ಗುರುವಾರ , ಜೂನ್ 17, 2021
21 °C
ವಿದ್ಯಾರ್ಥಿಗಳೊಂದಿಗೆ ಸಂಸದ ಶಿವಕುಮಾರ ಉದಾಸಿ ಸಂವಾದ

‘ಜಾತಿ ಮೀಸಲಾತಿಗಿಂತ ಆರ್ಥಿಕ ಮೀಸಲಾತಿ ಅವಶ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ‘ಜಾತಿ ಮೀಸಲಾತಿಗಿಂತ ಆರ್ಥಿಕ ಮೀಸಲಾತಿ ಜಾರಿಗೆ ಬಂದಾಗ ಮಾತ್ರ ದೇಶದಲ್ಲಿನ ಅಸಮಾನತೆ, ಬಡತನ ನಿರ್ಮೂಲನೆ ಮಾಡಲು ಸಾಧ್ಯ’ ಎಂದು ಸಂಸದ ಶಿವಕುಮಾರ ಉದಾಸಿ ಅಭಿಪ್ರಾಯಪಟ್ಟರು.ನಗರದ ದಾನೇಶ್ಚರಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕ ಆಯೋಜಿಸಿದ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಹಾಗೂ ಸಂಸದರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.ದೇಶದ ಸಂವಿಧಾನ ರಚನೆ ಸಂದರ್ಭದಲ್ಲಿಯೇ ಕೇವಲ 10 ವರ್ಷಕ್ಕೆ ಮಾತ್ರ ಸೀಮಿತಗೊಳಿಸಿ ಜಾತಿ ಮೀಸಲಾತಿಯನ್ನು ಜಾರಿಗೆ ತಂದು ನಂತರದಲ್ಲಿ ತೆಗೆದು ಹಾಕಲು ನಿರ್ಧರಿಸಲಾಗಿತ್ತು. ಆದರೆ, ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಸ್ವಾತಂತ್ರ್ಯಾ ನಂತರದ 60 ವರ್ಷಗಳ ನಂತರವೂ ಅದನ್ನು ಜಾರಿಯಲ್ಲಿಡಲಾಗಿದೆ ಎಂದರು.ಈಗಿರುವ ಮೀಸಲಾತಿ ಎಲ್ಲ ಜನರಿಗೂ ತಲುಪಿಲ್ಲ. ಅದು ಕೆಲವೊಬ್ಬರ ಸ್ವತ್ತಾಗಿ ಪರಿಣಮಿಸಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಇನ್ನೂ ನೂರು ವರ್ಷ ಮೀಸಲಾತಿ ನೀಡಿದರೂ ದೇಶದ ಹಾಗೂ ನಿಜವಾದ ಬಡ ಹಾಗೂ ಹಿಂದುಳಿದವರ ಪರಿಸ್ಥಿತಿಯಾಗಲಿ ಬದಲಾಗುವುದು ಸಾಧ್ಯವಿಲ್ಲ. ಅದೇ ಕಾರಣಕ್ಕಾಗಿ ಜಾತಿ ಮೀಸಲಾತಿ ತೆಗೆದು ಆರ್ಥಿಕ ಮೀಸಲಾತಿ ಜಾರಿಗೆ ತರುವುದು ಅವಶ್ಯ ಎಂಬುದನ್ನು ಪ್ರತಿಪಾದಿಸುತ್ತೇನೆ ಎಂದರು.ತಂತ್ರಗಾರಿಕೆಯಾಗುತ್ತೆ: ದೇಶದಲ್ಲಿನ ಬಡತನ, ನಿರುದ್ಯೋಗ ನಿರ್ಮೂಲನೆ ಮಾಡುವುದಾಗಿ ಪ್ರಮಾಣ ಮಾಡಿದರೆ, ನಿಮಗೆ ಮತಹಾಕುವ ಪ್ರಮಾಣವನ್ನು ನಾವು ಮಾಡುತ್ತೇವೆ. ನಿಮಗೆ ಪ್ರಮಾಣ ಮಾಡಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಶಿವರಾಜ ಎನ್ನುವ ವಿದ್ಯಾರ್ಥಿ ಹಾಕಿದಾಗ, ನೀವು ಮತಹಾಕುತ್ತೀರಿ ಎನ್ನುವ ಕಾರಣಕ್ಕೆ ನಾನು ಪ್ರಮಾಣ ಮಾಡಿದರೆ, ಅದು ರಾಜಕೀಯ ತಂತ್ರಗಾರಿಕೆಯಾಗುತ್ತದೆ ಎಂದು ಸಂಸದ ಉದಾಸಿ ಹೇಳಿದರು.ನನ್ನದು ಕುಟುಂಬ ರಾಜಕಾರಣವಲ್ಲ: ಕಾಂಗ್ರೆಸ್‌ ಕುಟುಂಬ ರಾಜಕಾರಣ ಮಾಡುವುದನ್ನು ವಿರೋಧಿಸುವ ಬಿಜೆಪಿ ಯಲ್ಲೂ ಕುಟುಂಬ ರಾಜಕಾರಣವಿದೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ, ದೇಶದಲ್ಲಿ ನೆಹರು, ಗಾಂಧಿ ಕುಟುಂಬದ ಸದಸ್ಯರು ಅರ್ಹತೆ ಇಲ್ಲದಿದ್ದರೂ, ಕೇವಲ ಹೆಸರಿನ ಮೇಲೆ ಹುದ್ದೆ ಪಡೆದುಕೊಳ್ಳುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ. ನಮ್ಮ ತಂದೆ ರಾಜಕಾರಣದಲ್ಲಿ ಇದ್ದರೂ, ನಾನು ಜನರಿಂದಲೇ ಅವರ ಹೆಸರನ್ನು ಹೇಳಿಕೊಂಡು ರಾಜಕಾರಣಕ್ಕೆ ಬಂದವನಲ್ಲ. ನನ್ನದೇ ಆದ ಕೆಲ ವಿಚಾರಗಳನ್ನು ಇಟ್ಟುಕೊಂಡು ಬಂದೆ. ಅದಕ್ಕೆ ಜನರ ಸಹಕಾರ ನೀಡಿ ನನ್ನನ್ನು ಸಂಸದನನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.ಗ್ರಾಮ ಭಾರತ, ಶಹರ ಭಾರತ ಎನ್ನುವ ಎರಡು ಭಾಗ ದೇಶದಲ್ಲಿವೆ. ಇದನ್ನು ನಿವಾರಿಸಿ ಎರಡನ್ನೂ ಒಂದು ಮಾಡಬೇಕಾದರೆ, ಗ್ರಾಮೀಣ ಪ್ರದೇಶಕ್ಕೆ ಕೇವಲ ಮೂಲ ಸೌಕರ್ಯಗಳನ್ನು ನೀಡಿದರೆ ಸಾಲದು, ಗ್ರಾಮೀಣ ಪ್ರದೇಶದಲ್ಲಿಯೇ ಉದ್ಯೋಗ ಸೃಷ್ಟಿಸುವ ಕೆಲಸವಾಗಬೇಕು. ಆಗ ಮಾತ್ರ ಗ್ರಾಮೀಣ ಜನರು ಶಹರದತ್ತ ವಲಸೆ ಬರುವುದನ್ನು ತಪ್ಪಿಸಿ ನಿಜವಾದ ಗ್ರಾಮ ಭಾರತ ಕಾಣಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬರುವ ರಾಜಕಾರಣಿಗಳು, ಗೆದ್ದ ನಂತರ ಏಕೆ ಬರುವುದಿಲ್ಲ. ಒಂದು ರೂಪಾಯಿ ಕೆಜೆ ಅಕ್ಕಿ ನೀಡಿ ಜನರನ್ನು ಬಿಕ್ಷಕರನ್ನಾಗಿ ಹಾಗೂ ಸೋಮಾರಿ ಗಳನ್ನಾಗಿ ಮಾಡಿರುವುದು, ಭ್ರಷ್ಟಾಚಾರ ನಿರ್ಮೂಲ ಮಾಡುವುದು ಸೇರಿದಂತೆ ಹತ್ತು ಹಲವು ಪ್ರಶ್ನೆಗಳಿಗೆ ಸಂಸದ ಶಿವಕುಮಾರ ಉದಾಸಿ ಸಮಾಧಾನಕರ ಉತ್ತರ ನೀಡಿದರು.ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ತೇಜಸ್ವಿ ಸೂರ್ಯ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರದೀಪ ಮು ಳ್ಳೂರು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಭೋಜರಾಜ ಕರೂದಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಶಿವರಾಜ ಸಜ್ಜನರ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾರತಿ  , ಸಿದ್ಧರಾಜು ಕಲಕೋಟಿ, ಪ್ರಭು ಹಿಟ್ನಳ್ಳಿ, ಶ್ರೀಪಾದ ಬೇಟಗೇರಿ  ಹಾಜರಿದ್ದರು.ಪುಣ್ಯ ಸ್ಮರಣೋತ್ಸವ  ನಾಳೆ

ಬ್ಯಾಡಗಿ: ಪಟ್ಟಣದ ಶ್ರೀಕುಮಾ ರೇಶ್ವರ ಧಾರ್ಮಿಕ ಪಾಠಶಾಲೆಯಲ್ಲಿ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರ 34ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಇದೇ 9ರಂದು ಸಂಜೆ 7ಕ್ಕೆ ಜರುಗಲಿದೆ.ಹೋತನಹಳ್ಳಿ ಸಿಂದಗಿಮಠದ ಶಂಭುಲಿಂಗ ಪಟ್ಟಾಧ್ಯಕ್ಷರು ಅಧ್ಯಕ್ಷತೆ ವಹಿಸಲಿದ್ದು, ಯಂಕಂಚಿ ವೀರ ಭದ್ರಯ್ಯ ಶಾಸ್ತ್ರಿ ಅವರಿಂದ ಪ್ರವಚನ ಹಾಗೂ ಜಾನಪದ ಸಂಗೀತ ಸುಧೆ ನಡೆಯಲಿದೆ. ಸವಣೂರ ತಾಲ್ಲೂಕಿನ ಹಿರೇಮಗದೂರಿನ ಈಶ್ವರ ಬಡಿಗೇರ ತಬಲಾ ಸೇವೆ ನೀಡುವರು. ಕಾರಣ ಸದ್ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.