ಸೋಮವಾರ, ಮಾರ್ಚ್ 8, 2021
31 °C
ತಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯೆ ಜಯಂತಿ ಹೆಗಡೆ ಆರೋಪ

‘ತಾಲ್ಲೂಕು ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ತಾಲ್ಲೂಕು ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಿಲ್ಲ’

ಸಿದ್ದಾಪುರ: ‘ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಮಕ್ಕಳ ತಜ್ಞ ವೈದ್ಯರು ಇಲ್ಲವಾಗಿರುವುದರಿಂದ, ಆ ಬಗ್ಗೆ ಪರ್ಯಾಯ ವ್ಯವಸ್ಥೆ ಮಾಡಬೇಕು’ ಎಂದು ಇಲ್ಲಿ ಮಂಗಳವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.ಆರೋಗ್ಯ ಇಲಾಖೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯ್ತಿ ಸದಸ್ಯೆ ಜಯಂತಿ ಹೆಗಡೆ, ‘ತಾಲ್ಲೂಕು ಆಸ್ಪತ್ರೆಗೆ ಮಕ್ಕಳ ತಜ್ಞ ವೈದ್ಯರು ಬರುತ್ತಿಲ್ಲವೇ’ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಉತ್ತರ ನೀಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ, ‘ ಮಕ್ಕಳ ತಜ್ಞರು ರಜೆಯಲ್ಲಿ ದ್ದಾರೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಗಳಿಗೆ  ತಿಳಿಸಿದ್ದೇವೆ’ ಎಂದರು.ತಾಲ್ಲೂಕು ಆಸ್ಪತ್ರೆಯಲ್ಲಿ ಮಕ್ಕಳ ತಜ್ಞ ವೈದ್ಯರು ಅಗತ್ಯವಾಗಿ ಇರಬೇಕು ಎಂದು ಜಯಂತಿ ಹೆಗಡೆ ಮತ್ತು ಪ್ರಸನ್ನ ಹೆಗಡೆ ಅಭಿಪ್ರಾಯಪಟ್ಟರು. ‘ಈ ಮೊದಲೇ  ಈ ಸಮಸ್ಯೆಯ ಬಗ್ಗೆ ಹೇಳಿದ್ದೇವೆ. ಆದ್ದರಿಂದ ಜಿಲ್ಲಾ ಆರೋಗ್ಯಾಧಿಕಾರಿಗಳೇ ಸಭೆಗೆ ಬರಲಿ’ ಎಂದು ಜಯಂತಿ ಹೆಗಡೆ ಒತ್ತಾಯ ಮಾಡಿದರು.‘ಬೇರೆ ತಾಲ್ಲೂಕುಗಳಿಂದ ವಾರಕ್ಕೆ ಮೂರು ದಿವಸವಾದರೂ ಇಲ್ಲಿಗೆ ಮಕ್ಕಳ ತಜ್ಞರು ಬರಬೇಕು’ ಎಂದು ಸದಸ್ಯರು ಹೇಳಿದರು. ಹೆಸ್ಕಾಂ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಹೆಸ್ಕಾಂನ ಕಾರ್ಯ ನಿರ್ವಾಹಕ ಎಂಜಿನಿಯರ್ ಡಿ.ಟಿ.ಹೆಗಡೆ, ‘ಮಳೆಗಾಲದ ಆರಂಭದಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ಸ್ವಲ್ಪ ತೊಂದರೆ ಆಗಿದೆ’ ಎಂದರು.‘ತಾಲ್ಲೂಕಿನ ಸೋವಿನಕೊಪ್ಪ ವಿದ್ಯುತ್ ಮಾರ್ಗದಲ್ಲಿ ತೊಂದರೆ ಉಂಟಾದರೆ, ಇಡೀ ತಾಲ್ಲೂಕಿನಲ್ಲಿ ವಿದ್ಯುತ್ ಸರಬರಾಜು ಯಾಕೆ ಸ್ಥಗಿತವಾಗುತ್ತದೆ ಗೊತ್ತಾಗುವುದಿಲ್ಲ. ಬೇರೆ ತಾಲ್ಲೂಕುಗಳಲ್ಲಿ ಕರೆಂಟ್ ಸಮಸ್ಯೆ ನಮ್ಮ ತಾಲ್ಲೂಕಿನಷ್ಟು ಇಲ್ಲ’ ಎಂದು ಜಯಂತಿ ಹೆಗಡೆ ಟೀಕಿಸಿದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಟಿ.ಹೆಗಡೆ, ಬೇರೆ ತಾಲ್ಲೂಕುಗಳಲ್ಲಿ  ಮೂರ್ನಾಲ್ಕು ವಿದ್ಯುತ್‌ ಗ್ರಿಡ್‌ಗಳು ಇವೆ. ನಮ್ಮ ತಾಲ್ಲೂಕಿನಲ್ಲಿ ಒಂದೇ ಇದೆ. ಇದರಿಂದ ವಿದ್ಯುತ್‌ ಲೈನ್‌ಗಳ ಉದ್ದ ಜಾಸ್ತಿ. ಆದ್ದರಿಂದ ಎಲ್ಲಿಯೇ ಒಂದು ಕಡೆ ಸಮಸ್ಯೆ ಉದ್ಭವಿಸಿದರೆ, ಅದರ ಪರಿಣಾಮ  ಹೆಚ್ಚಾಗುತ್ತದೆ ಎಂದರು.‘ಅರಣ್ಯ ಹಕ್ಕು ಕಾಯ್ದೆಯಡಿ ತಮ್ಮ ಇಲಾಖೆಗೆ 214 ಅರ್ಜಿಗಳು ಬಂದಿವೆ. ಅವುಗಳಲ್ಲಿ 92 ಅರ್ಜಿಗಳು ಬೆಟ್ಟ ಪ್ರದೇಶಕ್ಕೆ ಸಂಬಂದಿಸಿದ್ದವುಗಳಾಗಿವೆ’ ಎಂದು  ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎಸ್‌.ಪಿ. ನರೋನಾ ಸಭೆಗೆ ತಿಳಿಸಿದರು. ಅರಣ್ಯ ಹಕ್ಕು ಮಂಜೂರಿಗಾಗಿ ತಾಲ್ಲೂಕಿನಲ್ಲಿ ಹತ್ತು ಸಾವಿರಕ್ಕೂ ಅಧಿಕ ಸಂಖ್ಯೆಯ ಅರ್ಜಿ ಸಲ್ಲಿಸಲಾಗಿದ್ದರೂ, ಕೇವಲ ಇಷ್ಟು ಕಡಿಮೆ ಸಂಖ್ಯೆಯ ಅರ್ಜಿಗಳು ಸಮಾಜ ಕಲ್ಯಾಣ ಇಲಾಖೆಗೆ ಬಂದಿರುವುದರ ಬಗ್ಗೆ ಸದಸ್ಯರು ಆಶ್ಚರ್ಯ ವ್ಯಕ್ತಪಡಿಸಿದರು.‘ಈ ಹಿಂದಿನ ಸಾಮಾನ್ಯ ಸಭೆಯ ಠರಾವು ಪ್ರತಿಯೊಂದಿಗೆ ಈ ಸಭೆಯ ನೋಟಿಸ್‌ ತಮಗೆ ತಲುಪಿಲ್ಲ. ಸಭೆಯ ನೋಟಿಸ್‌ ಏಳು ದಿನ ಮೊದಲೇ ತಲುಪಬೇಕಾಗಿತ್ತು.  ಹಿಂದ ಕೂಡ ಹೀಗಾಗಿದೆ. ಈಗಲೂ ಸಭೆ ಮುಗಿದು ನಾಲ್ಕೈದು ದಿನಗಳ ನಂತರ ತಲುಪಬಹುದು’ ಎಂದು ಪ್ರಸನ್ನ ಹೆಗಡೆ ಆಕ್ಷೇಪಿಸಿದರು.ಈ ಸಾರಿ ಕೊಂಚ ತಡವಾಗಿರುವುದು ನಿಜ. ಆದರೆ ಹಿಂದೆಲ್ಲ ಸರಿಯಾಗಿಯೇ ನೋಟಿಸ್‌ ಕಳುಹಿಸುತ್ತಿದ್ದೇವೆ ಎಂದು ಕಾರ್ಯನಿರ್ವಹಣಾಧಿಕಾರಿ ಶ್ರೀಧರ ಭಟ್ ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶಾಂತಿ ಹಸ್ಲರ್ ವಹಿಸಿದ್ದರು. ಇಓ ಶ್ರೀಧರ ಭಟ್‌, ಉಪಾಧ್ಯಕ್ಷೆ ಮಂಜಿ ಹರಿಜನ, ಸದಸ್ಯರಾದ ನೀಲಕಂಠ ಗೌಡರ್, ಬಶೀರ್ ಸಾಬ್‌, ಮಾದೇವಿ ಗೌಡ, ಜಯಂತಿ ಹೆಗಡೆ, ಪ್ರೇಮಾ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.