‘ನಮ್ಮವರು ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದಾರೆ’

ನವದೆಹಲಿ (ಪಿಟಿಐ): ‘ಭಾರತದ ಕ್ರೀಡಾಪಟುಗಳು ಸೆಲ್ಫಿ ತೆಗೆದುಕೊಳ್ಳಲು ರಿಯೊ ಒಲಿಂಪಿಕ್ಸ್ಗೆ ಹೋಗಿದ್ದಾರೆಯೇ ಹೊರತು ಪದಕ ಗೆಲ್ಲುವುದಕ್ಕಲ್ಲ’ ಎಂದು ಲೇಖಕಿ ಶೋಭಾ ಡೇ ಟೀಕಿಸಿದ್ದಾರೆ.
ಒಲಿಂಪಿಕ್ಸ್ ಶುರುವಾಗಿ ಮೂರು ದಿನವಾದರೂ ಭಾರತದ ಯಾವ ಸ್ಪರ್ಧಿ ಕೂಡ ಪದಕ ಗೆದ್ದಿಲ್ಲ. ಪುರುಷರ 10 ಮೀಟರ್ಸ್ ಏರ್ ರೈಫಲ್ ವಿಭಾಗದಲ್ಲಿ ಅಭಿನವ್ ಬಿಂದ್ರಾ ನಾಲ್ಕನೇ ಸ್ಥಾನ ಗಳಿಸಿರುವುದೇ ಇದುವರೆಗಿನ ಉತ್ತಮ ಸಾಧನೆ ಎನಿಸಿದೆ.
‘ಭಾರತದ ಕ್ರೀಡಾಪಟುಗಳು ರಿಯೊಗೆ ಹೋಗಿ ಕಂಡ ಕಂಡಲ್ಲಿ ಸೆಲ್ಫಿ ತೆಗೆದುಕೊಂಡು ಬರಿಗೈಲಿ ತವರಿಗೆ ವಾಪಸಾಗುವ ಗುರಿ ಇಟ್ಟುಕೊಂಡಂತಿದೆ. ಇದಕ್ಕಾಗಿ ಸರ್ಕಾರ ಕೋಟ್ಯಂತರ ಹಣ ವೆಚ್ಚ ಮಾಡಬೇಕಿತ್ತೆ’ ಎಂದು ಶೋಭಾ ಟ್ವೀಟ್ ಮಾಡಿದ್ದಾರೆ.
ಶೋಭಾ ಅವರ ಟ್ವೀಟ್ಗೆ ಬಿಂದ್ರಾ ಸೇರಿದಂತೆ ಅನೇಕ ಕ್ರೀಡಾಪಟುಗಳು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ‘ಶೋಭಾ ಡೇ, ನಿಮ್ಮ ಹೇಳಿಕೆ ಅರ್ಥಹೀನವಾದುದು. ವಿಶ್ವದ ಮಹಾ ಕೂಟ ಎನಿಸಿರುವ ಒಲಿಂಪಿಕ್ಸ್ನಲ್ಲಿ ವಿವಿಧ ರಾಷ್ಟ್ರಗಳ ಘಟಾನುಘಟಿ ಕ್ರೀಡಾಪಟುಗಳು ಭಾಗವಹಿಸುತ್ತಾರೆ. ಇಲ್ಲಿ ಪದಕ ಗೆಲ್ಲಬೇಕೆಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಇದಕ್ಕೆ ನಮ್ಮ ಕ್ರೀಡಾಪಟುಗಳು ಹೊರತಲ್ಲ. ಇಲ್ಲಿ ಪ್ರತಿಯೊಬ್ಬರೂ ಛಲದಿಂದ ಹೋರಾಡುತ್ತಾರೆಯೇ ಹೊರತು ಸುಲಭವಾಗಿ ಸೋಲೊಪ್ಪಿಕೊಳ್ಳು ವುದಿಲ್ಲ. ಇದಕ್ಕಾಗಿ ನೀವು ನಮ್ಮ ಕ್ರೀಡಾಪಟುಗಳ ಬಗ್ಗೆ ಹೆಮ್ಮೆ ಪಡಬೇಕು’ ಎಂದು ಬಿಂದ್ರಾ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
‘ನಿಮ್ಮಂತಹ ಸಂಕುಚಿತ ಮನಸ್ಥಿತಿಯ ಜನರಿಗೆ ಕ್ರೀಡಾಪಟುಗಳ ಸಾಧನೆ ನಗಣ್ಯ ಅನಿಸುತ್ತದೆ. ನೀವು ಭಾರತದಲ್ಲಿ ಹುಟ್ಟಿದ್ದೀರಿ ಎಂಬುದಕ್ಕೆ ಮೊದಲು ಹೆಮ್ಮೆ ಪಡಿ. ಹಾಗೆಯೇ ದೇಶದ ಕ್ರೀಡಾಪಟುಗಳನ್ನೂ ಗೌರವ ಭಾವದಿಂದ ಕಾಣಿರಿ’ ಎಂದು ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
‘ನೀವು ತಿಳಿದುಕೊಂಡಂತೆ ನಮ್ಮವರು ಯಾರೂ ಸೆಲ್ಫಿ ತೆಗೆದುಕೊಳ್ಳಲು ರಿಯೊಗೆ ಹೋಗಿಲ್ಲ. ಪ್ರತಿ ಸ್ಪರ್ಧೆಯಲ್ಲೂ ಅವರು ಪದಕ ಗೆಲ್ಲಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಆದರೆ ಅದೃಷ್ಟ ಅವರ ಕೈಹಿಡಿಯುತ್ತಿಲ್ಲ. ಹಾಗಂತ ಬಾಯಿಗೆ ಬಂದ ಹಾಗೆ ಟೀಕಿಸುವುದು ಸರಿಯಲ್ಲ’ ಎಂದು ಟೆನಿಸ್ ಆಟಗಾರ ಸೋಮದೇವ್ ದೇವವರ್ಮನ್ ಪ್ರತಿಕ್ರಿಯಿಸಿದ್ದಾರೆ.
ಕ್ರೀಡಾಪಟುಗಳ ಬಗ್ಗೆ ಕೀಳಾಗಿ ಮಾತನಾಡುವ ಮುನ್ನ ಶೋಭಾ ಡೇ ನೂರು ಬಾರಿ ಯೋಚಿಸಬೇಕಿತ್ತು ಎಂದು ಭಾರತದ ಹಾಕಿ ತಂಡದ ಮಾಜಿ ನಾಯಕ ವಿರೇನ್ ರಸ್ಕಿನ್ ಹೇಳಿದ್ದಾರೆ.
‘ಶೋಭಾ ಡೇ ಅವರೇ, ನೀವು ಒಮ್ಮೆ ಹಾಕಿ ಅಂಗಳದಲ್ಲಿ ಆಟಗಾರರ ಹಾಗೆ ಕೆಲವು ನಿಮಿಷ ಓಡಿ ನೋಡಿ. ಅಭಿನವ್ ಮತ್ತು ಗಗನ್ ನಾರಂಗ್ ಅವರಂತೆ ರೈಫಲ್ ಹಿಡಿದಾಗ ಮಾತ್ರ ಅವರ ಕಷ್ಟ ಮತ್ತು ಸವಾಲು ಎಂತಹುದು ಎಂಬುದು ನಿಮ್ಮ ಅರಿವಿಗೆ ಬರುತ್ತದೆ’ ಎಂದು ಒಲಿಂಪಿಕ್್ ಗೋಲ್ಡ್ ಕ್ವೆಸ್ಟ್ ಫೌಂಡೇಷನ್ನ (ಒಜಿಕ್ಯೂ) ಸಿಇಒ ಕೂಡ ಆಗಿರುವ ವಿರೇನ್ ತಿಳಿಸಿದ್ದಾರೆ.
ಐಒಎ ನೇರ ಹೊಣೆ
‘ರಿಯೊದಲ್ಲಿ ಭಾರತದ ಕ್ರೀಡಾಪಟು ಗಳು ವೈಫಲ್ಯ ಅನುಭವಿಸುತ್ತಿರುವುದರ ಸಂಪೂರ್ಣ ಹೊಣೆಯನ್ನು ಭಾರತ ಒಲಿಂಪಿಕ್ಸ್ ಸಂಸ್ಥೆ (ಐಒಎ) ಹೊರಬೇಕು’ ಎಂದು ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಹೇಳಿದ್ದಾರೆ.
‘ಹಿಂದಿನ ಒಲಿಂಪಿಕ್ಸ್ಗಳಿಗೆ ಹೋಲಿಸಿದರೆ ರಿಯೊದಲ್ಲಿ ನಮ್ಮ ಕ್ರೀಡಾಪಟುಗಳಿಂದ ಮೂಡಿ ಬರುತ್ತಿ ರುವ ಸಾಮರ್ಥ್ಯ ಏನೇನೂ ಅಲ್ಲ. ಹಿಂದಿ ನ ಒಲಿಂಪಿಕ್ಸ್ಗಳಲ್ಲಿ ನಾವು ಹಲವು ಪದಕಗಳನ್ನು ಗೆದ್ದಿದ್ದೇವೆ. ನಮ್ಮವರು ಚಿನ್ನದ ಸಾಧನೆಯನ್ನೂ ಮಾಡಿದ್ದಾರೆ. ಆದರೆ ಈ ಬಾರಿ ಕ್ರೀಡಾಪಟುಗಳ ಪ್ರದರ್ಶನ ಮಟ್ಟ ಕುಸಿದಿರುವುದು ಗೊತ್ತಾಗುತ್ತಿದೆ. ಇದಕ್ಕೆ ಐಒಸಿ ಕಾರಣ’ ಎಂದು ಆರೋಪಿ ಸಿದ್ದಾರೆ.
‘ರಿಯೊ ಒಲಿಂಪಿಕ್ಸ್ ಮುಗಿದ ಕೂಡಲೇ ಐಒಸಿ ವಿವಿಧ ರಾಷ್ಟ್ರೀಯ ಕ್ರೀಡಾ ಫೆಡರೇಷನ್ಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಜೊತೆ ಸಭೆ ನಡೆಸಬೇಕು’ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.