ಮಂಗಳವಾರ, ಜೂನ್ 22, 2021
27 °C

‘ಚಿಂದಿ’ಯಾದ ಹಾವುಗೊಲ್ಲರ ಮಕ್ಕಳ ಭವಿಷ್ಯ!

ಪ್ರಜಾವಾಣಿ ವಾರ್ತೆ/ ವಿಶೇಷ ವರದಿ/ ​ ಶ.ಗ. ನಯನತಾರಾ Updated:

ಅಕ್ಷರ ಗಾತ್ರ : | |

ಶನಿವಾರಸಂತೆ: ಸಮೀಪ ಪೈಸಾರಿ ಜಾಗದಲ್ಲಿ ಟೆಂಟ್‌ ಹಾಕಿಕೊಂಡು ನೆಲೆಸಿರುವ ಹಾವುಗೊಲ್ಲ ಜನಾಂಗದವರ ಮಕ್ಕಳು ಎಲ್ಲೆಂದರಲ್ಲಿ ಚಿಂದಿ ಆಯುವುದನ್ನೇ ನಿತ್ಯ ಕಾಯಕ ಮಾಡಿಕೊಂಡಿವೆ. ಶಾಲೆಯತ್ತ ಮುಖವನ್ನೇ ಮಾಡದ ಹಲವು ಪುಟಾಣಿಗಳು ಹಗಲು– ರಾತ್ರಿಯೆನ್ನದೇ ಚಿಂದಿ ಆಯುವುದರಲ್ಲೇ ನಿರತವಾಗಿದ್ದು, ಅವರ ಭವಿಷ್ಯ ಬಾಲ್ಯದಲ್ಲೇ ಕಮರಿಹೋಗುತ್ತಿದೆ.ಹಾವುಗೊಲ್ಲರ ಹಲವರು ಕುಟುಂಬಗಳು ಸುಮಾರು 40 ವರ್ಷಗಳ ಹಿಂದೆ ವಲಸೆ ಬಂದು ಟೆಂಟ್ ಹಾಕಿಕೊಂಡು ನೆಲೆಸಿವೆ. ಮಕ್ಕಳ ಭವಿಷ್ಯ, ಶಿಕ್ಷಣದ ಬಗ್ಗೆ ಇವರಿಗೆ ಅಷ್ಟಾಗಿ ಅರಿವಿಲ್ಲ. 12 ರಿಂದ 14 ವರ್ಷ ವಯಸ್ಸಿನ ಮಕ್ಕಳು ತಮ್ಮ ಹೆಗಲ ಮೇಲೊಂದು ಪ್ಲಾಸ್ಟಿಕ್ ಚೀಲ ಹೊತ್ತು ಬೀದಿಬೀದಿ ಸುತ್ತುತ್ತ ಖಾಲಿ ಬಾಟಲಿ, ಪ್ಲಾಸ್ಟಿಕ್ ಹಾಗೂ ಉಪಯೋಗಿಸಿ ಎಸೆದ ಗುಜರಿ ವಸ್ತುಗಳನ್ನು ಆಯುತ್ತಿದ್ದಾರೆ. ಮಕ್ಕಳನ್ನು ಕರೆತಂದು ಶಾಲೆಗೆ ಸೇರಿಸಿದರೂ ಅವರು ಶಾಲೆಯಲ್ಲಿ ಕುಳಿತುಕೊಳ್ಳುವುದೇ ಇಲ್ಲ ಎನ್ನುತ್ತಾರೆ ಸ್ಥಳೀಯ ಶಾಲೆಗಳ ಶಿಕ್ಷಕರು. ಮಾತ್ರವಲ್ಲ; ಅವರೆ ಪೋಷಕರೇ ಬಲವಂತದಿಂದ ಚಿಂದಿ ಆಯುವ ಕಾಯಕಕ್ಕೆ ಹಚ್ಚಿದ್ದಾರೆ ಎಂದು ಅವರ ಆರೋಪ.ಚಿಂದಿ ಆಯ್ದು ಪಟ್ಟಣದ ಗುಜರಿ ಅಂಗಡಿಗೆ ಹಾಕಿದರೆ ಮಕ್ಕಳಿಗೆ ದಿನಕ್ಕೆ ₨ 20ರಿಂದ 40 ಸಂಪಾದನೆಯಾಗುತ್ತದೆ. ಮಕ್ಕಳಿಗೆ ಅಷ್ಟರಲ್ಲೇ ತೃಪ್ತಿ. ಹಣ ಸಂಪಾದನೆಯ ರುಚಿ ಹತ್ತಿರುವ ಈ ಮಕ್ಕಳು ದಿನಬೆಳಗಾದರೆ ಚಿಂದಿ ಆಯುವುದನ್ನೇ ತಮ್ಮ ಕಾಯಕ ಮಾಡಿಕೊಂಡಿದ್ದಾರೆ.ಪುಟ್ಟ ಹೆಗಲಿನ ಮೆಲೆ ಪ್ಲಾಸ್ಟಿಕ್‌ ಚೀಲ ನೇತುಹಾಕಿಕೊಂಡು, ಕೊಚ್ಚೆ ಇರುವ ಕಡೆಯಲ್ಲೆಲ್ಲ ಚಿಂದಿ ಆಯುವ ದೃಶ್ಯ ಹೃದಯ ಕಲಕುತ್ತದೆ.

ಕಡ್ಡಾಯ ಶಿಕ್ಷಣ ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದೆ. ಆದರೆ, ಸ್ಥಳೀಯ

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಮಕ್ಕಳ ಬಗ್ಗೆ ಪಾಲಕರು ಒತ್ತಟ್ಟಿಗಿರಲಿ; ಸಂಬಂಧಪಟ್ಟ ಇಲಾಖೆಯೂ ತಲೆ ಕೆಡಿಸಿಕೊಂಡಿಲ್ಲ. ಇದರಿಂದಾಗಿ ಸುಂದರ ವಾತಾವರಣದಲ್ಲಿ ಆಡಿ ನಲಿದು, ಅಕ್ಷರ ಕಲಿಯಬೇಕಿದ್ದ ಚಿಣ್ಣರು ತಿಪ್ಪೆಗುಂಡಿಯಲ್ಲಿ ಚಿಂದಿ ಹುಡುಕುವಂತಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.