‘ಜೀತದಾಳುಗಳಂತೆ ಗ್ರಾ.ಪಂ.ನೌಕರರ ಶೋಷಣೆ’

7

‘ಜೀತದಾಳುಗಳಂತೆ ಗ್ರಾ.ಪಂ.ನೌಕರರ ಶೋಷಣೆ’

Published:
Updated:

ಹಾವೇರಿ: ‘ಗ್ರಾಮ ಪಂಚಾಯ್ತಿ  ನೌಕರರನ್ನು ವೇತನ ನೀಡದೇ ದುಡಿಸಿಕೊಳ್ಳುವ ಮೂಲಕ ಜೀತದಾಳುಗಳಂತೆ ಶೋಷಣೆ ಮಾಡಲಾಗುತ್ತಿದೆ’ ಎಂದು ಗ್ರಾ.ಪಂ. ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ. ನಾಡಗೌಡ ಎಂದು ಆರೋಪಿಸಿದರು.ನಗರದ ಹೊಸಮಠ ಕಲ್ಯಾಣ ಮಂಟಪದಲ್ಲಿ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ಜಿಲ್ಲಾ ಘಟಕ ಆಯೋಜಿಸಿದ್ದ ಗ್ರಾ.ಪಂ.ನೌಕರರ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಗ್ರಾ.ಪಂ. ನೌಕರರಿದ್ದಾರೆ. ಅವರಿಗೆ ಕಳೆದ ಒಂದು ವರ್ಷದಿಂದ ವೇತನ ನೀಡದೇ, ಅವರಿಂದ ಕೆಲಸ ತೆಗೆದುಕೊಳ್ಳುತ್ತಿರುವುದು ಜೀತ ಪದ್ಧತಿಯಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.ಜಿ.ಪಂ., ತಾ.ಪಂ. ನೌಕರರಂತೆ ಗ್ರಾ.ಪಂ, ನೌಕ­ರ­­ರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸ­ಲಾಗಿಲ್ಲ. ಬದಲಾಗಿ ಗ್ರಾ.ಪಂ. ನೌಕರರ ಬಗ್ಗೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುವ ಮೂಲಕ ಎರಡನೇ ದರ್ಜೆ ಪ್ರಜೆಯಂತೆ ಕಾಣಲಾಗುತ್ತದೆ ಎಂದು ಆರೋಪಿಸಿದರು.ಗ್ರಾ.ಪಂ. ಗಳಲ್ಲಿ ಶೇ ೯೦ ರಷ್ಟು ನೌಕರರು ಅಹಿಂದ ವರ್ಗಕ್ಕೆ ಸೇರಿದವರಾಗಿದ್ದಾರೆ. ಅಹಿಂದ ವರ್ಗದ ನಾಯಕ ಎಂದು ಹೇಳಿಕೊಂಡು ಅಧಿ­ಕಾ­ರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮ­ಯ್ಯನವರು, ಶೋಷಿತರ ಪರ ಧ್ವನಿ ಎತ್ತದೇ, ಅವರೊಬ್ಬ ಅಹಿಂದ ವರ್ಗದ ನಿಜವಾದ ನಾಯಕರೇ ಎಂಬ ಸಂಶಯ ಮೂಡುತ್ತಿದೆ ಎಂದರು.ಸರ್ಕಾರ ಗ್ರಾ.ಪಂ. ನೌಕರರಿಗೆ ಕನಿಷ್ಠ ೬,೧೬೫ರೂ ವೇತನ ನೀಡಬೇಕು ಎಂದು ಕಳೆದ ವರ್ಷವೇ ಆದೇಶ ಮಾಡಿದ್ದರೂ, ಇದು ಯಾವ ಗ್ರಾ.ಪಂ.ಗಳಲ್ಲಿ ಪಾಲನೆಯಾಗುತ್ತಿಲ್ಲ. ಗ್ರಾ.ಪಂ.ಗಳ ಕೆಲಸಗಳನ್ನು ಸರ್ಕಾರ ಹೊರಗುತ್ತಿಗೆ ಆಧಾರದ ಮೇಲೆ ನೀಡಲು ಮುಂದಾಗಿ ನೌಕರ ವರ್ಗದ ಮೇಲೆ ದಾಳಿ ಮಾಡಲು ಹುನ್ನಾರ ನಡೆಸಿದೆ ಎಂದು ದೂರಿದರು.ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದ್ದು, ಅದರ ದಿನಾಂಕನ್ನು ಆದಷ್ಟು ಬೇಗ ಪ್ರಕಟಿಸಲಾಗುವುದು ಎಂದು ತಿಳಿಸಿದರು. ಸಿಐಟಿಯುನ ಜಿಲ್ಲಾ ಸಂಚಾಲಕ ನಾರಾಯಣ ಕಾಳೆ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆ­ಯಿಂದ ಕನಿಷ್ಠ ವೇತನ ಪಡೆಯುತ್ತಿರುವ ಗ್ರಾ.ಪಂ. ನೌಕರರು ಬದುಕು ಸಾಗಿಸಲು ಸಾಧ್ಯವಾ­ಗುತ್ತಿಲ್ಲ. ಸರ್ಕಾರ ಗ್ರಾ.ಪಂ. ಸಿಬ್ಬಂದಿಗೆ ಕೇವಲ ೧೦ಸಾವಿರ ವೇತನ ನೀಡದಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಜಿ.ಪಂ. ಸಿಇಒ ಉಮೇಶ ಕುಸಗಲ್‌ ಮಾತ­ನಾಡಿ, ಗ್ರಾ.ಪಂ. ನೌಕರರು ರಾಜಕೀಯ ಚಟುವ­ಟಿ­ಕೆ­ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಆರೋಪ­ಗಳಿವೆ. ನೌಕರರು ರಾಜಕೀಯ ವ್ಯಕ್ತಿಗಳ ಮುಲಾ­ಜಿಗೆ ಒಳಗಾಗದೇ ಪ್ರಾಮಾಣಿಕತೆಯಿಂದ ಕಾರ್ಯ­ನಿರ್ವಹಿಸಬೇಕು ಎಂದು ಸಲಹೆ ಮಾಡಿದರು.ಸಂಘದ ರಾಜ್ಯ ಉಪಾಧ್ಯಕ್ಷ ಬಿ.ಆಯ್. ಈಳಗೇರ ಅಧ್ಯಕ್ಷತೆ ವಹಿಸಿದ್ದರು. ರೈತ ಮುಖಂಡ ಬಿ.ಎಸ್. ಸೊಪ್ಪಿನ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಪೂಜಾರ, ಸಂಚಾಲಕ ವಿ.ಕೆ. ಬಾಳಿಕಾಯಿ, ಖಜಾಂಚಿ ಎಂ.ಬಿ. ಬಾರ್ಕಿ, ವಿಜಯಕುಮಾರ ಮಿಳ್ಳಿ, ಮಹೇಶ ದಿವೀಗಿಹಳ್ಳಿ, ಶ್ರೀಕಾಂತ ಮತ್ತೂರ, ಈರಣ್ಣ ಗುಲಗಂಜಿಕೊಪ್ಪ, ಕುಮಾರ ದೇವಗಿರಿ, ಶಂಕ್ರಪ್ಪ ಹೊನ್ನತ್ತಿ, ಮಹೇಶಪ್ಪ ಕಾಸಂಬಿ, ಪ್ರಕಾಶ ಸತ್ತಗಿಹಳ್ಳಿ, ಸುರೇಶ ಕುರುಬರ, ಎಂ.ಕೆ. ಪೊಲೀಸಗೌಡ್ರ, ವೀರಯ್ಯ ಶಿವಾನಂದಮಠ, ನಾಗನಗೌಡ ಪಾಟೀಲ ಇನ್ನಿತರರು ಹಾಜರಿದ್ದರು. ಅಜ್ಜಪ್ಪ ಬಾರ್ಕಿ ನಿರ್ವಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry