ಗುರುವಾರ , ಮಾರ್ಚ್ 4, 2021
29 °C

‘ನಮ್ಮ ಮನೆಯಲ್ಲಿ ಮಾಡುವ ಅಡುಗೆ ಕೂಡ ರೀಮೇಕ್!

ಗಣೇಶ ವೈದ್ಯ Updated:

ಅಕ್ಷರ ಗಾತ್ರ : | |

‘ನಮ್ಮ ಮನೆಯಲ್ಲಿ ಮಾಡುವ ಅಡುಗೆ ಕೂಡ ರೀಮೇಕ್!

ಸರಿಯಾಗಿ ಹದಿನಾಲ್ಕು ತಿಂಗಳ ನಂತರ ಸುದೀಪ್ ಮತ್ತೆ ತೆರೆಯ ಮೇಲೆ ಮಿಂಚಲು ಕಾದಿದ್ದಾರೆ. ‘ಕೋಟಿಗೊಬ್ಬ 2’ ಬಿಡುಗಡೆಗೆ ಮುನ್ನ ಚಿತ್ರದ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಅವರು ಪತ್ರಕರ್ತರಿಂದ ಪ್ರಶ್ನೆಗಳ ಸುರಿಮಳೆಯನ್ನೇ ಎದುರಿಸಿದರು.ಇದು ರಿಮೇಕ್ ಚಿತ್ರವೇ? ತಮಿಳುನಾಡಿನಲ್ಲಿ ಚಿತ್ರದ ಹಾಡುಗಳ ಧ್ವನಿಮುದ್ರಿಕೆ ಬಿಡುಗಡೆ ಮಾಡಿ ಕನ್ನಡದ ಪ್ರೇಕ್ಷಕನನ್ನು ಕಡೆಗಣಿಸಿದ್ದೇಕೆ? ಸುದೀಪ್ ರೀಮೇಕ್ ಚಿತ್ರಗಳನ್ನು ಯಾಕೆ ಮಾಡುತ್ತಾರೆ?

ಸಾವಿರಾರು ಪರದೆಗಳಲ್ಲಿ ಸಿನಿಮಾ ಪ್ರದರ್ಶಿಸುವ ತಂತ್ರವೇನು?

ತಮ್ಮೆಡೆಗೆ ತೂರಿಬಂದ ಎಲ್ಲ ಪ್ರಶ್ನೆಗಳಿಗೆ ಸುದೀಪ್ ಸಾವಧಾನದಿಂದಲೇ ಉತ್ತರಿಸಿದರು. ಆ ಉತ್ತರಗಳನ್ನು ಪಟ್ಟಿ ಮಾಡುವುದಾದರೆ:* ‘ಕೋಟಿಗೊಬ್ಬ 2’ ಖಂಡಿತವಾಗಿಯೂ ರೀಮೇಕ್ ಅಲ್ಲ. ಟಿ. ಶಿವಕುಮಾರ್ ಚಿತ್ರದ ಕಥೆಗಾರರು. ಕನ್ನಡ, ತಮಿಳಿನಲ್ಲಿ ನೇರ ನಿರ್ಮಾಣವಾಗಿರುವ ಈ ಸಿನಿಮಾ ತೆಲುಗಿಗೆ ಡಬ್ ಆಗಿದೆ.

* ಕರ್ನಾಟಕದ ಪ್ರೇಕ್ಷಕನನ್ನು ಕಡೆಗಣಿಸಿದ್ದೇವೆ ಎಂದುಕೊಳ್ಳಬೇಡಿ. ನನಗೆ ನನ್ನ ರಾಜ್ಯ–ಭಾಷೆಯ ಮೇಲೆ ಗೌರವವಿದೆ. ಎಲ್ಲೇ ಹೋದರೂ ಮಾತು ಆರಂಭಿಸುವುದು ಕನ್ನಡದಲ್ಲೇ. ಈ ಚಿತ್ರವನ್ನು ನಾವು ಕನ್ನಡದಿಂದ ತಮಿಳಿಗೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದೇವೆ. ಇಲ್ಲಿಯೇ ಮುಹೂರ್ತ ಮಾಡಿದ್ದು. ಚಿತ್ರೀಕರಣವೂ ಇಲ್ಲಿಯೇ ಆಗಿದ್ದು. ಹಾಗಾಗಿ ತಮಿಳು ಪ್ರೇಕ್ಷಕರಿಗೆ ಸಿನಿಮಾ ಬಗ್ಗೆ ಮಾಹಿತಿಯೇ ಇರಲಿಲ್ಲ.

ನನ್ನ ಕೆಲವು ಸಿನಿಮಾಗಳು ತಮಿಳಿಗೆ ಡಬ್ ಆಗಿವೆ, ಈ ಚಿತ್ರವೂ ಡಬ್ಬಿಂಗ್ ಎಂದೇ ಅಲ್ಲಿನ ಜನ ಭಾವಿಸಿದ್ದರು. ಇದು ಡಬ್ಬಿಂಗ್ ಸಿನಿಮಾ ಅಲ್ಲ, ನೇರ ತಮಿಳಿನಲ್ಲೇ ಚಿತ್ರೀಕರಣ ಆಗಿದೆ ಎಂದು ಹೇಳಲು ನಮಗೆ ಒಂದು ವೇದಿಕೆ ಬೇಕಿತ್ತು. ಅದಕ್ಕಾಗಿ ಅಲ್ಲಿ ಆಡಿಯೊ ಬಿಡುಗಡೆ ಮಾಡಿದೆವು. ಅದಾದ ನಂತರವೇ ನಿರ್ಮಾಪಕರಿಗೆ ಅಲ್ಲಿನ ಮಾರುಕಟ್ಟೆ ತೆರೆದುಕೊಂಡದ್ದು. ಅದುವರೆಗೆ ಜನರು, ಹಂಚಿಕೆದಾರರು, ಪ್ರದರ್ಶಕರು ಎಲ್ಲರೂ ಇದು ಡಬ್ಬಿಂಗ್ ಸಿನಿಮಾ ಎಂದೇ ತಿಳಿದಿದ್ದರು.* ತುಂಬಾ ಯೋಚನೆ ಮಾಡಿ ‘ಕೋಟಿಗೊಬ್ಬ 2’ ಶೀರ್ಷಿಕೆ ಇಟ್ಟಿದ್ದೇವೆ. ವಿಷ್ಣುವರ್ಧನ್ ಅವರು ಈಗಾಗಲೇ ‘ಕೋಟಿಗೊಬ್ಬ’ನಾಗಿ ಗುರ್ತಿಸಿಕೊಂಡಿದ್ದಾರೆ. ‘ಕೋಟಿಗೊಬ್ಬ 2’ ಅದರ ಮುಂದುವರಿದ ಭಾಗ ಎಂದುಕೊಳ್ಳುವ ಹೆದರಿಕೆಯಿತ್ತು. ಆದರೆ ಸಿನಿಮಾ ಆಗುತ್ತಾ ಆಗುತ್ತಾ ಕಥೆಗೂ ಶೀರ್ಷಿಕೆಗೂ ಹೊಂದುತ್ತದೆ ಅನ್ನಿಸಲು ಶುರುವಾಯ್ತು.

* ಈಚೆಗೆ ತಮಿಳು, ತೆಲುಗು ಚಿತ್ರಗಳು ಸಾವಿರಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತವೆ. ನಾವೂ ಅವರಿಗೆ ಸಮನಾಗಿ ನಿಲ್ಲಬೇಕು ಎಂದೋ ಅವರಿಗೆ ಮೀರಿ ಸಿನಿಮಾ ಬಿಡುಗಡೆ ಮಾಡಬೇಕು ಎಂದೋ ‘ಕೋಟಿಗೊಬ್ಬ 2’ ಚಿತ್ರವನ್ನು ಸಾವಿರದ ಇನ್ನೂರು ಪರದೆಗಳಲ್ಲಿ ಬಿಡುಗಡೆ ಮಾಡುತ್ತಿಲ್ಲ. ಇಷ್ಟೊಂದು ಪರದೆಗಳಲ್ಲಿ ಬಿಡುಗಡೆಯಾದರೆ ಪ್ರೇಕ್ಷಕರು ಬರುತ್ತಾರಾ ಎಂದು ನನಗೆ ಈಗಲೂ ಅನುಮಾನವಿದೆ. ನಾನು ಇಂದಿಗೂ ಮೊದಲ ಷೋಗೆ ಚಿತ್ರಮಂದಿರಕ್ಕೆ ಹೋಗುತ್ತೇನೆ.

ಪ್ರೇಕ್ಷಕ ಏನು ಇಷ್ಟ ಪಡುತ್ತಾನೆ, ಇಷ್ಟ ಪಡುವುದಿಲ್ಲ ಎಂದು ತಿಳಿಯುವುದು ನನ್ನ ಉದ್ದೇಶ. ಒಂದು ಸಿನಿಮಾ ಹಿಟ್ ಆದರೆ ನಾನೇನು ಅಟ್ಟವೇರಿ ಕೂರುವುದಿಲ್ಲ. ಮತ್ತೆ ಮೊದಲಿನಿಂದಲೇ ಹೊಸ ಸಿನಿಮಾ ಆರಂಭಿಸಬೇಕು. ಚಿಕ್ಕವನಿದ್ದಾಗ ಅಮ್ಮ ಹೊಸ ಆಟಿಕೆ ತಂದು ಕೊಟ್ಟಾಗ ಹೇಗೆ ಸಂಭ್ರಮಿಸುತ್ತಿದ್ದೆನೋ ಹಾಗೆಯೇ ಈಗಲೂ ಹೊಸತನ್ನು ಮಾಡುವಾಗ ಸಂಭ್ರಮಿಸುತ್ತೇನೆ. ಈ ಹದಿನಾರು ವರ್ಷಗಳಲ್ಲಿ ನಾನು ನನ್ನ ನಟನೆಯನ್ನು ಎಂಜಾಯ್ ಮಾಡುತ್ತಿದ್ದೇನೆ. ಮುಂದೆಯೂ ಹೀಗೇ ಕೆಲಸ ಮಾಡುವ ಹುಮ್ಮಸ್ಸಿದೆ.* ನಾನು 2000ನೇ ಇಸವಿಯಲ್ಲಿ ಮೊದಲ ಬಾರಿ ನಾಯಕನಾಗಿ ಅಭಿನಯಿಸಿದ್ದು. ಅದಾದ ನಂತರ ಅನೇಕ ಸಿನಿಮಾಗಳು ಬಂದವು. ಕೆಲವು ಗೆದ್ದವು, ಕೆಲವು ಸುಮಾರಾಗಿದ್ದವು, ಕೆಲವು ತುಂಬಾ ಚೆನ್ನಾಗಿ ಹೋದವು, ಇನ್ನು ಕೆಲವು ಬಂದು ಹೋಗಿದ್ದೇ ಗೊತ್ತಾಗಲಿಲ್ಲ. ಆಮೇಲೆ ಕೆಲವು ಬಿಡುಗಡೆಗೂ ಮುನ್ನವೇ ಸದ್ದು ಮಾಡಲು ಆರಂಭಿಸಿದವು. ಈಗ 2016.ಈ ಹದಿನಾರು ವರ್ಷಗಳಲ್ಲಿ ಯಾವುದನ್ನೂ ಹೀಗೇ ಮಾಡಬೇಕು ಎಂದು ಯೋಜಿಸಿದ್ದಿಲ್ಲ. ನಾನು ಇಂದಿಗೂ ಮನೆಯಿಂದ ಹೊರಡುವುದು ನಟನೆಗಾಗಿಯೇ. ಈಗ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗಿದ್ದೂ ನನ್ನ ಪ್ಲ್ಯಾನ್ ಅಲ್ಲ. ಎಷ್ಟು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ ಎನ್ನುವುದಕ್ಕಿಂತ ಎಷ್ಟು ಕಡೆ ಉಳಿದುಕೊಳ್ಳುತ್ತದೆ ಎಂದುದೇ ಮುಖ್ಯ.* ತೆಲುಗಿನ ‘ಈಗ’ ಸಿನಿಮಾ ಮಾಡಿದಾಗ ಯಾರೂ ಈ ಸಿನಿಮಾ ಒಳ್ಳೆಯ ಹೆಸರು ಮಾಡುತ್ತದೆ ಎಂದು ನನಗೆ ಬರೆದು ಕೊಡಲಿಲ್ಲ. ಅದೃಷ್ಟ ಚೆನ್ನಾಗಿತ್ತು. ‘ಫೂಂಕ್’ ಸಿನಿಮಾ ಮಾಡಿದೆ. ಆಗ ನನಗೆ ಕನ್ನಡದಲ್ಲಿ ಸಿನಿಮಾಗಳಿರಲಿಲ್ಲ. ಒಂದೆರಡು ಸಿನಿಮಾಗಳು ಸಾಮಾನ್ಯ ಎನ್ನಿಸಿಕೊಂಡಿದ್ದವು. ನಾನು ಸ್ವಲ್ಪ ಸ್ಲೋ ಆಗಿದ್ದೆ. ಹಿಂದಿಗೆ ಹೋದೆ. ‘ರಣ್’ನಲ್ಲಿ ಅಮಿತಾಭ್ ಬಚ್ಚನ್ ಜೊತೆ ನಟಿಸುವ ಅವಕಾಶ ಬಂತು. ಮುಂದೆ ‘ಮಾಣಿಕ್ಯ’, ‘ರನ್ನ’ ಮಾಡುತ್ತೇನೆ

ಅಂದುಕೊಂಡಿರಲಿಲ್ಲ.

ಕೆ.ಎಸ್. ರವಿಕುಮಾರ್ ಕನ್ನಡಕ್ಕೆ ಬಂದು ನನ್ನ ಸಿನಿಮಾ ನಿರ್ದೇಶನ ಮಾಡುತ್ತಾರೆ ಅಂದುಕೊಂಡಿರಲಿಲ್ಲ. ಅದಕ್ಕೆ ‘ಕೋಟಿಗೊಬ್ಬ 2’ ಶೀರ್ಷಿಕೆ ಇಡುತ್ತೇವೆ ಎಂದು ಗೊತ್ತಿರಲಿಲ್ಲ. ಅದೀಗ 1200 ಪರದೆಗಳಲ್ಲಿ ಪ್ರದರ್ಶನ ಕಾಣುತ್ತದೆ ಎಂಬುದಂತೂ ತಾಯಾಣೆಗೂ ನಾನು ಊಹಿಸಿರಲಿಲ್ಲ.* ಏನಿದು ರೀಮೇಕ್–ಸ್ವಮೇಕ್? ಸಾಹಿತ್ಯ ಕೃತಿಯೊಂದನ್ನು ಸಿನಿಮಾಕ್ಕೆ ಅಳವಡಿಸಿಕೊಳ್ಳುತ್ತೇವೆ. ರೀಮೇಕ್ ಮಾಡುವಾಗಲೂ ಇಷ್ಟವಾದ ಕಥೆಯನ್ನು ತಂದು ಇಲ್ಲಿಗೆ ತಕ್ಕಂತೆ ಅಳವಡಿಸಿಕೊಳ್ಳುತ್ತೇವೆ. ಅಷ್ಟೇ ಅಲ್ಲ, ಅಂಥ ಸಿನಿಮಾಗಳನ್ನು ಯಶಸ್ವಿಗೊಳಿಸಿ ತೋರಿಸಿದ್ದೇವೆ. ನಮ್ಮ ಮನೆಯಲ್ಲಿ ಮಾಡುವ ಅಡುಗೆ ಕೂಡ ರೀಮೇಕ್ ಎಂದು ನನ್ನ ಅನಿಸಿಕೆ. ನನಗೆ ಖುಷಿ ಎನ್ನಿಸಿದ್ದನ್ನು ನಾನು ಮಾಡುತ್ತೇನೆ.ನನ್ನ ಸಿನಿಮಾಗಳಲ್ಲಿ 13–14 ರಿಮೇಕ್. ಇದರಲ್ಲಿ ಶೇಕಡ ತೊಂಬತ್ತರಷ್ಟು ಸಿನಿಮಾ, ಯಾವುದೋ ನಿರ್ಮಾಪಕರು ಕಷ್ಟದಲ್ಲಿದ್ದಾಗ ಅವರಿಗೆ ಸಹಾಯವಾಗಲಿ ಎಂಬ ಕಾರಣಕ್ಕೇ ಮಾಡಿದ್ದು. ನನ್ನ ಎಷ್ಟು ರಿಮೇಕ್ ಚಿತ್ರಗಳಿಗೆ ಸಂಭಾವನೆ ತೆಗೆದುಕೊಂಡಿದ್ದೇನೆ ಎಂದು ಆ ನಿರ್ಮಾಪಕರನ್ನು ಕೇಳಿ. ಎಷ್ಟೋ ಸಿನಿಮಾಗಳಿಗೆ ನಾನೇ ಹಣ ಹಾಕಿದ್ದೂ ಇದೆ. ಅದನ್ನೂ ನಾನು ವಾಪಸ್ ಪಡೆದುಕೊಂಡಿಲ್ಲ. ಅಷ್ಟಾದರೂ ಸುದೀಪ್ ರಿಮೇಕ್ ಮಾಡುತ್ತಾರೆ ಎಂದರೆ ಉತ್ತರಿಸೋದು ಕಷ್ಟ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.