‘ಚಿರಯೌವನ ಹೊಂದುವ ಆಸೆ– ಸಿದ್ಧರಾಮಯ್ಯ’

7

‘ಚಿರಯೌವನ ಹೊಂದುವ ಆಸೆ– ಸಿದ್ಧರಾಮಯ್ಯ’

Published:
Updated:

ಬೆಂಗಳೂರು: ‘ನನಗೂ ಚಿರಯೌವನ ಹೊಂದುವಾಸೆ.  ಜೀವನವೀಡಿ ಯುವಕನಾಗೇ ಇರಬೇಕು. ಯಾರಾದಾರೂ ಯೌವನವನ್ನು ಬೇಡ ಅಂತಾರೇನು? ಈ ಪ್ರಶ್ನೆ ಮಾಡಿದವರು ಮುಖ್ಯಮಂತ್ರಿ ಸಿದ್ಧರಾಮಯ್ಯ.ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿ.ಆರ್‌. ರಾಮೇಗೌಡ ಅವರ ‘ಚಿರಯೌವನಕ್ಕಾಗಿ ತಂತ್ರ ಯೋಗ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.‘ರಾಮೇಗೌಡರು ನನಗೆ ಬಹಳ ವರ್ಷಗಳಿಂದ ಒಳ್ಳೆಯ ಗೆಳೆಯ. ನನಗೂ ತಂತ್ರಯೋಗಕ್ಕೂ ಆಗಿಬರುವುದಿಲ್ಲ. ಅವನೇ ಹೇಳಿಕೊಟ್ಟ ಯೋಗಾಸಾನಗಳನ್ನು ಆರಂಭದಲ್ಲಿ ಒಂದಷ್ಟು ದಿನ ಅಭ್ಯಾಸ ಮಾಡುತ್ತಿದ್ದೆ. ಈಗ ಅಭ್ಯಾಸ ನಡೆಸಲು ಸಮಯವೇ ಇಲ್ಲ ’ ಎಂದು ತಿಳಿಸಿದರು.‘ಎಂತಹುದ್ದೇ ರಾಜಕೀಯ ಒತ್ತಡಗಳಿದ್ದರೂ ದೈಹಿಕ ಹಾಗೂ ಮಾನಸಿಕವಾಗಿ ಚಿರಯುವಕನಾಗಿಯೇ ಇರಬೇಕೆಂಬ ಆಸೆಯಿದೆ’ ಎಂದರು.ಹೊಟ್ಟೆ ನೋಡಿಕೊಂಡಿರಲಿಲ್ಲ!: ‘ನನ್ನ ಹೊಟ್ಟೆಯನ್ನು ನಾನೇ ನೋಡಿಕೊಂಡಿರಲಿಲ್ಲ. ಅದು ಈಗ ಸ್ವಲ್ಪ ಮಟ್ಟಿಗೆ ದೊಡ್ಡದಾಗುತ್ತಿದೆ. ಇನ್ನಾದರೂ ರಾಮೇಗೌಡರ ಯೋಗ ಸೂತ್ರಗಳನ್ನು ಅಳವಡಿಸಿಕೊಂಡು ಹೊಟ್ಟೆ ಕರಗಿಸುವ ಅಗತ್ಯ ಕಾಣುತ್ತಿದೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.‘ರಾಜಕಾರಣಿಗಳು ಪ್ರಾಮಾಣಿಕರಾಗಿದ್ದರೆ  ಮಾತ್ರ ಅಧಿಕಾರಿವರ್ಗವೂ ನಿಷ್ಠೆಯಿಂದ ದುಡಿಯುತ್ತದೆ. ರಾಜಕಾರಣಿಗಳೇ ದಿಕ್ಕು ತಪ್ಪಿದರೆ ವ್ಯವಸ್ಥೆ ಹದಗೆಡುತ್ತದೆ. ಲಂಚ ಪಡೆಯುವುದು, ಕೊಡುವುದು ತಪ್ಪು ಎಂಬ ಭಾವನೆ ಬೇರೂರಿದಾಗ ಮಾತ್ರ ಭ್ರಷ್ಟಾಚಾರವನ್ನು ಹತ್ತಿಕ್ಕಲು ಸಾಧ್ಯ. ಲಂಚ ಪಡೆಯುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ’ ಭರವಸೆ ನೀಡಿದರು.ಜಿಲ್ಲೆಗಳಲ್ಲೂ ಜನತಾದರ್ಶನ!

ಜನರ ಕಷ್ಟಗಳನ್ನು ಅರಿಯಲು ಮುಂದಿನ ದಿನಗಳಲ್ಲಿ ಜಿಲ್ಲೆಗಳಲ್ಲೂ ಜನತಾ ದರ್ಶನ ಏರ್ಪಡಿಸಲಾಗುವುದು. ಜಿಲ್ಲೆ , ಗ್ರಾಮಗಳಿಗೆ ಭೇಟಿ ನೀಡುವುದರ ಜತೆಗೆ ಅಧಿಕಾರಿಗಳ ಸಭೆಯನ್ನು ಕೂಡ ನಡೆಸಲಿದ್ದೇನೆ’ ಎಂದು ತಿಳಿಸಿದರು.ಲೇಖಕ ಬಿ.ಆರ್.ರಾಮೇಗೌಡ,  ‘ನಗರದಲ್ಲಿ ಯುವಕರು ಕೂಡ ರಕ್ತದ ಒತ್ತಡ, ಮಧುಮೇಹ ದಂತಹ ಕಾಯಿಲೆಗಳಿಂದ ನರಳುತ್ತಿದ್ದಾರೆ. ಯೋಗವೂ ಎಲ್ಲ ಕಾಯಿಲೆಗಳಿಗೂ ರಾಮಬಾಣ. ಈ ಬಗ್ಗೆ ಮಾಹಿತಿ ನೀಡುವ ಸಲುವಾಗಿಯೇ ಪುಸ್ತಕ ರಚಿಸಿದ್ದೇನೆ’ ಎಂದರು.‘ಪ್ರಾಥಮಿಕ ತರಗತಿಗಳಿಗೆ ಹೋಗಿಲ್ಲ’

‘ನಾನು ಒಂದರಿಂದ ನಾಲ್ಕನೇ ಕಾಸ್ಲುಗಳನ್ನು ಓದದೇ ನೇರವಾಗಿ ಐದನೇ ತರಗತಿಗೆ ಸೇರ್ಪಡೆಗೊಂಡಿದ್ದೆ. ಇದು ಸಾಧ್ಯವಾಗಿದ್ದು ರಾಜಪ್ಪ ಮೇಷ್ಟ್ರಿಂದ’ ಎಂದು ಸಿದ್ಧರಾಮಯ್ಯ ಹೇಳಿದರು.‘ನಾನು ಮತ್ತು ಇಬ್ಬರು ಸಹಪಾಠಿಗಳು ಪ್ರಾಥಮಿಕ ತರಗತಿಗಳನ್ನು ಕಲಿಯದೇ ನೇರವಾಗಿ ಐದನೇ ತರಗತಿಗೆ ಪ್ರವೇಶ ಪಡೆದಿದ್ದೇವು.    ರಿಯಾ ಯಿತಿ ಒದಗಿಸಿ ಹೆಡ್ ಮೇಸ್ಟ್ರು ರಾಜಪ್ಪ ಅವರು ಪ್ರವೇಶ ನೀಡಿದ್ದರು. ಅವರು ಅಂದು ಮಾಡಿದ್ದ ಸಹಾಯದಿಂದಲೇ  ಕಾನೂನು ಪದವಿ ಪಡೆದು, ಶಾಸಕ, ಮಂತ್ರಿ, ಮುಖ್ಯಮಂತ್ರಿ ಯಾಗಲು ಸಾಧ್ಯವಾಯಿತು’ ಎಂದು ನೆನಪಿಸಿಕೊಂಡರು.‘ಪ್ರತಿಯೊಬ್ಬರ ಜೀವನದಲ್ಲೂ ತಿರುವು ನೀಡುವ ವ್ಯಕ್ತಿ ಇದ್ದೇ ಇರುತ್ತಾರೆ. ನನ್ನ ಜೀವನಕ್ಕೆ ಬಹುದೊಡ್ಡ ತಿರುವು ನೀಡಿದ ವ್ಯಕ್ತಿ ಹೆಡ್ ಮೇಸ್ಟ್ರು ರಾಜಪ್ಪ ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry