ಸೋಮವಾರ, ಜನವರಿ 27, 2020
16 °C

‘ನಾಟಕಗಳಿಗೆ ಸಮುದಾಯದ ಕಳಕಳಿ ಬೇಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ಕಿಆಲೂರ: ಸಮಾಜವನ್ನು ವಿಶ್ಲೇಷಿಸುವಂತಹ ಅತ್ಯಂತ ಸಮರ್ಥ ವಾಹಕ ಶಕ್ತಿಯಾಗಿರುವ ರಂಗಭೂಮಿಯನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಆರ್ಥಿಕ ಹಿನ್ನಡೆ ಮತ್ತು ಅಸ್ತಿತ್ವದ ಪ್ರಶ್ನೆ ಕಲಾವಿದರನ್ನು ಕಾಡುತ್ತಿದ್ದು ಇಂತಹ ಸಂದಿಗ್ಧ ಸಂದರ್ಭದಲ್ಲಿ ಸಮುದಾಯ ಕಳಕಳಿ ಮೆರೆಯಬೇಕಿದೆ ಎಂದು ಹಾನಗಲ್ಲ ಪಿ.ಎಸ್.ಐ. ಮಹದೇವ ಯಲಿಗಾರ ಅಭಿಪ್ರಾಯಪಟ್ಟರು.ಇಲ್ಲಿಗೆ ಸಮೀಪವಿರುವ ಶೇಷಗಿರಿ ಗ್ರಾಮದ ಸಿ.ಎಂ.ಉದಾಸಿ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಮೈಸೂರಿನ ರಂಗಾಯಣದ ವಿದ್ಯಾರ್ಥಿಗಳ ‘ಹರಿಶ್ಚಂದ್ರ ಕಾವ್ಯ’ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.ರಂಗ ಕಲೆ ಒಂದು ಅಂತಃಸ್ಪೂರ್ತಿ, ಅತ್ಯಂತ ಪರಿಣಾಮಕಾರಿ ಎನಿಸಿರುವ ಸಂವಹನ ಮಾಧ್ಯಮ. ರಂಗ ಕಲೆ ಮನಸ್ಸನ್ನು ಅರಳಿಸುವಂತಹದ್ದಾಗಿದೆ. ಇಂಥ ಕಲೆಯನ್ನು ಸಮುದಾಯ ಸ್ಫೂರ್ತಿದಾಯಕವಾಗಿ ಬೆಳೆಸಬೇಕಿದೆ ಎಂದು ನುಡಿದ ಅವರು ಹಣ ಗಳಿಕೆಯ ಬೆನ್ನು ಬಿದ್ದಿರುವ ಪ್ರಸ್ತುತ ಸಂದರ್ಭದಲ್ಲಿ ಹಿಂಸಾತ್ಮಕ ಸಮಾಜ ಸೃಷ್ಟಿಯಾಗುತ್ತಿದೆ. ಮಕ್ಕಳನ್ನು ಹಣ ತಂದುಕೊಡುವ ಕಾರ್ಖಾನೆ ಎಂದು ಭಾವಿಸಿ ಶಿಕ್ಷಣದ ಹೆಸರಿನಲ್ಲಿ ಅವರ ಮೇಲೆ ಹಣ ಹೂಡಲಾಗುತ್ತಿದೆ ವಿನಃ ಸೃಜನಾತ್ಮಕತೆ, ಪ್ರತಿಭೆ ಗುರುತಿಸುವಲ್ಲಿ ವಿಫಲತೆ ಕಂಡು ಬರುತ್ತಿದೆ ಎಂದು ವಿಷಾದಿಸಿದರು.ಮುಖ್ಯ ಅತಿಥಿ, ಹಾನಗಲ್ಲ ತಹಶೀಲ್ದಾರ್‌ ಡಾ.ನಾಗೇಂದ್ರ ಹೊನ್ನಳ್ಳಿ ಮಾತನಾಡಿ, ಶೇಷಗಿರಿ ಸಾಂಸ್ಕೃತಿಕ ಸಿರಿ ಗ್ರಾಮ. ನಾಡಿಗೆ ರಂಗ ಕಲೆಯ ಮೂಲಕ ಹೆಚ್ಚು ಪರಿಚಿತವಾಗಿರುವ ಈ ಗ್ರಾಮದಲ್ಲಿ ರಂಗಕಲೆ ಸಹಜವಾಗಿಯೇ ಅರಳುತ್ತದೆ. ಒಂದು ಸಾಂಸ್ಕೃತಿಕ ಪರಿಸರವನ್ನು ಸೃಷ್ಟಿಸಿರುವ ಇಲ್ಲಿಯ ಯುವಕರು ಮಾದರಿಯಾಗಿದ್ದಾರೆ ಎಂದು ನುಡಿದ ಅವರು ನಾಳಿನ ಬದುಕಿನ ವೈಭವಕ್ಕೆ ಇಂದೇ ಜಾಗೃತಗೊಳ್ಳಬೇಕಿದೆ. ಕಲೆ, ಸಂಸ್ಕೃತಿ, ಬಂಧುತ್ವವನ್ನು ಗೌರವಿಸುವ ಕಾಲ ಬರಬೇಕಿದೆ ಎಂದರು.  ಅಧ್ಯಕ್ಷತೆ ವಹಿಸಿದ್ದ ಪಿಡಬ್ಲ್ಯೂಡಿ ಎಂಜಿನಿಯರ್ ಬಿ.ವೈ.ಬಂಡಿವಡ್ಡರ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿರುವ ರಂಗ ಕಲೆಯನ್ನು ಉಳಿಸಲು ಮಕ್ಕಳ ಮೂಲಕ ನಡೆಸಲಾಗುತ್ತಿರುವ ಪ್ರಯೋಗಗಳು ಯಶ ಕಾಣುತ್ತಿವೆ. ರಂಗ ಕಲೆ ಉಳಿಯುವುದು ಮಾತ್ರವಲ್ಲ ಬೆಳೆದು ಮತ್ತೆ ಹೊಸ ವೈಭವವನ್ನು ಎದುರು ನೋಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿ ವಹಿಸಬೇಕಿದೆ ಎಂದರು.  ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಜಿ.ಎಂ.ಅಪ್ಪಾಜಿ, ಶೇಷಗಿರಿ ಕಲಾತಂಡದ ಅಧ್ಯಕ್ಷ ಪ್ರಭು ಗುರಪ್ಪನವರ, ರಂಗ ನಿರ್ದೇಶಕರಾದ ಗಣೇಶ ಮರಕಾಲ, ತಲಕಾಡು ಗುರುರಾಜ್, ಪ್ರಮುಖರಾದ ಪಿ.ಎನ್.ನೋಟದ, ಸಿದ್ದಣ್ಣ ಕರಡಿ, ಶಂಕ್ರಪ್ಪ ಗುರಪ್ಪನವರ, ನಾಗಪ್ಪ ಹಾವೇರಿ, ನಾಗಪ್ಪ ಕೊಂಡೋಜಿ, ಸಿದ್ದಪ್ಪ ರೊಟ್ಟಿ, ನಾಗರಾಜ್ ಅಡಿಗ, ಷಣ್ಮುಖಪ್ಪ ಮುಚ್ಚಂಡಿ, ಬಸವರಾಜ್ ಕೋರಿ, ಉಪನ್ಯಾಸಕ ನಾಗರಾಜ ಧಾರೇಶ್ವರ, ಎಂ.ಆರ್.ಹೆಗಡೆ  ಹಾಜರಿದ್ದರು.

ಪ್ರತಿಕ್ರಿಯಿಸಿ (+)