ಮಂಗಳವಾರ, ಜನವರಿ 28, 2020
23 °C
ಸರ್ಕಾರಕ್ಕೆ ಡಾ.ಪಾಟೀಲ ಪುಟ್ಟಪ್ಪ ಎಚ್ಚರಿಕೆ

‘ಜಿಮ್ ಖಾನಾ: ಹೋರಾಟ ನಿಲ್ಲುವುದಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ಸಿಕ್ಕಿಕೊಂಡಿರುವ ಹುಬ್ಬಳ್ಳಿ ದೇಶಪಾಂಡೆ ನಗರದ ಮೈದಾನ­ವನ್ನು  ಸರ್ಕಾರ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಗ್ರೌಂಡ್‌ ಬಚಾವೊ ಆಂದೋಲನದ ಗೌರವಾಧ್ಯಕ್ಷ, ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಎಚ್ಚರಿಸಿದ್ದಾರೆ.‘ಮೊಘಲ್‌ ದೊರೆ ಜಹಾಂಗಿರನ ಅರಮನೆಯ ಮುಂದೆ ಒಂದು ಗಂಟೆ ಇರುತ್ತಿತ್ತು. ಅನ್ಯಾಯಕ್ಕೆ ಒಳಗಾದವರು ಯಾರೇ ಇದ್ದರೂ ಅವರು ಯಾವುದೇ ಹೊತ್ತಿನಲ್ಲಿ ಆ ಗಂಟೆಯನ್ನು ಬಾರಿಸಿದರೆ ದೊರೆ ಅವರನ್ನು ತನ್ನ ಬಳಿಗೆ ಬರ­ಮಾಡಿ­ಕೊಂಡು ಅವರ ಅಳಲನ್ನು ಕೇಳಿ ಅವರಿಗೆ ನ್ಯಾಯ ಒದಗಿಸಿ­ಕೊಡುತ್ತಿದ್ದ. ಈಗ ದೇಶಪಾಂಡೆ ನಗರ­ದಲ್ಲಿ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಮೈದಾನವನ್ನು ಕ್ಲಬ್‌ ಹೆಸರಿನಲ್ಲಿ ಕೆಲವು ಪಟ್ಟಭದ್ರ ಹಿತಾ­ಸಕ್ತಿಗಳು, ಸರ್ಕಾರ ವಿಧಿಸಿದ ಹಲವು ಕರಾರು­ಗಳನ್ನು ಮುರಿ­ದು ಅಲ್ಲಿ  ಕ್ರೀಡೆ­ಗಳು ನಡೆಯದಂತೆ ಮಾಡಿದ್ದಾರೆ, ಅಲ್ಲಿ ಹೆಂಗಸರು ಹಾಗೂ ಹಿರಿಯ ನಾಗರಿ­ಕರು ವಾಯುವಿಹಾರ ಮಾಡದಂತಹ ಪರಿಸ್ಥಿತಿಯನ್ನು ನಿರ್ಮಿಸಿ ಮಕ್ಕಳು–ಮರಿಗಳು ಅಲ್ಲಿ ಆಡದಂತೆ ಮಾಡಿ­ದ್ದಾರೆ. ಆ ಸ್ಥಳದಲ್ಲಿ ಶ್ರೀಮಂತರು ಕುಡಿಯು­ವುದಕ್ಕೋಸ್ಕರ ಗಡಂಗವನ್ನು (ಬಾರ್‌) ನಿರ್ಮಿಸಿದ್ದಾರೆ. ಜೂಜಾಟ ಮಾಡುವ ಜನರಿಗೆ ಅಲ್ಲಿ ಇಸ್ಪೀಟ್‌ ಅಡ್ಡೆಯನ್ನು ಕಟ್ಟಿಸಿದ್ದಾರೆ. ಶ್ರೀಮಂತರಿ­ಗೋಸುಗ ಐಷರಾಮಿ ಹೊಟೇಲ್‌ ನಿರ್ಮಿ­ಸಿದ್ದಾರೆ. ಮೈದಾನ ಬಚಾವೋ ಆಂದೋಲ­ನಕಾರರು ಆ ಮೈದಾನ­ವನ್ನು ಉಳಿಸುವುದ­ಕ್ಕೋಸುಗ 100 ದಿನ­ಗಳಿಗೆ ಮೇಲ್ಪಟ್ಟು ಸುದೀರ್ಘ ಹೋರಾಟವನ್ನು ಮಾಡಿದ್ದಾರೆ. ನಮ್ಮ ಸರ್ಕಾರಿ ಜಹಾಂಗೀರ ಬಾದಶಹನು (ಮುಖ್ಯಮಂತ್ರಿ) ಎಚ್ಚರ­ಗೊಂಡು ನ್ಯಾಯ ಒದಗಿಸುವ ಕಾರ್ಯವನ್ನು ಕೈಕೊಳ್ಳುವವರೆಗೂ ಆಂದೋಲನ-­ಕಾ­ರರು ತಮ್ಮ ಹೋರಾಟವನ್ನು  ನಿಲ್ಲಿಸು­ವುದಿಲ್ಲ’ ಎಂದು ತಿಳಿಸಿದ್ದಾರೆ.‘ಸರ್ಕಾರವು ಪಟ್ಟಭದ್ರರ ಕೈಗಳಿಂದ ಈ ಮೈದಾನವನ್ನು ಬಿಡಿಸುವವರೆಗೂ ಜನತೆಯ ಈ ಹೋರಾಟ ನಿಲ್ಲುವುದಿಲ್ಲ. ಪ್ರಜಾಸತ್ತೆಯ ಎದುರು ರಾಜಶಕ್ತಿ ತಲೆಬಾಗಲೇ ಬೇಕಾಗುತ್ತದೆ. ಜನತೆ ಕೈಕೊಂಡಿರುವ ಈ ಆಂದೋಲನವು ಇನ್ನೂ ಉಗ್ರವಾಗುತ್ತದೆ. ತನ್ನ ಹೋರಾ­ಟ­ದಲ್ಲಿ ಅದು ವಿದ್ಯಾರ್ಥಿಗಳನ್ನು ಕರೆದು­ಕೊಳ್ಳುತ್ತದೆ’ ಎಂದು ಗುಡುಗಿದ್ದಾರೆ.

ಪ್ರತಿಕ್ರಿಯಿಸಿ (+)