ಬುಧವಾರ, ಜೂನ್ 16, 2021
21 °C
ಕುಮಾರ್‌ ಬಂಗಾರಪ್ಪ ಅವರಿಗೆ ಕೆಪಿಸಿಸಿ ಅಧ್ಯಕ್ಷರ ಮನವಿ

‘ಪಕ್ಷ ತೊರೆಯುವ ನಿರ್ಧಾರ ಬೇಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಪಕ್ಷದ ಟಿಕೆಟ್‌ ದೊರೆತಿಲ್ಲ ಎಂಬ ಕಾರಣಕ್ಕೆ ಕುಮಾರ್‌ ಬಂಗಾರಪ್ಪ ಅವರು ಕಾಂಗ್ರೆಸ್‌ ತೊರೆ­ಯುವ ನಿರ್ಧಾರ ಕೈಗೊಳ್ಳಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.­ಪರಮೇಶ್ವರ್‌ ಮನವಿ ಮಾಡಿದರು.ಪಕ್ಷದ ಕಚೇರಿಯಲ್ಲಿ ಶುಕ್ರವಾರ ಬೆಳಿಗ್ಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ನಂದನ್‌ ನಿಲೇಕಣಿ ಅವರಿಗೆ ‘ಬಿ ಫಾರ್ಮ್’ ವಿತರಿಸಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಪರಮೇಶ್ವರ್‌, ‘ಎಐಸಿಸಿ ಪ್ರಕಟಿಸಿರುವ ಪಟ್ಟಿಯ ಪ್ರಕಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಂಜುನಾಥ ಭಂಡಾರಿ ಅವರಿಗೆ ‘ಬಿ ಫಾರ್ಮ್’ ವಿತರಿಸಲಾಗಿದೆ. ಅಭ್ಯರ್ಥಿ-­ಯನ್ನು ಬದಲಾವಣೆ ಮಾಡುವ ಅಧಿಕಾರ ತಮ್ಮ ವ್ಯಾಪ್ತಿಯಲ್ಲಿ ಇಲ್ಲ. ಅದು ಹೈಕಮಾಂಡ್‌ಗೆ ಬಿಟ್ಟ ವಿಷಯ’ ಎಂದರು.

ಕುಮಾರ್‌ ಬಂಗಾರಪ್ಪ ಕೂಡ ಲೋಕ­ಸಭಾ ಚುನಾವಣೆ ಅಭ್ಯರ್ಥಿಯಾಗಲು ಸಮರ್ಥರಿದ್ದಾರೆ.ಕುಮಾರ್‌ ಅವರು ತಮ್ಮನ್ನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮಗೇ ಟಿಕೆಟ್‌ ನೀಡು­ವಂತೆ ಬೇಡಿಕೆ ಇಟ್ಟಿದ್ದಾರೆ. ಈ ವಿಷಯ­ವನ್ನು ಪಕ್ಷದ ಹೈಕಮಾಂಡ್‌ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿ­ಸ­ಬೇಕಾದ ಹೊಣೆಗಾರಿಕೆ ಕುಮಾರ್‌ ಅವರ ಮೇಲಿದೆ. ಅವರು ಪಕ್ಷ ತೊರೆಯುವಂತಹ ತಪ್ಪು ನಿರ್ಧಾರ­ಗಳನ್ನು ಕೈಗೊಳ್ಳಬಾರದು. ಈ ಸಂಬಂಧ ಅವರ ಜೊತೆ ಮಾತುಕತೆ ನಡೆಸ­ಲಾಗುವುದು ಎಂದರು.ಪಕ್ಷದಲ್ಲೇ ಉಳಿಯುವ ವಿಶ್ವಾಸ: ಜಾಫರ್‌ ಷರೀಫ್‌ ಮತ್ತು ಎಚ್‌.ಟಿ.­ಸಾಂಗ್ಲಿಯಾನ ಅವರು ಜೆಡಿಎಸ್‌ ಸೇರಲು ಮುಂದಾಗಿರುವ ಕುರಿತು ಪ್ರಶ್ನಿಸಿದಾಗ, ‘ಇಬ್ಬರೂ ಕಾಂಗ್ರೆಸ್‌ನ ಹಿರಿಯ ನಾಯಕರು. ಅವರ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದು, ಪಕ್ಷ ತೊರೆಯಬಾರದು ಎಂದು ಮನವಿ ಮಾಡಿದ್ದೇವೆ. ಇಬ್ಬರೂ ಪಕ್ಷದಲ್ಲೇ ಉಳಿಯುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಉತ್ತರಿಸಿದರು.‘ಷರೀಫ್‌ ಅವರು ಮೆಕ್ಕಾ ಯಾತ್ರೆಗೆ ತೆರಳಿದ್ದಾರೆ. ಯಾತ್ರೆ ಮುಗಿಸಿ ಬಂದ ಬಳಿಕ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ. ಕಾಂಗ್ರೆಸ್‌ನಲ್ಲೇ ಮುಂದು­ವರಿಯುವ ಬುದ್ಧಿಯನ್ನು ಅಲ್ಲಾಹು ಅವರಿಗೆ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದರು.ಸಂಸದ ಡಿ.ಬಿ.ಚಂದ್ರೇಗೌಡ ಮತ್ತು ಮಾಜಿ ಸಚಿವ ಪಿ.ಜಿ.ಆರ್‌. ಸಿಂಧ್ಯ ಅವರು ಕಾಂಗ್ರೆಸ್‌ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿ ಕುರಿತು ಕೇಳಿದಾಗ, ‘ಅಂತಹ ಮಾಹಿತಿ ನನಗೆ ಗೊತ್ತಿಲ್ಲ. ಇಬ್ಬರೂ ಹಿರಿಯ ನಾಯಕರು. ಅವರು ಕಾಂಗ್ರೆಸ್‌ ಸೇರಲು ಇಚ್ಛಿಸಿದಲ್ಲಿ ಹೈಕ­ಮಾಂಡ್ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.ಕಾಂಗ್ರೆಸ್‌ಗೆ ಸೇರ್ಪಡೆ: ಕೆಜೆಪಿ ಉಪಾಧ್ಯಕ್ಷ ಜಬ್ಬಾರ್‌ ಖಾನ್‌ ಹೊನ್ನಳ್ಳಿ, ಮುಖಂಡ ಬಂಗಾರೇರ ಹಿರೇಮಠ, ಜೆಡಿಎಸ್‌ ಮುಖಂಡ ಇಸ್ಮಾಯಿಲ್‌ ತಮಟಗಾರ ಮತ್ತಿತರರು ಇದೇ ವೇಳೆ ಕಾಂಗ್ರೆಸ್‌ ಸೇರಿದರು. ವಿಧಾನ ಪರಿಷತ್‌ನ ಪಕ್ಷೇತರ ಸದಸ್ಯ ರಘು ಆಚಾರ್‌ ಅವರು ಶನಿವಾರ ಕಾಂಗ್ರೆಸ್‌ ಸೇರಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.