‘ಪುರಾವೆ ಸಿಗದೆ ಅತ್ಯಾಚಾರ ಪ್ರಕರಣ ದಾಖಲಿಸಿರಲಿಲ್ಲ’

7
ದೇರಳಕಟ್ಟೆ: ವಿದ್ಯಾರ್ಥಿ ಜೋಡಿಯ ಅಪಹರಿಸಿ ಅಶ್ಲೀಲ ಚಿತ್ರೀಕರಣ ಪ್ರಕರಣ

‘ಪುರಾವೆ ಸಿಗದೆ ಅತ್ಯಾಚಾರ ಪ್ರಕರಣ ದಾಖಲಿಸಿರಲಿಲ್ಲ’

Published:
Updated:

ಮಂಗಳೂರು: ‘ದೇರಳಕಟ್ಟೆಯ ವೈದ್ಯ­ಕೀಯ ಕಾಲೇಜು ವಿದ್ಯಾರ್ಥಿನಿ ಮತ್ತು ಆಕೆಯ ಸಹಪಾಠಿ ಗೆಳೆಯನನ್ನು ಅಪ­ಹರಿಸಿ, ಬಲಾತ್ಕಾರದಿಂದ ಅವರು ಲೈಂಗಿಕ ಕ್ರಿಯೆ ನಡೆಸುವಂತೆ ಬೆದರಿಕೆ ಒಡ್ಡಿ, ಚಿತ್ರೀಕರಿಸಿದ ಪ್ರಕರಣದಲ್ಲಿ ವಿದ್ಯಾ­ರ್ಥಿನಿ ಮ್ಯಾಜಿಸ್ಟ್ರೇಟ್‌ ಮುಂದೆ ನೀಡಿದ ಹೇಳಿ­ಕೆಯ ಅಧಿಕೃತ ಪ್ರತಿ ಸಿಗುವವರೆಗೆ ಆಕೆ­ಯ ಮೇಲೆ ಅತ್ಯಾಚಾರ ನಡೆದ ಬಗ್ಗೆ ಯಾವುದೇ ಪುರಾವೆಗಳು ನಮ್ಮ ಬಳಿ ಇರಲಿಲ್ಲ. ಈ ಬಗ್ಗೆ ಆಕೆಯೂ ತಿಳಿಸಿ­ರಲಿಲ್ಲ. ಮ್ಯಾಜಿಸ್ಟ್ರೇಟ್‌ ಮುಂದೆ ವಿದ್ಯಾ­ರ್ಥಿನಿ ನೀಡಿದ ಹೇಳಿಕೆಯ ಅಧಿಕೃತ ಪ್ರತಿ ಸಿಕ್ಕ ಬಳಿಕ ನಾವು 8 ಮಂದಿ ಆರೋ­ಪಿಗಳ ವಿರುದ್ಧ ಅತ್ಯಾಚಾರ (ಐಪಿಸಿ 376) ಹಾಗೂ ಸಾಮೂಹಿಕ ಅತ್ಯಾ­ಚಾರ (376 ಡಿ) ಪ್ರಕರಣ ದಾಖಲಿಸಿಕೊಳ್ಳಲು ಕ್ರಮ ಕೈಗೊಂಡಿ­ದ್ದೇವೆ’ ಎಂದು ಪೊಲೀಸರು ಸ್ಪಷ್ಟಪ­ಡಿಸಿದ್ದಾರೆ.‘ವಿದ್ಯಾರ್ಥಿನಿ ನೀಡಿದ ಹೇಳಿಕೆ ಆಧಾರದಲ್ಲಿ ಎಫ್‌ಐಆರ್‌ ದಾಖಲಿಸಿ­ಕೊಂಡಿದ್ದೇವೆ. ಸಾಮೂಹಿಕ ಅತ್ಯಾಚಾರ ನಡೆದ ಬಗ್ಗೆ ಆಕೆ ಆರಂಭದಲ್ಲಿ ತಿಳಿಸಿ­ರಲಿಲ್ಲ. ನಾವು ಕೇಳಿದ ಪ್ರಶ್ನೆಗಳಿಗೂ ಸೂಕ್ತ­ವಾಗಿ ಉತ್ತರಿಸಿರಲಿಲ್ಲ. ಆಕೆ ಮ್ಯಾಜಿ­ಸ್ಟ್ರೇಟ್‌ ಮುಂದೆ ನೀಡಿದ ಹೇಳಿಕೆಯಲ್ಲಿ ಆರೋಪಿಗಳು ತನ್ನ ಜತೆ ಬಲವಂತದಿಂದ ಲೈಂಗಿಕ ಕ್ರಿಯೆ ನಡೆಸಿದ್ದರು ಎನ್ನುವುದನ್ನು  ತಿಳಿಸಿದ್ದಳು. ಈ ಹೇಳಿಕೆಯ ಅಧಿಕೃತ ಪ್ರತಿ ನಮಗೆ ಸಿಕ್ಕಿದ್ದೇ ಜ.2ರಂದು. ಹಾಗಾಗಿ ಐಪಿಸಿ ಸೆಕ್ಷನ್‌ 376 ಮತ್ತು 376 (ಡಿ) ಅಡಿ ಪ್ರಕರಣ ದಾಖಲಿಸಿಕೊಳ್ಳಲು ಕ್ರಮ ಕೈಗೊ­ಳ್ಳುವಲ್ಲಿ ವಿಳಂಬವಾಯಿತು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.‘ಪ್ರಕರಣದ ಬಳಿಕ ವಿದ್ಯಾರ್ಥಿನಿ ಊರಿಗೆ (ಬಿಹಾರ) ಮರಳಿದ್ದಾಳೆ. ಹೆಚ್ಚಿನ ವಿಚಾರಣೆಗೆ ಆಕೆ ಲಭ್ಯ ಇಲ್ಲ. ಆದರೆ, ಆಕೆಯ ಕುಟುಂಬಸ್ಥರು ತನಿಖೆಗೆ ಸಹಕರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಸಾಧ್ಯವಾದ ಎಲ್ಲಾ ಸಾಕ್ಷ್ಯಗಳನ್ನು ಕಲೆ ಹಾಕಿ­ದ್ದೇವೆ. ಆದಷ್ಟು ಶೀಘ್ರ ನ್ಯಾಯಾ­ಲಯಕ್ಕೆ ಆರೋಪಪಟ್ಟಿ ಸಲ್ಲಿಸುತ್ತೇವೆ’ ಎಂದು ನಗರ ಪೊಲೀಸ್‌ ಆಯುಕ್ತ ಆರ್‌.ಹಿತೇಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.ರಾಜಕೀಯ ಒತ್ತಡ ಬಂದ ಹಿನ್ನೆಲೆ­ಯಲ್ಲಿ ಪೊಲೀಸರು ಪ್ರಕರಣವನ್ನು ದುರ್ಬ­ಲ­ಗೊಳಿಸಲು ಯತ್ನಿಸಿದ್ದಾರೆ ಎಂದು ಬಿಜೆಪಿ ಹಾಗೂ ಕೆಲವು ಸಂಘಟನೆಗಳು ಆರೋಪಿಸಿದ ಬಗ್ಗೆ ಪ್ರತಿಕ್ರಿಯಿಸಿದ ತನಿಖಾ­ಧಿಕಾರಿ­ಯೊಬ್ಬರು, ‘ವಿಡಿಯೊ ಚಿತ್ರೀಕ­ರಣದಲ್ಲಿ ಎಲ್ಲೂ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ನಡೆಸಿದ ದೃಶ್ಯಗಳಿಲ್ಲ. ವಿಚಾರಣೆ ವೇಳೆಯೂ ಆಕೆ ಈ ಬಗ್ಗೆ ತಿಳಿಸಿರಲಿಲ್ಲ. ಆರೋಪಿಗಳು ಬಲಾತ್ಕಾರದ ಸಂಭೋಗ ನಡೆಸುವಂತೆ ವಿದ್ಯಾ­ರ್ಥಿನಿಗೆ ಹಾಗೂ ಆಕೆಯ ಸಹಪಾಠಿಗೆ ನಿರ್ದೇಶನ ನೀಡುವ ಧ್ವನಿ­ಗಳು ವಿಡಿಯೊ ಚಿತ್ರೀಕರಣದಲ್ಲಿ ಸ್ಪಷ್ಟ­ವಾಗಿ ದಾಖಲಾಗಿವೆ. ಹಾಗಾಗಿ ಅತ್ಯಾಚಾರ ಪ್ರಕರಣ ದಾಖಲಿಸಿ­ಕೊಳ್ಳಲು ನಾವು ಮ್ಯಾಜಿಸ್ಟ್ರೇಟ್‌ ಮುಂದೆ ನೀಡಿದ ಹೇಳಿಕೆಯ ವರದಿ ಬರುವುದಕ್ಕೆ ಕಾಯ­ಬೇಕಾಯಿತು. ಪ್ರಕರಣವನ್ನು ದುರ್ಬಲಗೊಳಿಸುವ ಯಾವುದೇ ಕೆಲಸವನ್ನೂ ಪೊಲೀಸರು ಮಾಡಿಲ್ಲ. ಆರೋಪಿಗಳನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಅವರು ದಾಳಿ ನಡೆಸಿದ್ದಾರೆ. ಪೊಲೀಸರು ಜೀವದ ಹಂಗು ತೊರೆದು ಅವರನ್ನು ಬಂಧಿಸಿದ್ದಾರೆ. ಆರೋಪಿಗಳ ಧ್ವನಿಯ ಮಾದರಿಗಳನ್ನು ಹಾಗೂ ವಿಡಿಯೊ ದೃಶ್ಯವನ್ನು ವಿಧಿ ವಿಜ್ಞಾನ ಪ್ರಯೋಗಾಲ­ಯಕ್ಕೆ ಕಳುಹಿಸಿಕೊಟ್ಟಿದ್ದೇವೆ. ಇದಲ್ಲದೇ ಇತರ ಸಾಂದರ್ಭಿಕ ಸಾಕ್ಷ್ಯಗಳನ್ನೂ ಕಲೆ ಹಾಕಿದ್ದೇವೆ’ ಎಂದು ಹೇಳಿದರು.‘ಈ ಪ್ರಕರಣದಲ್ಲಿ ವಿದ್ಯಾರ್ಥಿನಿಯ ಮುಸ್ಲಿಂ ಗೆಳೆಯನ ಪಾತ್ರವೂ ಇದೆ ಎಂಬ ಆರೋಪ ಸಾಬೀತು­ಪಡಿಸು­ವಂತಹ ಪುರಾವೆ ನಮಗೆ ಸಿಕ್ಕಿಲ್ಲ. ಆತನ ಪಾತ್ರ ಇರುವುದು ಕಂಡುಬಂದರೆ ಆತನ ವಿರುದ್ಧವೂ ಪ್ರಕರಣ ದಾಖಲಿಸಿ­ಕೊಳ್ಳಲು ಹಿಂದೇಟು ಹಾಕುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.ಮಣಿಪಾಲ :ಸಾಕ್ಷಿಗಳ ವಿಚಾರಣೆ ಆರಂಭ

ಉಡುಪಿ:
ಮಣಿಪಾಲ ವಿಶ್ವ­ವಿದ್ಯಾಲಯದ ವೈದ್ಯಕೀಯ ವಿದ್ಯಾ­ರ್ಥಿನಿ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ ಸಾಕ್ಷಿಗಳ ವಿಚಾರಣೆ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದಲ್ಲಿ ಸೋಮ­ವಾರ ಆರಂಭವಾಗಿದ್ದು, ವಾರ್ಷಿಕ ಪರೀಕ್ಷೆ ಹಿನ್ನೆಲೆಯಲ್ಲಿ ದೌರ್ಜನ್ಯಕ್ಕೆ ಒಳ­ಗಾದ ಯುವತಿ ಮತ್ತು ಆಕೆಯ ಗೆಳತಿ ಗೈರು ಹಾಜರಾಗಿದ್ದರು.ಫೆಬ್ರುವರಿ 3ರ ವರೆಗೆ ಪರೀಕ್ಷೆಗಳು ಇರು­ವುದರಿಂದ ವಿಚಾರಣೆಗೆ ಹಾಜ­ರಾ­ಗಲು ಸಾಧ್ಯವಿಲ್ಲ ಎಂದು ಅವರು ನ್ಯಾಯಾ­ಲಯಕ್ಕೆ ತಿಳಿಸಿದ್ದಾರೆ. ಪ್ರಕ­ರಣದ ದೂರುದಾರ ವಿಶ್ವವಿದ್ಯಾಲ­ಯದ ಎಸ್ಟೇಟ್ ಆಫೀಸರ್‌ ಜೈವಿಠಲ್‌ ಮತ್ತು ಭದ್ರತಾ ಸಿಬ್ಬಂದಿ ಸುರೇಶ ವಿಚಾರಣೆಗೆ ಹಾಜರಾಗಿದ್ದರು.ಘಟನೆಯ ಬಗ್ಗೆ ಇಬ್ಬರೂ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry