‘ಡಿಕೆಶಿ ವಿರುದ್ಧ ಮುಖ್ಯಮಂತ್ರಿಗೆ ದೋಷಾರೋಪ ಪಟ್ಟಿ’

7

‘ಡಿಕೆಶಿ ವಿರುದ್ಧ ಮುಖ್ಯಮಂತ್ರಿಗೆ ದೋಷಾರೋಪ ಪಟ್ಟಿ’

Published:
Updated:

ಧಾರವಾಡ: ‘ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ಧ ಅಕ್ರಮ ಭೂಕಬಳಿಕೆ ಸೇರಿದಂತೆ ವಿವಿಧ ಅಕ್ರಮಗಳ ಕುರಿತ 111 ಪುಟಗಳ ದೋಷಾರೋಪ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ಸಂಜೆ ಸ್ಪೀಡ್‌ಪೋಸ್ಟ್‌ ಮೂಲಕ ಕಳುಹಿಸಿದ್ದೇನೆ’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಇಲ್ಲಿ ಹೇಳಿದರು.‘ಶಿವಕುಮಾರ್‌ ವಿರುದ್ಧ ಯಾವುದೇ ತನಿಖಾ ಸಂಸ್ಥೆಯೂ ಆರೋಪಪಟ್ಟಿ ಸಲ್ಲಿಸಿಲ್ಲ. ಒಂದು ವೇಳೆ ಆರೋಪ ಪಟ್ಟಿಯ ದಾಖಲೆ ಇದ್ದರೆ ಅವುಗಳನ್ನು ಹಾಜರುಪಡಿಸಲಿ’ ಎಂದು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಕ್ಕೆ ಹಿರೇಮಠ ಪತ್ರಿಕಾಗೋಷ್ಠಿ­ಯಲ್ಲಿ ಈ ರೀತಿ ತಿರುಗೇಟು ನೀಡಿದ್ದಾರೆ.‘ಶಿವಕುಮಾರ್‌ ವಿರುದ್ಧದ ಪ್ರಕರಣದ ಕುರಿತು ಈಗಾಗಲೇ ಲೋಕಾಯುಕ್ತ ತನಿಖಾಧಿಕಾರಿ ಡಿ.ಪಾಲಾಕ್ಷಯ್ಯ  ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಅದರನ್ವಯ ಶಿವಕುಮಾರ್‌, 2002–2004ರವರೆಗೆ ನಗರಾಭಿವೃದ್ಧಿ ಸಚಿವರಾಗಿದ್ದಾಗ ಬೆನ್ನಿಗಾನಹಳ್ಳಿ ಗ್ರಾಮದ ಸರ್ವೆ ನಂಬರ್‌ 50/2 ರಲ್ಲಿನ 4.20 ಎಕರೆ ಭೂಮಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಅಂತಿಮ ಅಧಿಸೂಚನೆಗೆ ಒಳಪಟ್ಟಿರುತ್ತದೆ ಎಂದು ತಿಳಿದಿದ್ದರೂ ಅದನ್ನು ಖರೀದಿಸಿ, ತಮ್ಮ ಅಧಿಕಾರದ ಬಲದಿಂದ ಡಿನೋಟಿಫೈ ಮಾಡಿಸಿ, ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ತನಿಖೆಯಿಂದ ಸಾಬೀತಾಗಿದೆ. ಇದು ಕೇವಲ ಉದಾಹರಣೆ ಮಾತ್ರ. ಇಂಥ ಅನೇಕ ಅಕ್ರಮಗಳ ಕುರಿತಂತೆ ಒಟ್ಟಾರೆ 111 ಪುಟಗಳ ಸಮಗ್ರ ಮಾಹಿತಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುತ್ತಿದೆ’ ಎಂದು ಹಿರೇಮಠ ವಿವರಿಸಿದರು.‘ಶಿವಕುಮಾರ್‌ ವಿರುದ್ಧ ಇನ್ನೂ ಹಲವು ಗಂಭೀರ ಆರೋಪಗಳಿದ್ದು, ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು’ ಎಂದು   ಆಗ್ರಹಿಸಿದರು.‘ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಮುತ್ಸದ್ದಿ ರಾಜಕಾರಣಿ. ಆದರೆ ಶಿವಕುಮಾರ್‌ ಅವರನ್ನು ಸಮರ್ಥಿಸಿ­ಕೊಳ್ಳುವ ಉದ್ದೇಶದಿಂದ ಆರೋಪ ಪಟ್ಟಿ ಸಲ್ಲಿಸಲಿ ಹಾಗೂ ನ್ಯಾಯಾಲಯ ಆರೋಪಿ ಎಂದು ತೀರ್ಪು ಕೊಡಲಿ ಎಂದಿದ್ದಾರೆ. ಯಾವುದೇ ಅಪರಾಧಿಯನ್ನು ಜೈಲಿಗೆ ಕಳಿಸಲು ನ್ಯಾಯಾಲಯದ ಆದೇಶ ಬೇಕಾಗುತ್ತದೆ. ಒಬ್ಬ ವ್ಯಕ್ತಿ ವಿರುದ್ಧ ಗಂಭೀರ ಆರೋಪಗಳಿದ್ದಾಗ ಅಂಥವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮುನ್ನ ಮತ್ತೊಮ್ಮೆ ಯೋಚಿಸಬೇಕಿತ್ತು. ಈ ಹಿಂದೆ ಮುಖ್ಯಮಂತ್ರಿ ಕುರ್ಚಿಯ ಮೇಲೆ ದೇವರಾಜ ಅರಸು ಸೇರಿದಂತೆ ಅನೇಕ ಮುತ್ಸದ್ದಿಗಳು ಕುಳಿತು ಆಡಳಿತ ನಡೆಸಿದ್ದಾರೆ. ಅಂಥ ಸ್ಥಾನದಲ್ಲಿರುವ  ಸಿದ್ದರಾಮಯ್ಯ ಅವರು ಶಿವಕುಮಾರ್‌ ಅವರಂತಹವರನ್ನು ಸಮರ್ಥಿಸಿ­ಕೊಳ್ಳುವುದು ಸರಿಯಲ್ಲ. ಅವರ ಮೇಲಿನ ಅಕ್ರಮ ಭೂಕಬಳಿಕೆ ಕುರಿತಂತೆ 111 ಪುಟಗಳ ಚಾರ್ಜ್‌ಶೀಟ್‌ ಅನ್ನು ನೋಡಿ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು. ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳೇ ಶಿವಕುಮಾರ್‌ ವಿರುದ್ಧದ  ಭೂಕಬಳಿಕೆ ಪ್ರಕರಣದ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ. ಈ ಹಿಂದೆ ಮಾಜಿ ಸಚಿವ ಜನಾರ್ದನ ರೆಡ್ಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಅನೇಕರು ತಿಳಿಯದೇ ತಪ್ಪು ಮಾಡಿದವರಲ್ಲ. ಅವರು ಮಾಡಿದ ಅಪರಾಧಗಳು ಅಕ್ಷಮ್ಯ ಅಪರಾಧಗಳೇ ಆಗಿವೆ’ ಎಂದು ಹಿರೇಮಠ ಆರೋಪಿಸಿದರು.ಅದಿರು ತೆಗೆಯುವ ಮಿತಿಯನ್ನು 50 ದಶಲಕ್ಷ ಟನ್‌ಗೆ ಏರಿಸಬೇಕು ಎಂದು ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಹಸಿರು ಪೀಠ ತಿರಸ್ಕರಿಸಿದೆ. ನ್ಯಾಯಾಲಯದ ಈ ಕ್ರಮವನ್ನು  ಸ್ವಾಗತಿಸುವುದಾಗಿ ಹಿರೇಮಠ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry