಮಿಯ ತಂತ್ರಜ್ಞಾನವನ್ನು ದೇಸಿ ನುಡಿಗಟ್ಟುಗಳಲ್ಲಿ ಬಿಡಿಸುವ ಕಲೆಗಾರಿಕೆಯನ್ನು ಯುವಕರ ಮೂಲಕ ಪ್ರಭಾವಯುತವಾಗಿ ಮಾಡುವ ನಿರಂತರ ಪ್ರಯತ್ನಗಳನ್ನು ಮಾಡಿದ್ದರು ಸಿಜಿಕೆ. ‘ರಂಗನಿರಂತರ’ದ ಚಂದ್ರು ಜಿಪಿಒ, ಸರ್ವೇಶ್, ವರದರಾಜ್‌ ಮುಂತಾದ ಒಂದಷ್ಟು ಯುವಕರು ರಂಗೋತ್ಸವದ ಸಂಘಟನೆಯಲ್ಲಿ ತಿಂಗಳುಗಳಿಂದ ತೊಡಗಿಸಿಕೊಂಡಿದ್ದಾರೆ. ರಂಗ ಸಂಘಟಕರಾದ ಡಿ.ಕೆ. ಚೌಟ, ಶಶಿಧರ ಅಡಪ ಮುಂತಾದ ಅನುಭವಿಗಳು ಈ ಯುವತಂಡದ ಹಿಂದೆ ನಿಂತು ರಂಗೋತ್ಸವವನ್ನು ಪೋಷಿಸುತ್ತಿರುವುದು ವಿಶೇಷ.ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ರಂಗ ಚಟುವಟಿಕೆಗಳು ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚಿದೆ. ಆದರೆ ರಂಗ ತಂಡಗಳು ಮತ್ತು ರಂಗಭೂಮಿಯಲ್ಲಿ ತೊಡಗಿಸಿಕೊಂಡವರ ವಿಳಾಸ, ಸಂಪರ್ಕ ವಿವರ ಇತ್ಯಾದಿ ಲಭ್ಯವಿಲ್ಲದೆ ರಂಗೋತ್ಸವಗಳ ಸಂಘಟಕರು ಪರದಾಡಬೇಕಾಗುತ್ತಿತ್ತು. ಈ ಸಮಸ್ಯೆಗೂ ಸಿಜಿಕೆ ರಾಷ್ಟ್ರೀಯ ನಾಟಕೋತ್ಸವದ ನೆಪದಲ್ಲಿ ಪರಿಹಾರ ಕಂಡುಕೊಂಡಿರುವುದು ಗಮನಾರ್ಹ. ಕಳೆದ ಆರು ತಿಂಗಳಿಂದ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಾಟಕ ನಡೆದಾಗಲೆಲ್ಲ ಆ ಸಂಘಟಕರನ್ನೋ, ಪ್ರಾಯೋಜಕರನ್ನೋ ಸಂಪರ್ಕಿಸಿ ಅವರ ವಿವರಗಳನ್ನೆಲ್ಲ ಕಲೆಹಾಕುತ್ತಾ ಬಂದಿದೆ ‘ರಂಗನಿರಂತರ’ ಸಂಸ್ಥೆ. ಹೀಗೆ, ‘ರಂಗಭೂಮಿಯ ವಿಶ್ವಕೋಶ’ದಂತೆ, ಜೀವನಾಡಿಯಂತೆ ಇದ್ದ ಸಿಜಿಕೆ ಅವರ ನೆನಪಿನಲ್ಲಿ ಏರ್ಪಾಡಾಗಿರುವ ಈ ರಂಗೋತ್ಸವ ರಂಗಗುರುವಿಗೆ ಅರ್ಪಿಸುವ ನಿಜ ಅರ್ಥದ ಗೌರವ.ಶನಿವಾರ ಚಾಲನೆ

ಸಿಜಿಕೆ ರಾಷ್ಟ್ರೀಯ ರಂಗೋತ್ಸವಕ್ಕೆ ಜ.11ರ ಶನಿವಾರ ಸಂಜೆ 7ಕ್ಕೆ ಹಿರಿಯ ರಂಗಕರ್ಮಿ ಪ್ರಸನ್ನ ಅವರು ಚಾಲನೆ ನೀಡುತ್ತಾರೆ. ರಂಗ ನಿರಂತರದ ಗೌರವಾಧ್ಯಕ್ಷರು ಹಾಗೂ ಉತ್ಸವದ ಪೋಷಕರಲ್ಲೊಬ್ಬರಾದ ಡಿ.ಕೆ. ಚೌಟ ಹಾಗೂ ಪ್ರದರ್ಶನಗೊಳ್ಳಲಿರುವ ನಾಟಕಗಳ ನಿರ್ದೇಶಕರಾದ ನವದೆಹಲಿಯ ಬಾಪಿ ಬೋಸ್, ತಿರುವನಂತಪುರದ ಎಂ.ಜಿ. ಜ್ಯೋತಿಷ್ ಹಾಗೂ ಪುಣೆಯ ಸಾಗರ್ ಲೋದಿ ಪಾಲ್ಗೊಳ್ಳಲಿದ್ದಾರೆ.ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದು.ಸರಸ್ವತಿ ಅವರ ‘ಸಣ್ಣತಿಮ್ಮಿ ರಾಮಾಯಣ’ ಏಕವ್ಯಕ್ತಿ ಪ್ರದರ್ಶನ ವಿಶೇಷ ಆಕರ್ಷಣೆಯಾಗಲಿದೆ. ಬೆಂಗಳೂರಿನಲ್ಲಿ ಇದು ಅವರ ಮೊದಲ ಪ್ರದರ್ಶನ. ಇದರೊಂದಿಗೆ ತಿರುವನಂತಪುರದ ರಂಗ ತಂಡಗಳಿಂದ ರಂಗಗೀತೆಗಳ ಪ್ರಸ್ತುತಿಯೂ ಇರುತ್ತದೆ. ಪ್ರತಿದಿನ ಸಂಜೆ 6ರಿಂದ ಕೆ. ಶಿವರುದ್ರಯ್ಯ ಅವರ ‘ಕತ್ತಲೆ  ಬೆಳದಿಂಗಳು’ ಎಂಬ ಸಿಜಿಕೆ ರಂಗ ಛಾಯಾಚಿತ್ರಗಳ ಪ್ರದರ್ಶನ, ಜ.13ರಿಂದ 17ರವರೆಗೂ ದಿನಾ ಬೆಳಿಗ್ಗೆ 11ಕ್ಕೆ ನಾಟಕದ ಕುರಿತ ಸಂವಾದವಿರುತ್ತದೆ.ನಾಟಕಗಳ ಬಗ್ಗೆ

ಐದು ಭಾಷೆಗಳ ತಲಾ ಒಂದೊಂದು ನಾಟಕ ಪ್ರದರ್ಶನಗೊಳ್ಳಲಿದೆ. 12ರಂದು ತಿರುವನಂತಪುರದ ಅಭಿನಯ ಥಿಯೇಟರ್ ತಂಡದಿಂದ ‘ಮ್ಯಾಕ್‌ಬೆತ್’ ಮಲಯಾಳಂ ನಾಟಕದ ಪ್ರದರ್ಶನವಿರುತ್ತದೆ. ಷೇಕ್ಸ್‌ಪಿಯರ್ ರಚಿಸಿದ ಈ ನಾಟಕದ ನಿರ್ದೇಶನ ಎಂ.ಜಿ. ಜ್ಯೋತಿಷ್. 14ರಂದು ಕೋಲ್ಕತ್ತದ ಮನೀಷ್ ಮಿತ್ರಾ ರಚಿಸಿ ನಿರ್ದೇಶಿಸಿದ ‘ಊರುಭಂಗ’ ಬೆಂಗಾಲಿ ನಾಟಕವನ್ನು ಕೋಲ್ಕತ್ತದ ಕೊಯ್ಯಾ ಅರ್ಘ್ಯ ತಂಡ ಅಭಿನಯಿಸಲಿದೆ. 15ರಂದು ಪುಣೆಯ ಆಕಾಂಕ್ಷ ತಂಡದಿಂದ ಮರಾಠಿ ನಾಟಕ ‘ಹಿಜಡಾ’ ಪ್ರದರ್ಶನ. ರಚನೆ ಮತ್ತು ನಿರ್ದೇಶನ ಸಾಗರ್ ಲೋಧಿ. 16ರಂದು ನವದೆಹಲಿಯ ಸರ್ಕಲ್‌ ಥಿಯೇಟರ್‌ ಕಂಪೆನಿಯಿಂದ ‘ಸೆವೆಂಟೀಂತ್ ಜುಲೈ’ ಹಿಂದಿ ನಾಟಕ. ರಚನೆ: ಬ್ರಾತ್ಯ ಬಸು, ನಿರ್ದೇಶನ ಬಾಪಿ ಬೋಸ್‌.ಮುಕ್ತಿಯಾರ್ ಅಲಿ ಗಾಯನ

ಜ.13ರಂದು ನಾಟಕ ಪ್ರದರ್ಶನವಿರುವುದಿಲ್ಲ. ಅಂದು ನಾಟಕದ ಬಗ್ಗೆ ಸಂವಾದ ಹಾಗೂ ಸಂಜೆ 7ಕ್ಕೆ ಖ್ಯಾತ ಸೂಫಿ ಹಾಡುಗಾರ ಮುಕ್ತಿಯಾರ್‌ ಅಲಿ ಅವರ ಹಾಡುಗಾರಿಕೆಯಿರುತ್ತದೆ. ಎಂ.ಡಿ. ಪಲ್ಲವಿ ಮತ್ತು ಸುಮತಿ ಅವರು ಅಲಿ ಅವರೊಂದಿಗೆ ಹಾಡಲಿದ್ದಾರೆ.ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ರಂಗಾಭಿಮಾನಿಗಳು ಮುಕ್ತಿಯಾರ್‌ ಅಲಿ ಅವರಿಗೆ ದೇಣಿಗೆ ನೀಡಲು ಅವಕಾಶವಿದೆ. ನೇಕಾರ ಸಮುದಾಯಕ್ಕಾಗಿ ಅಲಿ ಅವರು ಕೈಗೊಂಡಿರುವ ರಾಷ್ಟ್ರವ್ಯಾಪಿ ಹೋರಾಟಕ್ಕೆ ಈ ಹಣ ನೆರವಾಗಲಿದೆ.

‘ಇದು ರಿಹರ್ಸಲ್ ಅಷ್ಟೇ’

‘ರಂಗಭೂಮಿಗೆ ಹೊಸ ಕಲಾವಿದರು, ನಾಟಕಕಾರರು, ತಂತ್ರಜ್ಞರು ಹಾಗೂ ನಿರ್ದೇಶಕರನ್ನು ಸಿಜಿಕೆ ಅವರು ಪರಿಚಯಿಸಿ, ಬೆಳೆಸಿದ್ದು ರಂಗನಿರಂತರದ ಮೂಲಕ. ಯುವಜನರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ರಂಗಭೂಮಿಯ ವಿವಿಧ ಮಜಲುಗಳಲ್ಲಿ ತೊಡಗಿಸಿಕೊಳ್ಳಬೇಕು. ರಂಗಭೂಮಿಗೆ ಪ್ರೇರಕಶಕ್ತಿಯಾಗಬೇಕು ಎಂಬುದು ಅವರ ಕನಸಾಗಿತ್ತು. ಅದಕ್ಕೆಂದೇ ನಾವು ರಂಗನಿರಂತರದ ಒಂದಷ್ಟು ಹುಡುಗರಿಗೆ ಈ ನಾಟಕೋತ್ಸವದ ಸಂಘಟನೆಯ ಜವಾಬ್ದಾರಿಯನ್ನು ನೀಡಿದ್ದೇವೆ. ಈ ನಾಟಕೋತ್ಸವ ಒಂದು ರಿಹರ್ಸಲ್‌ ಅಷ್ಟೇ. ಮುಂದೆ ಪ್ರತಿವರ್ಷ ಇಂತಹ ನಾಟಕೋತ್ಸವವನ್ನು ಇನ್ನೂ ದೊಡ್ಡ ಪ್ರಮಾಣದಲ್ಲಿ ಸಂಘಟಿಸುವ ಆಸೆ ನಮ್ಮದು. ನಾಟಕೋತ್ಸವಕ್ಕೆ 16ರಿಂದ 17 ಲಕ್ಷ ವೆಚ್ಚವಾಗುವ ಅಂದಾಜಿದೆ.ಎಲ್ಲಿಯೂ ದುಂದುವೆಚ್ಚವಾಗದಂತೆ ಎಚ್ಚರವಹಿಸಿದ್ದೇವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸರ್ಕಾರ ಹಳೆಯ ಬಾಕಿ ಅನುದಾನದ ರೂಪದಲ್ಲಿ ನೆರವು ನೀಡಿದೆ. ಉದ್ಘಾಟನೆಯ ದಿನ ಹೊರತುಪಡಿಸಿ ಐದೂ ದಿನ ನಾಟಕಗಳ ವೀಕ್ಷಣೆಗೆ 400 ರೂಪಾಯಿ ಪ್ರವೇಶಧನ. ವಿದ್ಯಾರ್ಥಿಗಳು ತಮ್ಮ ಐಡೆಂಟಿಟಿ ಕಾರ್ಡ್‌ ತೋರಿಸಿದರೆ 250 ರೂಪಾಯಿ ಪ್ರವೇಶಧನ ಪಾವತಿಸಬಹುದು.ಮೊದಲೇ ಹೇಳಿದಂತೆ, ಈ ರಂಗೋತ್ಸವ ಒಂದು ಆರಂಭ ಮಾತ್ರ. ಮುಂದಿನ ಯೋಜನೆಗಳು ಕಾರ್ಯರೂಪಕ್ಕೆ ಬರಲು ಹಣದ ಅವಶ್ಯಕತೆಯಿದೆ. ರಂಗಾಭಿಮಾನಿಗಳು ದೇಣಿಗೆ ನೀಡಿದರೆ ಸಿಜಿಕೆ ರಂಗೋತ್ಸವದ ಖಾತೆಗೆ ಜಮಾ ಆಗುತ್ತದೆ’.

– ಶಶಿಧರ ಅಡಪ, ಸಂಘಟಕ.

ಸಾಂಸ್ಕೃತಿಕ ವಾತಾವರಣದ ನಿರೀಕ್ಷೆ

ರಂಗನಿರಂತರ’ದ ಸಿಜಿಕೆ ರಾಷ್ಟ್ರೀಯ ರಂಗೋತ್ಸವವು ದೇಶದಲ್ಲಿ ನಡೆದಿರುವ ರಂಗಭೂಮಿಯ ಹೊಸ ಪ್ರಯೋಗಶೀಲತೆಯ ಜೊತೆಗೆ ಸ್ಥಳೀಯ ರಂಗಭೂಮಿಗೂ ಪ್ರೇರಣೆ ನೀಡುತ್ತದೆ. ಈ ರಂಗೋತ್ಸವ ಹೊಸತನದೊಂದಿಗೆ ವರ್ತಮಾನದ ಬಿಕ್ಕಟ್ಟುಗಳಿಗೆ ಪರ್ಯಾಯ ಚಿಂತನೆಯನ್ನು ರೂಪಿಸುತ್ತಲೇ ಸಾಂಸ್ಕೃತಿಕ ವಾತಾವರಣ ನಿರ್ಮಾಣದ ಆಶಯ ಹೊಂದಿದೆ.

–ಸಿ.ಬಸವಲಿಂಗಯ್ಯ, ರಂಗೋತ್ಸವದ ನಿರ್ದೇಶಕರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry