‘ಜಾತಿ ಧ್ರುವೀಕರಣದಿಂದ ಅಭಿವೃದ್ಧಿ ಅಸಾಧ್ಯ’

7

‘ಜಾತಿ ಧ್ರುವೀಕರಣದಿಂದ ಅಭಿವೃದ್ಧಿ ಅಸಾಧ್ಯ’

Published:
Updated:
‘ಜಾತಿ ಧ್ರುವೀಕರಣದಿಂದ ಅಭಿವೃದ್ಧಿ ಅಸಾಧ್ಯ’

ಮೈಸೂರು: ‘ಜಾತಿ, ಧರ್ಮದ ಧ್ರುವೀಕರಣದಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ವಿಶಾಲ ಮನೋಭಾವ ಎಲ್ಲರಲ್ಲೂ ಬೆಳೆಯಬೇಕು’ ಎಂದು ಕೆನರಾ ಬ್ಯಾಂಕ್‌ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪುರುಷೋತ್ತಮದಾಸ್‌ ಅಭಿಪ್ರಾಯಪಟ್ಟರು.ಇಲ್ಲಿಯ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣ ದಲ್ಲಿ ಭಾನುವಾರ ಏರ್ಪಡಿಸಿದ್ದ ಕೆನರಾ ಬ್ಯಾಂಕ್‌ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಮೈಸೂರು, ಮಂಗಳೂರು ಮತ್ತು ಶಿವಮೊಗ್ಗ ವೃತ್ತದ ಸಮಾವೇಶದಲ್ಲಿ ಅವರು ಮಾತನಾಡಿದರು.‘ನೂರು ವರ್ಷಗಳ ಹಿಂದೆ ದಲಿತರ ಸ್ಥಿತಿ ಶೋಚನೀಯ ವಾಗಿತ್ತು. ಶೂದ್ರರನ್ನು ಶಿಕ್ಷಣದಿಂದ ದೂರ ಇಡಲಾಗಿತ್ತು. ವಿವಿಧ ಶೋಷಣೆಗಳಿಂದ ತಳ ಸಮುದಾಯ ನಲುಗಿ ಹೋಗಿತ್ತು. ಈಗ ಅಂತಹ ಸ್ಥಿತಿ ಇಲ್ಲ. ಶತಮಾನಗಳ ದೌರ್ಜನ್ಯಕ್ಕೆ ವಿಮುಕ್ತಿ ದೊರೆತಿದೆ. ಆದರೆ, ಪುರೋಹಿತಶಾಹಿ ಮನಸ್ಥಿತಿ ದಲಿತರ ತಲೆ ಹೊಕ್ಕಿದೆ. ಅಂಧಾನುಕರಣೆಗಳು ದಲಿತರಲ್ಲೇ ಹೆಚ್ಚಾಗಿವೆ’ ಎಂದು ಬೇಸರ ವ್ಯಕ್ತಪಡಿಸಿದರು.‘ದೇಶದ ದಯನೀಯ ಸ್ಥಿತಿಗೆ ಪುರೋಹಿತಶಾಹಿ ವರ್ಗ ಸೃಷ್ಟಿಸಿದ ವರ್ಣಾಶ್ರಮ ಮತ್ತು ಜಾತಿ ಪದ್ಧತಿ ಕಾರಣ. ಶೇ 4ರಷ್ಟಿರುವ ಪುರೋಹಿತಶಾಹಿ ವರ್ಗ ಇಡೀ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದೆ. ನಿರುದ್ಯೋಗದ ಸಮಸ್ಯೆಗಳನ್ನು ತೊಡೆದು ಹಾಕಲು ಕಟಿಬದ್ಧರಾಗಬೇಕು. ಶೋಷಿತರು, ಹಿಂದುಳಿದ ವರಿಗೆ ಸಹಾಯ ಮಾಡುವ ಮನಸ್ಥಿತಿ ಬ್ಯಾಂಕ್‌ ನೌಕರರಲ್ಲಿ ಮೂಡಿದರೆ ಸರ್ಕಾರವನ್ನು ಅಂಗಲಾಚುವುದು ನಿಲ್ಲುತ್ತದೆ’ ಎಂದು ಅಭಿಪ್ರಾಯಪಟ್ಟರು.ಸಾಹಿತಿ ಪ್ರೊ.ಕೆ.ಎಸ್. ಭಗವಾನ್‌ ಮಾತನಾಡಿ, ‘ಭಾರತೀಯ ಜಾತಿ ವ್ಯವಸ್ಥೆ ಅವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ. ಹೀಗಾಗಿ ಬುದ್ಧ, ಬಸವಣ್ಣ, ಅಂಬೇಡ್ಕರ್‌ ಸೇರಿದಂತೆ ಅನೇಕ ಮಹನೀಯರು ಜಾತಿ ತಾರತಮ್ಯವನ್ನು ವಿರೋಧಿಸಿದರು. ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆ ಮೂಡದ ಕಾರಣ ಹೊಸ ಚಿಂತನೆಗಳು ಹುಟ್ಟುತ್ತಿಲ್ಲ. ಇತ್ತೀಚೆಗೆ ಜನರ ಮನಸುಗಳು ಅರಳುತ್ತಿದ್ದು, ವಿಶಾಲ ಮನೋಭಾವ ಬೆಳೆಯುತ್ತಿದೆ’ ಎಂದು ಹೇಳಿದರು.ಕೆನರಾ ಬ್ಯಾಂಕ್‌ ಮೈಸೂರು ವೃತ್ತದ ಉಪ ಪ್ರಧಾನ ವ್ಯವಸ್ಥಾಪಕ ಡಾ.ಎಸ್‌.ಟಿ. ರಾಮಚಂದ್ರ, ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ. ಮಹೇಶಚಂದ್ರ ಗುರು, ಸಂಘದ ಸಲಹಾ ಸಮಿತಿಯ ಕಾರ್ಯದರ್ಶಿ ಗೋಪಾಲ ಪ್ರಸಾದ್‌, ಕಾರ್ಯದರ್ಶಿ ಎ. ಶಿವಾಜಿ, ಅಧ್ಯಕ್ಷ ಗುರುಸ್ವಾಮಿ, ಉಪಾಧ್ಯಕ್ಷ ಎಂ. ಈರಣ್ಣ, ಮುಖ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ ನಾಯ್ಕ್‌ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry