ಭಾನುವಾರ, ಜನವರಿ 19, 2020
26 °C
ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಕುಮಾರ್‌ ಬಂಗಾರಪ್ಪ ಅಭಿಮತ

‘ಜಿಲ್ಲಾ ರಾಜಕಾರಣ ರಾಷ್ಟ್ರಕ್ಕೆ ದಿಕ್ಸೂಚಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭದ್ರಾವತಿ: ‘ಶಿವಮೊಗ್ಗ ಜಿಲ್ಲೆಯಲ್ಲಿನ ರಾಜಕಾರಣ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಮೇಲೆ ಸಾಕಷ್ಟು ಪ್ರಭಾವ ಬೀರಲಿದ್ದು, ಅದು ಭವಿಷ್ಯದ ಚುನಾವಣೆಗೆ ದಿಕ್ಸೂಚಿಯಾಗಲಿದೆ’ ಎಂದು ಮಾಜಿ ಸಚಿವ, ಕಾಂಗ್ರೆಸ್‌ ಪಕ್ಷದ ಮುಖಂಡ ಕುಮಾರ್ ಬಂಗಾರಪ್ಪ ಅಭಿಪ್ರಾಯಪಟ್ಟರು.ಇಲ್ಲಿನ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಂಘ ಪರಿವಾರದ ಚಟುವಟಿಕೆಯ ಬೇರು ಹೊಂದಿರುವ ಜಿಲ್ಲೆಯಲ್ಲಿ ಈಗ ಅದರ ಸಡಿಲತೆ ಉಂಟಾಗಿದೆ. ಅದನ್ನು ಮತ್ತಷ್ಟು ಕಡಿತ ಮಾಡುವ ಮೂಲಕ ಪಕ್ಷದ ಸಂಘಟನೆ ಬಲ ಪಡಿಸಬೇಕು ಎಂದು ಸಲಹೆ ನೀಡಿದರು.ಬಿಜೆಪಿ, ಕೆಜೆಪಿ ಎರಡನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನರ ರಾಜಕೀಯ ಇಚ್ಛಾಶಕ್ತಿಯಿಂದ ಕೊನೆ ಮಾಡಿದ್ದಾರೆ. ಈಗ ಅದನ್ನು ಮುಂದುವರಿಸುವ ಕೆಲಸ ನಡೆಯಬೇಕಿದೆ. ವಿಧಾನಸಭಾ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಬೀರಿದ ಪ್ರಭಾವವೇ, ರಾಷ್ಟ್ರ ರಾಜಕಾರಣದ ಮೇಲೂ ಬೀರಲಿದೆ

ಎಂದು ವಿಶ್ಲೇಷಿಸಿದರು.  ಇಲ್ಲಿನ ಎರಡು ಕಾರ್ಖಾನೆಗಳ ರಕ್ಷಣೆಗೆ ಪಕ್ಷ ಬದ್ಧವಿದೆ. ಈಗಾಗಲೇ ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ರಾಜ್ಯ ಸರ್ಕಾರದ ಬಡಜನರ ಯೋಜನೆಗಳ ವಿರುದ್ಧ ದನಿ ಎತ್ತುವ ಬಿಜೆಪಿ ಶ್ರೀಮಂತರ ಪರವಾದ ನಿಲುವಿಗೆ ಬದ್ಧವಾಗಿ ತನ್ನ ಕೆಲಸ ನಿರ್ವಹಿಸುತ್ತಿದೆ. ಇವೆಲ್ಲವೂ ನಮ್ಮ ಚುನಾವಣಾ ವಿಚಾರವಾಗಬೇಕು ಎಂದರು.ಪಕ್ಷದ ಮುಖಂಡ ಸಿ.ಎಂ.ಸಾದಿಕ್ ಮಾತನಾಡಿ, ‘ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಬಲವಾದ ಅಭ್ಯರ್ಥಿಯನ್ನು ಕಳೆದು ಕೊಂಡಿದೆ. ಕಳೆದ ವಸ್ತುವನ್ನು ಅದೇ ಸ್ಥಳದಲ್ಲಿ ಹುಡುಕಬೇಕಿದೆ. ಈಗ ಮತ್ತೊಬ್ಬ ಬಲಿಷ್ಠ ವ್ಯಕ್ತಿ ನಮ್ಮೆದುರಿಗೆ ಇದ್ದಾರೆ. ಆ ಅವಕಾಶ ಕಳೆದು ಕೊಳ್ಳುವುದು ಬೇಡ’ ಎಂದು ಕರೆ ನೀಡಿದರು.  ಪಕ್ಷದ ಗ್ರಾಮಾಂತರ ಅಧ್ಯಕ್ಷ ಮಂಜಪ್ಪಗೌಡ, ನಗರಾಧ್ಯಕ್ಷ ಗಿರಿಯಪ್ಪ, ಮುಖಂಡರಾದ ಮಹಮ್ಮದ್ ಸಾನಾವುಲ್ಲಾ, ಎಸ್.ಎಲ್‌. ಲಕ್ಷ್ಮಣ, ಬಾಬಾಜಾನ್, ಎಚ್‌. ನರಸಿಂಹಯ್ಯ, ಅಮೀರ್ ಜಾನ್, ತಳ್ಳಿಕಟ್ಟೆ ಮಂಜುನಾಥ್, ಜಹೀರ್ ಜಾನ್, ಗಣೇಶ್ ರಾವ್ ಸೇರಿದಂತೆ ಇತರರು ಮಾತನಾಡಿದರು.ಪಲ್ಲವಿ ಪ್ರಾರ್ಥಿಸಿದರು, ಜಿ.ಎಂ. ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು. ಟಿ.ವಿ. ಗೋವಿಂದಸ್ವಾಮಿ ಸ್ವಾಗತಿಸಿದರು.

ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳು, ವಿವಿಧ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)