ಸೋಮವಾರ, ಜೂನ್ 21, 2021
21 °C
ಅನ್ನಭಾಗ್ಯ ಅಕ್ಕಿ ಸರಬರಾಜಿನಲ್ಲಿ ವ್ಯತ್ಯಯ

‘ಪಡಿತರ ಖಾತರಿ’ಗೆ ಆರಂಭದಲ್ಲೇ ವಿಘ್ನ

ಪ್ರಜಾವಾಣಿ ವಾರ್ತೆ/ ಚೇತನರಾಂ ಇರಂತಕಜೆ Updated:

ಅಕ್ಷರ ಗಾತ್ರ : | |

ಸುಳ್ಯ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ `ಅನ್ನಭಾಗ್ಯ' ಫಲಾನುಭವಿಗಳಿಗೆ ಸರಿಯಾಗಿ ತಲುಪಬೇಕು ಎನ್ನುವ ಉದ್ದೇಶದಿಂದ ಕಳೆದ ತಿಂಗಳು ಜಾರಿಗೆ ಬಂದ `ಪಡಿತರ ಖಾತರಿ' ಯೋಜನೆಗೆ ಆರಂಭದಲ್ಲೇ ವಿಘ್ನಗಳು ಎದುರಾಗಿವೆ.ಪ್ರತಿ ತಿಂಗಳ 1ನೇ ತಾರೀಕಿನಿಂದ 10ನೇ ತಾರೀಕಿನವರೆಗೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಅಕ್ಕಿ, ಸಕ್ಕರೆ ಹಾಗೂ ಗೋಧಿಯನ್ನು ಬಿಪಿಎಲ್ ಪಡಿತರದಾರರಿಗೆ ವಿತರಿಸ­ಬೇಕು ಎಂಬುದು ಈ ಯೋಜನೆಯ ಮುಖ್ಯ ಉದ್ದೇಶ. ಇದಕ್ಕೆ ಬೇಕಾದ ಪಡಿತರವನ್ನು ಹಿಂದಿನ ತಿಂಗಳ ಕೊನೆಯ ದಿನದೊಳಗೆ ಪಡಿತರ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಂಗ್ರಹಿಸಿಡಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಫೆಬ್ರವರಿ ತಿಂಗಳಲ್ಲಿ 1ನೇ ತಾರೀಕಿಗೆ ಸುಳ್ಯ ತಾಲ್ಲೂಕಿನ ಪಡಿತರ ಅಂಗಡಿಗಳಲ್ಲಿ ಪಡಿತರ ವಿತರಣೆ ಸರಿಯಾಗಿ ನಡೆದರೆ, ಮಾರ್ಚ್ ತಿಂಗಳಲ್ಲಿ ಅಕ್ಕಿ ಪೂರೈಕೆಯಾಗದೇ ಯೋಜನೆ ಆರಂಭದಲ್ಲೇ ಎಡವಿದೆ.1ನೇ ತಾರೀಕಿಗೆ ಪಡಿತರ ಅಂಗಡಿಗೆ ಹೋದ ಅನ್ನಭಾಗ್ಯ ಫಲಾನುಭವಿಗಳು ಅಕ್ಕಿ ಬಾರದೇ ಖಾಲಿ ಕೈಯಲ್ಲಿ ಹಿಂದಿರುಗಿದ ಬಗ್ಗೆ ‘ಪ್ರಜಾವಾಣಿ’ಗೆ ದೂರುಗಳು ಬಂದಿವೆ. 9ನೇ ತಾರೀಕು ಆಹಾರ ಧಾನ್ಯಗಳು ಪಡಿತರ ಅಂಗಡಿಗೆ ತಲುಪಿದ್ದು, 10ನೇ ತಾರೀಕಿನಂದು ಫಲಾನುಭವಿಗಳು ಸರತಿ ಸಾಲಿನಲ್ಲಿ ನಿಂತು ಪಡಿತರ ಖರೀದಿಸುತ್ತಿದ್ದ ದೃಶ್ಯ ಸುಳ್ಯ ಪಟ್ಟಣದಲ್ಲೇ ಕಂಡು ಬಂದಿತ್ತು.ಮಂಗಳೂರಿನಲ್ಲಿರುವ ಕೇಂದ್ರ ಆಹಾರ ನಿಗಮದಿಂದ ಆಹಾರ ಧಾನ್ಯಗಳು ಬರುವಾಗ ತಡವಾಗಿದೆ. ಹಾಗಾಗಿ ಗೋಧಿ ಸರಬರಾಜು ಆಗಿಲ್ಲ. ಸುಳ್ಯ ತಾಲ್ಲೂಕಿನಲ್ಲಿ 59 ಪಡಿತರ ಅಂಗಡಿಗಳಿದ್ದು, ಅವುಗಳ ಪೈಕಿ ನಾಲ್ಕು ಅಂಗಡಿಗೆ 1ನೇ ತಾರೀಕಿಗೆ ಅಕ್ಕಿ ಪೂರೈಕೆಯಾಗಿಲ್ಲ. 1 ವಾರ ತಡವಾಗಿ ಆಹಾರ ಧಾನ್ಯಗಳು ಬಂದಿವೆ ಎಂದು ಆಹಾರ ನಿರೀಕ್ಷಕ ದೀಪಕ್ ತಿಳಿಸಿದ್ದಾರೆ.ಪ್ರತಿ ತಿಂಗಳ 1ನೇ ತಾರೀಕಿನಿಂದ 10ನೇ ತಾರೀಕಿವರೆಗೆ ಆಹಾರ ಧಾನ್ಯಗಳು ವಿತರಿಸುವುದಕ್ಕೆ ಮಾತ್ರ `ಖಾತರಿ' ಇದೆ. ಹಾಗೂ 15ರಿಂದ 25ರವರೆಗೆ ಸೀಮೆ ಎಣ್ಣೆ ನೀಡುವ `ಖಾತರಿ' ಜೂನ್ ತಿಂಗಳಿನಿಂದ ಜಾರಿಗೆ ಬರಲಿದೆ. `ಖಾತರಿ' ಅಡಿಯಲ್ಲಿ ಸರ್ಕಾರಿ ರಜಾ ದಿನ ಬಿಟ್ಟು ಉಳಿದ ದಿನಗಳಲ್ಲಿ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಪಡಿತರ ವಿತರಣೆ ನಡೆಯಬೇಕು ಎಂದು ಸುತ್ತೋಲೆ ಇದೆ.ಆದರೆ ಸುಳ್ಯ ತಾಲ್ಲೂಕಿನಲ್ಲಿ ಮಾತ್ರ ಅದರ ಪಾಲನೆ ಆಗುತ್ತಿಲ್ಲ ಎಂಬುದನ್ನು ಸ್ವತಃ ಅಧಿಕಾರಿಗಳೇ ಒಪ್ಪುತ್ತಾರೆ. 10ನೇ ತಾರೀಕಿನ ನಂತರ ಸೀಮೆ ಎಣ್ಣೆ ಮಾತ್ರ ನೀಡುತ್ತಾರೆ. ಆಹಾರ ಧಾನ್ಯಗಳನ್ನು ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. 10ನೇ ತಾರೀಕಿನ ಬಳಿಕ `ಖಾತರಿ'ಯ ಸಮಯ ಪಾಲನೆ (ಬೆಳಿಗ್ಗೆ 8 ರಿಂದ ರಾತ್ರಿ 8) ಹೊರತು ತಿಂಗಳ ಕೊನೆಯರವರೆಗೆ ಯಾವ ದಿನ ಬೇಕಾದರೂ ಪಡಿತರ ಪಡೆಯಬಹುದು. ಪಡಿತರ ನೀಡಲು ನಿರಾಕರಿಸಿದರೆ ದೂರು ನೀಡಬಹುದು ಎಂದು ತಹಶೀಲ್ದಾರ್ ರೂಪಾ ತಿಳಿಸಿದ್ದಾರೆ.ಸುಳ್ಯ ತಾಲ್ಲೂಕಿನಲ್ಲಿ ಸಹಕಾರಿ ಸಂಘಗಳೇ ನ್ಯಾಯಬೆಲೆ ಅಂಗಡಿಗಳನ್ನು ನಡೆಸುತ್ತಿದ್ದು, ಎಲ್ಲೆಡೆ ಬೆಳಿಗ್ಗೆ 10ರಿಂದ ಸಂಜೆ 5.30 ಗಂಟೆಯವರೆಗೆ ಮಾತ್ರ ಪಡಿತರ ಅಂಗಡಿಗಳು ಕಾರ್ಯ ನಿರ್ವಹಿಸುತ್ತವೆ. ಈ ವ್ಯವಹಾರದಲ್ಲಿ ಲಾಭಾಂಶ ಇಲ್ಲದೇ ಇರುವುದರಿಂದ ಹೆಚ್ಚುವರಿ ಸಿಬ್ಬಂದಿಯನ್ನೂ ನೇಮಕ ಮಾಡುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಸಹಕಾರಿ ಸಂಘಗಳ ಶಾಖಾ ಕಚೇರಿಯಲ್ಲಿ ನ್ಯಾಯಬೆಲೆ ಅಂಗಡಿಗಳು ಇದ್ದರೆ, ಅವು ತಿಂಗಳು ಪೂರ್ತಿ ತೆರೆದಿರುವುದಿಲ್ಲ. ವಾರದಲ್ಲಿ ಮೂರು ದಿನ ಮಾತ್ರ ಕಾರ್ಯಾಚರಿಸುತ್ತಿವೆ.ರಾತ್ರಿ ವ್ಯವಹಾರ ನಡಸಲು ಗ್ರಾಮೀಣ ಭಾಗದಲ್ಲಿ ಸಾಧ್ಯವಿಲ್ಲ. ಒತ್ತಡ ಹೇರಿದರೆ ಪಡಿತರ ವ್ಯವಹಾರವನ್ನೇ ಸ್ಥಗಿತಗೊಳಿಸುವುದಾಗಿ ಸಹಕಾರಿ ಸಂಘಗಳ ಆಡಳಿತ ಮಂಡಳಿಯವರು ಹೇಳುತ್ತಿದ್ದಾರೆ. ಹಾಗಾಗಿ ಇಲ್ಲಿ `ಖಾತರಿ' ಸಮರ್ಪಕ ಅನುಷ್ಠಾನ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.