ಶುಕ್ರವಾರ, ಜೂನ್ 25, 2021
29 °C

‘ಚಾಯ್‌ ಪೆ ಚರ್ಚಾ’ದಲ್ಲಿ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಜೆಪಿ ನಗರದಲ್ಲಿ ಶನಿವಾರ ಬಿಜೆಪಿ ಆಯೋಜಿಸಿದ್ದ ‘ಚಾಯ್‌ ಪೆ ಚರ್ಚಾ’ ಕಾರ್ಯಕ್ರಮ ಮಹಿಳೆಯರಿಗೆ ನಿರಾಸೆ ಮೂಡಿಸಿತು.ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಪ್ರಶ್ನೆ ಕೇಳಿ, ಉತ್ತರ ಪಡೆಯಲು ಆಯೋಜಿಸಿದ್ದ ರಾಷ್ಟ್ರ ಮಟ್ಟದ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರಿಗೆ ಕೇವಲ ಒಂದು ಪ್ರಶ್ನೆ ಕೇಳಲು ಅವಕಾಶ ದೊರೆಯಿತು. ಇದರಿಂದಾಗಿ  ಪ್ರಶ್ನೆ ಕೇಳಲು ಕಾಯುತ್ತಿದ್ದ ಮಹಿಳೆಯರು ಸಮಯದ ಅಭಾವದಿಂದ ಪ್ರಶ್ನೆ ಕೇಳದೆಯೇ ನಿರಾಶರಾಗಿ ಮನೆಗಳಿಗೆ ಮರಳಿದರು.

ಮಹಿಳೆಯರು ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯುವ ಸಲುವಾಗಿ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು ಕಾಯುತ್ತಿದ್ದರು. ಸಮಯದ ಅಭಾವದಿಂದ ನಗರದ ಜಯಾ ಎಂಬ ಮಹಿಳೆಯೊಬ್ಬರಿಗೆ ಒಂದೇ  ಪ್ರಶ್ನೆ ಕೇಳಲು  ಅವಕಾಶ ದೊರೆಯಿತು. ಆದರೆ ತಾಂತ್ರಿಕ ದೋಷದಿಂದ ಈ ಚರ್ಚೆಯೂ ಬಹಳ ಬೇಗ ಮುಕ್ತಾಯಗೊಂಡಿತು.ಕಾರ್ಯಕ್ರಮದಲ್ಲಿ ಪ್ರಶ್ನೆ ಕೇಳಲು ಬಯಸುವವರಿಗೆ ಇ–ಮೇಲ್‌, ಎಸ್‌ಎಂಎಸ್‌ ಹಾಗೂ ವಾಟ್ಸ್‌ ಆಪ್‌ ಮೂಲಕ ಪ್ರಶ್ನೆಗಳನ್ನು ಕಳುಹಿಸಲು ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ ಕಾರ್ಯಕ್ರಮದಲ್ಲಿ ದೊರೆಯುವ ಕಾಲಾವಕಾಶದ ಮೇಲೆ ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಮೊದಲೇ ಮಹಿಳೆಯರಿಗೆ ತಿಳಿಸಲಾಗಿತ್ತು ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದರು.

90 ನಿಮಿಷಗಳ ಕಾಲ ದೇಶಾದ್ಯಂತ ನಡೆದ ನೇರ ಸಂವಾದ ಕಾರ್ಯ­ಕ್ರಮದಲ್ಲಿ ಕರ್ನಾಟಕ, ಅಲಹಾಬಾದ್‌, ದೆಹಲಿ, ರಾಂಚಿ ಸೇರಿದಂತೆ ದೇಶದ ವಿವಿಧ ಭಾಗಗಳ ಮಹಿಳೆಯರು ಭಾಗವಹಿಸಿದ್ದರು.ರಾಜ್ಯದಲ್ಲಿ ಬೆಳಗಾವಿಯಲ್ಲೂ ಈ ಕಾರ್ಯ­ಕ್ರಮವನ್ನು ಆಯೋಜಿ­ಸ­ಲಾಗಿತ್ತು. ಇದರಲ್ಲಿ ಮಹಿಳೆಯರ ಸುರ­ಕ್ಷತೆ, ಸಬಲೀಕರಣ ಹಾಗೂ ಗ್ರಾಮೀಣ ಅಭಿವೃದ್ಧಿ ಬಗ್ಗೆ ಮಹಿಳೆಯರು ಕೇಳಿದ ಸಾಕಷ್ಟು ಪ್ರಶ್ನೆಗಳಿಗೆ ಮೋದಿ ಉತ್ತರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.