ಮಂಗಳವಾರ, ಜೂನ್ 22, 2021
27 °C

‘ಜಿಲ್ಲಾ ಕೇಂದ್ರ ಕೇಳುವ ಹಕ್ಕು ಯಾರೊಬ್ಬರ ಸ್ವತ್ತಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ‘ಭೌತವಿಜ್ಞಾನ ಪರಿಣತ ಡಾ.ಎ.ಓ.ಆವಲಮೂರ್ತಿ ಅವರು ಸಾಮಾ­ಜಿಕ ವಿಜ್ಞಾನದ ಬಗ್ಗೆಯೂ ಸ್ವಲ್ಪ ತಿಳಿದುಕೊಂಡರೆ ಒಳ್ಳೆಯದು’ ಎಂದು ದೇವನಹಳ್ಳಿ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಸಂಚಾಲಕ ಬಿ.ಕೆ.ಶಿವಪ್ಪ ವ್ಯಂಗ್ಯ­ವಾಡಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತ­ನಾಡಿದ ಅವರು, ‘ಡಾ.ಎ.ಓ. ಆವಲಮೂರ್ತಿ ಅವರು ದೊಡ್ಡಬಳ್ಳಾ­ಪುರ­ದಲ್ಲಿ ನಡೆದ ಬೆಂಗಳೂರು ಗ್ರಾಮಾಂ­ತರ ಜಿಲ್ಲಾ ಸಮ್ಮೇಳನದಲ್ಲಿ ಅಧ್ಯಕ್ಷ ಭಾಷಣ ಮಾಡುತ್ತಾ ದೊಡ್ಡ­ಬಳ್ಳಾಪುರವೇ ಜಿಲ್ಲಾ ಕೇಂದ್ರವಾಗಲು ಸೂಕ್ತ ಎಂದು ಹೇಳಿರುವುದು ಖಂಡ­ನೀಯ’ ಎಂದರು.‘ಜಿಲ್ಲಾ ಕೇಂದ್ರವನ್ನು ನಮಗೆ ಕೊಡಿ ಎಂದು ಕೇಳುವ ಹಕ್ಕು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲ್ಲೂಕಿನ ಜನರಿಗಿದೆ. ಅದು ಯಾರೊ ಬ್ಬರ ಸ್ವತ್ತಲ್ಲ. ಆದರೆ ಸಮ್ಮೇಳನಾಧ್ಯಕ್ಷರು ತಮ್ಮ ಭಾಷಣದ ಮೂಲಕ ಒಂದು ತಾಲ್ಲೂಕಿನ ಜನರ ಭಾವನೆಯನ್ನು ಕೆಣಕಿದ್ದಾರೆ. ನಮಗೂ ಸ್ವಾಭಿಮಾನ, ಆತ್ಮಾಭಿಮಾನ ಹಾಗೂ ಹೋರಾಟದ ಕಿಚ್ಚಿದೆ. ಆವಲಮೂರ್ತಿ­ಯಂತಹವರು ಅದನ್ನು ಕೆರಳಿಸುವ ಕೆಲಸ  ಮಾಡ ಬಾರದು’ ಎಂದು ಎಚ್ಚರಿಸಿದರು.‘ಜಿಲ್ಲಾ ಕಸಾಪ ಅಧ್ಯಕ್ಷ ಹುಲಿಕಲ್ ನಟರಾಜ್  ಸಾಹಿತ್ಯ ಸಮ್ಮೇಳನದ ಬದಲು ರಾಜಕೀಯ ಸಮ್ಮೇಳನ ನಡೆಸಿ­ದ್ದಾರೆ. ಇಷ್ಟವಿದ್ದರೆ ಇಂಥವರು  ನೇರವಾಗಿ ರಾಜ­ಕೀಯ ಕ್ಷೇತ್ರಕ್ಕೆ ಧುಮು ಕಲಿ. ತಮ್ಮ ತಾಲ್ಲೂಕಿನ ಜನರನ್ನು ಮೆಚ್ಚಿಸಿ­ಕೊಳ್ಳಲು ಇಂತಹ ಸಮ್ಮೇಳನ ಗಳನ್ನು ಬಳಸಿ­ಕೊಳ್ಳುವುದು ಸರಿಯಲ್ಲ’ ಎಂದು ಶಿವಪ್ಪ ಟೀಕಿಸಿದರು.ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿ ಸಂಚಾಲಕ ರಾಜ್‌ಗೋಪಾಲ್, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್, ಅಧ್ಯಕ್ಷ ವೆಂಕಟನಾರಾಯ­ಣಪ್ಪ, ದಲಿತ ಸಂಘರ್ಷ ಸೇನೆಯ ಅಧ್ಯಕ್ಷ ಮುನಿಯಪ್ಪ, ಕ.ಜ.ರ.ವೇದಿಕೆ ಉಪಾ­ಧ್ಯಕ್ಷ ರಾಮಚಂದ್ರಪ್ಪ, ಕ.ರ.ವೇ ಅಧ್ಯಕ್ಷ ಸುರೇಶ, ಮಾನವ ಹಕ್ಕು ಜಾಗೃತಿ ಸಮಿತಿ ಕಾರ್ಯ­ದರ್ಶಿ ರಾಮಕೃಷ್ಣಪ್ಪ, ಗ್ರಾ.ಪಂ.­ಉಪಾ­ಧ್ಯಕ್ಷ ಎಸ್.ಎಂ.ಆನಂದ್ ಕುಮಾರ್ ಇದ್ದರು.ವಿಜಯಪುರ ವರದಿ:  ಸ್ಥಳೀಯ ಕರ್ನಾ­ಟಕ ರಕ್ಷಣಾ ವೇದಿಕೆ ಶಿವರಾಮೇಗೌಡರ ಬಣ ಹಾಗೂ ಇತರ ಕನ್ನಡಪರ ಸಂಘ­ಟನೆಗಳು ಡಾ.ಎ.ಓ.­ಆವಲಮೂರ್ತಿ ಅವರ ಹೇಳಿಕೆಯನ್ನು ಖಂಡಿಸಿವೆ.ಗುರುವಾರ ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗ ವಿವಿಧ ಬಣಗಳ ಕಾರ್ಯಕರ್ತರು  ಆವಲಮೂರ್ತಿ­ಯವರ ಪ್ರತಿಕೃತಿಯನ್ನು ದಹಿಸಿ ಅವರ ವಿರುದ್ಧ ಧಿಕ್ಕಾರ ಕೂಗಿದರು.ಕರವೇ ಟೌನ್‌ ಅಧ್ಯಕ್ಷ ಎಸ್‌.ಎಂ.­ಸುರೇಶ್‌, ಸಮರಸೇನೆ ಅಧ್ಯಕ್ಷ ಮಹೇಶ್‌, ಹರೀಶ್‌, ಹೋಬಳಿ ಅಧ್ಯಕ್ಷ ಕೇಶವ, ಧನುಷ್‌, ಪಿ.ಮಂಜುನಾಥ್‌, ಮಣಿ, ನಾರಾಯಣ ಸ್ವಾಮಿ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.