ಶನಿವಾರ, ಜನವರಿ 18, 2020
20 °C

‘ತಂಬಾಕಿನಿಂದ ಆರೋಗ್ಯ,ಆರ್ಥಿಕತೆ ದುರ್ಬಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸಿಗರೇಟ್‌ ಸೇವಿಸುವುದು ಜೀವನಶೈಲಿ ಎನ್ನುವ ಭ್ರಮೆಯಲ್ಲಿ ಯುವಕರು ಪ್ರಭಾವಿತರಾಗುತ್ತಿದ್ದು, ತಂಬಾಕು ಸೇವನೆ ದುಷ್ಪರಿಣಾಮದ ಬಗ್ಗೆ ಅವರಿಗೆ ಅರಿವು ಮೂಡಿಸುವ ಅಗತ್ಯವಿದೆ. ಯುವಕರು ತಂಬಾಕು ಸೇವನೆಯಂತಹ ದುಶ್ಚಟಕ್ಕೆ ಬಲಿಯಾಗಿ ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿ­ಯನ್ನು ದುರ್ಬಲ ಮಾಡಿಕೊಳ್ಳುತ್ತಿ­ದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಎನ್‌.ವಿ. ಪ್ರಸಾದ್‌ ಕಳವಳ ವ್ಯಕ್ತ­ಪಡಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ತಂಬಾಕು ನಿಯಂ­ತ್ರಣ ಕೋಶ ಸಂಯುಕ್ತವಾಗಿ ಜಿಲ್ಲಾಧಿ­ಕಾರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪ­ಡಿಸಿದ್ದ ‘ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆ ಪರಿಣಾಮಕಾರಿ ಅನುಷ್ಠಾನ, ಸಾಮರ್ಥ್ಯಾಭಿವೃದ್ಧಿ ಮತ್ತು ಮೇಲ್ವಿಚಾರಣೆ ಕುರಿತ ಪ್ರಾಧಿಕೃತ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದರು.ಸಾರ್ವಜನಿಕ ಪ್ರದೇಶಗಳಲ್ಲಿ, ಶಾಲಾಕಾಲೇಜು, ವಿದ್ಯಾಸಂಸ್ಥೆಗಳ ಆವರ­­ಣ­ದಲ್ಲಿ ತಂಬಾಕು ಪದಾರ್ಥ­ಗಳನ್ನು ಮಾರಾಟ ಮಾಡುವುದು ಹಾಗೂ ಪ್ರದರ್ಶಿಸುವುದನ್ನು ಎಲ್ಲರೂ ಒಟ್ಟಾಗಿ ನಿಷೇಧಿಸಬೇಕು ಎಂದರು.ರಾಜ್ಯ ತಂಬಾಕು ನಿಯಂತ್ರಣ ಘಟಕದ ರಾಜ್ಯ ಯೋಜನಾ ಸಂಯೋ­ಜಕ ಪ್ರಭಾಕರ ಪೂಜಾರಿ ಮಾತನಾಡಿ, ‘ದೇಶದಲ್ಲಿ ೨೦೦೩ರಿಂದ ತಂಬಾಕು ನಿಯಂತ್ರಣ ಕಾಯ್ದೆಯು ಜಾರಿಯ­ಲ್ಲಿದೆ. ಇಲ್ಲಿಯವರೆಗೆ ಗಮನಾರ್ಹ­ವಾಗಿ ಕಾಯ್ದೆ ಜಾರಿಗೊಳಿಸಲಾಗಿಲ್ಲ. ದೇಶದಲ್ಲಿ ಪ್ರತಿದಿನ ೫,೫೦೦ ಜನರು ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಶೇ ೨೮ ಜನರು ತಂಬಾಕು ಸೇವನೆಗೆ ಬಲಿಯಾ­ಗು­ತ್ತಿದ್ದು ಈ ಪೈಕಿ ಯುವಕರು ಹೆಚ್ಚಾಗಿ­ದ್ದಾರೆ ಎಂದರು.ಗುಲ್ಬರ್ಗ ಇ.ಎಸ್.ಐ. ವೈದ್ಯಕೀಯ ಆಸ್ಪತ್ರೆಯ ಮನೋರೋಗದ ಸಹಾ­ಯಕ ಪ್ರಾಧ್ಯಾಪಕ ಡಾ. ನಾಮದೇವ ಚವ್ಹಾಣ ಮಾತನಾಡಿ, ‘ತಂಬಾಕಿನ ಪದಾರ್ಥಗಳಾದ ಸಿಗರೇಟ್‌ನಲ್ಲಿ ೪೦೦೦ ಅಪಾಯಕಾರಿ ರಾಸಾಯನಿಕ­ಗಳಿರುತ್ತವೆ. ಈ ಪೈಕಿ ೨೦೦ ವಿಷ ಹಾಗೂ ೬೦ ಕ್ಯಾನ್ಸರ್ ಉತ್ಪತ್ತಿಯ ರಾಸಾ­ಯನ­ಗಳಿವೆ. ತಿನ್ನುವ ತಂಬಾಕಿ­ನಲ್ಲಿ ೨೦೦೦ ಅಪಾಯಕಾರಿ ರಸಾ­ಯನ­­ಗಳಿವೆ. ಪುರುಷರಲ್ಲಿ ತಂಬಾಕು ಸೇವನೆಯಿಂದ ಕ್ಯಾನ್ಸರ್, ಪಾರ್ಶ್ವ­ವಾಯು, ಹೃದಯ ಸಂಬಂಧಿ ರೋಗ­ಗಳು, ಅಸ್ತಮಾ, ಕ್ಷಯ ರೋಗಗಳು ಕಾಣಿಸಿಕೊಳ್ಳುತ್ತವೆ.ಮಹಿಳೆಯರಲ್ಲಿ ಕ್ಯಾನ್ಸರ್, ಕಡಿಮೆ ತೂಕದ ಮಕ್ಕಳು ಜನಿಸುವುದು, ಗರ್ಭ ಸಂಬಂಧಿ ರೋಗಗಳು, ಕಾಣಿಸಿಕೊಳ್ಳುತ್ತವೆ. ತಂಬಾಕು ಸೇವನೆಯಿಂದ ಮುಕ್ತರಾ­ಗಲು ಅನೇಕ ವೈದ್ಯಕೀಯ ಚಿಕಿತ್ಸೆ ಲಭ್ಯವಿದ್ದು, ಸಕಾಲದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ, ಜಿಲ್ಲಾ ಅಸ್ಪತ್ರೆ ಜಿಲ್ಲಾ ಶಸ್ತ್ರಜ್ಞೆ ಹಾಗೂ ಅಧೀಕ್ಷಕಿ ಡಾ. ನಳಿನಿ ನಮೋಶಿ ಸೇರಿದಂತೆ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)