‘ದೇಶೀಯರಿಂದಲೇ ಸ್ಮಾರಕಗಳಿಗೆ ಆಪತ್ತು’

7
ಸ್ಮಾರಕಗಳ ಸಂರಕ್ಷಣೆಯ ಮಹತ್ವ – ಉಪನ್ಯಾಸ

‘ದೇಶೀಯರಿಂದಲೇ ಸ್ಮಾರಕಗಳಿಗೆ ಆಪತ್ತು’

Published:
Updated:

ಮಂಗಳೂರು: ‘ದಾಳಿಕೋರರಾದ ಮಹಮ್ಮದ್‌ ಘೋರಿ ಹಾಗೂ ಮಹಮ್ಮದ್‌ ಘಜನಿ ಧ್ವಂಸ ಮಾಡಿದ್ದಕ್ಕಿಂತ 10 ಪಟ್ಟು ಹೆಚ್ಚು ದೇವಾಲಯಗಳನ್ನು ದೇಶೀಯರೇ ನಾಶ ಮಾಡಿದ್ದಾರೆ. ಆಧುನಿಕತೆಯ ಹೆಸರಿನಲ್ಲಿ, ಅರಿವಿನ ಕೊರತೆಯಿಂದ  ಹಾಗೂ ಅವಜ್ಞೆಯಿಂದಾಗಿ ಸ್ಮಾರಕಗಳು ನಾಶವಾಗುತ್ತಿರುವುದು ಆಘಾತಕಾರಿ’ ಎಂದು ಮೂಡುಬಿದಿರೆಯ ಧವಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪುಂಡಿಕಾಯಿ ಗಣಪಯ್ಯ ಭಟ್‌ ಹೇಳಿದರು.ಬಲ್ಮಠದ ಮಹಿಳೆಯರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿಯ ಆಶ್ರಯದಲ್ಲಿ ಬಿಜೈನ ಶ್ರೀಮಂತಿ ಬಾಯಿ ಸ್ಮಾರಕ ಸರ್ಕಾರಿ ವಸ್ತು ಪ್ರದರ್ಶನಾಲಯದಲ್ಲಿ ಬುಧವಾರ ಅವರು ಸ್ಮಾರಕಗಳ ಸಂರಕ್ಷಣೆಯ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.‘ವಿಶ್ವದಲ್ಲಿ ಅತಿ ಹೆಚ್ಚು ಸ್ಮಾರಕಗಳನ್ನು ಹೊಂದಿದ ಶ್ರೀಮಂತ ದೇಶ ಭಾರತ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ 3 ಸಾವಿರಕ್ಕೂ ಅಧಿಕ ದೇವಾಲಯಗಳಿವೆ. ಆದರೆ, ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆ 11 ದೇವಾಲಯ ಹಾಗೂ ರಾಜ್ಯ ಪುರಾತತ್ವ ಇಲಾಖೆ 11 ದೇವಾಲಯಗಳನ್ನು ಮಾತ್ರ ಸಂರಕ್ಷಿಸುತ್ತಿವೆ. ಸರ್ಕಾರವನ್ನು ದೂಷಿಸುವ ಬದಲು ಪ್ರಜ್ಞಾವಂತ ನಾಗರಿಕರೇ ಸ್ಮಾರಕಗಳ ರಕ್ಷಣೆಯ ಹೊಣೆ ಹೊರಬೇಕು’ ಎಂದರು.‘ಭಾರತೀಯರಲ್ಲಿ ಇತಿಹಾಸ ಪ್ರಜ್ಞೆ ಇಲ್ಲ ಎಂದು ವಿದೇಶಿ ಪ್ರವಾಸಿಗನೊಬ್ಬ ಹೇಳಿರುವುದು ಅಕ್ಷರಶಃ ನಿಜ. ರಾಜ್ಯದಲ್ಲಿ ಇದುವರೆಗೆ 30ಸಾವಿರಕ್ಕೂ ಅಧಿಕ ಶಾಸನಗಳು ಪತ್ತೆಯಾಗಿವೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2ಸಾವಿರ ಶಾಸನಗಳು ಪತ್ತೆಯಾಗಿವೆ.

 ಆದರೆ, ಅವುಗಳಲ್ಲಿ ಬಹುತೇಕ ಈಗಿಲ್ಲ. ಕುಂಬಳೆ ಬಳಿಯ ಹೇರೂರಿನಲ್ಲಿ ಆಳುಪರ ಕಾಲದ ಶಾಸನ ಪತ್ತೆಯಾಗಿತ್ತು. ಆ ಶಾಸನವನ್ನು ಸ್ಥಳೀಯರು ಮಣ್ಣಿನಡಿ ಹೂತುಹಾಕಿದ್ದಾರೆ. ವೇಣೂರಿನಲ್ಲಿ ದೇವಸ್ಥಾನವೊಂದರಲ್ಲಿ ಪತ್ತೆಯಾದ ಶಾಸನವನ್ನು ಗಭರ್ಗುಡಿಯ ಒಳಗಡೆ ನೆಲಕ್ಕೆ ಹಾಸಿದ್ದಾರೆ.ಮೂಡುಬಿದಿರೆಯ ಗೌರಿ ದೇವಸ್ಥಾನದಲ್ಲಿ ಪತ್ತೆಯಾದ ನಾಲ್ಕು ಶಾಸನಗಳ ಪೈಕಿ ಮೂರನ್ನು ದೇವಸ್ಥಾನದ ಜೀರ್ಣೋದ್ಧಾರದ ಸಂದರ್ಭ ನದಿಗೆ ಎಸೆದಿದ್ದಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು. ‘ಬಾರ್ಕೂರು ತುಳುನಾಡಿನ ಹಾಳು ಹಂಪಿ ಇದ್ದಂತೆ. ಇಲ್ಲಿ 365 ದೇವಸ್ಥಾನಗಳಿದ್ದವು. ನಿತ್ಯ ಒಂದೊಂದು ದೇವಸ್ಥಾನದಲ್ಲಿ ಜಾತ್ರೆ ನಡೆಯುತ್ತಿತ್ತು ಎಂಬ ಪ್ರತೀತಿ ಇದೆ. ಈಗ ಅಖಿಲ 36 ದೇವಸ್ಥಾನಗಳೂ ಇಲ್ಲ. ಮಡಂತ್ಯಾರು ಸಮೀಪದ ಪಾಂಡವರಕಲ್ಲು ಎಂಬಲ್ಲಿ 2 ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸವಿದ್ದ 60ಕ್ಕೂ ಅಧಿಕ ಸಮಾಧಿಗಳಿದ್ದವು. ಈ ಪೈಕಿ ಈಗ ಆರೇಳು ಸಮಾಧಿಗಳು ಮಾತ್ರ ಉಳಿದಿವೆ. ಇತಿಹಾಸ ಸಂರಕ್ಷಣೆ ಸಲುವಾಗಿ ಸ್ಥಳದಲ್ಲಿ ಹಾಕಿದ್ದ ಫಲಕವನ್ನೂ ಯಾರೋ ಕಿತ್ತೊಯ್ದಿದ್ದಾರೆ. ಇವೆಲ್ಲವನ್ನು ನಾಶಪಡಿಸಿದ್ದು ಘಜನಿ ಘೋರಿಯಂತಹ ದಾಳಿಕೋರರಲ್ಲ. ಇತಿಹಾಸ ಪ್ರಜ್ಞೆ ಇಲ್ಲದಿರುವುದೇ ಸ್ಮಾರಕಗಳ ನಾಶಕ್ಕೆ ಕಾರಣ’ ಎಂದರು.ಕಾಲೇಜಿನ ಪ್ರಾಂಶುಪಾಲರಾದ ಯು.ತಾರಾ ರಾವ್‌, ಉಪನ್ಯಾಸಕರಾದ ಮೋಹನ ಸುವರ್ಣ, ಶೈಲಾ ಕೆ.ಎನ್‌., ಗೀತಾ ಸುವರ್ಣ, ವಸ್ತು ಸಂಗ್ರಹಾಲಯದ ಕ್ಯುರೇಟರ್‌ ತೇಜೇಶ್ವರ ಆರ್‌, ಮೂಡುಬಿದಿರೆಯ ಜೈನ್‌ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕ ಅನಂತರಾಜ ಇಂದ್ರ, ವಸಂತ ಪ್ರಭು ಮತ್ತಿತರರು ಇದ್ದರು.ಜೀರ್ಣೋದ್ಧಾರದ ಹೆಸರಿನಲ್ಲಿ ಪರಂಪರೆಯ ನಾಶ

‘ಜೀರ್ಣಾವಸ್ಥೆ ತಲುಪದ ದೇವಾಲಯಗಳನ್ನು ಪ್ರತಿಷ್ಠೆಗಾಗಿ ಜೀರ್ಣೋದ್ಧಾರ ನಡೆಸುವುದು ಕರಾವಳಿಯಲ್ಲೀಗ ಫ್ಯಾಷನ್‌ ಆಗಿದೆ. ಜೀರ್ಣೋದ್ಧಾರ  ಸಂದರ್ಭದಲ್ಲಿ ಸ್ಮಾರಕಗಳ ನಾಶ ಎಗ್ಗಿಲ್ಲದೆ ನಡೆಯುತ್ತಿವೆ. ತುಳುನಾಡಿನ ದೇವಾಲಯಗಳಿಗೆ ತನ್ನದೇ ಆದ ಶೈಲಿ ಇದೆ. ಈಗ ಚೋಳರು, ಪಲ್ಲವರ ಶೈಲಿಯ ದೇವಾಲಯಗಳು ಇಲ್ಲಿ ತಲೆ ಎತ್ತುತ್ತಿವೆ. ಇದೊಂದು ರೀತಿಯ ಸಂಸ್ಕೃತಿ ಮಾಲಿನ್ಯ. ಇದರಿಂದ ತುಳು ಅನನ್ಯತೆ ಕಳೆದುಕೊಳ್ಳುವ ಅಪಾಯವಿದೆ’ ಎಂದು ಗಣಪಯ್ಯ ಭಟ್‌ ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry