‘ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ ನಿರ್ಣಯ’

7

‘ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ ನಿರ್ಣಯ’

Published:
Updated:

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ­ಯಡಿ ಮುಳುಗಡೆಯಾಗುವ ಕಲಾದಗಿ ಗ್ರಾಮದ ಪುನರ್ವಸತಿ ಕೇಂದ್ರವನ್ನು ಕಾನೂನಿನ ಚೌಕಟ್ಟಿನಲ್ಲಿ ಜನಕ್ಕೆ ಹಿತ ಆಗುವ ರೀತಿಯಲ್ಲಿ ಮಾದರಿ ಪುನರ್ವಸತಿ ಕೇಂದ್ರವನ್ನಾಗಿ ಮಾಡಲು ನಿರ್ಣಯ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ ಭರವಸೆ ನೀಡಿದರು.ಕಲಾದಗಿ ಗ್ರಾಮದ ಪ್ರವಾಸಿ ಮಂದಿರದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂತ್ರಸ್ತರ ತ್ಯಾಗ ಸ್ವಾತಂತ್ರ್ಯ ಯೋಧರಿಗೆ ಸಮಾನವಾಗಿದೆ. ಎಲ್ಲರಿಗೆ ಒಳಿತು ಆಗುವ ರೀತಿಯಲ್ಲಿ ಸುಂದರ ಗ್ರಾಮವನ್ನಾಗಿ ನಿರ್ಮಿಸಲಾಗುವುದು ಎಂದು ಹೇಳಿದರು.ತಾಲ್ಲೂಕು ಪಂಚಾಯ್ತಿ ಅಧಿಕಾರಿ­ಗಳು, ಸದಸ್ಯರು, ಸಂಬಂಧಪಟ್ಟ ಜಿ.ಪಂ. ಸದಸ್ಯರು, ಪುನರ್ವಸತಿ ಅಧಿಕಾರಿಗಳು ಹಾಗೂ ಕಲಾದಗಿ ಪಂಚಗ್ರಹ ಹಿರೇಮಠದ ಸ್ವಾಮೀಜಿಗಳ ನೇತೃತ್ವದಲ್ಲಿ ಮತ್ತೊಮ್ಮೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಂಡು ಕಲಾದಗಿ ಪುನರ್ವಸತಿಗೆ ಬೇಕಾಗುವ ಮೂಲ ಸೌಲಭ್ಯ ಕಲ್ಪಿಸಲಾಗುವುದು ಎಂದರು.ಕಲಾದಗಿ ಪಂಚಗ್ರಹ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ­ಗಳು ಗ್ರಾಮಸ್ಥರ ಪರವಾಗಿ ಮಾತನಾಡಿ, ‘ಕಲಾದಗಿ ಗ್ರಾಮಸ್ತರು ಉಳುವ ಫಲವತ್ತಾದ ಭೂಮಿಯನ್ನು ಕಳೆದುಕೊಂಡಿದ್ದು ಅದರ ಜತೆ ಪೂರ್ವಿಕರು ವಾಸ ಮಾಡಿದ ಮನೆ­ಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅಂತಹ­ವರಿಗೆ ಸರ್ಕಾರ ಏನು ಕೊಟ್ಟರೂ ಕಡಿಮೆ. ಕಲಾದಗಿ ಪುನರ್ವಸತಿಗಾಗಿ ಗುರುತಿಸಿರುವ ಭೂಮಿಯಲ್ಲಿ   ಕಟ್ಟಡದ ತಳಪಾಯ ಬಹಳ ದೂರ ತಲುಪಲಿದೆ. ಇದಕ್ಕೆ ಸಾಕಷ್ಟು ಹಣ ಖರ್ಚಾಗಲಿದ್ದು ಒಂದು ನಿವೇಶನಕ್ಕೆ ₨ 2ಲಕ್ಷ ಹೆಚ್ಚು ಪರಿಹಾರವನ್ನು ಸರ್ಕಾರ ಸಂತ್ರಸ್ತರಿಗೆ ನೀಡಬೇಕು. ಜನಾನುರಾಗಿ ಜನ­ಪ್ರತಿನಿಧಿ­ಗಳು ಕೆಲಸ ಮಾಡುವ ಮೂಲಕ ಜನರ ಮನಸ್ಸಿನಲ್ಲಿ ಇರಬೇಕು. ಕಲಾದಗಿ ಪುನರ್ವಸತಿಯನ್ನು ಸುಂದರವಾಗಿ ಮಾಡಬೇಕು’ ಎಂದು ಹೇಳಿದರು.ಶಾಸಕ ಜೆ.ಟಿ.ಪಾಟೀಲ, ‘ಸಂತ್ರಸ್ತರಿಗೆ ಇಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಹಣ ಖರ್ಚಾಗಲಿದ್ದು ಸೂಕ್ತ ಪರಿಹಾರ ನೀಡಬೇಕಾಗಿದೆ. ಹತ್ತು ವರ್ಷಗಳಿಂದ ಕಲಾದಗಿ ಪುನರ್ವಸತಿ ಸಮಸ್ಯೆ ಪರಿಹಾರ ಕಂಡುಕೊಳ್ಳುತ್ತಿಲ್ಲ’ ಎಂದು ಸಚಿವರ ಗಮನಕ್ಕೆ ತಂದರು.

ಪಿ.ಎಸ್. ರೊಡ್ಡಣ್ಣವರ, ‘ನವನಗರದ ಮಾದರಿಯಲ್ಲಿ ಕಲಾದಗಿ ಪುನರ್ವಸತಿ ನಿರ್ಮಾಣ ಮಾಡಬೇಕು. ಕಲಾದಗಿಗೆ ವಿಶೇಷ ಪ್ಯಾಕೇಜ್ ನೀಡಬೇಕು’ ಎಂದು ಸಭೆಯಲ್ಲಿ ಒತ್ತಾಯಿಸಿದರು.ಕಲಾದಗಿ ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ ಹೆಚ್ಚಿನ ಜಮೀನು ಸ್ವಾಧೀನ ಪಡಿಸಿಕೊಳ್ಳುವ ಸಂದರ್ಭದಲ್ಲಿ ಫಲವತ್ತಾದ ಭೂಮಿಯನ್ನು ಬಿಟ್ಟು ಖುಷ್ಕಿ ಹಾಗೂ ಬಂಜರು ಜಮೀನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ಕೆಲವೊಂದು ಜನರು ಗ್ರಾಮಸಭೆಯಲ್ಲಿ ತಮ್ಮ ಬೇಡಿಕೆಯನ್ನಿಟ್ಟರು.

ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ.ಬಿ. ಸೌದಾಗರ, ತಾವು ವಿರೋಧಿ ಅಲ್ಲ. ಕಲಾದಗಿ ಪುನರ್ವಸತಿ ಕೇಂದ್ರವನ್ನು ಸುಂದರವನ್ನಾಗಿ ಮಾಡಲು ಎಲ್ಲರೂ ಒಗ್ಗಟ್ಟಿನಿಂದ ಇರಬೇಕಾಗಿದೆ ಎಂದರು.ಕೆಲವು ಜನರು ಪುನರ್ವಸತಿ ಕೇಂದ್ರದ ಸ್ಥಳ ಬದಲಾಯಿಸಬೇಕು ಎಂದು ಗೊಂದಲ ಎಬ್ಬಿಸಿದಾಗ ಮಧ್ಯಪ್ರವೇಶ ಮಾಡಿದ ಜಿಲ್ಲಾಧಿಕಾರಿ ಮನೋಜ್‌ ಜೈನ್ ಈಗಾಗಲೇ 1998 ರಲ್ಲಿ ಪುನರ್ವಸತಿ ಕೇಂದ್ರಕ್ಕಾಗಿ 300 ಎಕರೆ ಜಮೀನು ಸ್ವಾಧೀನ­ಪಡಿಸಿಕೊಳ್ಳ­ಲಾಗಿದೆ. ಇದಕ್ಕೆ ಮೂಲ ಸೌಲಭ್ಯ ಕಲ್ಪಿಸಿ ಕೊಡಲಾಗುವುದು ಎಂದು ಹೇಳಿದರು.ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜಿ. ಪಾಟೀಲ, ಮಾಜಿ ಸಚಿವ ಅಜಯಕುಮಾರ ಸರನಾಯಕ, ಮಾಜಿ ಶಾಸಕ ಪಿ.ಎಚ್. ಪೂಜಾರ, ಜಿ.ಪಂ. ಸದಸ್ಯ ಪಾಂಡು ಪೊಲೀಸ್, ಕಲಾದಗಿ ಗ್ರಾ.ಪಂ.ಅಧ್ಯಕ್ಷೆ ಲಕ್ಕಮ್ಮ ಮಾದರ ಸೇರಿದಂತೆ ಮತ್ತಿತರರು ಗ್ರಾಮ ಸಭೆಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry