‘ಚಾಯ್’ ಹುಡುಗರ ಸಂಗೀತದ ಅಬ್ಬರ

7

‘ಚಾಯ್’ ಹುಡುಗರ ಸಂಗೀತದ ಅಬ್ಬರ

Published:
Updated:

‘ತುಟಿಗಂಟಿಯೂ ಅಂಟದಂತೆ ಚಾಯ್ (ಚಹಾ) ಸವಿಯುವುದರಲ್ಲಿ ಒಂಥರಾ ಸುಖ. ಕೊನೆಯ ಗುಟುಕನ್ನು ಪ್ಸೂ... ಅಂತ ಸಶಬ್ದವಾಗಿ ಹೀರುವುದು ಅನುಭೂತಿ. ಸಂಗೀತದ ಬಗ್ಗೆಯಂತೂ ಮಾತಿಗೆ ಕೂರುವ ಮುನ್ನ ನಮ್ಮ ಮುಂದೆ ಚಹಾ ಕಪ್ ಇರಲೇಬೇಕು. ಇಲ್ಲದಿದ್ದರೆ ಮಾತಿಗೆ ಮುನ್ನುಡಿಯೇ ಸಿಗುವುದಿಲ್ಲ ಕಣ್ರೀ. ಹೊಸ ಹಾಡುಗಳು ಹುಟ್ಟುವುದೂ ಇಲ್ಲ.

ನಮ್ಮ ಚಹಾ ಪ್ರೇಮವನ್ನೂ, ಅದು ಹಿಡಿದಿಡುವ ಸಂಗೀತದ ಲಯವನ್ನೂ ಬೆರೆಸಿ- ಡಿಕಾಕ್ಷನ್‌ಗೆ ಸಕ್ಕರೆ ಬೆರೆಸುತ್ತೀವಲ್ಲ ಹಾಗೆ- ಬ್ಯಾಂಡ್ ಚಾಯ್ ಅಂತ ಹೆಸರಿಟ್ಟೆವು’ ಅಂತಂದ ಬಾಬ್ಬಿ ಚಹಾ ಕಪ್ ಆಚೆಗಿಟ್ಟು ಗಿಟಾರ್ ಶ್ರುತಿಯನ್ನು ಹುರಿಗೊಳಿಸಿದರು.ನಗರದ ಹತ್ತಾರು ಬ್ಯಾಂಡ್‌ಗಳಲ್ಲಿ ‘ಬ್ಯಾಂಡ್ ಚಾಯ್’ ಕೂಡಾ ಒಂದು ಎನ್ನಬಹುದಾದರೂ ಸಂಗೀತದ ಸೆಳೆತಕ್ಕೆ ಸಿಕ್ಕಿ ಬೇರೆ ಬೇರೆ ಕ್ಷೇತ್ರದಿಂದ ಒಂದೆಡೆ ಬಂದು ಬೆರೆತು ಬದ್ಧತೆಯಿಂದ ನಾದದಲೆ ಹಬ್ಬುತ್ತಿರುವ ಪರಿ ಮತ್ತು ಕನ್ನಡೇತರರಿಗೂ ಕನ್ನಡ ಕಲಿಸಿ ಕನ್ನಡದ ಹಾಡುಗಳನ್ನು ಸಿಲಿಕಾನ್ ಸಿಟಿಯ ಸಂಗೀತಾಭಿಮಾನಿಗಳಿಗೆ ರಾಕಿಂಗ್ ಶೈಲಿಯಲ್ಲಿ ಉಣಬಡಿಸಬೇಕು ಎಂಬ ಹುಮ್ಮಸ್ಸು ಮೆಚ್ಚುಗೆಯಾಗುತ್ತದೆ. ‘ಚಾಯ್’ ತಂಡದ ಸದಸ್ಯರಾದ ರೋಹನ್ ಮತ್ತು ರಾಗೀಶ್ ಎಂಬ ಕೇರಳದ ಸಹೋದರರೂ ಕನ್ನಡವನ್ನು ಒಲಿಸಿಕೊಳ್ಳುತ್ತಿದ್ದಾರಂತೆ.‘ಬ್ಯಾಂಡ್ ತಂಡವೊಂದು ಸಂಗೀತ ಕಾರ್ಯಕ್ರಮ ನೀಡುತ್ತದೆಂದರೆ ಅಲ್ಲಿ ರಾಕ್, ಪಾಪ್ನಂತಹ ಸಂಗೀತ ಅಬ್ಬರಿಸುತ್ತದೆ ಎಂದೇ ಅರ್ಥ. ಸಂಗೀತವನ್ನು ಆಲಿಸುವವರು ಒಂದಷ್ಟು ಮಂದಿಯಾದರೆ ಹಾಡುವವನ ಆಂಗಿಕಗಳನ್ನಷ್ಟೇ ಆಸ್ವಾದಿಸುತ್ತಾ ಅವನ ಹಾಗೇ ತಾವೂ ಬಳುಕಿ, ತಲೆ ಅಲ್ಲಾಡಿಸುವ ಮೂಲಕ ಬರಿಯ ಪ್ರೇಕ್ಷಕರಾಗುವವರೂ ಇರುತ್ತಾರೆ. ಭಾಷೆ ಅರ್ಥವಾಗಲಿ ಆಗದಿರಲಿ ರಾಗ, ತಾಳ, ಲಯವನ್ನಷ್ಟೇ ಸುಖಿಸುವವರೂ ಇರುತ್ತಾರೆ.

ಅದು ನಾದಬ್ರಹ್ಮನ ಲೀಲೆಯೋ ಏನೋ. ಆದರೆ ನಮ್ಮ ಕಾರ್ಯಕ್ರಮ ಎಲ್ಲಾ ವರ್ಗದ ಶ್ರೋತೃಗಳಿಗೂ ತಲುಪಬೇಕು ಎಂಬ ಆಸೆ ನಮ್ಮದು. ಅದಕ್ಕಾಗಿ ಜಾನಪದ ಹಾಡುಗಳನ್ನೂ ಪ್ರತಿ ಕಾರ್ಯಕ್ರಮದಲ್ಲೂ ಹಾಡುತ್ತೇವೆ. ಕನ್ನಡದ ಹಾಡುಗಳನ್ನೂ ಇಷ್ಟರಲ್ಲೇ ಪ್ರಸ್ತುತಪಡಿಸಲಿದ್ದೇವೆ’ ಎನ್ನುತ್ತಾರೆ, ಬೇಸ್ ಗಿಟಾರ್‌ನಲ್ಲೇ ರಸನಿಮಿಷಗಳನ್ನು ಸೃಷ್ಟಿಸುವ ವಿದ್ಯಾರ್ಥಿ ರವಿ.ಒಲಿದು ಬಂದವರಿಗೆ ಸಂಗೀತ ವರವಾಗಿ ಪರಿಣಸುವ ಪರಿಗೆ ‘ಚಾಯ್’ ತಂಡದ ನಾಗೇಶ್ ಸಾಕ್ಷಿ. ವೃತ್ತಿಯಲ್ಲಿ ವಕೀಲ. ಗಿಟಾರ್ ಕೈಗೆತ್ತಿಕೊಂಡರೆ ಯಾವ ಜಂಜಡವೂ ಒಲ್ಲೆ ಎನ್ನುವಂತಹ ಆಕರ್ಷಣೆ. ಬಾಬ್ಬಿ ಜೊತೆ ನಾಗೇಶ್ ಸಹ ಗಿಟಾರ್ ನುಡಿಸುತ್ತಾರೆ.

ಹಾಡುಗಳ ಆಯ್ಕೆ ಹೇಗೆ ಮಾಡಿಕೊಳ್ಳುತ್ತೀರಿ ಎಂದು ಕೇಳಿದರೆ, ‘ಚಾಯ್’ನ ಗಾಯಕ ರಾಗೀಶ್ ವೇದಾಂತಿಯಂತೆ ಮಾತನಾಡುತ್ತಾರೆ: ‘ಸಂಗೀತ, ಪ್ರತಿಯೊಬ್ಬನ ಸ್ವತ್ತು. ನಾವು ಹಾಡುವುದು ಮೊದಲು ಕೇಳುಗರಿಗಾಗಿ ನಂತರ ನಮಗಾಗಿ.

ಆದ್ದರಿಂದ ಪ್ರತಿ ಹಾಡೂ ಜನರನ್ನು, ಅವರ ಭಾವನೆಗಳನ್ನು, ಅವರ ಜಗತ್ತನ್ನು ಪ್ರತಿನಿಧಿಸಬೇಕು ಎಂಬುದು ನಮ್ಮ ಕಾಳಜಿ. ಅದಕ್ಕಾಗಿ ನಾವು ನಮ್ಮದೇ ಯಾರದೋ ಕತೆಯನ್ನು ಹೇಳುವಂತಹ ಹಾಡುಗಳನ್ನು ಆಯ್ದುಕೊಳ್ಳುತ್ತೇವೆ. ಅದು ಸುಲಭವಾಗಿ ಶ್ರೋತೃಗಳನ್ನು ತಲುಪುತ್ತದೆ. ಅವರು ಆಸ್ವಾದಿಸುತ್ತಾರೆ ಕೂಡಾ. ಹಾಗಾಗಿ ನಮ್ಮ ಪ್ರತಿ ಹಾಡೂ ಜನರ ಹಾಡು’.ಟೆಕ್ಕಿ ರಂಜೀಶ್‌ಗೆ ಕೀಬೋರ್ಡ್ ಸರ್ವಸ್ವವಂತೆ. ಮೊದಲ ಶ್ರುತಿಯಿಂದ ಕೊನೆಯ ಬೀಟ್‌ವರೆಗಿನ ಪ್ರತಿ ಕ್ಷಣವನ್ನೂ ಆಸ್ವಾದಿಸುತ್ತಲೇ, ಸ್ವರಭಾರ, ಲಯ, ಅಬ್ಬರಗಳನ್ನು ಸುಖಿಸುತ್ತಲೇ ಧ್ಯಾನಸ್ಥ ಸ್ಥಿತಿ ತಲುಪುತ್ತಾರಂತೆ. ಜಗತ್ತನ್ನೇ ಮರೆತು ಕೀಬೋರ್ಡ್ ನುಡಿಸುತ್ತೇನೆ. ಸಂಗೀತದ ಶಕ್ತಿಯೇ ಅಂತಹುದು ಅನ್ನುತ್ತಾರೆ ಅವರು.ಬ್ಯಾಂಡ್ ಸಂಗೀತಕ್ಕೆ ಅಬ್ಬರದ ಸ್ಪರ್ಶ ಕೊಡುವಲ್ಲಿ ಡ್ರಮ್ಸ್‌ನ ಪಾತ್ರ ಸ್ವಲ್ಪ ಹೆಚ್ಚೇ ಅನ್ನಬಹುದು. ಮಿಂಚಿನ ಸಂಚಾರಗಳನ್ನು ಪ್ರಸ್ತುತಪಡಿಸುವಾಗಿನ ತಾದಾತ್ಮ್ಯವನ್ನು ದಕ್ಕಿಸಿಕೊಂಡಾಗಲೇ ಡ್ರಮ್ಸ್ ಇಡೀ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿಸಬಲ್ಲದು. ರೋಹನ್ ಈ ಕಲೆಯನ್ನು ಸಿದ್ಧಿಸಿಕೊಂಡು ತಂಡಕ್ಕೆ ಹೆಗಲೆಣೆಯಾಗಿ ನಿಂತಿದ್ದಾರೆ ಎಂದು ಹೇಳುತ್ತಾರೆ, ಬಾಬ್ಬಿ.‘ಬೆಂಗಳೂರಿನ ಬಹುತೇಕ ಬ್ಯಾಂಡ್‌ಗಳಂತೆ ಈ ತಂಡದಲ್ಲಿಯೂ ಸದಸ್ಯರು ಬದಲಾಗಿದ್ದಿದೆ. ಅವರವರ ವೈಯಕ್ತಿಕ ಕಾರಣಕ್ಕೆ ಕೆಲವರು ತಂಡ ಬಿಟ್ಟು ಹೋಗಿದ್ದಿದೆ. ಆದರೆ ನಮ್ಮ ತಂಡದ ಗುರಿಯೊಂದೇ ಸಂಗೀತವನ್ನು ಎಲ್ಲಾ ವರ್ಗದ ಜನರಿಗೂ ತಲುಪಿಸುವುದು. ಕೇಳಿದ ಪ್ರತಿಯೊಬ್ಬರೂ ಆನಂದಿಸುವಂತೆ, ಮೆಲುಕು ಹಾಕುವಂತೆ ಮಾಡುವುದು. ಅಂತಹ ಬದ್ಧತೆಯಿರುವವರು ತಂಡದಲ್ಲಿ ಇರುತ್ತಾರೆ. ತಂಡವೆಂದರೆ ತಂಡ ಅಷ್ಟೇ. ನಿರ್ಧಾರಗಳೂ ತಂಡದ್ದಾಗಿರುತ್ತದೆ. ಒಗ್ಗಟ್ಟು, ಏಕಭಾವ ಉಳಿಯಬೇಕೆಂದರೆ ಮುಖ್ಯವಾಗಿ ತಂಡ ತಂಡವಾಗಿ ಉಳಿಯಬೇಕಾದರೆ ಇವೆಲ್ಲ ಮುಖ್ಯ ಅಲ್ವೇ’ ಎಂದು ಪ್ರಶ್ನಿಸುತ್ತಾರೆ ಅವರು.‘ಚಾಯ್’ ತಂಡದ ಹೆಚ್ಚಿನ ಕಾರ್ಯಕ್ರಮಗಳು ಪಬ್‌ಗಳಲ್ಲಿ ನಡೆಯುತ್ತವಂತೆ. ನಗರದಲ್ಲಿ ಜಾರಿಯಲ್ಲಿರುವ ಕಟ್ಟುನಿಟ್ಟಿನ ಕಾನೂನು ಕ್ರಮಗಳ ಚೌಕಟ್ಟಿನೊಳಗೇ ಸಂಗೀತಾಭಿಮಾನಿಗಳನ್ನು ತಮ್ಮ ನೆಚ್ಚಿನ ಸ್ಥಳಗಳಲ್ಲಿ ಸಂಗೀತ ಆಲಿಸಲು ಬಯಸುತ್ತಾರೆ. ವಾರಕ್ಕೆ ಎರಡರಿಂದ ಮೂರು ಕಾರ್ಯಕ್ರಮಗಳು ನಮಗೆ ಇದ್ದೇ ಇರುತ್ತವೆ ಎನ್ನುತ್ತಾರೆ, ನಾಗೇಶ್.ಆಧುನಿಕ ಬದುಕನ್ನು ನೆಚ್ಚಿಕೊಂಡವರಿಗೆ ಬೆಂಗಳೂರು ಸ್ವರ್ಗ. ಇಲ್ಲಿ ಬ್ಯಾಂಡ್ ಸಂಗೀತಕ್ಕೆ ಅದ್ಭುತವಾದ ಸ್ಪಂದನವಿದೆ. ಶ್ರೋತೃಗಳ ದೊಡ್ಡ ಬಳಗವಿದೆ ಎನ್ನುವ ಬಾಬ್ಬಿ, ತಮಗೆ ಸಿಗುತ್ತಿರುವ ಆಹ್ವಾನಗಳೇ ಇದಕ್ಕೆ ಸಾಕ್ಷಿ ಎನ್ನುತ್ತಾರೆ ಅವರು. ಬ್ಯಾಂಡ್ ಸಂಗೀತಕ್ಕೆ ಅದರದ್ದೇ ಆದ ಒಂದು ಶ್ರೋತೃವರ್ಗವಿರುತ್ತದೆ. ಆದರೆ ಮಾಲ್‌ಗಳಲ್ಲಿ ಬ್ಯಾಂಡ್ ಮ್ಯೂಸಿಕ್ ಶೋಗಳು ನಡೆಯುವ ಟ್ರೆಂಡ್ ಇತ್ತೀಚೆಗೆ ಶುರುವಾಗಿದೆ. ಅಲ್ಲಿ ನಿಜಕ್ಕೂ ನಿಮಗೆ ಗಂಭೀರ ಶ್ರೋತೃಗಳು ಸಿಗುತ್ತಾರೆಯೇ ಎಂದು ಕೇಳಿದರೆ ಬಾಬ್ಬಿ ಹೇಳುತ್ತಾರೆ: ಮಾಲ್‌ಗಳಲ್ಲಿ ಫ್ಲೋಟಿಂಗ್ ಆಡಿಯನ್ಸ್ ಅಂದರೆ ಬರುತ್ತಾ ಹೋಗುತ್ತಾ ಇರುವ ಸಂಚಾರಿ ಶ್ರೋತೃಗಳಿರುತ್ತಾರೆ ನಿಜ.ಆದರೆ ಒಂದೊಂದು ಹಾಡಿಗೂ ಹೊಸ ಹೊಸ ಶ್ರೋತೃಗಳು ಸೇರಿಕೊಳ್ಳುವುದನ್ನು ನೋಡುತ್ತಾ ನಾವು ನಮ್ಮ ಕಾರ್ಯಕ್ರಮವನ್ನು ಮತ್ತಷ್ಟು ರಂಗೇರಿಸಿಕೊಳ್ಳಬಹುದು. ಬ್ಯಾಂಡ್ ಮ್ಯೂಸಿಕ್‌ನ ಗಂಧವರಿಯದವರಿಗೆ ಅದೊಂದು ಹೊಸ ಅನುಭವವಾದೀತು. ಈ ದೃಷ್ಟಿಯಲ್ಲಿ ಮಾಲ್‌ನಲ್ಲಿ ಬ್ಯಾಂಡ್ ಮ್ಯೂಸಿಕ್ ಸ್ವಾಗತಾರ್ಹವೇ. ಲೈವ್‌ಬ್ಯಾಂಡ್‌ಗಳಿಗೂ ಸಾಮಾನ್ಯ ಬ್ಯಾಂಡ್‌ಗಳಿಗೂ ವ್ಯತ್ಯಾಸವೊಂದನ್ನು ಗುರುತಿಸುತ್ತಾರೆ ಚಾಯ್ ಹುಡುಗರು.

ಲೈವ್‌ಬ್ಯಾಂಡ್‌ಗಳಲ್ಲಿ ಕಾರ್ಯಕ್ರಮ ನೀಡುವ ತಂಡಗಳಿಗೆ ಆ ಕ್ಷಣ ಮುದ ನೀಡುವುದು, ಮೋಜು ಹೆಚ್ಚಿಸುವುದು ಉದ್ದೇಶವಾಗಬಹುದು. ಮಾತ್ರವಲ್ಲ ಅಲ್ಲಿರುವುದು ಸೀಮಿತ ಶ್ರೋತೃಗಳು. ಆದರೆ ಬ್ಯಾಂಡ್ ಮ್ಯೂಸಿಕ್‌ಗೆ ದೊಡ್ಡ ಸಂಖ್ಯೆಯ, ಬೇರಾ್ಯವುದೇ ಆಕರ್ಷಣೆ, ಮೋಜು ಇಲ್ಲದ, ಅಭಿಮಾನದಿಂದ ನೆರೆದ ಶ್ರೋತೃವರ್ಗ ವೇದಿಕೆ ಮುಂದಿರುತ್ತದೆ. ಮಾತ್ರವಲ್ಲ ಇಂತಹ ತಂಡಗಳಿಗೆ ಸಂಗೀತವೆಂಬುದು ಆರಾಧನೆ ಆಗಿರುತ್ತದೆ.ಚಹಾಮೋಹಿಗಳು ಸಂಗೀತವನ್ನು ಸವಿಯುತ್ತಾ ಸಾಗುತ್ತಿದ್ದಾರೆ. ಗುರಿಯಿದೆ. ಛಲವೂ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರೇಕ್ಷಕರು, ಶ್ರೋತೃಗಳೇ ತಮ್ಮ ಪಯಣದ ದಂಡನಾಯಕರು ಎಂಬ ಅರಿವೂ ಅವರಿಗಿದೆ. ತಮ್ಮ ‘ಚಾಯ್’ ಸಿಹಿಯಾಗಿರಬೇಕಾದರೆ ಅವರು ಮುಖ್ಯ ಎಂಬ ಪ್ರಜ್ಞೆಯಿದೆ.

‘ಚಾಯ್’ ಹುಡುಗರ ಸಂಪರ್ಕಕ್ಕೆ: guitarman_bobby@ yahoo.com/ 98454 61484. z

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry