‘ಚಿತ್ರ ಚಿತ್ತಾರ’ದ ಸಚಿನ್‌ ಬನವಾಸಿ

7
ಮಾತ್ ಮಾತಲ್ಲಿ

‘ಚಿತ್ರ ಚಿತ್ತಾರ’ದ ಸಚಿನ್‌ ಬನವಾಸಿ

Published:
Updated:

ಇದು ನನ್ನ ಬಹುದಿನಗಳ ಬಯಕೆ. ಚಿಕ್ಕವನಾಗಿದ್ದಾಗ ಅಮ್ಮ, ‘ಎಷ್ಟು ಮಾತನಾಡುತ್ತೀಯಾ ಮಗನೇ?’ ಎಂದು ಹೇಳುತ್ತಲೇ  ಇದ್ದರು. ಅದೇ ಮಾತು ಇಂದು ನನಗೆ ಉದ್ಯೋಗ ನೀಡಿದೆ. ಜನರ ಪ್ರೀತಿ ಗಳಿಸಿ ಕೊಟ್ಟಿದೆ.

ನನ್ನ ಮೂಲ ಬನವಾಸಿಯಾದರೂ, ವಿದ್ಯಾಭ್ಯಾಸ ಎಲ್ಲಾ ಬೆಂಗಳೂರಿನಲ್ಲೇ ಆದದ್ದು, ಆಗುತ್ತಿರುವುದು...ಶೇಷಾದ್ರಿಪುರಂ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಪಡೆದ ನಾನು, ಸ್ನಾತಕೋತ್ತರ ಪದವಿಗಾಗಿ ಸದ್ಯ ಗಾರ್ಡನ್‌ ಸಿಟಿ ಕಾಲೇಜಿನಲ್ಲಿ ಸಂವಹನ ವಿಷಯದ ಅಭ್ಯಾಸದಲ್ಲಿ ತೊಡಗಿದ್ದೇನೆ. ಈ ಮಧ್ಯೆ ಆರ್‌.ಜೆ. ಆಗಿಯೂ ‘ಎಫ್‌ಎಂ ರೇನ್‌ಬೋ ಕನ್ನಡ ಕಾಮನಬಿಲ್ಲು’ವಿನಲ್ಲಿ ಮಾತನಾಡುತ್ತಿದ್ದೇನೆ.ನನಗೆ ಮಾತಿನಲ್ಲಿ ಒಂದಿಷ್ಟು ಪಕ್ವತೆ ಬರಲು ಮುಖ್ಯ ಕಾರಣ ಚರ್ಚಾಸ್ಪರ್ಧೆಗಳು. ಶಾಲಾ ದಿನಗಳಿಂದಲೇ ಚರ್ಚಾ­ಸ್ಪರ್ಧೆ­ಗಳಲ್ಲಿ ಭಾಗ­ವಹಿ­ಸುವುದೆಂದರೆ ನನಗೆ ಅತೀವ ಸಂತೋಷ. ಮಾತನಾಡುವುದಕ್ಕೆಂದೇ ಪುಟಗಟ್ಟಲೆ ಮಾಹಿತಿ ಸಂಗ್ರಹಿಸಿ, ಅದಕ್ಕೆ ಪೂರಕವಾದ ಮಂಕುತಿಮ್ಮನ ಕಗ್ಗದ ಒಂದು ಪದ್ಯಭಾಗ ಹುಡುಕಿ, ಅದನ್ನು ಕಲಿಯುವುದೆಂದರೆ ನನಗೆ ಸಂಭ್ರಮ. ಇದೇ ಬಹುಶಃ ನನ್ನ ಇಂದಿನ ಆರ್‌.ಜೆ. ವೃತ್ತಿಗೆ ಭದ್ರ ಬುನಾದಿ ಎಂದರೆ ತಪ್ಪಾಗದು.ಈ ನಡುವೆ ಟೀವಿ ಚಾನೆಲ್‌ಗಳಲ್ಲಿ ಬರುವ ಮಾತಿಗೆ ಸಂಬಂಧಿಸಿದ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ನನಗೆ ಇನ್ನಷ್ಟು ಆತ್ಮವಿಶ್ವಾಸ ನೀಡಿತು. ಮಾತು ಒಂದು ಅಮೂಲ್ಯ ಆಭರಣವಿದ್ದಂತೆ. ಆಭರಣವನ್ನು ಅಗತ್ಯಕ್ಕಿಂತ ಹೆಚ್ಚು ಧರಿಸಿದರೆ ಹೇಗೆ ಅಂದಗೆಡುವುದೋ ಹಾಗೆಯೇ ಮಾತು ಕೂಡ.ಭಾಷೆಯ ಮೇಲೆ ಹಿಡಿತ, ಸ್ಪಷ್ಟ ಉಚ್ಚಾರಣೆ ಇದ್ದರೆ ಉತ್ತಮ ಮಾತುಗಾರರಾಗಲು ಸಾಧ್ಯ. ಆದರೆ ಒಳ್ಳೆಯ ಸಂವಹನಕಾರ ಆಗಬೇಕಾದರೆ ಮೊದಲು ಸಂಯಮ ಇರುವ ಕೇಳುಗನಾಗಬೇಕು. ನಂತರ ಜನರಲ್ಲಿ ಮಾತನ್ನು ಕೇಳುವ ಆಸಕ್ತಿ ಮೂಡುವಂತೆ ಮಾಡಬೇಕು.ಸಮಯಕ್ಕೆ ಸರಿಯಾಗಿ, ಸರಿಯಾದ ಮಾಹಿತಿಯೊಂದಿಗೆ, ಜನರ ಮನಸ್ಸಿಗೆ ತಲುಪುವ ಹಾಗೆ ಮಾತನಾಡುವುದು ಒಂದು ಕಲೆ. ಅದು ಎಲ್ಲರಿಗೂ ಒಲಿಯದಿದ್ದರೂ ಆ ನಿಟ್ಟಿನಲ್ಲಿ ಅಭ್ಯಾಸ ಮಾಡಿದರೆ ಖಂಡಿತ  ಫಲ ಸಿಗದೆ ಇರದು.

ಆರ್‌ಜೆ ಆಗಿ ‘ಚಿತ್ರ ಚಿತ್ತಾರ’ ಕಾರ್ಯಕ್ರಮದಲ್ಲಿ ಮಾತನಾಡಲು ಪ್ರಾರಂಭಿಸಿದ ಮೊದಲ ದಿನ ಸ್ವಲ್ಪ ಭಯ ಕಾಡಿತ್ತು. ‘ಏನಾದರೂ ತಪ್ಪಾದರೆ ಏನಪ್ಪಾ ಮಾಡೋದು ದೇವರೇ...’ ಅಂತ ಒಬ್ಬನೇ ಜಪಿಸುತ್ತಿದ್ದೆ. ಆದರೆ ಶ್ರೋತೃಗಳ ಪ್ರೀತಿ, ಸಹಕಾರ ನನಗೆ ಸ್ಫೂರ್ತಿ, ಬೆಂಬಲ ಕೊಟ್ಟಿದೆ. ಇನ್ನಷ್ಟು ವಿಚಾರಗಳನ್ನು ಹುಡುಕಿ, ಕೆದಕಿ ಅವರೊಂದಿಗೆ ಹಂಚಿಕೊಳ್ಳಲು ಪ್ರತಿ ಶೋನಲ್ಲಿ ಕಾತುರನಾಗಿ ಕಾಯುತ್ತಿರುತ್ತೇನೆ.ಒಮ್ಮೆ ಕಲಾವಿದೆ ಕಲ್ಪನಾ ಅವರ ಬಗ್ಗೆ ಶೋನಲ್ಲಿ ಮಾತನಾಡುತ್ತಿದ್ದೆ. ಕಲ್ಪನಾ ಅವರ ಕುರಿತ ವಿಚಾರಧಾರೆಗಳ ಬಗ್ಗೆ ಶೋತೃಗಳಲ್ಲಿ ಎಂತಹ ಆಸಕ್ತಿ ಇತ್ತು ಎಂದರೆ ಓತಪ್ರೋತವಾಗಿ ನೂರಾರು ಸಂದೇಶಗಳು ಬರತೊಡಗಿದವು. ಸಂದೇಶಗಳಲ್ಲಿ ನನಗೆ ತಿಳಿಯದ ಎಷ್ಟೋ ವಿಚಾರಗಳಿದ್ದವು. ಆ ವಿಚಾರಗಳನ್ನು ನಾನು ಶೋನಲ್ಲಿ ಪ್ರಸ್ತಾಪಿಸಿದೆ. ಮರುದಿನ ನನಗೆ ಸಂದೇಶಗಳ ಮಹಾಪೂರ. ‘ನಮಗೆ ತಿಳಿದ ಕೆಲವು ವಿಷಯಗಳನ್ನು ನಿಮಗೆ ರವಾನಿಸಿದಾಗ ಅದನ್ನು ಎಷ್ಟು ನಾಜೂಕಾಗಿ ನಿಭಾಯಿಸಿ ಹೇಳಿದಿರಿ ನೀವು.  ನಿಮ್ಮ ಮಾತಿನ ಶೈಲಿಗೆ ನಮ್ಮ ಅಭಿನಂದನೆ’ ಎಂದು ಶೋತೃ ಒಬ್ಬರು ಸಂದೇಶ ಕಳುಹಿಸಿದ್ದರು. ಇದು ನನ್ನ ಮರೆಯಲಾಗದ ಅನುಭವ.ಎಫ್‌ಎಂ ಕ್ಷೇತ್ರಕ್ಕೆ ನಾನಿನ್ನೂ ಈಗ ಕಾಲಿಟ್ಟಿರುವವನು. ಮಾತಿನ ಮೂಲಕ ಆಗಬೇಕಾದ ಅನುಭವ, ಶೋತೃಗಳೊಂದಿಗೆ ನಾನಾಡಬೇಕಿರುವ ಮಾತು ಸಾಕಷ್ಟಿದೆ. ಮಾತನ್ನೇ ಬಂಡವಾಳ ಆಗಿಸಿಕೊಳ್ಳಬೇಕೆಂಬ ಹಟ ನನ್ನಲ್ಲಿಲ್ಲ. ಈ ಮಾಧ್ಯಮದಲ್ಲಿ ಉಳಿಯಬೇಕೆಂಬ ಬಯಕೆಯಂತೂ ಇದೆ. ಏಕೆಂದರೆ ಮಾತೇ ನನ್ನ ಬದುಕು.

ನಿರೂಪಣೆ: ರಮ್ಯಶ್ರೀ ಬಿ.ಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry