ಭಾನುವಾರ, ಜೂನ್ 13, 2021
25 °C

‘ದೇವರ ನಾಡ’ಲ್ಲಿ ಸ್ಥಳೀಯ ವಿಚಾರಗಳಿಗೇ ಮಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ (ಪಿಟಿಐ):  ಲೋಕಸಭಾ ಚುನಾವಣೆ ಪ್ರಚಾರ ರಂಗೇರಲು ಆರಂಭ­ವಾಗಿ­ರು­ವಂತೆಯೇ, ರಾಷ್ಟ್ರೀಯ ವಿಚಾರಗಳ ಜೊತೆಗೆ, ಪಶ್ಚಿಮ ಘಟ್ಟದ ವಿಷಯ ಸೇರಿದಂತೆ ಸ್ಥಳೀಯ ವಿಷಯ­ಗಳೇ ಕೇರಳದಲ್ಲಿ  ಪ್ರಾಮುಖ್ಯ ಪಡೆ­ಯುವ ಸಾಧ್ಯತೆ ಇದೆ.

ಏಪ್ರಿಲ್‌ 10ರಂದು ನಡೆಯಲಿರುವ ಚುನಾ­ವಣೆಗೆ ನಾಮಪತ್ರ ಸಲ್ಲಿಸುವ ದಿನ ಹತ್ತಿರವಾಗುತ್ತಿ­ದ್ದಂತೆಯೇ ಕೇರಳದ ರಾಜಕೀಯ ಪಕ್ಷಗಳಲ್ಲಿ  ಚಟುವಟಿಕೆ ಗರಿಗೆದರಿದೆ.ರಾಜ್ಯದ 20 ಲೋಕಸಭಾ ಸ್ಥಾನ­ಗಳಲ್ಲಿ ಸ್ಪರ್ಧಿ­ಸ­ಲಿರುವ ಅಭ್ಯರ್ಥಿಗಳ ಹೆಸರು­ಗಳನ್ನು ಅಂತಿಮ­ಗೊಳಿಸುವ ಕಸರತ್ತಿನಲ್ಲಿ ಪಕ್ಷಗಳು ತೊಡಗಿವೆ.ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ನ (ಯುನೈಟೆಡ್‌ ಡೆಮಾ­ಕ್ರಟಿಕ್‌ ಫ್ರಂಟ್‌) ಎಲ್ಲಾ 16 ಸಂಸದರು ಮತ್ತೆ ಚುನಾ­ವಣಾ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ. ಸದ್ಯ, ನಾಲ್ಕು ಸ್ಥಾನಗಳನ್ನು ಹೊಂದಿರುವ ಪ್ರತಿಪಕ್ಷ ಎಲ್‌ಡಿಎಫ್‌ (ಲೆಫ್ಟ್‌ ಡೆಮಾ­ಕ್ರಟಿಕ್‌ ಫ್ರಂಟ್‌) , ಹೊಸ ಮುಖಗಳಿಗೆ ಹುಡು­ಕಾಟ ನಡೆಸಿದೆ.ಪಶ್ಚಿಮ ಘಟ್ಟ ಚುನಾವಣಾ ವಿಷಯ: ರಾಜ್ಯ­ದಲ್ಲಿ ಬೇಗ ಲೋಕಸಭಾ ಚುನಾವಣೆ ನಡೆಯುತ್ತಿರುವುದು ಆಡಳಿತಾ­ರೂಢ ಯುಡಿಎಫ್‌ ಅಚ್ಚರಿಗೆ ಕಾರಣವಾಗಿದೆ. ಪಶ್ಚಿಮ ಘಟ್ಟದ ಕುರಿತಂತೆ ಕಸ್ತೂರಿ­ರಂಗನ್‌ ಸಮಿತಿ ನೀಡಿರುವ ವರದಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ನಲ್ಲಿ ಕಾಣಿಸಿ­ಕೊಂಡಿರುವ ಬಿಕ್ಕಟ್ಟು ಇನ್ನೂ ಪೂರ್ಣ­ವಾಗಿ ಶಮನ­ವಾಗಿಲ್ಲ.ಕಸ್ತೂರಿರಂಗನ್‌ ಸಮಿತಿ ವರದಿಗೆ ಯುಡಿಎಫ್‌ನ ಪ್ರಮುಖ ಅಂಗಪಕ್ಷ ಕೇರಳ ಕಾಂಗ್ರೆಸ್‌ (ಎಂ) ವಿರೋಧ ವ್ಯಕ್ತಪಡಿಸಿರುವುದು ಕೂಟದ ಇತರ ಪಕ್ಷಗಳಿಗೆ ಪಥ್ಯವಾಗಿಲ್ಲ.ಪಶ್ಚಿಮ ಘಟ್ಟದ ವಿಷಯದಲ್ಲಿ ಪಕ್ಷದ ನಾಯಕತ್ವವು ಕಠಿಣ ನಿರ್ಧಾರ ಕೈಗೊಳ್ಳ­ಬೇಕು ಎಂದು ಕೇರಳ ಕಾಂಗ್ರೆಸ್‌ನ ಒಂದು ವರ್ಗ ಬಯಸುತ್ತಿದೆ. ಈ ವಿಚಾರದ ಬಗ್ಗೆ ಚರ್ಚಿಸಲು ಶೀಘ್ರ ಸಭೆ ಸೇರಬೇಕು ಎಂದೂ ಅದು ಒತ್ತಾಯಿಸುತ್ತಿದೆ.ಪಶ್ಚಿಮ ಘಟ್ಟದ ವಿಷಯವೇ ತನ್ನ ಪ್ರಚಾರದ ಪ್ರಮುಖ ವಿಚಾರಗಳ­ಲ್ಲೊಂದು ಎಂದು ಎಲ್‌ಡಿಎಫ್‌ ಈಗಾಗಲೇ  ಸ್ಪಷ್ಟಪಡಿಸಿದೆ. ಇದರ ಜೊತೆಗೆ ಬೆಲೆ ಏರಿಕೆ, ಭ್ರಷ್ಟಾಚಾರ ಸೇರಿದಂತೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ವಿಷಯಗಳನ್ನು  ಹೊತ್ತು­ಕೊಂಡು ಅದು ಜನರ ಮುಂದೆ ಹೋಗಲಿದೆ.ಕಾಂಗ್ರೆಸ್‌ ವಿಶ್ವಾಸ:  ವಾರದ ಒಳಗಾಗಿ ಮೈತ್ರಿ ಕೂಟದ ಆಂತರಿಕ ವಿಚಾರಗಳು ಬಗೆಹರಿಯಲಿವೆ ಎಂಬ ವಿಶ್ವಾಸವನ್ನು ಕಾಂಗ್ರೆಸ್‌ ವ್ಯಕ್ತಪಡಿಸಿದೆ.ಜಾತ್ಯತೀತತೆ, ಸ್ಥಿರತೆ, ಅಭಿವೃದ್ಧಿ­ಯಂತಹ ರಾಷ್ಟ್ರೀಯ ವಿಚಾರ­-ಗಳಲ್ಲದೇ, ಮೂವರು ಸಿಪಿಎಂನ ಮುಖಂಡರು ಜೈಲು ಪಾಲಾಗಲು ಕಾರಣವಾದ ಟಿ.ಪಿ ಚಂದ್ರಶೇಖರನ್‌ ಹತ್ಯೆ ಪ್ರಕರಣ ಸೇರಿದಂತೆ ಪ್ರತಿಪಕ್ಷವನ್ನು ಹಳಿಯಬಹು­ದಾದ ಸ್ಥಳೀಯ ವಿಚಾರ­ಗಳನ್ನು ಪ್ರಚಾರದ ಸಂದರ್ಭದಲ್ಲಿ ಪ್ರಸ್ತಾಪಿಸಲು ಯುಡಿಎಫ್‌ ಯೋಚಿಸುತ್ತಿದೆ.ಬಿಜೆಪಿಯಿಂದ ಸುರೇಶ್‌ ಗೋಪಿ?

ಮಲೆಯಾಳ ಚಿತ್ರಗಳಲ್ಲಿ ‘ಆ್ಯಂಗ್ರಿ ಯಂಗ್‌   ಮ್ಯಾನ್‌’ ಪಾತ್ರಗಳಿಂದ ಜನ­ಪ್ರಿಯ­ವಾಗಿರುವ ಖ್ಯಾತ ನಟ ಸುರೇಶ್‌ ಗೋಪಿ ಅವರು ಇತ್ತೀಚೆಗೆ ಅಹಮದಾಬಾದ್‌­­ನಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.ಅವರು, ತಮ್ಮ ತವರು ಪಟ್ಟಣ ಕೊಲ್ಲಂನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯ­ಲಿದ್ದಾರೆ ಇಲ್ಲವೇ ಬಿಜೆಪಿ   ಪರ ಪ್ರಚಾರ ಕೈಗೊಳ್ಳಲಿದ್ದಾರೆ ಎಂಬ ದಟ್ಟ ವದಂತಿ ಹಬ್ಬಿದೆ. ಆದರೆ, ಈ ಬಗ್ಗೆ ಸುರೇಶ್‌ ಗೋಪಿ ಅವರಿಂದಾಗಲೀ, ಬಿಜೆಪಿಯಿಂದಾಗಲೀ ಯಾವುದೇ ಅಧಿಕೃತ ಹೇಳಿಕೆ ಹೊರ ಬಿದ್ದಿಲ್ಲ.

ಸಿಪಿಎಂನಿಂದ ಇನೊಸೆಂಟ್‌?

ಖ್ಯಾತ ಚಿತ್ರನಟ  ಇನೊಸೆಂಟ್‌ ಅವರನ್ನು ಚಾಲಕ್ಕುಡಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಸಿಪಿಎಂ ಚಿಂತನೆ ನಡೆಸಿದೆ.ಹಾಸ್ಯ ಕಲಾವಿದರಾಗಿರುವ ಇನೊಸೆಂಟ್‌, ಮಲೆಯಾಳ ಸಿನಿಮಾ ಕಲಾವಿದರ ಒಕ್ಕೂಟ, ‘ಅಮ್ಮ’ ಅಧ್ಯಕ್ಷರೂ ಆಗಿದ್ದಾರೆ. ಗೆಲುವಿನ ಸಾಮರ್ಥ್ಯದ ಹೊರತಾಗಿಯೂ, ಅವರ ಅಭ್ಯರ್ಥಿತನವು ಚಿತ್ರೋದ್ಯಮದ ಮಂದಿಯನ್ನು ಎಲ್‌ಡಿಎಫ್‌ನ ಸನಿಹಕ್ಕೆ ತರಲಿದೆ ಎಂಬುದು ಸಿಪಿಎಂನ ಚಿಂತಕರ ಅಭಿಪ್ರಾಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.