ಮಂಗಳವಾರ, ಜೂನ್ 22, 2021
29 °C

‘ಪೋಷಕರ ನಿರ್ಲಕ್ಷ್ಯದಿಂದ ಮಕ್ಕಳ ಶೋಷಣೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಸಮಾಜದಲ್ಲಿ ಮಕ್ಕಳ ಶೋಷಣೆ ದೊಡ್ಡ ಪಿಡುಗಾಗಿದ್ದು, ಇದರಿಂದಾಗಿ ಮಕ್ಕಳ ಶಾರೀರಿಕ ಹಾಗೂ ಮಾನಸಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಪೋಷಕರು ಮಕ್ಕಳ ಬಗ್ಗೆ ತೋರುವ ನಿರ್ಲಕ್ಷ್ಯ ಭಾವನೆ ಶೋಷಣೆಗೆ ಪ್ರಮುಖ ಕಾರಣ ಎಂದು ಜಿಲ್ಲಾ ಬಾಲನ್ಯಾಯ ಮಂಡಳಿಯ ಅಧ್ಯಕ್ಷ ಎನ್.ಎಸ್ ಪಾಟೀಲ್ ಹೇಳಿದರು.ಅವರು ಮಂಗಳೂರು ವಿದ್ಯಾನಗರದ ಡಾ.ಎಂ.ವಿ ಶೆಟ್ಟಿ ಸಾಮಾಜಿಕ ಕಾರ್ಯ ಕಾಲೇಜಿನಲ್ಲಿ ‘ಪ್ರಯುಕ್ತಿ– 2014 ‘ಮಕ್ಕಳ ಶೋಷಣೆ– ಆತಂಕ’ ಕುರಿತು ಶುಕ್ರವಾರ ನಡೆದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.ಬಡತನ ಶೋಷಣೆಗೆ ಕಾರಣವಾಗದಿದ್ದರೂ, ಅಜ್ಞಾನ ಮತ್ತು ತಿರಸ್ಕಾರದ ಭಾವನೆ ಇಂತಹ ಪರಿಸ್ಥಿತಿಗೆ ಎಡೆ ಮಾಡಿಕೊಡುತ್ತದೆ. ಹಣಕಾಸಿನ ಸಮಸ್ಯೆಯಿಂದಲೂ ಮಕ್ಕಳು ಸರಿಯಾದ ಶಿಕ್ಷಣ ಪಡೆಯಲಾಗದೆ ಬೀದಿಗಿಳಿಯುವಂತಾಗುತ್ತದೆ. ಅಲ್ಲದೆ, ವಿವಿಧ ಪ್ರಕಾರಗಳ ಶೋಷಣೆಗೆ ಒಳಗಾಗುತ್ತಾರೆ. ಇದು ಹಣದ ಲಾಲಸೆಗಾಗಿ ಬಾಲಕಾರ್ಮಿಕ ಮತ್ತು ಮಕ್ಕಳ ಸಾಗಾಟಕ್ಕೆ ಪ್ರೇರಣೆ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಶೇಕಡಾ 42ರಷ್ಟು ಮಕ್ಕಳು ಬೀದಿಯಲ್ಲಿ, ಕೆಲಸದ ಸ್ಥಳಗಳಲ್ಲಿ ಹಾಗೂ ಸ್ವಂತ ಮನೆಗಳಲ್ಲಿ ಕೂಡ ಶೋಷಣೆಗೆ ತುತ್ತಾಗುತ್ತಿದ್ದಾರೆ. ಲೈಂಗಿಕ ಶೋಷಣೆ ಬಹಳ ಹೀನಾಯ ಕೃತ್ಯವಾಗಿದ್ದು, ಹೆಚ್ಚಾಗಿ ಮಕ್ಕಳು ಗುರಿಯಾಗುವ ನಿದರ್ಶನಗಳನ್ನು ನಾವು ನೋಡಬಹುದು. ಬಾಲ್ಯ ವಿವಾಹವೂ ಇಂತಹ ಕೃತ್ಯಗಳಿಂದ ಹೊರತಾಗಿಲ್ಲ ಎಂದು ಹೇಳಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗಟ್ರೂಡ್ ವೇಗಸ್ ಮಾತನಾಡಿ, ಹೆತ್ತವರು ಮಕ್ಕಳ ಬೌದ್ಧಿಕ ಬೇಡಿಕೆಗಳನ್ನು ಪೂರೈಸುತ್ತಾರೆ. ಆದರೆ ಮನದ ಮಾತುಗಳನ್ನು ಕೇಳುವ ವ್ಯವಧಾನ ತೋರಿಸುತ್ತಿಲ್ಲ. ಇದಕ್ಕೆ ಪೂರಕ­ವಾಗಿ ಮೂಡುಶೆಡ್ಡೆ, ಕಡಬದಲ್ಲಿ ನಡೆದ ಜ್ವಲಂತ ನಿದರ್ಶನಗಳನ್ನು ನಾವು ಕಾಣಬಹುದು ಎಂದರು.ಮಕ್ಕಳ ಸಾಗಾಟದ ಜಾಲ ಹೆಚ್ಚಾಗುತ್ತಿದ್ದು, ಪೋಷಕರು ನಿರ್ಲಕ್ಷ್ಯದಿಂದ ಪ್ರಕರಣ  ದಾಖಲಿಸಲೂ ಹಿಂಜರಿಯುತ್ತಿದ್ದಾರೆ. ಹೆಣ್ಣು ಮಕ್ಕಳನ್ನು ಅಪಹರಿಸಿ ಕೆಂಪು ದೀಪದ ಪ್ರದೇಶಕ್ಕೆ ಮಾರಾಟ ಮಾಡುವಂತಹ ಕಾರ್ಯ ಸರಾಗವಾಗಿ ನಡೆಯುತ್ತಿದೆ. ಇದರಲ್ಲಿ ಹೆಂಗಸರೇ ಭಾಗಿಯಾಗಿರುವುದು ವಿಪರ್ಯಾಸ. ಇಂತಹ ಕೃತ್ಯಗಳಿಗೆ ಪೂರ್ಣವಿರಾಮ ಹಾಕುವ ಅಗತ್ಯವಿದೆ ಎಂದು ಹೇಳಿದರು.ಡಾ.ಎಂ.ವಿ ಶೆಟ್ಟಿ ಸ್ಮಾರಕ ಟ್ರಸ್ಟ್‌ನ ಸ್ಥಾಪಕ ಕಾರ್ಯದರ್ಶಿ ಡಾ.ಎಂ.ರಾಮ್‌ಗೋಪಾಲ್ ಶೆಟ್ಟಿ, ಪ್ರಾಂಶುಪಾಲರಾದ ಪ್ರೊ.ಸುಮಾ ಎಸ್. ರೈ, ಸಂಘಟನಾ ಕಾರ್ಯದರ್ಶಿ ಅಂಕಿತ್ ಎಸ್.ಕುಮಾರ್, ವಿದ್ಯಾರ್ಥಿ ಸಂಯೋಜಕರಾದ ಪೃಥ್ವಿರಾಜ್,ಅನನ್ಯ .ಸಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.