ಭಾನುವಾರ, ಜೂನ್ 13, 2021
21 °C

‘ಪರಿಹಾರ ನೀಡಿ, ಇಲ್ಲವೇ ತೊಟ್ಟು ವಿಷ ಕೊಡಿ’

ಪ್ರಜಾವಾಣಿ ವಾರ್ತೆ/ ಎ.ಸಿ. ಪಾಟೀಲ Updated:

ಅಕ್ಷರ ಗಾತ್ರ : | |

ಇಂಡಿ: ‘ಆಕಸ್ಮಿಕ ಆಲಿಕಲ್ಲು ಮಳೆಯಿಂದ ದೀರ್ಘಾವಧಿಯ ಮತ್ತು ಬೆಲೆ ಬಾಳುವ ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ಲಿಂಬೆ, ಬಾಳೆ ಬೆಳೆಗಳು ಸಂಪೂರ್ಣ ನಾಶವಾಗಿವೆ. ರೈತರ ಸಂಕಷ್ಟ ಹೇಳ ತೀರದು. ಸತತ ಮೂರು ವರ್ಷ ಬರಗಾಲ ಕಾಡಿತ್ತು. ಈಗ ಅಕಾಲಿಕ ಆಲಿಕಲ್ಲು ಮಳೆ ಬದುಕನ್ನೇ ನಾಶ ಮಾಡಿದೆ. ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ನೀಡಬೇಕು’. ಇದು ಇಂಡಿ ತಾಲ್ಲೂಕಿನ ರೈತರ ನೋವಿನ ಮಾತು.ಬೆಳಿ ಹಾಳಾಗಿ ಬೀದಿಗಿ ಬಂದೀವಿ. ಹಾನಿಯಾದ ಬೆಳೀಗೆ ಪರಿಹಾರ ನೀಡರ್ರಿ... ಇಲ್ಲಾಂದ್ರ ತೊಟ್ಟ ವಿಷಾ ಕೊಡರ್ರಿ. ತೋಟದಾಗ ಕಟಾವಿಗೆ ಬಂದಿದ್ದ ಮೂರ ಎಕ್ರೆ ದ್ರಾಕ್ಷಿ,, ಮೂರ ಎಕರೆ ದಾಳಿಂಬ್ರಿ ಮತ್ತ ಒಂದು ಎಕರೆ ಲಿಂಬಿ ಬೆಳಿ ಪೂರ್ತಿ ನಾಶ ಆಗೇತ್ರಿ...’ ಎನ್ನುವ ತಾಲ್ಲೂಕಿನ ಗುಂದವಾನ ಗ್ರಾಮದ ರೈತ ಶಿದರಾಯ ಬಬಲಾದ ಅವರ ನೋವು ಇಡೀ ತಾಲ್ಲೂಕಿನ ರೈತರ ಸಂಕಷ್ಟವನ್ನು ತೋರುತ್ತಿತ್ತು.

‘ಊರ ಮನಿಯವರಿಂದ ಸಾಲ ಮಾಡಿದ್ದನ್ನು ಕಂಡ ಡಿಸಿಸಿ ಬ್ಯಾಂಕಿನವರು ಸಾಲ ಮಂಜೂರಿ ಮಾಡಿದ್ದಾರೆ. ಅದನ್ನು ತಗಂಡು ಊರ ಮನಿಯೋರ ಸಾಲ ತೀರಿಸಿ, ಬೆಳೆ ಬಂದ ನಂತರ ಬ್ಯಾಂಕಿನ ಸಾಲ ತೀರಿಸುವ ವಿಚಾರವಿತ್ತು. ಅಷ್ಟರಲ್ಲಿಯೇ ಆಲಿಕಲ್ಲು ಮಳೆ ಸುರಿದು ಎಲ್ಲಾದನ್ನೂ ಬುಡಮೇಲು ಮಾಡಿಬಿಟ್ಟಿದೆ’ ಎಂದು ತೋಟಕ್ಕಾಗಿ ಅವರು ಮಾಡಿದ ಶ್ರಮ, ಸಾಲ, ಸಂಕಷ್ಟವನ್ನು ವಿವರಿಸಿದರು.ಇನ್ನೊಬ್ಬ ರೈತ ರೇವಪ್ಪ ತಳವಾರ, ‘ಎಂಟು ವರ್ಷಗಳಿಂದ ದ್ರಾಕ್ಷಿ ಬೆಳೆಯುತ್ತಿದ್ದೇನೆ. ಬೆಳೆ ಕಾಡಿದ ಹತ್ತೆಂಟು ಹೊಸ ರೋಗಗಳನ್ನು ಕಂಡಿದ್ದೇನೆ. ಇಳುವರಿಯಲ್ಲಿ ಹೆಚ್ಚು ಕಡಿಮೆ ಆಗಿದ್ದನ್ನೂ ಅನುಭವಿಸದ್ದೇನೆ. ಬೆಳೆಯ ಆರೈಕೆಯಲ್ಲಿ ವ್ಯತ್ಯಯವಾಗಿ ಕಷ್ಟ ಅನುಭವಿಸಿದ್ದೇನೆ. ಆದರೆ ಈ ವರ್ಷದ ಆಲಿಕಲ್ಲು ಮಳೆ ಹಿಂದೆ ಅನುಭವಿಸಿದ ಕಷ್ಟ ನಷ್ಟದ ದುಪ್ಪಟ್ಟು. ಈಗಿನ ನಷ್ಟ ತುಂಬಿಕೊಳ್ಳಲು ಇನ್ನೂ ಆರೇಳು ವರ್ಷ ಬೇಕು. ಸದ್ಯಕ್ಕಂತೂ ಅಸಾಧ್ಯವಾದುದು. ಸರ್ಕಾರ ಕೈ ಹಿಡೀಲಿಲ್ಲ ಅಂದ್ರ ನಮ್ಮ ಬದುಕು ಮೂರಾಬಟ್ಟೆ’ ಎನ್ನುವರು.ಸುರೇಖಾ ತಳವಾರ ತಮ್ಮ ಹೊಲದಲ್ಲಿ ಆರು ಎಕರೆ ದ್ರಾಕ್ಷಿ ಬೆಳೆದಿದ್ದರು. ಆಲಿಕಲ್ಲು ಮಳೆಯಿಂದ ಬೆಳೆ ಸಂಪೂರ್ಣ ನೆಲ ಕಚ್ಚಿದೆ. ಇದರ ಜೊತೆಗೆ ಹತ್ತು ಎಕರೆ ದಾಳಿಂಬೆ ಹಣ್ಣುಗಳಿಗೆ ಆಲಿಕಲ್ಲು ಬಡಿದು ತೂತು ಆಗಿ, ರಸ ಸೋರಿದೆ. ದಾಳಿಂಬೆ ತೋಟದಲ್ಲಿ ಕೆಟ್ಟ ಹಣ್ಣುಗಳ ವಾಸನೆ ಬರುತ್ತಿದೆ. ಹಗಲು ರಾತ್ರಿ ಎನ್ನದೇ ದುಡಿದ ಶ್ರಮ ವ್ಯರ್ಥವಾಗಿದೆ. ಲಕ್ಷಗಟ್ಟಲೆ ಹಣ ಸುರಿದಿದ್ದು ಕೈಗೆ ಸಿಗದಂತಾಯಿತು ಎಂದು ನೋವು ತೋಡಿಕೊಳ್ಳುವರು.ಇವರಷ್ಟೇ ಅಲ್ಲ; ಗುಂದವಾನ ಗ್ರಾಮದ ಬಲಿರಾಮ ತಳವಾರ, ಸಿದ್ಧರಾಮ ಖಾನಾಪೂರ, ರಾಜಕುಮಾರ ಖಾನಾಪೂರ, ದಾದಾಗೌಡ ಖಾನಾಪೂರ, ಸರೋಜಿನಿ ಖಾನಾಪೂರ, ಜೆಟ್ಟೆಪ್ಪ ನಾವಿ, ಗಣಪತಿ ಬಗಲಿ, ಪರಸಪ್ಪ, ರಾಜು, ವಿಠ್ಠಲ, ಬಾಬು, ಬಲಿರಾಮ ಹೀಗೆ ಎಲ್ಲರ ತೋಟಗಳಲ್ಲಿ ಬೆಳೆದಿದ್ದ ದ್ರಾಕ್ಷಿ, ದಾಳಿಂಬೆ, ಲಿಂಬೆ ಬೆಳೆಗಳು ಹೇಳ ಹೆಸರಿಲ್ಲದಂತಾಗಿವೆ. ಇದರ ಜೊತೆಗೆ ಗೋಧಿ, ಜವಿ, ಜೋಳ, ಮೆಕ್ಕೆಜೋಳ, ಕಡಲೆ ಬೆಳೆಗಳು ಹಾಳಾಗಿವೆ.‘ಆಲಿಕಲ್ಲು ಮಳೆಯಿಂದ ಬಸವರಾಜ ಹಡಲಸಂಗ ಅವರ ಜಮೀನಿನಲ್ಲಿ ಕಟಾವಿಗೆ ಬಂದಿದ್ದ 35 ಎಕರೆ ಕಡಲೆ ಬೆಳೆ ಪೂರ್ತಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಎಕರೆಗೆ 8 ಕ್ವಿಂಟಲ್‌ ಇಳುವರಿ ಬರುತ್ತಿತ್ತು. ಒಂದೇ ಮಳೆ ನಮ್ಮ ಕುಟುಂಬಕ್ಕೆ ನಾಲ್ಕು ವರ್ಷ ಬರ ಕೊಟ್ಟು ಹೋಗಿದೆ’ ಎಂದರು. ಬಳ್ಳೊಳ್ಳಿ ಗ್ರಾಮದಲ್ಲಿ ಕಾಮಣ್ಣ ಬಿರಾದಾರ, ಚೆನ್ನಪ್ಪ ಸಗಾಯಿ ಅವರ ಮನೆ ಬಿದ್ದಿವೆ.ಪರಿಹಾರಕ್ಕೆ ಆಗ್ರಹ: ಇಂಡಿ ತಾಲ್ಲೂಕಿನಲ್ಲಿ ಬೆಳೆದಿದ್ದ ಲಿಂಬೆ, ದ್ರಾಕ್ಷಿ, ದಾಳಿಂಬೆ ಬೆಳೆಗೆ ರಾಷ್ಟ್ರದಾದ್ಯಂತ ಮಾತ್ರವಲ್ಲದೆ ವಿದೇಶ­ಗಳಲ್ಲಿಯೂ ಸಾಕಷ್ಟು ಬೇಡಿಕೆ ಇದೆ. ಹವಾಮಾನಕ್ಕೆ ತಕ್ಕಂತೆ ರುಚಿ ಹೆಚ್ಚಾಗಿರುವುದೇ ಇದಕ್ಕೆ ಕಾರಣ. ರೈತರ ಆರ್ಥಿಕ ಸಂಕಷ್ಟ ನಿವಾರಿಸುವ ಈ ಬೆಳೆಗಳು ಅಕಾಲಿಕ ಆಲಿಕಲ್ಲು ಮಳೆಗೆ ಹಾಳಾಗಿ, ರೈತರ ಬದುಕನ್ನೇ ಕಿತ್ತುಕೊಂಡಿದೆ. ಆದ್ದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರ ಬೆಳೆ ಹಾನಿಗೆ ವೈಜ್ಞಾನಿಕರ ರೀತಿಯಲ್ಲಿ ಪರಿಹಾರ ನೀಡಬೇಕು ಎಂದು ಭಾರತೀಯ  ಕಿಸಾನ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಗುರುನಾಥ ಬಗಲಿ ಆಗ್ರಹಿಸಿದ್ದಾರೆ.ರೈತರು ನೈಸರ್ಗಿಕ ವಿಕೋಪಕ್ಕೆ ಸಿಲುಕಿದ್ದಾರೆ. ಅವರನ್ನು ರಕ್ಷಿಸುವ ಹೊಣೆ ಸರ್ಕಾರದ್ದು. ಪಕ್ಷಭೇದ ಮರೆತು ರೈತರಿಗೆ ಸಕಾಲದಲ್ಲಿ ಪರಿಹಾರ ನೀಡಿದರೆ ಅಪಾಯ ತಪ್ಪಿಸಬಹುದು. ಅಲ್ಲದೆ ಸಮಸ್ಯೆಗೆ ಶಾಶ್ವತ ಪರಿಹಾರ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.