ಶುಕ್ರವಾರ, ಮಾರ್ಚ್ 5, 2021
30 °C
‘ಸುಗ್ಗಿ–ಹುಗ್ಗಿ’ ಜಾನಪದ ಕಾರ್ಯಕ್ರಮ

‘ಜನಪದ ಕಲೆ ಪ್ರೋತ್ಸಾಹಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಜನಪದ ಕಲೆ ಪ್ರೋತ್ಸಾಹಿಸಿ’

ಹಾವೇರಿ: ಗ್ರಾಮೀಣ ಜನಪದರ ಉಸಿರಾಗಿರುವ ವಿವಿಧ ಕಲೆಗಳು ನಾಡಿನ ಸಂಸ್ಕೃತಿಯ ಶ್ರೀಮಂತಿಕೆ ಪ್ರತೀಕವಾಗಿವೆ. ಇಂತಹ ಕಲೆಗಳನ್ನು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಸರ್ಕಾರಗಳಿಂದ ನಡೆಯಬೇಕು ಎಂದು ನಗರಸಭೆ ಉಪಾಧ್ಯಕ್ಷೆ ರತ್ನಾ ಭೀಮಕ್ಕನವರ ಹೇಳಿದರು.ನಗರದ ಜಿಲ್ಲಾ ಗುರುಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ‘ಸುಗ್ಗಿ–ಹುಗ್ಗಿ’ ಜಾನಪದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾಡಿನ ಸಂಸ್ಕೃತಿಯನ್ನು ವಿದೇಶಿಯರು ಅಪ್ಪಿಕೊಂಡಿರುವಾಗ ದೇಶಿಯರಾದ ನಾವು ನಮ್ಮ ಸಂಸ್ಕೃತಿಯನ್ನು ಕಡೆಗಣಿಸುವುದು ಸರಿಯಲ್ಲ. ಜನಪದ ಪ್ರತಿಯೊಬ್ಬರ ಉಸಿರಾಗಬೇಕು. ಹಳ್ಳಿಗಳ ಜನಪದ ಕಲೆಗಳನ್ನು ಬಳಸಿ, ಉಳಿಸಿ, ಬೆಳೆಸಬೇಕು. ಅಲ್ಲದೇ, ಜನಪದ ಕಲೆಗಳನ್ನು ಮುಂದಿನ ಪೀಳಿಗೆಗೆ ಬಳುವಳಿ ನೀಡುವ ಕೆಲಸ ಇಂದಿನ ಕಲಾವಿದರು ಮಾಡಬೇಕು ಎಂದರು.ಜನಪದ ಅಕಾಡೆಮಿ ಸದಸ್ಯ ಡಾ. ಆನಂದಪ್ಪ ಬಿ.ಎಚ್‌. ಮಾತನಾಡಿ, ಭಾರತೀಯ ಜನಪದ ಸಂಸ್ಕೃತಿಯು ಜಗತ್ತಿನ ಇತರ ರಾಷ್ಟ್ರಗಳಿಗೆ ಮಾದರಿ ಯಾಗಿದೆ. ಅಲ್ಲದೇ, ಜನಪದ ಸಂಸ್ಕೃತಿ ಸಮಾಜದಲ್ಲಿ ಬದುಕುವ ರೀತಿ, ನೀತಿ ತಿಳಿಸಿಕೊಡುತ್ತದೆ ಎಂದು ತಿಳಿಸಿದರು.

‘ಶಿಷ್ಠ ಸಂಸ್ಕೃತಿಯ ಅನುಕರಣೆ ಯಿಂದ ದೇಶದ ಜನಪದ ಕಲೆಗಳು ನಶಿಸುತ್ತಿವೆ. ಈ ಕುರಿತು ಜನಪದ ಕಲಾವಿದರು ಜಾಗೃತರಾಗಬೇಕು. ಅಷ್ಟೇ ಅಲ್ಲದೇ, ಜನಪದ ಕಲೆಗಳನ್ನು ಉಳಿಸುವತ್ತ ಚಿತ್ತ ಹರಿಸಬೇಕು’ ಎಂದು ಸಲಹೆ ಮಾಡಿದರು.ಅಧ್ಯಕ್ಷತೆ ವಹಿಸಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಸಿ.ನಾಗರಜ್ಜಿ ಮಾತನಾಡಿ, ಜನಪದ ಮನುಷ್ಯನ ಅವಿಭಾಜ್ಯ ಅಂಗ. ಈ ಹಿನ್ನೆಲೆಯಲ್ಲಿ ಜಗವೆಲ್ಲ ಹಸಿರಾಗಿ, ಜನಪದ ಉಸಿರಾದಾಗ ಬದುಕು ಬಹಳ ಸೊಗಸಾಗಿರುತ್ತದೆ ಎಂದು ತಿಳಿಸಿದರು.ರೈತರು ಜನಪದರ ಸಂಪ್ರದಾಯದ ಪ್ರಕಾರ ಸುಗ್ಗಿಯ ಕಾಲದಲ್ಲಿ ಹಿಗ್ಗಿನಿಂದ ದುಡಿದು ಬೆಳೆ ಬಂದ ಕಾಲಕ್ಕೆ ಹುಗ್ಗಿ ಮಾಡಿ ಕೂಡಿ ಉಣ್ಣುವ ಮತ್ತು ಉಣಿಸುವ ಸಂಸ್ಕೃತಿಯನ್ನು ಎಂದಿಗೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ: ಪ್ರಿಯಾ ಸವಣೂರ ಮತ್ತು ಸಂಗಡಿಗರ ಜನಪದ ನೃತ್ಯ, ಮಹಾರುದ್ರಪ್ಪ ಇಟಗಿ ಅವರ ಪುರವಂತಿಕೆ, ಬೀರಪ್ಪ ಕಂಬಳಿ ಅವರ ಡೊಳ್ಳು ಕುಣಿತ ನೋಡಗರ ಕಣ್ಮನ ಸೆಳೆದರೆ, ಪ್ರಗತಿ ಗುಡ್ಡನವರ ಮತ್ತು ಸಂಗಡಿಗರ ಜನಪದ ನೈತ್ಯ, ನಾಗರಜ್ಜಿ ತಂಡದ ಜಾನಪದ ಹಾಡು, ಡಾಗರಾಜ ಜೋಗಿ ಅವರ ಕಿಂದರಿ ಜೋಗಿ ಪದಗಳು ಹಾಗೂ ಅಡಿವೆಪ್ಪ ಕುರಿ ಅವರ ತತ್ವ ಪದಗಳು ಕೇಳುಗರ ಕಿವಿಗೆ ಇಂಪು ನೀಡಿದವು.ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ಎಂ.ಜುಂಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ಕಲಾವಿದ ಅಡಿವೆಪ್ಪ ಕುರಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.ಇದಕ್ಕೂ ಮೊದಲು ಸ್ಥಳೀಯ ಪುರಸಿದ್ಧೇಶ್ವರ ದೇವಸ್ಥಾನದ ಆವರಣದಿಂದ ಆರಂಭವಾರ ಎತ್ತು, ಜಕ್ಕಡಿಗಳ ನಿಬ್ಬಣದ ಮೆರವಣಿಗೆಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ ಚಾಲನೆ ನೀಡಿದರು.ಮೆರವಣಿಗೆಯಲ್ಲಿ  ಪುರವಂತಿಕೆ, ಡೊಳ್ಳು, ಸಮಾಳ, ಝಾಂಜ್‌ ಮೇಳ ಸೇರಿದಂತೆ ಹತ್ತಾರು ಜನಪದ ವಾದ್ಯ ಕಲಾತಂಡಗಳು ಪಾಲ್ಗೊಂಡಿದ್ದವು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.