ಗುರುವಾರ , ಫೆಬ್ರವರಿ 25, 2021
29 °C
ಉಚಿತ ಉಪನ್ಯಾಸ ತರಗತಿಗಳ ಸಮಾರೋಪ

‘ನಿಸ್ವಾರ್ಥ ಸೇವೆ ಮಾಡುವವರನ್ನು ಗುರುತಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನಿಸ್ವಾರ್ಥ ಸೇವೆ ಮಾಡುವವರನ್ನು ಗುರುತಿಸಿ’

ಬೆಂಗಳೂರು: ‘ಸಮಾಜದಲ್ಲಿ ನಿಸ್ವಾರ್ಥವಾಗಿ ಸೇವೆ ಮಾಡುವವರನ್ನು ಗುರುತಿಸುವ ಕೆಲಸವಾಗಬೇಕು’ ಎಂದು  ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.ಕಬೀರ್ ಟ್ರಸ್ಟ್‌ ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ 30ನೇ ಉಚಿತ ಉಪನ್ಯಾಸ ತರಗತಿಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.‘ಟ್ರಸ್ಟ್‌ನ ಅಧ್ಯಕ್ಷ ಟಿ.ಪ್ರಭಾಕರ್ ಅವರು ಯಾವುದೇ ಪ್ರತಿಫಲ ಬಯಸದೆ ಕಳೆದ 30 ವರ್ಷಗಳಿಂದ ವಿದ್ಯಾದಾನ ಮಾಡುತ್ತಿದ್ದಾರೆ. ಇದು ಶ್ಲಾಘನೀಯ ಕೆಲಸ’ ಎಂದರು. ‘ಸಂತ ಕಬೀರ್ ಅವರು ದೇಶ ಕಂಡ ಮಹಾನ್ ಮಾನವತಾವಾದಿ. ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಕಬೀರ್ ಅವರ ಚಿಂತನೆಗಳು, ಆದರ್ಶಗಳು ಪ್ರಸ್ತುತವಾಗಿವೆ’ ಎಂದು ಹೇಳಿದರು.ಗರುಡಾ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಉದಯ್ ಬಿ.ಗರುಡಾಚಾರ್ ಮಾತನಾಡಿ, ‘21ನೇ ಶತಮಾನ ಸ್ಪರ್ಧಾತ್ಮಕ ಯುಗವಾಗಿರುವುದರಿಂದ ಮಕ್ಕಳು ಜ್ಞಾನ ಸಂಪಾದನೆಗೆ ಹೆಚ್ಚು ಒತ್ತು ನೀಡಬೇಕು ಮತ್ತು ಸಕಾರಾತ್ಮಕ 

ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.‘ಕಬೀರ್ ಟ್ರಸ್ಟ್‌ ವಿದ್ಯಾರ್ಥಿಗಳಿಗೆ ಉಚಿತ ಉಪನ್ಯಾಸ ತರಗತಿಗಳನ್ನು ಏರ್ಪಡಿಸುವ ಮೂಲಕ ಉತ್ತಮ ಕೆಲಸ ಮಾಡುತ್ತಿದೆ. ಟ್ರಸ್ಟ್‌ಗೆ ಗರುಡಾ ಫೌಂಡೇಶನ್ ವತಿಯಿಂದ ಅಗತ್ಯ ನೆರವು ನೀಡಲಾಗುವುದು’ ಎಂದು ತಿಳಿಸಿದರು.ಟಿ.ಪ್ರಭಾಕರ್ ಮಾತನಾಡಿ, ‘1963ನೇ ಸಾಲಿನಲ್ಲಿ ನಾನು ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣನಾಗಿದ್ದೆ. ಆಗ ಗಾಂಧಿಬಜಾರ್‌ನಲ್ಲಿ ಅಣ್ಣಯ್ಯ ಎಂಬುವವರು ‘ಯುವಕ ಸಂಘ’ದ ಮೂಲಕ ಉಚಿತ ತರಗತಿಗಳನ್ನು ಏರ್ಪಡಿಸುತ್ತಿದ್ದರು. ನಾನು ಆ ತರಗತಿಗಳ ಪ್ರಯೋಜನ ಪಡೆದಿದ್ದೆ’ ಎಂದು ಅವರು ಹೇಳಿದರು.‘ಹೀಗಾಗಿ ನನಗೂ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎಂಬ ಆಲೋಚನೆ ಬಂತು. 1986ರಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಉಚಿತ ತರಗತಿಗಳನ್ನು ಆಯೋಜಿಸಿದೆ. ಆರಂಭದಲ್ಲಿ 50 ವಿದ್ಯಾರ್ಥಿಗಳಿದ್ದರು. ಈಗ 822 ಮಕ್ಕಳು ತರಗತಿಗಳ ಪ್ರಯೋಜನ

ಪಡೆಯುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.