‘ನಮ್ಮನ್ನು ಒಕ್ಕಲೆಬ್ಬಿಸಬೇಡಿ ಸ್ವಾಮಿ....’

7

‘ನಮ್ಮನ್ನು ಒಕ್ಕಲೆಬ್ಬಿಸಬೇಡಿ ಸ್ವಾಮಿ....’

Published:
Updated:

ಶ್ರೀರಂಗಪಟ್ಟಣ: ಸ್ಮಾರಕಗಳನ್ನು ರಕ್ಷಿಸುವ ನೆಪದಲ್ಲಿ ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸುತ್ತಾರೆ ಎಂಬ ಸುದ್ದಿ ಹರಡಿದೆ. ಹಾಗೆ ಮಾಡಬೇಡಿ ಸ್ವಾಮಿ...’ ಎಂದು ದ್ವೀಪ ಪಟ್ಟಣದ ನಿವಾಸಿಗಳು ಸಚಿವ ಆರ್‌.ವಿ.ದೇಶಪಾಂಡೆ ಅವರನ್ನು ಬೇಡಿಕೊಂಡ ಪ್ರಸಂಗ ಸೋಮವಾರ ನಡೆಯಿತು.  ಇಲ್ಲಿನ ಡೆಲ್ಲಿ ಗೇಟ್‌ ಬಳಿ ಧ್ವನಿ ಬೆಳಕು ಕಾರ್ಯಕ್ರಮದ ಸಿದ್ದತೆ ಪರಿಶೀಲನೆ ಆಗಮಿಸಿದ್ದ ಸಚಿವರನ್ನು ಭೇಟಿ ಮಾಡಿದ ಸಾಕಮ್ಮ, ನಿಂಗಮ್ಮ, ವನಜಾಕ್ಷಿ, ರಾಮಯ್ಯ ಇತರರು ಸಚಿವರಿಗೆ ಕೈ ಮುಗಿದು ನಮ್ಮನ್ನು ಇಲ್ಲಿಂದ ಹೊರಗೆ ಕಳುಹಿಸಬೇಡಿ, ನಮಗೆ ಬೇರೆ ಜಾಗವಿಲ್ಲ. ಒಕ್ಕಲೆಬ್ಬಿಸಿದರೆ ಪರದೇಸಿಗಳಾಗುತ್ತೇವೆ ಎಂದು ಅಳಲು ತೋಡಿಕೊಂಡರು.ಇದಕ್ಕೆ ಪುರಸಭೆ ಸದಸ್ಯರು ಕೂಡ ದನಿ ಗೂಡಿಸಿದರು. ಪುರಾತತ್ವ ಇಲಾಖೆ ಮೇಲಿಂದ ಮೇಲೆ ಸ್ಮಾರಕಗಳ ಸರ್ವೆ ಕಾರ್ಯ ನಡೆಸುತ್ತಿದೆ. ಸ್ಮಾರಕದ 300 ಮೀಟರ್‌ ವ್ಯಾಪ್ತಿಯ ಮನೆಗಳನ್ನು ನೆಲಸಮ ಮಾಡುತ್ತಾರೆ ಎಂಬ ಸುದ್ದಿ ಇದೆ. ನಿವೇಶನ ಇರುವವರು ಮನೆ ನಿರ್ಮಿಸಿಕೊಳ್ಳಲೂ ಕಷ್ಟವಾಗಿದೆ ಎಂದು ಪುರಸಭೆ ಸದಸ್ಯರಾದ ನಳಿನಿ, ವೆಂಕಟೇಶ್‌, ಎಂ.ಎಲ್‌. ದಿನೇಶ್‌, ಬಿ. ಮಂಜುಸ್ವಾಮಿ ಇತರರು ಸಚಿವರ ಗಮನ ಸೆಳೆದರು.  ಅಹವಾಲು ಆಲಿಸಿ ಮಾತನಾಡಿದ ಸಚಿವರು, ಅಂತಹ ಸುದ್ದಿಗಳಿಗೆ ಕಿವಿಗೊಡಬೇಡಿ. ಯಾವ ಕಾರಣಕ್ಕೂ ಜನರನ್ನು ಪಟ್ಟಣದಿಂದ ಒಕ್ಕಲೆಬ್ಬಿಸುವುದಿಲ್ಲ. ಇಲ್ಲಿನ ಚಾರಿತ್ರಿಕ ಮಹತ್ವವನ್ನು ರಾಷ್ಟ್ರ ಮಟ್ಟದಲ್ಲಿ ಪ್ರಚಾರ ಮಾಡುವ ಉದ್ದೇಶದಿಂದ ಧ್ವನಿ ಬೆಳಕು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಇದರಿಂದ ಪಾರಂಪರಿಕ ಪಟ್ಟಣದ ಕೀರ್ತಿ ಮತ್ತಷ್ಟು ಹೆಚ್ಚಲಿದೆ ಎಂದರು.  ತರಾಟೆ: ಧ್ವನಿ ಬೆಳಕು ಕಾರ್ಯಕ್ರಮದ ಸಿದ್ದತೆ ಕೈಗೊಳ್ಳುವ ಮುನ್ನ ಸ್ಥಳೀಯರ ಜತೆ ಏಕೆ ಚರ್ಚೆ ನಡೆಸಿಲ್ಲ ಎಂದು ಕಾರ್ಯಕ್ರಮ ರೂಪಿಸುವ ಹೊಣೆ ಹೊತ್ತಿರುವ ಬೆಂಗಳೂರಿನ ಇನ್ನೋವೇಟಿವ್‌ ಸಂಸ್ಥೆಯ ಮುಖ್ಯಸ್ಥ ಕೃಷ್ಣಕುಮಾರ್‌ ಅವರನ್ನು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಎಲ್‌. ಲಿಂಗರಾಜು ತರಾಟೆಗೆ ತೆಗೆದುಕೊಂಡರು. ಸ್ಥಳೀಯರ ಜತೆ ಚರ್ಚಿಸದೆ ಡೆಲ್ಲಿ ಗೇಟ್‌ ಬಂದ್‌ಮಾಡುವ ತೀರ್ಮಾನ ತೆಗೆದುಕೊಂಡಿದ್ದೀರಿ. ಇದರಿಂದ ಜನರು ಕಷ್ಟ ಅನುಭವಿಸಲಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೃಷ್ಣಕುಮಾರ್‌ ಮಾತನಾಡಿ, ನಮ್ಮದು ಕೇವಲ ಕಾರ್ಯಕ್ರಮ ರೂಪಿಸುವ ಹೊಣೆ.ಉಳಿದದ್ದು ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತದ ಕೆಲಸ. ಹಾಗಾಗಿ ನನಗೂ ಕೋಟೆ ಬಾಗಿಲು ಬಂದ್‌ ಮಾಡುವುದಕ್ಕೂ ಸಂಬಂಧವಿಲ್ಲ ಎಂದು ಉತ್ತರಿಸಿದರು. ಇದರಿಂದ ಕ್ಷುದ್ಧರಾದ ಲಿಂಗರಾಜು, ಹಾಗಿದ್ದ ಮೇಲೆ ನೀವೇಕೆ ಇಲ್ಲಿಗೆ ಬಂದ್ದೀರಿ. ಧ್ವನಿ ಬೆಳಕು ಹೆಸರಿನಲ್ಲಿ ಲಾಭ ಮಾಡಿಕೊಳ್ಳಲು ಹವಣಿಸುತ್ತಿದ್ದೀರಾ? ಎಂದು ಪ್ರಶ್ನಿಸಿದರು. ಜನರ ವಿರೋಧ ಹೆಚ್ಚಾಗುತ್ತಿರುವುದನ್ನು ಅರಿತ ಕೃಷ್ಣಕುಮಾರ್‌ ಅಲ್ಲಿಂದ ಜಾಗ ಖಾಲಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry