‘ಚಿನ್ನ’ದ ‘ಪದಕ’ಕ್ಕೆ ಬೆಲೆ ಏರಿಕೆ ಬಿಸಿ!

7
32ನೇ ಘಟಿಕೋತ್ಸವಕ್ಕೆ ಭರದ ಸಿದ್ಧತೆ

‘ಚಿನ್ನ’ದ ‘ಪದಕ’ಕ್ಕೆ ಬೆಲೆ ಏರಿಕೆ ಬಿಸಿ!

Published:
Updated:

ಗುಲ್ಬರ್ಗ: ಫೆಬ್ರುವರಿಯಲ್ಲಿ ನಡೆಯ­ಲಿರುವ ಗುಲ್ಬರ್ಗ ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವವಕ್ಕೆ ಭರದ ಸಿದ್ಧತೆ ನಡೆದಿದೆ. ಇನ್ನೊಂದೆಡೆ ಚಿನ್ನದ ಬೆಲೆ ಏರಿಕೆ ವಿ.ವಿಗೆ ತಲೆನೋವಾಗಿ ಪರಿಣಮಿಸಿದೆ.ಪ್ರತಿ ವರ್ಷ ಘಟಿಕೋತ್ಸವದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನ ನೀಡಲಾಗುತ್ತದೆ. ಆದರೆ, ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ವಿ.ವಿಗೆ ಆರ್ಥಿಕವಾಗಿ ಪ್ರತಿವರ್ಷ ಹೊರೆಯಾ­ಗುತ್ತಿದೆ. ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲು ವಿ.ವಿ ಕಳೆದ ಹಲವು ವರ್ಷ­ಗಳಿಂದ ಪರದಾಡುತ್ತಲೇ ಬಂದಿದೆ. ಚಿನ್ನದ ಪದಕದ ಬದಲು ನಗದು ಬಹುಮಾನ ನೀಡಬೇಕು ಎಂದು ಹಲವು ಬಾರಿ ನಿರ್ಧರಿಸಿದ್ದು, ಅಂತಿಮ­ವಾಗಿ ಸಂಪ್ರದಾಯದಂತೆ ಚಿನ್ನದ ಪದಕಗಳನ್ನು ನೀಡುತ್ತ ಬಂದಿದೆ.144 ಚಿನ್ನದ ಪದಕ: 2012–13ನೇ ಸಾಲಿನಲ್ಲಿ ನಡೆದ 31ನೇ ಘಟಿಕೋತ್ಸವದಲ್ಲಿ 155 ವಿದ್ಯಾರ್ಥಿ­ಗಳಿಗೆ ಚಿನ್ನದ ಪದಕ ನೀಡಲಾ­ಗಿತ್ತು. ಈ ವರ್ಷ 144 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ 10 ವಿದ್ಯಾರ್ಥಿ­ಗಳಿಗೆ ನಗದು ಬಹುಮಾನ ನೀಡಲಾ­ಗುತ್ತಿದೆ. ಚಿನ್ನದ ಬೆಲೆ ಏರಿಕೆ ಕಾರಣ ಹಾಗೂ ವಿ.ವಿಯಲ್ಲಿ ಈಗಿರುವ ದತ್ತಿ ಪದಕಗಳ ಠೇವಣಿ ಮೊತ್ತ ಕಡಿಮೆ ಇರುವುದರಿಂದ ನಗದು ಬಹುಮಾನ ನೀಡಲು ವಿ.ವಿ ಮುಂದಾಗಿದೆ.ಅಲ್ಲದೇ, ದಾನಿಗಳು ನೀಡುವ ದತ್ತಿ ಮೊತ್ತವನ್ನು ₨ 75 ಸಾವಿರಕ್ಕೆ ಏರಿಕೆ ಮಾಡಿದೆ. ಈ ಹಣಕ್ಕೆ ವಾರ್ಷಿಕವಾಗಿ ಲಭಿಸುವ ಬಡ್ಡಿಗೆ ಅನುಗುಣವಾಗಿ ಪದಕ­ಗಳನ್ನು ಖರೀದಿ ಮಾಡಲಾ­ಗುತ್ತದೆ.5 ಸಾವಿರ ವಿದ್ಯಾರ್ಥಿಗಳಿಗೆ ಪದವಿ: ಘಟಿಕೋತ್ಸವಕ್ಕೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಈಗಾಗಲೇ ಮುಕ್ತಾ­ಯ­ವಾಗಿದ್ದು, ಅರ್ಜಿಗಳ ಪರಿಶೀಲನೆ ಹಾಗೂ ಗಣಕೀಕರಣ ಪ್ರಕ್ರಿಯೆ ನಡೆದಿದೆ. ಪದವಿ, ಸ್ನಾತಕೋತ್ತರ ಪದವಿ, ಪಿಎಚ್.ಡಿ, ಎಂ.ಫಿಲ್ ಸೇರಿದಂತೆ ಒಟ್ಟು 4 ರಿಂದ 5 ಸಾವಿರ ವಿದ್ಯಾರ್ಥಿಗಳಿಗೆ ಈ ಬಾರಿ ಪದವಿ ಪ್ರದಾನ ಮಾಡಲಾಗುತ್ತಿದೆ.ಶೀಘ್ರವೇ ಟೆಂಡರ್: ‘ದಾನಿಗಳ ದತ್ತಿ­ಯಿಂದ ಬರುವ ಬಡ್ಡಿಗೆ, ವಿ.ವಿಯಿಂದ ಒಂದಿಷ್ಟು ಅನುದಾನ ಸೇರಿಸಿ ಚಿನ್ನದ ಪದಕ ಖರೀದಿಸಲಾಗುತ್ತದೆ. ಹಳೆಯ ದತ್ತಿಗಳು ₨ 10 ಸಾವಿರ ಮೊತ್ತ­ದ್ದಾ­ಗಿವೆ. ಹೀಗಾಗಿ, ಇಷ್ಟು ಕಡಿಮೆ ಹಣಕ್ಕೆ ಲಭಿಸುವ ಬಡ್ಡಿಯಲ್ಲಿ ಚಿನ್ನದ ಪದಕ ನೀಡಲಾಗದು. ಈ ಕಾರಣಕ್ಕಾಗಿಯೇ ಈ ಬಾರಿ ತಲಾ ₨ 2,500 ರಂತೆ 10 ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುತ್ತಿದೆ.ಚಿನ್ನದ ಪದಕ ತಯಾರಿಸಲು ಶೀಘ್ರವೇ ಟೆಂಡರ್ ಕರೆಯಲಾಗುವುದು. ದತ್ತಿಯ ಹೆಸರು, ವಿಷಯ ಹಾಗೂ ವಿದ್ಯಾರ್ಥಿಗಳ ಹೆಸರು ಮತ್ತು ವಿ.ವಿಯ ಲೋಗೋವನ್ನು ಮುದ್ರಿಸಿ ಕೊಡುವಂತೆ ಟೆಂಡರ್‌ದಾರ­ರಿಗೆ ಸೂಚಿಸಲಾಗುತ್ತದೆ’ ಎಂದು ಪರೀಕ್ಷಾಂಗ ವಿಭಾಗದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry