ಸೋಮವಾರ, ಮಾರ್ಚ್ 1, 2021
28 °C

‘ದೇವರಿಲ್ಲ ಎಂದಿದ್ದಕ್ಕೆ ಶೌಚಾಲಯದಲ್ಲಿ ಬಂಧಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ದೇವರಿಲ್ಲ ಎಂದಿದ್ದಕ್ಕೆ ಶೌಚಾಲಯದಲ್ಲಿ ಬಂಧಿ’

ಬೆಂಗಳೂರು: ‘ದೇವರು ಇಲ್ಲ ಎಂದಿದ್ದಕ್ಕೆ ಎರಡು ಗಂಟೆ ಶೌಚಾಲಯದಲ್ಲಿ ಬಂಧಿಯಾಗಬೇಕಾಯಿತು’ ಎಂದು ಕವಿ ಸಿದ್ಧಲಿಂಗಯ್ಯ ಹೇಳಿದರು.ಅನಿಕೇತನ ಕನ್ನಡ ಬಳಗ ಮತ್ತು ವಸಂತ ಪ್ರಕಾಶನ ನಗರದಲ್ಲಿ ಸೋಮವಾರ ಆಯೋಜಿಸಿದ್ದ ತಮ್ಮದೇ ‘ಜನ ಸಂಸ್ಕೃತಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.‘ಕಾಲೇಜು ದಿನಗಳಲ್ಲಿ ದೇವರ ಇರುವಿಕೆ ಬಗ್ಗೆ ಏರ್ಪಡಿಸಿದ್ದ ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ವೇದಿಕೆ ಮೇಲೆ ಹೋಗುವ ಮುನ್ನ ಉರಿಯುತ್ತಿದ್ದ ದೀಪವನ್ನು ಆರಿಸಿ, ದೇವರು ದೀಪವನ್ನು ಉರಿಸಿ ನನ್ನ ಧ್ವನಿಯನ್ನು ನಿಲ್ಲಿಸಲಿ ಎಂದು ಸವಾಲು ಎಸೆದೆ. ಬಳಿಕ ಅಲ್ಲಿದ್ದ ಕೆಲವರು ನನ್ನನ್ನು ಶೌಚಾಲಯದಲ್ಲಿ ಬಂಧಿಸಿದರು. ಸ್ಪರ್ಧೆ ಮುಗಿದ ಬಳಿಕ ಅಲ್ಲಿಂದ ಹೊರಗೆ ಬಂದೆ. ವಿಶೇಷವೆಂದರೆ ಆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದೆ’ ಎಂದು ನೆನಪು ಮಾಡಿಕೊಂಡರು.‘ವಿಧಾನ ಪರಿಷತ್‌ ಸದಸ್ಯನಾಗಿದ್ದ ವೇಳೆ ಅಂತರ್ಜಾತಿ ವಿವಾಹವಾದವರಿಗೆ ಹಾಗೂ ಅವರ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಭಾಷಣಗಳನ್ನು ಮಾಡುತ್ತಿದ್ದೆ. ಅದರಿಂದ ಹಿರಿಯ ಸದಸ್ಯರು ಪ್ರಭಾವಿತರಾಗಿದ್ದರು. ಅವರಿಗೆ ಮದುವೆ, ಮಕ್ಕಳು ಆಗಿದ್ದರೂ, ನನ್ನ ಕೈ ಹಿಡಿದು, ಎಷ್ಟು ಚೆನ್ನಾಗಿ ಮಾತನಾಡಿದೆ. ನಾವೂ ಅಂತರ್ಜಾತಿ ವಿವಾಹವಾಗುತ್ತೇವೆ ಎಂದರು. ಸರ್‌, ದಯವಿಟ್ಟು ಈ ಅವಕಾಶವನ್ನು ಯುವಕರಿಗೆ ಬಿಟ್ಟುಕೊಡಿ ಎಂದು ಅವರಿಗೆ ಹೇಳಿದೆ’ ಎಂದು ಅಪರೂಪದ ಘಟನೆಯನ್ನು ಮೆಲುಕು ಹಾಕಿದರು.‘ನಾನು, ಡಿ.ಆರ್‌.ನಾಗರಾಜ್‌, ಅಗ್ರಹಾರ ಕೃಷ್ಣಮೂರ್ತಿ ಮೊದಲಾದವರಿಗೆ ಬೆಂಗಳೂರಿನ 8– 10 ಲಾಕಪ್‌ಗಳು ಚಿರಪರಿಚಿತವಾಗಿದ್ದವು. ಸಾಕಷ್ಟು ಬಾರಿ ಬಂಧಿತರಾಗಿದ್ದೇವೆ. ರೈತ ಹೋರಾಟಗಾರ ಪ್ರೊ.ನಂಜುಂಡಸ್ವಾಮಿ ಅವರ ನೇತೃತ್ವದ ಹೋರಾಟಗಳಲ್ಲೂ ಭಾಗವಹಿಸಿದ್ದೇವೆ’ ಎಂದರು.‘ಬೆಲೆ ಏರಿಕೆಯನ್ನು ಖಂಡಿಸಬೇಕೆಂದರೆ ಅಶೋಕ ಹೋಟೆಲ್‌ಗೆ ಹೋಗಿ ಚೆನ್ನಾಗಿ ತಿನ್ನುತ್ತಿದ್ದೆವು. ಬಿಲ್‌ ನೀಡಿದಾಗ ಬೆಲೆ ಏರಿಕೆ ಎಂದು ಪ್ರತಿಭಟಿಸುತ್ತಿದ್ದೆವು. ಆಗ ಕೆರಳುತ್ತಿದ್ದ ಹೋಟೆಲ್‌ನ ಸಿಬ್ಬಂದಿ ನಮಗೆ ಚಡಿ ಏಟು ನೀಡುತ್ತಿದ್ದರು’ ಎಂದು ಹೇಳಿದರು.‘ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಕಾರ್ಯಕ್ರಮವಿತ್ತು. ಇಂದಿರಾ ಅವರು ಉಡುಪಿ ಬದಲಿಗೆ ಬೀದರ್‌ಗೆ ಭೇಟಿ ನೀಡಬೇಕೆಂದು ಆಗ್ರಹಿಸಿ ಪ್ರತಿಭಟಿಸಲು ನಮ್ಮ ಸ್ನೇಹಿತರು ಬಾಡಿಗೆ ಸೂಟು ಧರಿಸಿ  ತೆರಳಿದ್ದರು. ಸೂಟು ನನಗೆ ಸರಿಹೊಂದದೆ ಕಾರ್ಯಕ್ರಮಕ್ಕೆ ನಾನು ಹೋಗಿರಲಿಲ್ಲ. ನಮ್ಮ ಸ್ನೇಹಿತರು ಪ್ರತಿಭಟಿಸಲು ಮುಂದಾಗುತ್ತಿದ್ದಂತೆ ಅವರನ್ನು ಪೊಲೀಸರು ಹಾಗೂ ಅಲ್ಲಿದ್ದ ಜನ ಚೆನ್ನಾಗಿ ಥಳಿಸಿದರು. ನಾನು ಬಚಾವಾದೆ’ ಎಂದು ನೆನಪು ಮಾಡಿಕೊಂಡರು.ವಿಮರ್ಶಕ ಎಚ್‌.ಎಸ್‌.ರಾಘವೇಂದ್ರ ರಾವ್‌ ಮಾತನಾಡಿ, ‘ನಕ್ಷತ್ರ ಲೋಕದ ಕನಸು ಕಂಡ ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್‌ ವೇಮುಲ ಮಣ್ಣಿನ ಒಳಗೆ ಸೇರಿದ್ದಾನೆ. ಪರನಿಂದನೆ ಕಡಿಮೆ ಮಾಡಿದರೆ ಇಂತಹ ಘಟನೆಗಳು ಮರುಕಳಿಸುವುದಿಲ್ಲ’ ಎಂದರು.‘ವಿಶ್ವವಿದ್ಯಾಲಯಗಳಲ್ಲಿ ರೋಹಿತ್‌ ನಂತಹ ಜೀವಗಳು, ಹೆಣ್ಣು ಮಕ್ಕಳು ನಲುಗುವ ಸನ್ನಿವೇಶವಿದೆ. ವಿವಿಗಳ ಮೇಲೆ ಆವರಿಸಿರುವ ಕರಿ ನೆರಳನ್ನು ಹೋಗಲಾಡಿಸಲು ನಾವೆಲ್ಲ ಆತ್ಮವಿಮರ್ಶೆ, ಅನ್ಯ ವಿಮರ್ಶೆ ಮಾಡಬೇಕಾಗಿದೆ’ ರಾಘವೇಂದ್ರರಾವ್‌  ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.