ಭಾನುವಾರ, ಫೆಬ್ರವರಿ 28, 2021
30 °C

‘ನಿರ್ಲವಣೀಕರಣ’ ಎಂಬ ಮರೀಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನಿರ್ಲವಣೀಕರಣ’ ಎಂಬ ಮರೀಚಿಕೆ

‘ಆಕಾಶ ನೋಡೋಕೆ ನೂಕುನುಗ್ಗಲೇ’ ಎಂಬಂತೆ ಭೂಮಿಯ ಬಹುಪಾಲನ್ನು ಆಕ್ರಮಿಸಿಕೊಂಡಿರುವ ಸಮುದ್ರದ ನೀರನ್ನು ಬಳಸಲು ಹಿಂದೆ ಮುಂದೆ ಯೋಚಿಸಬೇಕೆ?  ಖಂಡಿತ ಹೌದು. ಏಕೆಂದರೆ ಬಳಕೆಯ ರೀತಿ ಪ್ರಶ್ನಾರ್ಹವಾಗಿದೆ.ಜಲಸಾರಿಗೆ, ಮೀನುಗಳೂ ಸೇರಿದಂತೆ ಹಲವು ಜಲಚರಗಳನ್ನು ಪಡೆಯಲು ಮತ್ತು ಉಪ್ಪು ತಯಾರಿಕೆಯಂತಹ ಹಲವು ಬಹುಮುಖ್ಯ ಕಾರ್ಯಗಳಿಗೆ, ಮಾನವನು ಸಮುದ್ರದ ಮೇಲೆ ಅವಲಂಬಿತ.ಇತ್ತೀಚಿನವರೆಗೂ, ಸಮುದ್ರದ ಉಪ್ಪುನೀರನ್ನು ಕುಡಿಯಲು ಬಳಸುತ್ತಿರಲಿಲ್ಲವಾದರೂ ರಾಸಾಯನಿಕ ಕಾರ್ಖಾನೆಗಳಲ್ಲಿ, ತರಂಗ ವಿದ್ಯುತ್ ಉತ್ಪಾದನೆ ಮತ್ತಿತರ ಕೆಲವೆಡೆ ಬಳಸುತ್ತಿದ್ದುದು ಉಂಟು. ಅದರೆ ಬೆಳೆಯುತ್ತಿರುವ ಜನಸಂಖ್ಯೆ ಮತ್ತು ವೇಗವಾಗಿ ದ್ವಿಗುಣಗೊಳ್ಳುತ್ತಲೇ ಸಾಗಿರುವ ಜನರ ಮಿತಿಮೀರಿದ ಆವಶ್ಯಕತೆಗಳನ್ನು ಪೂರೈಸಲು, ಲಭ್ಯವಿರುವ ಸಿಹಿನೀರು ಸಾಲುತ್ತಿಲ್ಲ. ಹಾಗಾಗಿ, ಉಪ್ಪುನೀರನ್ನು ಸಿಹಿನೀರಾಗಿ ರೂಪಾಂತರಗೊಳಿಸಬಹುದಲ್ಲವೆ ಎಂದು ಕಾರ್ಯಪ್ರವೃತ್ತನಾಗಿದ್ದಾನೆ ಮನುಷ್ಯ.ಹಾಗೆಂದು, ನೀರಿನಿಂದ ಉಪ್ಪನ್ನು ಬೇರ್ಪಡಿಸುವುದು ಅಥವಾ ‘ನಿರ್ಲವಣೀಕರಣ’ವೇನು ನಿನ್ನೆ ಮೊನ್ನೆಯ ತಂತ್ರಜ್ಞಾನವಲ್ಲ. ಪುರಾತನ ಭಾರತೀಯರು, ಗ್ರೀಕರು ಈ ವಿಧಾನವನ್ನು ಎಂದೋ ಬಳಸಿದ್ದರು. ಆದರೆ, ಅಂದು ಯಾವುದೋ ಒಂದು ಪ್ರಯೋಗಕ್ಕೆಂದು ಸಣ್ಣ ಪ್ರಮಾಣದಲ್ಲಿ ಉಪ್ಪುನೀರನ್ನು ಸಿಹಿನೀರನ್ನಾಗಿಸುವುದಕ್ಕೂ, ಇಂದು ಲಕ್ಷಾಂತರ ಲೀಟರ್‌ಗಟ್ಟಲೆ ನೀರಿನ ನಿರ್ಲವಣೀಕರಣ ಮಾಡುವುದಕ್ಕೂ ಅಜಗಜಾಂತರ ವ್ಯತ್ಯಾಸ.ಸಾಮಾನ್ಯವಾಗಿ, ‘ಅರೆಪ್ರವೇಶಸಾಧ್ಯ’ ಪದರಗಳನ್ನು ಅಂದರೆ ಕೆಲವು ಬಗೆಯ ಕಣಗಳನ್ನು ತನ್ನ ಮೂಲಕ ಹಾಯಲು ಬಿಟ್ಟು, ಇನ್ನಿತರ ಬಗೆಯ ಕಣಗಳನ್ನು ತಡೆಹಿಡಿಯುವ ವಿಶಿಷ್ಟ ಶೋಧಕ ಪದರಗಳನ್ನು ಬಳಸಿ ನೀರಿನಿಂದ ಉಪ್ಪನ್ನು ಬೇರ್ಪಡಿಸುತ್ತಾರೆ; ಆದರೆ ದೊಡ್ಡ ಪ್ರಮಾಣದಲ್ಲಿ ಈ ಪ್ರಕ್ರಿಯೆಯನ್ನು ನಡೆಸುವಾಗ ದೊಡ್ಡ ಪ್ರಮಾಣದ ವಿದ್ಯುತ್ ಶಕ್ತಿ ಬೇಕಾಗುತ್ತದೆ. ಅಷ್ಟೇ ಅಲ್ಲದೆ, 2.5 ಲೀಟರ್ ಉಪ್ಪುನೀರಿನಿಂದ ಕೇವಲ 1 ಲೀಟರ್ ಸಿಹಿನೀರು ದೊರಕುತ್ತದೆ; ಅಂದರೆ ಅಪಾರ ವಿದ್ಯುತ್ ಶಕ್ತಿಯ ಬಳಕೆಯ ಜೊತೆಗೆ  ಪ್ರತಿ 2.5 ಲೀಟರ್ ಉಪ್ಪುನೀರಿಗೆ 1.5 ಲೀಟರ್ ತ್ಯಾಜ್ಯ ನೀರಿನ ಉತ್ಪತ್ತಿ. ಪರಿಸರದ ನೆಮ್ಮದಿಗೆಡೆಸಲು ಇಷ್ಟು ಸಾಕು. ಸಮುದ್ರದ ನೀರೇ ಸಮುದ್ರಕ್ಕೆ ಹಿಂತಿರುಗುತ್ತದೆ; ಸ್ವಲ್ಪ ಹೆಚ್ಚಿನ ಉಪ್ಪಿನಂಶದೊಂದಿಗೆ. ಅದರಲ್ಲೇನು ಮಹಾ ಅಪಾಯ ಎನ್ನುತ್ತೀರಾ? ತುಸು ಕೂಲಂಕಷವಾಗಿ ಗಮನಿಸಿದರೆ ನಿಮಗೇ ತಿಳಿಯುತ್ತದೆ. ಮೊದಲನೆಯದಾಗಿ, ಸಮುದ್ರ ಸೇರುತ್ತಿರುವುದು ಒಂದೋ, ಎರಡೋ, ನೂರೋ, ಸಾವಿರವೋ ಲೀಟರ್ ನೀರಲ್ಲ; ಬದಲಿಗೆ ಲಕ್ಷಾಂತರ ಲೀಟರ್‌ಗಟ್ಟಲೆ ನೀರು.ಈ ಪ್ರಕ್ರಿಯೆಯಿಂದ ಉತ್ಪತ್ತಿಯಾದ ತ್ಯಾಜ್ಯ ನೀರು, ಅತಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪನ್ನು ಹೊಂದಿದ್ದು, ಲಕ್ಷಾಂತರ ಲೀಟರ್‌ಗಟ್ಟಲೆ ಇಂತಹ ನೀರನ್ನು ಸಮುದ್ರಕ್ಕೆ ಸೇರಿಸಿದಾಗ ಅಲ್ಲಿನ ಜೀವಜಂತುಗಳ ಜೈವಿಕಚಕ್ರವು ಅಸಮತೋಲನಕ್ಕೆ ತುತ್ತಾಗಿ, ಒಟ್ಟಾರೆಯಾಗಿ ಸಮುದ್ರದ ಸ್ವಾಸ್ಥ್ಯ ಕೆಡುತ್ತಾ ಹೋಗುತ್ತದೆ. ಇದರಿಂದ ಸಮುದ್ರದ ಆಸುಪಾಸಿನ ಪರಿಸರವೂ ನಿಧಾನವಾಗಿ ಬದಲಾಗುತ್ತಾ ಸಾಗುತ್ತದೆ. ಈ ಬದಲಾವಣೆಗಳು ಒಮ್ಮೆಲೇ ಗಮನಕ್ಕೆ ಬರುವುದಿಲ್ಲವಾದ್ದರೂ, ನಿಸರ್ಗದಲ್ಲಾಗುತ್ತಿರುವ ಏರುಪೇರುಗಳಿಗೆ ತನ್ನದೇ ಆದ ಸಣ್ಣಪ್ರಮಾಣದ ಕೊಡುಗೆ ನೀಡುವುದು ಖಂಡಿತ.ಸುಲಭವಾಗಿ ಜನರ ಸಿಹಿನೀರಿನ ಬವಣೆ ನೀಗುತ್ತದೆ ಎಂಬಂತೆ ಬಿಂಬಿಸಲಾಗುತ್ತಿರುವ ‘ನಿರ್ಲವಣೀಕರಣ’ ಮರೀಚಿಕೆಯೇ ಸರಿ; ಏಕೆಂದರೆ, ಸದ್ಯಕ್ಕೆ ಕಣ್ಣ ಮುಂದಿರುವ ಪರಿಹಾರದಂತೆ ಕಂಡುಬಂದರೂ, ಒಳಹೊಕ್ಕಿ ನೋಡಿದಾಗ ಪರಿಹಾರವೆಂಬ ಮುಖವಾಡದ ಹಿಂದಿನ ಸಮಸ್ಯೆ ಬೆಳಕಿಗೆ ಬರುತ್ತದೆ.ಕುಡಿಯುವ ನೀರಿನ ಬವಣೆ ಎದುರಾಗಿರುವುದು ನಾವು ನಿಸರ್ಗದಿಂದ ದೂರ ಸರಿಯುತ್ತಿರುವ ಕಾರಣದಿಂದ; ನಾವು ನಿಸರ್ಗಕ್ಕೆ ಹತ್ತಿರವಾಗುವಂತಹ ಸುಲಭೋಪಾಯಗಳಾದ ಮಳೆನೀರು ಸಂಗ್ರಹ, ಲಭ್ಯವಿರುವ ಸಿಹಿನೀರಿನ ಮೂಲಗಳ ಸಮರ್ಪಕ ನಿರ್ವಹಣೆ, ಪಾಳುಬಿದ್ದ ಬಾವಿಗಳ-ತ್ಯಾಜ್ಯ ತುಂಬಿದ ಕೆರೆಗಳ ಪುನಶ್ಚೇತನದಿಂದ ಪವಾಡಸದೃಶವಾಗಿ ಸಿಹಿನೀರಿನ ಪ್ರಮಾಣ ಮತ್ತು ಗುಣಮಟ್ಟದಲ್ಲಿ ಏರಿಕೆ ಕಂಡುಕೊಳ್ಳಬಹುದು. ಸಮಸ್ಯೆಗೆ ಪರಿಹಾರ ನಮ್ಮ ಕೈಯಲ್ಲೇ ಇದೆ; ನಾವು ತುಸು ಪ್ರಜ್ಞಾಪೂರ್ವಕವಾಗಿ ಕಾರ್ಯಪ್ರವೃತ್ತರಾಗಬೇಕಷ್ಟೇ.

-ಕ್ಷಮಾ ವಿ. ಭಾನುಪ್ರಕಾಶ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.