‘ದೇಶಕ್ಕೆ ಮೋದಿ ಅಗತ್ಯ’

7

‘ದೇಶಕ್ಕೆ ಮೋದಿ ಅಗತ್ಯ’

Published:
Updated:

ಬಳ್ಳಾರಿ: ದೇಶವನ್ನು  ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ನರೇಂದ್ರ ಮೋದಿ ಅವರಂತಹ ನಾಯಕನ ಅಗತ್ಯವಿದೆ. ಪಕ್ಷವು ಅವರನ್ನು ಪ್ರಧಾನಿ ಅಭ್ಯರ್ಥಿ­ಯನ್ನಾಗಿ ಆಯ್ಕೆ ಮಾಡಿರುವುದು ‘ಕಾಂಗ್ರೆಸ್‌ಮುಕ್ತ’ ಭಾರತ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ  ತಿಳಿಸಿದರು.ಆರ್ಎಸ್ಎಸ್ ಬೈಠಕ್‌ನಲ್ಲಿ ಪಾಲ್ಗೊಂಡಿ­ರುವ ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗುಜರಾತ್, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲದೆ ಕರ್ನಾಟಕದಲ್ಲೂ ಮೋದಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಳೆದ ಲೋಕ­ಸಭೆ ಚುನಾವಣೆಗಿಂತ ಈ ಬಾರಿ ಬಿಜೆಪಿ  ಇನ್ನೂ ಹೆಚ್ಚು ಸ್ಥಾನಗಳನ್ನು ಗಳಿಸುವುದು ಖಚಿತ.

ಮುಂಬರುವ ಲೋಕಸಭೆ ಚುನಾ­ವಣೆ­ಯನ್ನು ಸಮರ್ಥವಾಗಿ ಎದು­ರಿಸಲು ಪಕ್ಷವು ರಾಜ್ಯದಾದ್ಯಂತ ಸಿದ್ಧತೆ ನಡೆಸಿದ್ದು, ಇದೇ 25ರ ನಂತರ ಎಲ್ಲ 28 ಕ್ಷೇತ್ರಗಳಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಮುಖಂಡ­ರು ಸಮಾವೇಶ ಹಮ್ಮಿಕೊಳ್ಳ­ಲಿದ್ದಾರೆ  ಎಂದರು. ಒಂದು ವಾರದೊಳಗೆ ಪಕ್ಷದ ಸಮನ್ವಯ ಸಮಿತಿ ಸಭೆ ಕರೆದು ರಾಜ್ಯದ ಲೋಕಸಭಾ ಚುನಾವಣೆಯ ಅಭ್ಯರ್ಥಿ­ಗಳ ಆಯ್ಕೆಯ ಚಾಲನೆ ನೀಡಲಾಗು­ವುದು. ಈ ವಾರದಲ್ಲೇ ಆಯಾ ಕ್ಷೇತ್ರಗಳಿಗೆ ಉಸ್ತುವಾರಿಗಳ ನೇಮಕ ಮಾಡಿ ಚುನಾವಣಾ ಸಿದ್ಧತೆ ಕೈಗೊಳ್ಳು­ವಂತೆ ಸೂಚಿಸಲಾಗುವುದು ಎಂದರು.ಮೋದಿ ಅವರನ್ನು ಪಕ್ಷವು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿರುವುದನ್ನು ಬೆಂಬಲಿಸಿರುವ ಯಡಿಯೂರಪ್ಪ ಹೊಂದಾ­­ಣಿಕೆಗೆ ಸಿದ್ಧ ಎಂದು ಹೇಳಿ­ದ್ದಾರೆ. ಈ ನಿಟ್ಟಿನಲ್ಲಿ ಅವರನ್ನು ಪಕ್ಷಕ್ಕೆ ಕರೆ ತರುವ ವಿಷಯದಲ್ಲಿ ವರಿಷ್ಠರು ಆದಷ್ಟು ಬೇಗ ನಿರ್ಧಾರ ಕೈಕೊಳ್ಳಬೇಕು ಎಂದು ಮನವಿ ಮಾಡುವುದಾಗಿ ಈ ಸಂದಭರ್ದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌  ಹೇಳಿದರು.ಅಕ್ರಮ ಗಣಿಗಾರಿಕೆ ಕುರಿತು ಈ ಹಿಂದೆ ಆರೋಪ ಮಾಡಿದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಲೋಕಾ­ಯುಕ್ತ ವರದಿ ಅನುಷ್ಠಾನಕ್ಕೆ ಮುಂದಾ­ಗುತ್ತಿಲ್ಲ. ರದ್ದಾಗಿರುವ ‘ಸಿ’ ಕೆಟಗರಿಯ 51 ಗಣಿ­ಗಳಲ್ಲಿ ಬಹುತೇಕ ಗಣಿಗಳು ಕಾಂಗ್ರೆಸ್ ಮುಖಂಡರಿಗೆ ಸೇರಿವೆ. ಅಕ್ರಮದಲ್ಲಿ  ಕಾಂಗ್ರೆಸ್ಸಿಗರೂ ಭಾಗಿ­ಯಾಗಿ­ರುವುದನ್ನು ಇದು ಸಾಬೀತು­ಪಡಿಸಿದೆ. ಅಕ್ರಮ ಗಣಿಗಾರಿಕೆ ತನಿಖೆಯನ್ನು ಸರ್ಕಾರ ಶೀಘ್ರವೇ ಸಿಬಿಐಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ಸಂಘ ಪರಿವಾರದ ಬೆಂಬಲ

ಸಭೆಯಲ್ಲಿ ಮಾತನಾಡಿದ ಆರ್‌­ಎಸ್‌­ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ‘ಮುಂಬರುವ ಲೋಕ­ಸಭಾ ಚುನಾವಣೆಯನ್ನು ಸಂಘ ಪರಿವಾರದ ಎಲ್ಲ ಸಂಘಟನೆ­ಗಳೂ ಸವಾಲಾಗಿ ಸ್ವೀಕರಿಸಿ, ಸಮನ್ವಯತೆ ಸಾಧಿಸಿ, ಒಗ್ಗಟ್ಟಾಗಿ ಕೆಲಸ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಸಲಹೆ ಮಾಡಿದರು’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.ಸಭೆಗೆ ಸುಮಾರು 150 ಮಂದಿಗೆ ಆಹ್ವಾನವಿತ್ತು. ಯಡಿ­ಯೂರಪ್ಪ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಮತ್ತೆ ಪಕ್ಷಕ್ಕೆ ಕರೆತರುವ ವಿಚಾರದ ಬಗ್ಗೆ ಚರ್ಚೆಯಾಗಿಲ್ಲ. 150 ಮಂದಿ ಸೇರುವ ಸಭೆಗಳಲ್ಲಿ ಇಂಥ ವಿಚಾರ­ಗಳು ಚರ್ಚೆಗೆ ಬರುವುದಿಲ್ಲ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry