‘ಜನವಿರೋಧಿ ತೀರ್ಮಾನ’

7
ಪಾರ್ಕಿಂಗ್‌ ಶುಲ್ಕ ಹೆಚ್ಚಳ

‘ಜನವಿರೋಧಿ ತೀರ್ಮಾನ’

Published:
Updated:

ಬೆಂಗಳೂರು: ಪಾರ್ಕಿಂಗ್ ಶುಲ್ಕವನ್ನು ಜಾರಿಗೊಳಿಸುವ ಬೆಂಗಳೂರು ಮಹಾನಗರ ಪಾಲಿಕೆಯ ತೀರ್ಮಾನ ಜನ ವಿರೋಧಿ ಹಾಗೂ ಗುತ್ತಿಗೆದಾರರ ಲಾಬಿ ಪರವಾದುದು ಎಂದು ಬೆಂಗಳೂರು ಉಳಿಸಿ ಸಮಿತಿಯು ತೀವ್ರವಾಗಿ ಹೇಳಿದೆ.ಈ ಸಂಬಂಧ ಸಮಿತಿ ಸಂಚಾಲಕ ವಿ.ಎನ್‌. ರಾಜಶೇಖರ್‌ ಪತ್ರಿಕಾ ಹೇಳಿಕೆ ನೀಡಿದ್ದಾರೆ. ವಾಹನಗಳಿಗೆ ಯಾವುದೇ ರೀತಿಯ ಭದ್ರತೆ ಹಾಗೂ ರಕ್ಷಣೆಯನ್ನು ಒದಗಿಸುವ ಜವಾಬ್ದಾರಿಯನ್ನು ಬಿಬಿಎಂಪಿ ಹೊರುವುದಿಲ್ಲ. ಪಾರ್ಕಿಂಗ್ ಸೌಲಭ್ಯ ಒದಗಿಸದ ವಾಣಿಜ್ಯ ಸಂಕೀರ್ಣಗಳ ವಿರುದ್ಧ ಯಾವುದೇ ಕಾನೂನು ಕ್ರಮವನ್ನೂ ಜರುಗಿಸುವುದಿಲ್ಲ.ಆದರೆ ಜನರು ಅನಿವಾರ್ಯವಾಗಿ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸದಕ್ಕೆ ಶುಲ್ಕವನ್ನು ವಸೂಲಿ ಮಾಡಲು ಮಾತ್ರ ಉತ್ಸುಕವಾಗಿರುವುದು ಅತ್ಯಂತ ಖಂಡನಾರ್ಹ. ಪಾರ್ಕಿಂಗ್‌ ನಿಯಂತ್ರಿಸುವ ಪೊಳ್ಳುನೆಪವನ್ನು ಮುಂದೊಡ್ಡಿ ಶುಲ್ಕವನ್ನು ಸಂಗ್ರಹಿಸು ವುದು ಅತ್ಯಂತ ತರ್ಕಹೀನವಾಗಿದೆ ಎಂದು ಕಿಡಿಕಾರಿದೆ.ಈಗಾಗಲೇ ನಿಲುಗಡೆ ರಹಿತ ಪ್ರದೇಶಗಳಲ್ಲಿ ವಾಹನಗಳನ್ನು ನಿಲ್ಲಿಸಿದಾಗ ಪೊಲೀಸರು ಅದನ್ನು ಕೊಂಡೊಯ್ಯುವ ಕ್ರಮವು ಜಾರಿಯಲ್ಲಿದೆ. ಹೀಗಿದ್ದರೂ ಅದೇ ನೆಪದಲ್ಲಿ ಪಾರ್ಕಿಂಗ್ ಶುಲ್ಕವನ್ನು ಜಾರಿಗೊಳಿಸುವುದು ಸರಿಯಾದ ಕ್ರಮ ಅಲ್ಲ ಎಂದು ಹೇಳಿದೆ.ಪಾರ್ಕಿಂಗ್‌ನಿಂದ ಬರುವ ರೂ. ೮೦ ಕೋಟಿ ಆದಾಯ ಗುತ್ತಿಗೆದಾರರ ಲಾಭಕ್ಕೆ ಹೋಲಿಸಿದರೆ ಪುಡಿಗಾಸಿನಂತೆ ಆಗುತ್ತದೆ. ಪಾಲಿಕೆಯ ಆದಾಯ ಕ್ರೋಡೀಕರಣಕ್ಕೆ ಈ ಕ್ರಮ ಯಾವುದೇ ರೀತಿಯಿಂದಲೂ ಸಹಾಯ ಆಗುವುದಿಲ್ಲ, ಬದಲಿಗೆ ಗುತ್ತಿಗೆದಾರರ ಜೇಬು ತುಂಬಿಸುವ ಹೊಸ ಯೋಜನೆ ಆಗುತ್ತದೆ. ಈ ಹಿಂದೆ ಪಾರ್ಕಿಂಗ್ ಶುಲ್ಕ ವಿಧಿಸುವ ಕ್ರಮವನ್ನು ಬಿಜೆಪಿ ಪಕ್ಷವೇ ವಿರೋಧಿಸಿತ್ತು ಎಂದು ಸಮಿತಿ ನೆನಪಿಸಿಕೊಂಡಿದೆ.ಆಯ್ದ ಪ್ರದೇಶಗಳಲ್ಲಿ ಈ ಪದ್ಧತಿಯನ್ನು ಜಾರಿಗೊಳಿಸುವ ಈ ಪ್ರಸ್ತಾವದ ಹಿಂದೆ ನಗರದ ಎಲ್ಲೆಡೆಯಲ್ಲೂ ಇದನ್ನು ಜಾರಿಗೊಳಿಸುವ ಹುನ್ನಾರ ಅಡಗಿದೆ. ಸಾರ್ವಜನಿಕರು ಇದನ್ನು ಪ್ರತಿರೋಧಿಸಬೇಕು ಎಂದು ಸಮಿತಿ ಆಗ್ರಹಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry