‘ಪಠಾಣ್ಕೋಟ್ ದಾಳಿ ಅಕ್ಷಮ್ಯ’

ವಾಷಿಂಗ್ಟನ್ (ಪಿಟಿಐ): ಪಠಾಣ್ಕೋಟ್ ಮೇಲೆ ನಡೆದದ್ದು ‘ಕ್ಷಮಿಸಲು ಸಾಧ್ಯವಿಲ್ಲದಂಥ’ ಭಯೋತ್ಪಾದನಾ ದಾಳಿ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೇಳಿದರು. ಪಾಕಿಸ್ತಾನವು ತನ್ನ ನೆಲದಲ್ಲಿರುವ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಕಟ್ಟುನಿಟ್ಟಿನ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ತಾಕೀತು ಮಾಡಿದರು.
ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು, ಅಮೆರಿಕ–ಭಾರತದ ಬಾಂಧವ್ಯ ಹಾಗೂ ಭಯೋತ್ಪಾದನೆಯ ವಿರುದ್ಧ ಪಾಕ್ ಕೈಗೊಳ್ಳಬೇಕಾದ ಕ್ರಮಗಳ ಪಟ್ಟಿ ಮಾಡಿದರು. ‘ಪಠಾಣ್ಕೋಟ್ ದಾಳಿಯ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ಜತೆ ಮಾತುಕತೆ ನಡೆಸಿ, ಉಭಯ ದೇಶಗಳಲ್ಲಿರುವ ಭಯೋತ್ಪಾದನೆ ಮತ್ತು ಹಿಂಸಾತ್ಮಕ ಚಟುವಟಿಕೆಗಳನ್ನು ಎದುರಿಸುವ ಕುರಿತು ಚರ್ಚಿಸಿರುವುದು ಶ್ಲಾಘ ನೀಯ’ ಎಂದರು.
‘2014ರ ಪೆಶಾವರ ದಾಳಿ ನಂತರ, ಪಾಕ್ ಪ್ರಧಾನಿ ನವಾಜ್ ಷರೀಫ್, ತಮ್ಮದೇ ದೇಶದಲ್ಲಿ ಸುರಕ್ಷತೆ ಸ್ಥಿರವಾಗಿಲ್ಲ ಎಂಬುದನ್ನು ಗುರುತಿಸಿದ್ದಾರೆ. ಹಾಗಾಗಿ, ತಮ್ಮ ನೆಲದಲ್ಲಿರುವ ಎಲ್ಲಾ ಭಯೋತ್ಪಾ ದನಾ ಸಂಘಟನೆಗಳನ್ನು ನಿರ್ನಾಮ ಮಾಡುವ ಶಪಥ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಪಾಕಿಸ್ತಾನ ಕೆಲವು ನಿರ್ದಿಷ್ಟ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಕ್ರಮ ಕೈಗೊಂಡಿರುವುದನ್ನು ನಾವು ನೋಡಿದ್ದೇವೆ’ ಎಂದರು.
‘ಪಾಕ್ ತನ್ನ ನೆಲದಲ್ಲಿ ಕಾರ್ಯೋನ್ಮುಖವಾಗಿರುವ ಉಗ್ರ ಸಂಘಟನೆಗಳನ್ನು ನಿರ್ನಾಮ ಮಾಡಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತದೆ ಮತ್ತು ಈ ನಿಟ್ಟಿನಲ್ಲಿ ಈಗಾಗಲೇ ಅದು ಕಾರ್ಯ ತತ್ಪರವಾಗಿದೆ. ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಶತಮಾನದ ಒಪ್ಪಂದ. ಉಭಯ ದೇಶಗಳ ನಡುವೆ ಸಹಯೋಗ ಸಾಧಿಸುವ ಬಗ್ಗೆ ಮೋದಿ ಹೆಚ್ಚಿನ ಉತ್ಸಾಹ ತೋರಿದ್ದಾರೆ. ಭದ್ರತೆಗೆ ಸಂಬಂಧಿಸಿದಂತೆ ಇಬ್ಬರೂ ನಿಕಟವಾಗಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದೇವೆ’ ಎಂದು ಒಬಾಮ ಹೇಳಿದ್ದಾರೆ.
‘ಅಮೆರಿಕ, ಭಾರತದ ಪಾಲಿಗೆ ಉತ್ತಮ ಪಾಲುದಾರ ರಾಷ್ಟ್ರವಾಗಲಿದೆ ಎನ್ನುವ ನಂಬಿಕೆ ನನ್ನದು. ಮುಂದಿನ ಪೀಳಿಗೆ ಹಿಂತಿರುಗಿ ನೋಡಿದಾಗ ವಿಶ್ವದಲ್ಲೇ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಎರಡು ರಾಷ್ಟ್ರಗಳು ಜಾಗತಿಕ ಪಾಲುದಾರಿಕೆ ಹೊಂದಿದ್ದವು ಎಂಬುದನ್ನು ನೆನಪಿಸಿಕೊಳ್ಳಬೇಕು. ನನ್ನ ಅಧ್ಯಕ್ಷೀಯ ಅವಧಿಯ ಕೊನೆಯಲ್ಲಿ ಭಾರತದೊಂದಿಗೆ ಮತ್ತಷ್ಟು ಬಾಂಧವ್ಯ ವೃದ್ಧಿಗೆ ಒತ್ತುನೀಡುತ್ತೇನೆ’ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.