ಗುರುವಾರ , ಫೆಬ್ರವರಿ 25, 2021
17 °C
ಧಾರವಾಡ ಜಿಲ್ಲೆಯಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಕೊರತೆ

‘ನಾಳೆ ಬನ್ನಿ’ ಉತ್ತರ ಕೇಳಿ ಸುಸ್ತಾದ ಗ್ರಾಮಸ್ಥರು !

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

‘ನಾಳೆ ಬನ್ನಿ’ ಉತ್ತರ ಕೇಳಿ ಸುಸ್ತಾದ ಗ್ರಾಮಸ್ಥರು !

ಹುಬ್ಬಳ್ಳಿ: ನಿರ್ಮಲ ಭಾರತ ಅಭಿಯಾನ­ದಡಿ ಶೌಚಾಲಯ ನಿರ್ಮಿಸಿಕೊಳ್ಳಬೇಕೇ ? ನಾಳೆ ಬನ್ನಿ. ವಸತಿ ಯೋಜನೆಯಡಿ ಸೌಲಭ್ಯ ಪಡೆಯಲು ಜಿಪಿಎಸ್‌ ಮಾಡಿಸ­ಬೇಕೇ ? ನಾಳೆ ಬನ್ನಿ. ನರೇಗಾದ ಅಡಿ ಉದ್ಯೋಗ ಬೇಕೆ? ಪಿಡಿಓ ಸಾಹೇಬರಿಲ್ಲ, ನಾಳೆ ಬನ್ನಿ.. !ಧಾರವಾಡ ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯ್ತಿಯಲ್ಲಿ ನಿಮಗೆ ಸಿಗುವ ಸಾಮಾನ್ಯ ಉತ್ತರ ಇದು. ಜಿಲ್ಲೆಯ 144 ಪಂಚಾಯ್ತಿಗಳ ಪೈಕಿ, 51 ಪಂಚಾಯ್ತಿ­ಗಳಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಇಲ್ಲ. ಒಬ್ಬೊಬ್ಬ ಅಧಿಕಾರಿಗೆ ಎರಡು ಮೂರು ಪಂಚಾಯ್ತಿಗಳ ಹೊಣೆ ನೀಡಿ­ರು­ವುದರಿಂದ ಪಿಡಿಓಗಳು ಗ್ರಾಮಸ್ಥರ ಕೈಗೆ ಸುಲಭವಾಗಿ ಸಿಗುತ್ತಿಲ್ಲ.‘ಪಂಚಾಯ್ತಿಯ ಯಾವುದೇ ಕೆಲಸ­ಗಳು ಸುಲಭವಾಗಿ ಆಗುವುದಿಲ್ಲ. ಶೌಚಾ­ಲಯ ನಿರ್ಮಿಸಿಕೊಳ್ಳಲು ಅರ್ಜಿ ಸಲ್ಲಿಸಲು ಒಂದು ತಿಂಗಳಿನಿಂದ ಓಡಾಡುತ್ತಿದ್ದೇನೆ. ಪಿಡಿಓ ಸಿಗುತ್ತಿಲ್ಲ. ಕೇಳಿದರೆ, ಮತ್ತೊಂದು ಪಂಚಾಯ್ತಿಗೆ ಹೋಗಿದ್ದಾರೆ ಎಂದು ಹೇಳುತ್ತಾರೆ. ಇದರಿಂದ ತುಂಬಾ ತೊಂದರೆ­­ಯಾಗಿದೆ’ ಎನ್ನುತ್ತಾರೆ ಹಿರೇನರ್ತಿಯ ಗ್ರಾಮಸ್ಥರೊಬ್ಬರು.‘ಕುಡಿಯುವ ನೀರಿನ ಸಮಸ್ಯೆ ಇರಲಿ, ವಿದ್ಯುತ್‌ ಸಮಸ್ಯೆ ಇರಲಿ, ಪಂಚಾಯ್ತಿಗೆ ಹೇಳಬೇಕೆಂದರೆ ಪಿಡಿಓ ಸಿಗುವುದಿಲ್ಲ. ಜಿಪಿಎಸ್‌ ಮಾಡಿಸಬೇಕು, ಫೋಟೋ ತೆಗೆಸಬೇಕು ಎಂದರೆ ಕಂಪ್ಯೂಟರ್ ಆಪರೇಟರ್‌ಗಳಿಗೆ ಕೇಳಬೇಕು. ಅವರೂ ಲಂಚ ಕೇಳುತ್ತಾರೆ’ ಎಂದು ಅವರು ಆರೋಪಿಸುತ್ತಾರೆ.ಕುಂದಗೋಳ ತಾಲ್ಲೂಕಿನಲ್ಲಿ 26 ಪಂಚಾಯ್ತಿಗಳಿದ್ದರೆ, ಪಿಡಿಓಗಳ ಸಂಖ್ಯೆ ಕೇವಲ 9. ಒಬ್ಬ ಪಿಡಿಓ ಸರಾಸರಿ ಮೂರು ಪಂಚಾಯ್ತಿಗಳನ್ನು ನೋಡಿಕೊ­ಳ್ಳು­ತ್ತಿದ್ದಾರೆ. ಹೀಗಾಗಿ, ಪಂಚಾಯ್ತಿ ಕಾರ್ಯಗಳು ವಿಳಂಬವಾಗಿ ನಡೆಯುತ್ತವೆ ಎನ್ನುತ್ತಾರೆ ಗ್ರಾಮಸ್ಥರು.‘ನನಗೆ ಹಿರೇನರ್ತಿ ಮತ್ತು ಯರ­ಗುಪ್ಪಿ ಪಂಚಾಯ್ತಿಗಳ ಹೊಣೆ ನೀಡಲಾ­ಗಿದೆ. ಚಾಕಲಬ್ಬಿ ಪಂಚಾಯ್ತಿಯ ಉಸ್ತು­ವಾರಿ ತೆಗೆದುಕೊಳ್ಳಿ ಎಂದೂ ಆದೇಶ ಬಂದಿದೆ. ಇನ್ನಷ್ಟೇ ಆ ಪಂಚಾಯ್ತಿಯ ಹೊಣೆ ತೆಗೆದುಕೊಳ್ಳ­ಬೇಕು’ ಎನ್ನುತ್ತಾರೆ ಪಿಡಿಓ ತುಪ್ಪದಗೌಡ.‘ಎರಡು ಮೂರು ಪಂಚಾಯ್ತಿ ನಿಭಾಯಿಸುವುದು ತ್ರಾಸ ಎನಿಸುತ್ತದೆ. ಆದರೂ, ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಿ­ದ್ದೇನೆ. ಕಾರ್ಯದರ್ಶಿಗಳು, ಕ್ಲರ್ಕ್‌ ಮತ್ತು ಕಂಪ್ಯೂಟರ್‌ ಆಪರೇಟರ್‌ಗಳು ಕೆಲಸ ನೋಡಿಕೊಳ್ಳುತ್ತಾರೆ. ಯಾರಿಗೂ ತೊಂದ­ರೆ­ಯಾಗಿಲ್ಲ’ ಎಂದು ಅವರು ಹೇಳುತ್ತಾರೆ.‘ಸುಮಾರು ಎರಡು– ಮೂರು ವರ್ಷ­ಗಳಿಂದ ಇದೇ ಸ್ಥಿತಿ ಇದೆ. ಪಿಡಿಓಗಳು ಸಿಗದಿರುವ ಬಗ್ಗೆ ದೂರುಗಳು ಬರುತ್ತಿವೆ. ಗ್ರೇಡ್‌ 2 ಕಾರ್ಯದರ್ಶಿಗಳ ಕೊರತೆಯೂ ಇದೆ. 21 ಹುದ್ದೆಗಳ ಪೈಕಿ ಕೇವಲ 11 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ತಾಲ್ಲೂಕಿ­ನಲ್ಲಿ ಕ್ಲರ್ಕ್‌ಗಳು ಏಳು ಜನ ಇರಬೇಕಿತ್ತು. ಆರು ಜನ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಕುಂದಗೋಳದ ಕಾರ್ಯ­ನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಎಸ್‌. ಮೇಟಿ ತಿಳಿಸಿದರು.‘ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ನೇರ ನೇಮಕಾತಿ ಮೂಲಕ 14 ಮತ್ತು ಬಡ್ತಿ ಮೂಲಕ 30 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ಗ್ರೇಡ್‌ 2 ಕಾರ್ಯದರ್ಶಿಗಳನ್ನು ಪಿಡಿಓ ಹುದ್ದೆಗೆ ಭರ್ತಿ ಮಾಡಿಕೊಳ್ಳಬಹುದು. ಆದರೆ, ಅವರಿಗೆ ಎರಡು ವರ್ಷ ಅನುಭವ ಇದ್ದು, ನಿಗದಿ ಪಡಿಸಿದ ಇಲಾಖಾ ಪರೀಕ್ಷೆಯಲ್ಲಿ ಅವರು ಉತ್ತೀರ್ಣರಾಗಬೇಕಾಗುತ್ತದೆ. ಅನುಭವ ಕೊರತೆ ಮತ್ತು ಈ ಪರೀಕ್ಷೆ ಉತ್ತೀರ್ಣ ಮಾಡಿಲ್ಲದ ಕಾರಣ ಬಡ್ತಿ ನೀಡುವ ಪ್ರಕ್ರಿಯೆ ವಿಳಂಬವಾಗಿದೆ’ ಎಂದು ಜಿಲ್ಲಾ ಪಂಚಾಯ್ತಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.