ಭಾನುವಾರ, ಜೂನ್ 20, 2021
26 °C
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ನಂದನ್‌ ನಿಲೇಕಣಿ

‘ನನ್ನ ರೂ 7700 ಕೋಟಿ ಆಸ್ತಿ ನ್ಯಾಯದ ದುಡಿಮೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:‘ನನ್ನ ಬಳಿ ಈಗ ₨ 7,700 ಕೋಟಿ ಮೌಲ್ಯದ ಆಸ್ತಿ ಇದೆ. ಸಂಪೂರ್ಣ ಆಸ್ತಿಯನ್ನೂ ನಾನು ಪಾರ­ದರ್ಶಕ ಹಾದಿಯಲ್ಲಿ, ನ್ಯಾಯ­ಯುತ­ವಾಗಿಯೇ ಗಳಿಸಿದ್ದೇನೆ ಎಂಬ ಹೆಮ್ಮೆ ನನಗಿದೆ’ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ನಂದನ್‌ ನಿಲೇಕಣಿ ಹೇಳಿದರು.ದಯಾನಂದ ಸಾಗರ್‌ ಸಮೂಹ ಸಂಸ್ಥೆಗಳಿಂದ ನೀಡುವ ‘ನಾಯಕತ್ವ ಪ್ರಶಸ್ತಿ’ ಸ್ವೀಕರಿಸಿ ಗುರುವಾರ ಮಾತ­ನಾ­ಡಿದ ಅವರು, ‘ಐಐಟಿ ಪದವಿ ಅಧ್ಯ­ಯನ ಮುಗಿಸಿ ಹೊರಬಂದಾಗ ನನ್ನ ಜೇಬಿ­ನಲ್ಲಿ ರೂ 200 ಮಾತ್ರ ಇತ್ತು. ಬಳಿಕ ರೂ 10,000 ಹೂಡಿಕೆ ಮಾಡಿ ಪಾಲು­ದಾ­ರಿಕೆಯಲ್ಲಿ ಆರಂಭಿಸಿದ ಇನ್ಫೋಸಿಸ್‌ ಕಂಪೆನಿ ನನಗೆ ರೂ 7,700 ಕೋಟಿ­ಯಷ್ಟು ಆಸ್ತಿ ಸಂಪಾದಿಸಲು ದಾರಿ­ಯಾಗಿದೆ’ ಎಂದರು.‘ನಾನು ಅಕ್ರಮವಾಗಿ ಯಾವುದೇ ಆಸ್ತಿ­ಯನ್ನು ಸಂಪಾದಿಸಿಲ್ಲ. ನನ್ನ ಹಣ­ವನ್ನು ರಹಸ್ಯವಾಗಿ ಹೊರ ರಾಷ್ಟ್ರ­ಗಳಲ್ಲಿ ಹೂಡಿಕೆ ಮಾಡಿಲ್ಲ. ಬೇರೊಬ್ಬರ ಬ್ಯಾಂಕ್‌ ಖಾತೆಗಳಲ್ಲಿ ಹಣ ಮುಚ್ಚಿ­ಟ್ಟಿಲ್ಲ. ಈ ವಿಚಾರದಲ್ಲಿ ಎಲ್ಲವೂ ಪಾರ­ದರ್ಶಕ­­ವಾಗಿದೆ ಮತ್ತು ನನ್ನ ಆಸ್ತಿಗೆ ಸಂಪೂರ್ಣವಾಗಿ ತೆರಿಗೆ ಪಾವತಿ­ಸು­ತ್ತಿ­ದ್ದೇನೆ’ ಎಂದು ಅವರು ಹೇಳಿದರು. ತಮ್ಮ ಆಸ್ತಿಯಲ್ಲಿ ಶೇಕಡ 80ರಷ್ಟು ಇನ್ನೂ ಇನ್ಫೋಸಿಸ್‌ನಲ್ಲೇ ಷೇರುಗಳ ರೂಪದಲ್ಲಿದೆ. ತಾವು ಶೇ 1.45ರಷ್ಟು ಷೇರು ಹೊಂದಿದ್ದರೆ, ಪತ್ನಿ ರೋಹಿಣಿ ನಿಲೇಕಣಿ ಅವರು ಶೇ 1.3ರಷ್ಟು ಷೇರು ಹೊಂದಿದ್ದಾರೆ ಎಂದರು. ‘ಇನ್ಫೋಸಿಸ್‌ ಮೂಲಕ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿರುವುದರ ಭಾಗವಾಗಿ ಈ ಆಸ್ತಿ ನಮಗೆ ಬಂದಿದೆ. ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದ ಆಸ್ತಿ ಸೃಷ್ಟಿಗೆ ಕಂಪೆನಿ ಕಾರಣವಾಗಿದೆ’ ಎಂದು ತಿಳಿಸಿದರು.ರೂ 400 ಕೋಟಿ ಕೊಡುಗೆ: ‘15 ವರ್ಷ­ಗಳಿಂದ ನಾನು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಇನ್ಫೋಸಿಸ್‌­ನ­ಲ್ಲಿನ ಕೆಲವು ಷೇರುಗಳನ್ನು ಮಾರಿದಾಗ ನನಗೆ ಒಂದಷ್ಟು ಹಣ ಬಂತು. ಅದನ್ನು ಬಳಸಿ­­ಕೊಂಡು ನನ್ನ ಚಿಂತನೆಗಳ ಸಾಕಾರಕ್ಕೆ ಪ್ರಯತ್ನಿಸಿದೆ’ ಎಂದು ರೋಹಿಣಿ ನಿಲೇಕಣಿ ಹೇಳಿದರು.ತಾವು ಸ್ಥಾಪಿಸಿದ ಅರ್ಘ್ಯಂ ಪ್ರತಿ­ಷ್ಠಾನದ ಮೂಲಕ ಗ್ರಾಮೀಣ ಪ್ರದೇಶ­ದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮತ್ತು ಶೌಚಾಲಯಗಳ ನಿರ್ಮಾಣಕ್ಕೆ ರೂ 400 ಕೋಟಿ ವೆಚ್ಚ ಮಾಡಲಾಗಿದೆ. ಪ್ರತಿಷ್ಠಾನದ ಮೂಲಕ 22 ರಾಜ್ಯ­ಗಳಲ್ಲಿ ಸಹಾಯಧನ ವಿತರಿಸಲಾಗಿದೆ ಎಂದು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.