ಸೋಮವಾರ, ಜೂನ್ 14, 2021
22 °C

‘ಜನ ಒಯ್ಯುವ ಹಣಕ್ಕೆ ಮಿತಿ ಹೇರಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಲೋಕಸಭಾ ಚುನಾವಣೆಯಲ್ಲಿ  ಕಪ್ಪು ಹಣದ ಚಲಾ­ವಣೆ ನಿಯಂತ್ರಿಸಲು ಹಾಗೂ ಭದ್ರತೆ­ಗೆ ಚುನಾವಣಾ ಆಯೋಗ ಹಲವು ಕಠಿಣ ಕ್ರಮ ಕೈಗೊಂಡಿದ್ದರೂ, ಸಾರ್ವಜನಿಕರು ಒಯ್ಯುವ ನಗದು ಹಣಕ್ಕೆ ಯಾವುದೇ ಮಿತಿ ನಿಗದಿ ಪಡಿಸಿಲ್ಲ.



ಆದರೆ, ಶಂಕಿತ ಹಣ ಸಾಗಣೆ ಪ್ರಕರಣಗಳಲ್ಲಿ ನಿಗಾ ತಂಡವು ಸಾರ್ವ­ಜನಿಕರನ್ನು ವಿಚಾರಣೆಗೆ ಒಳಪಡಿಸಲಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಮಾರ್ಚ್‌ 5ರಂದು ಚುನಾವಣಾ ವೇಳಾಪಟ್ಟಿ ಪ್ರಕಟ ಮಾಡಿದ ತಕ್ಷಣ, ಚುನಾವಣಾ ಆಯೋಗವು  ತಾತ್ಕಾಲಿಕ ನಿಗಾ ದಳ ಹಾಗೂ ಚುನಾವಣಾ ವೆಚ್ಚ ವೀಕ್ಷಕರ ತಂಡವನ್ನು ರಚಿಸಿತ್ತು.



ಚುನಾವಣೆಯ ಸಂದರ್ಭದಲ್ಲಿ ಕಪ್ಪು ಹಣದ ನಿಯಂತ್ರಣ ಮತ್ತು ಅಕ್ರಮ ಹಣ  ಚಲಾವಣೆಯನ್ನು ಹತ್ತಿಕ್ಕುವುದಕ್ಕಾಗಿ ಚುನಾವಣಾ ಆಯೋಗವು ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾ ಆಯುಕ್ತರಿಗೆ ಅನುಸರಿಸಬೇಕಾದ ಕ್ರಮ­ಗಳ ಬಗ್ಗೆ ಅಧಿಸೂಚನೆ ಹೊರಡಿಸಿತ್ತು.



ಜನರಿಗೆ ಆಗುತ್ತಿರುವ ತೊಂದರೆ­ಯನ್ನು ತಪ್ಪಿಸುವುದಕ್ಕಾಗಿ ಈ ಬಾರಿ ಸಾರ್ವಜನಿಕರು ತಮ್ಮೊಂದಿಗೆ ಒಯ್ಯುವ ಅಥವಾ ಸಾಗಣೆ ಮಾಡುವ ನಗದು ಮೊತ್ತಕ್ಕೆ ಚುನಾವಣಾ ಆಯೋಗ ಮಿತಿ ಹೇರಿಲ್ಲ.



‘ಈ ಬಾರಿ ಜನರು ಒಯ್ಯುವ ಹಣಕ್ಕೆ ಮಿತಿ ನಿಗದಿ ಪಡಿಸಲಾಗಿಲ್ಲ. ಆದರೆ, ವ್ಯಕ್ತಿಯೊಬ್ಬರು ₨50,000­ಕ್ಕಿಂತಲೂ ಹೆಚ್ಚು ಮೊತ್ತವನ್ನು ಹೊಂದಿದ್ದರೆ, ಅಂತಹವರನ್ನು ಆಯೋಗ ನೇಮಿಸಿರುವ ನಿಗಾ ದಳದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಲಿ­ದ್ದಾರೆ. ಹೊಂದಿರುವ ಹಣಕ್ಕೆ ಸೂಕ್ತ ದಾಖಲೆಗಳನ್ನು ಆ ವ್ಯಕ್ತಿ ಒದಗಿಸ­ಬೇಕಾ­ಗು­ತ್ತದೆ. ₨10 ಲಕ್ಷಕ್ಕೂ  ಹೆಚ್ಚು ಮೊತ್ತವಿದ್ದರೆ, ಅದನ್ನು ಆದಾಯ ತೆರಿಗೆ ಇಲಾಖೆ ಗಮನಕ್ಕೆ ತರಲಾಗು­ವುದು’ ಎಂದು ಚುನಾವಣಾ ಆಯೋಗದ ಅಧಿಕಾರಿ ಹೇಳಿದ್ದಾರೆ.



ಚುನಾವಣಾ ಸಮಯದಲ್ಲಿ, ಮದುವೆ ಸೇರಿದಂತೆ ಇತರ ಸಾಮಾಜಿಕ ಕಾರ್ಯಕ್ರಮಗಳಿಗಾಗಿ, ವ್ಯಾಪಾರ­ಕ್ಕಾಗಿ ಹಣ ಒಯ್ಯುತ್ತಿರುವಾಗ ವಿಚಾರಣೆ ನೆಪದಲ್ಲಿ ಅಧಿಕಾರಿಗಳಿಂದ ಎದುರಾ­ಗುವ  ತೊಂದರೆಗಳ ಬಗ್ಗೆ ಸಾರ್ವಜನಿಕ­ರಿಂದ ಹಾಗೂ ವರ್ತಕರಿಂದ ದೂರು­ಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಆಯೋಗವು ಈ ಬಾರಿ ನಿಯಮಗಳನ್ನು ಸಡಿಲಗೊಳಿಸಿದೆ.



ಚುನಾವಣೆಯ ವೇಳೆ ಕಪ್ಪು ಹಣದ ಬಳಕೆಯನ್ನು ನಿಯಂತ್ರಿಸುವ ಉದ್ದೇಶ­ದಿಂದಲೇ ಕೆಲವು ವರ್ಷಗಳ ಹಿಂದೆ ಸ್ಥಾಪಿಸಲಾಗಿರುವ ಚುನಾವಣಾ ವೆಚ್ಚ ಮೇಲ್ವಿಚಾರಣಾ (ಇಇಎಂ) ಘಟಕವನ್ನು ಚುನಾವಣಾ ಆಯೋಗವು  ಆದಾಯ ತೆರಿಗೆ ಇಲಾಖೆ ಹಾಗೂ ಕಂದಾಯ ಇಲಾಖೆಗಳ ಇತರ ಗುಪ್ತಚರ ಸಂಸ್ಥೆಗಳ ವ್ಯಾಪ್ತಿಗೆ ತಂದಿದೆ. ಇವುಗಳು ಆಯೋಗಕ್ಕೆ ಕಪ್ಪು ಹಣದ ಚಲಾವಣೆ ಬಗ್ಗೆ ಮಹತ್ವದ ಮಾಹಿತಿಗಳನ್ನು ನೀಡಲಿವೆ.

ಕಪ್ಪುಹಣ: ಮತದಾರರೊಂದಿಗೆ ಆಯೋಗ ‘ಚರ್ಚೆ’

ನವದೆಹಲಿ (ಪಿಟಿಐ): ಕಪ್ಪು ಹಣ ಚಲಾವಣೆಯಾಗುವ ಅನುಮಾನ ಇರುವ ಪ್ರದೇಶಗಳಲ್ಲಿ ಕಪ್ಪು ಹಣದ ಚಲಾವಣೆ ತಡೆಯುವ ಉದ್ದೇಶದಿಂದ ಚುನಾವಣಾ ಆಯೋಗವು ಮತದಾರರೊಂದಿಗೆ ಚರ್ಚೆ, ಸಂವಾದ ನಡೆಸಲು ಮುಂದಾಗಿದೆ.

ಈ ಚರ್ಚೆಯಲ್ಲಿ ಸೇರುವಂತೆ ಆಯೋಗವು ನಿವೃತ್ತ ಬ್ಯಾಂಕ್‌ ಅಧಿಕಾರಿಗಳು, ಸರ್ಕಾರಿ ನೌಕರರು ಮತ್ತು ಪತ್ರಕರ್ತರಿಗೆ ಮನವಿ ಮಾಡಿದೆ.



ಗ್ರಾಮೀಣ ಮಟ್ಟ ಮತ್ತು ಪಟ್ಟಣ ಹಾಗೂ ನಗರಗಳಲ್ಲಿ ವಾರ್ಡ್‌ ಮಟ್ಟದ ಜಾಗೃತಿ ಗುಂಪುಗಳನ್ನು ರಚಿಸುವಂತೆ ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿ­ಗಳಿಗೆ ನಿರ್ದೇಶನ ನೀಡಿದೆ.



ಅದರಲ್ಲೂ ಮುಖ್ಯವಾಗಿ ಅಕ್ರಮ ಹಣ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸೂಕ್ಷ್ಮ ಪ್ರದೇಶ­ಗಳಲ್ಲಿ ಇಂತಹ ಗುಂಪುಗಳನ್ನು ರಚನೆ ಮಾಡುವಂತೆ ಆಯೋಗ ಸೂಚಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.