ಸೋಮವಾರ, ಜನವರಿ 27, 2020
26 °C

‘ಪೋಸ್ಟ್‌ಶಾಪಿ’ ಮಳಿಗೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪೋಸ್ಟ್‌ಶಾಪಿ’ ಮಳಿಗೆ ಆರಂಭ

ಬೆಂಗಳೂರು: ಅಂಚೆ ಕಚೇರಿಗೆ ಬರುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಮುಂದಾಗಿರುವ ಅಂಚೆ ಇಲಾಖೆ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ (ಜಿಪಿಒ) ‘ಪೋಸ್ಟ್‌ಶಾಪಿ’ ಮಳಿಗೆ ಯನ್ನು ಆರಂಭಿಸಿದೆ.ಮಳಿಗೆಯಲ್ಲಿ ಪೆನ್ನು, ಲಕೋಟೆ, ಗ್ರೀಟಿಂಗ್ಸ್‌ ಕಾರ್ಡ್‌, ನ್ಯಾಷನಲ್‌ ಬುಕ್‌್ ಟ್ರಸ್ಟ್‌ನ ಪುಸ್ತಕಗಳು, ಎಚ್‌ಎಂಟಿ ಕೈಗಡಿಯಾರಗಳ ಮಾರಾಟದ ಜತೆಗೆ ಜೆರಾಕ್ಸ್‌ ಸೇವೆಯೂ ಲಭ್ಯವಿದೆ. ಇದಲ್ಲದೆ ಅಂಚೆ ಕಚೇರಿ ಆವರಣದಲ್ಲೇ ಕಾಫಿ ಹಾಗೂ ಟೀ ಮಾರಾಟ ವ್ಯವಸ್ಥೆಯನ್ನೂ ಮಾಡಲಾಗಿದೆ.ನಗರ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದಕರ್‌ ಮಂಗಳವಾರ ಮಳಿಗೆಯನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ‘ಎಷ್ಟೇ ಖಾಸಗಿ ಕೊರಿಯರ್‌ ಕಂಪೆನಿಗಳು ಬಂದರೂ ಅಂಚೆ ಇಲಾಖೆಯ ಸೇವೆಯನ್ನು ಸರಿಗಟ್ಟಲು ಸಾಧ್ಯವಾಗಿಲ್ಲ. ಅಂಚೆ ಇಲಾಖೆ ಸೇವೆಯ ಬಗ್ಗೆ ಜನಸಾಮಾನ್ಯರಿಗೆ ನಂಬಿಕೆ ಹೆಚ್ಚು. ಆಧುನಿಕ ಕಾಲಕ್ಕೆ ತಕ್ಕಂತೆ ಅಂಚೆ ಇಲಾಖೆ ಕೂಡಾ ಬದಲಾವಣೆಗಳೊಂದಿಗೆ ಬೆಳೆಯುತ್ತಿದೆ. ಈ ಮಳಿಗೆಯಿಂದ ಜನರಿಗೆ ಅನುಕೂಲವಾಗಲಿದೆ’ ಎಂದರು.ಅಂಚೆ ಇಲಾಖೆಯ ದಕ್ಷಿಣ ಕರ್ನಾಟಕ ವಿಭಾಗದ ಪ್ರಧಾನ ಅಂಚೆ ವ್ಯವಸ್ಥಾಪಕಿ ಅರುಂಧತಿ ಘೋಷ್‌ ಮಾತನಾಡಿ, ‘ಮಳಿಗೆಯಿಂದ ಲಾಭ ಮಾಡುವ ಉದ್ದೇಶ ನಮ್ಮದಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಈ ಮಳಿಗೆಯನ್ನು ಆರಂಭಿಸಲಾಗಿದೆ. ಇಲ್ಲಿರುವ ವಸ್ತುಗಳನ್ನು ಮುಖಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದಿಲ್ಲ’ ಎಂದು  ತಿಳಿಸಿದರು.‘ದೆಹಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಅಂಚೆ ಕಚೇರಿಗಳಲ್ಲಿ ಈ ರೀತಿಯ ಮಳಿಗೆಗಳನ್ನು ತೆರೆಯಲಾಗಿದೆ. ಕರ್ನಾಟಕ ವೃತ್ತದಲ್ಲಿ ಇದೇ ಮೊದಲ ಬಾರಿ ಮಳಿಗೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಜಿಲ್ಲಾ ಕೇಂದ್ರಗಳು ಹಾಗೂ ಪ್ರಮುಖ ಪಟ್ಟಣಗಳ ಅಂಚೆ ಕಚೇರಿಗಳಲ್ಲಿ ಇದೇ ಮಾದರಿಯ ಮಳಿಗೆಗಳನ್ನು ತೆರೆಯುವ ಚಿಂತನೆಯಿದೆ’ ಎಂದರು.ಮಳಿಗೆಯಲ್ಲಿ ಪ್ರತಿ ಪುಟದ ಜೆರಾಕ್ಸ್‌ ರೂ1, ಪ್ರತಿ ಕಪ್‌ ಕಾಫಿ ಅಥವಾ

ಟೀ ರೂ10ಕ್ಕೆ ಲಭ್ಯವಿದೆ.

ಪ್ರತಿಕ್ರಿಯಿಸಿ (+)