‘ಧರಣಿಯಲ್ಲ, ಆದೇಶ ಮಾಡುತ್ತೇನೆ’

7
ಗೋಡೆ ತೆರವು: ಸಚಿವ ಆಂಜನೇಯ ಪ್ರತಿಕ್ರಿಯೆ

‘ಧರಣಿಯಲ್ಲ, ಆದೇಶ ಮಾಡುತ್ತೇನೆ’

Published:
Updated:

ಬೆಂಗಳೂರು: ‘ನನಗೆ ಹಂಚಿಕೆಯಾಗಿ­ರುವ ಕೊಠಡಿ ನವೀಕರಣಕ್ಕಾಗಿ ಧರಣಿ ಮಾಡುವುದಿಲ್ಲ. ಸಚಿವ ಸ್ಥಾನದ ಅತ್ಯುನ್ನತ ಅಧಿಕಾರ ಬಳಸಿ ಆದೇಶ ಮಾಡುತ್ತೇನೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಹೇಳಿದರು.ಕಚೇರಿ ಬದಲಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಶನಿವಾರ ವಿಧಾನ­ಸೌಧ­ದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ‘ಕಚೇರಿ ನವೀಕರಣಕ್ಕೆ ಧರಣಿ ಮಾಡುವುದಿಲ್ಲ. 40 ವರ್ಷ ಧರಣಿ, ಹೋರಾಟ ಮಾಡಿ ಈ ಸ್ಥಾನಕ್ಕೆ ಬಂದಿದ್ದೇನೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶೀರ್ವಾದದಿಂದ ಸಚಿವನಾಗಿದ್ದೇನೆ. ನನಗಿರುವ ಅಧಿಕಾರ ಬಳಸಿ ಆದೇಶ ಮಾಡುತ್ತೇನೆ’ ಎಂದರು.‘ನಾನು ವಾಸ್ತು ಅಥವಾ ಮೂಢ­ನಂಬಿಕೆ ಕಾರಣದಿಂದ ಕೊಠಡಿಯ ಗೋಡೆ ತೆಗೆಯುವಂತೆ ಕೋರಿಲ್ಲ. ಆಡಳಿತದ ಅನುಕೂಲ ಮತ್ತು ಜನರನ್ನು ಭೇಟಿಯಾಗಲು ಅವಕಾಶ­ವಾ­ಗು­ವಂತೆ ಗೋಡೆ ತೆರವು ಮಾಡಲು ಲೋಕೋಪಯೋಗಿ ಇಲಾಖೆಗೆ ಕೋರಿಕೆ ಸಲ್ಲಿಸಿದ್ದೇನೆ’ ಎಂದು ತಿಳಿಸಿದರು.ಕೊಠಡಿಯ ಗೋಡೆ ತೆರವು ಮಾಡಿಸುತ್ತೀರಾ? ಎಂಬ ಪ್ರಶ್ನೆಗೆ, ‘ತೆರವು ಮಾಡುವಂತೆ ಕೋರಿದ್ದೇನೆ. ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದರೆ ಚಿಕ್ಕ ಕೊಠಡಿಯಲ್ಲೇ ಇರುತ್ತೇನೆ’ ಎಂದರು. ಮತ್ತೊಮ್ಮೆ ಪ್ರಶ್ನಿಸಿದಾಗ, ‘15 ದಿನದ ನಂತರ ಬಂದು ನೋಡಿ’ ಎಂದು ಗೋಡೆ ತೆರವಿನ ಸ್ಪಷ್ಟ ಸೂಚನೆ ನೀಡಿದರು.‘ವಿಧಾನಸೌಧದ ಪಾರಂಪರಿಕ ಕಟ್ಟಡ ಸ್ಥಾನಮಾನಕ್ಕೆ ಧಕ್ಕೆಯಾಗುವಂತೆ ಗೋಡೆ ತೆರವು ಮಾಡುವುದಿಲ್ಲ. ನಾನು ತೆರವು ಮಾಡಲು ಸೂಚಿಸಿರುವ ಗೋಡೆ ಮುಖ್ಯ ಗೋಡೆಯೂ ಅಲ್ಲ. ಅದು ಎರಡು ಕೊಠಡಿಗಳ ನಡುವೆ ಹೊಸದಾಗಿ ಕಟ್ಟಿದ ಚಿಕ್ಕ ಗೋಡೆ. ಅದನ್ನು ತೆರವು ಮಾಡುವುದಕ್ಕೆ ಯಾವ ಅಡ್ಡಿಯೂ ಇಲ್ಲ’ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.‘ಹಿಂದೆ ನನಗೆ ಹಂಚಿಕೆಯಾದ ಕೊಠಡಿಯಲ್ಲಿ ಯಾವ ಬದಲಾವಣೆಯನ್ನೂ ಮಾಡಿರಲಿಲ್ಲ. ಸುಣ್ಣ–ಬಣ್ಣವನ್ನೂ ಬಳಿಸಿರಲಿಲ್ಲ. ಹಿಂದಿನ ಸರ್ಕಾರದ ಸಚಿವರು ಬಳಸಿದ್ದ ಪೀಠೋಪಕರಣಗಳನ್ನೇ ಬಳಸಿದ್ದೆ. ಸಂವಿಧಾನ ಮತ್ತು ಕಾನೂನುಗಳಿಗೆ ವಿರುದ್ಧವಾಗಿ ಕೆಲಸ ಮಾಡುವುದಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry