‘ಜನಪದ ಜಂಗಮ ಬಸವರಾಜ ಮಲಶೆಟ್ಟಿ’

7

‘ಜನಪದ ಜಂಗಮ ಬಸವರಾಜ ಮಲಶೆಟ್ಟಿ’

Published:
Updated:

ಹೊಸಪೇಟೆ: ‘ದಿವಂಗತ ಡಾ. ಬಸವರಾಜ ಮಲಶೆಟ್ಟಿ ಅವರು ನಾಡಿನ ವೈವಿಧ್ಯಮಯ ಜನಪದ ಕಲೆಯ ಆಗರವಾಗಿದ್ದು, ಅವರೊಬ್ಬ ಜನಪದ ಜಂಗಮವಾಗಿದ್ದರು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಹಿ.ಚಿ. ಬೋರಲಿಂಗಯ್ಯ ಹೇಳಿದರು.ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ದಿವಂಗತ ಡಾ. ಬಸವರಾಜ ಮಲಶೆಟ್ಟಿ ಕುಟುಂಬ ಹಾಗೂ ನುಡಿ ನಮನ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ರಾಜ್ಯದ ಮೂಲೆ ಮೂಲೆ­ಗಳಲ್ಲಿರುವ ಜನಪದ ಕಲೆಗಳ ಕುರಿತು ಅಪಾರ ಜ್ಞಾನ ಹೊಂದಿದ್ದರು. ‘ಉತ್ತರ ಹಾಗೂ ದಕ್ಷಿಣ ಕರ್ನಾಟಕ ಸೇರಿದಂತೆ ಕರಾವಳಿ ಹಾಗೂ ಬುಡಕಟ್ಟು ಪ್ರದೇಶಗಳ ಜನಪದ ಕಲೆಗಳು ಅವರಿಗೆ ಕರಗತವಾಗಿದ್ದವು. ಅಲ್ಲದೆ ಈ ಕಲೆಗಳ ಕುರಿತು ವಿಮರ್ಶೆ ಮಾಡುವ ವೈಶಿಷ್ಟ್ಯ ಪೂರ್ಣ ಜ್ಞಾನ ಹೊಂದಿದವ­ರಾಗಿದ್ದರು’ ಎಂದು ಬಣ್ಣಿಸಿದರು.‘ಒಂದು ವಿಶ್ವವಿದ್ಯಾಲಯದಲ್ಲಿರುವ ಪ್ರಾಧ್ಯಾಪಕರಿಗೆ ಬೇಕಾದ ಸಮಗ್ರ ಮಾಹಿತಿ ನೀಡಬಹುದಾದ ಜ್ಞಾನ ಹೊಂದಿದ ಬೆರಳೆಣಿಕೆಯ ವಿಷಯ ತಜ್ಞರಲ್ಲಿ ಮಲಶೆಟ್ಟರು ಒಬ್ಬರಾಗಿದ್ದು, ಸರಳ ಸ್ವಭಾವಕ್ಕೆ ಉತ್ತಮ ನಿರ್ದೇಶ­ನವಾಗಿದ್ದರು’ ಎಂದರು. ‘ಮಲಶೆಟ್ಟಿ ಅವರ ಸ್ನೇಹಿತರು, ಅಭಿಮಾನಿಗಳು, ಶಿಷ್ಯರು ಅವರ ಆಶೆಯಗಳಂತೆ ಜನಪದ ಲೋಕವನ್ನು ಶ್ರೀಮಂತಗೊಳಿಸುವುದು ಅವರಿಗೆ ಸಲ್ಲಿಸುವ ನಿಜವಾದ ನುಡಿ ನಮನ’ ಎಂದರು.ಕಾರ್ಯಕ್ರಮದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್‌, ಡಾ.ಬಾಳಪ್ಪ ಶೀಗೆಳ್ಳಿ, ಪ್ರಾಧ್ಯಾಪಕ ಡಾ.ಎಸ್‌. ಶಿವಾನಂದ ಮಾತನಾಡಿದರು. ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಸಂಗನಬಸವ ಸ್ವಾಮೀಜಿ, ಸಂಡೂರು ವಿರಕ್ತಮಠದ ಪ್ರಭು ಸ್ವಾಮೀಜಿ ಆಶಿರ್ವಚನ ನೀಡಿದರು. ಮೇಟಿ ಕೊಟ್ರಪ್ಪ, ಉಮಾಪತಿಗೌಡ, ಪಲ್ಲವಿ ಮಲಶೆಟ್ಟಿ, ಶಾರದಾ ಮಲಶೆಟ್ಟಿ, ಸೇರಿದಂತೆ ಸ್ನೇಹಿತರು, ಅಭಿಮಾನಿಗಳು, ಶಿಷ್ಯರು ಪಾಲ್ಗೊಂಡಿದ್ದರು. ಪ್ರಾಧ್ಯಾಪಕ ಡಾ.ಕೆ.ರವೀಂದ್ರನಾಥ ಹಾಗೂ ಡಾ.ಮೃತ್ಯುಂಜಯ ರುಮಾಲೆ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry