ಗುರುವಾರ , ಜೂನ್ 24, 2021
25 °C
ಪರ್ಯಾಯ ರಂಗದ ಆಕಾಂಕ್ಷಿಗಳ ಪಟ್ಟಿಗೆ ನಿತೀಶ್‌ ಸೇರ್ಪಡೆ

‘ಪ್ರಧಾನಿ ಹುದ್ದೆಗೆ ನಾನೇ ಅರ್ಹ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಟ್ಟಾಯ್‌ (ಪಿಟಿಐ): ‘ಪ್ರಧಾನಿ ಹುದ್ದೆಯ ಸುತ್ತ ಗಿರಕಿ ಹೊಡೆಯುತ್ತಿರು­ವವರ ಪೈಕಿ ನಾನು ಅತ್ಯಂತ ಅರ್ಹ ಮತ್ತು ಅನುಭವಿ ವ್ಯಕ್ತಿ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ.ತಾನೂ ಪ್ರಧಾನಿ ಸ್ಥಾನದ ಆಕಾಂಕ್ಷಿ ಎಂಬ ಸ್ಪಷ್ಟ ಸಂದೇಶವನ್ನು ಅವರು ಈ ಮೂಲಕ ರವಾನಿಸಿದ್ದಾರೆ.ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಗುರುವಾರ ಇಲ್ಲಿ ಆಯೋಜಿಸಿದ್ದ ‘ಸಂಕಲ್ಪ ಯಾತ್ರೆ’­ಯಲ್ಲಿ ಮಾತನಾಡಿದ ಅವರು, ‘ಒಬ್ಬರಿಗೆ ಸಂಸತ್ತಿನ ಅನುಭವವೇ ಇಲ್ಲ.  ಇನ್ನೊಬ್ಬರಿಗೆ ಒಂದು ರಾಜ್ಯವನ್ನು ಹೇಗೆ ಮುನ್ನಡೆಸಿಕೊಂಡು ಹೋಗ­ಬೇಕೆಂಬುದೂ  ಗೊತ್ತಿಲ್ಲ. ಆದರೆ, ಆ ಎರಡೂ ಗುಣ ನನ್ನಲ್ಲಿವೆ. ಹೀಗಾಗಿ ನೀವೇ ಹೇಳಿ ಅವರಿಗಿಂತ ನಾನು ಕಡಿಮೆ ಅರ್ಹತೆ ಹೊಂದಿದ ವ್ಯಕ್ತಿಯೇ’ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಹೆಸರನ್ನು ಉಲ್ಲೇಖಿಸದೇ ಪ್ರಶ್ನಿಸಿದರು.ನೀವು ಕೂಡ ಪ್ರಧಾನಿ ಸ್ಥಾನದ ಅಭ್ಯರ್ಥಿಯಾಗಿದ್ದೀರಾ ಎಂದು ಕೇಳಿದ ಪ್ರಶ್ನೆಗೆ, ‘ಜೆಡಿ(ಯು) ಒಂದು ಶಿಸ್ತಿನ ಪಕ್ಷ­­ವಾಗಿದೆ. ಅಂತಹ ದೊಡ್ಡ ಮಾತನ್ನು ನಾವು ಹೇಳುವುದಿಲ್ಲ. ಆದರೆ, ಪ್ರಾಮಾಣಿಕವಾಗಿ ಜನರ ಸೇವೆ ಮಾಡಬೇಕು ಎನ್ನುವುದನ್ನೆ ಬಲವಾಗಿ ನಂಬಿಕೊಂಡಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.ತೃತೀಯ ರಂಗದ ಭಾಗವಾಗಿರುವ ಹಿರಿಯ ಮುಖಂಡರಾದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಮತ್ತು ಎಐಎಡಿಎಂಕೆ ಮುಖ್ಯಸ್ಥೆ, ತಮಿಳು­ನಾಡಿನ ಮುಖ್ಯ­ಮಂತ್ರಿ ಜಯಲಲಿತಾ ಅವರೂ  ಪ್ರಧಾನಿ ಹುದ್ದೆ ಆಕಾಂಕ್ಷಿಗಳು ಎಂದು ಹೇಳಿದ್ದಾರಲ್ಲಾ  ಎಂಬ ಇನ್ನೊಂದು ಪ್ರಶ್ನೆಗೆ, ಪ್ರತಿಕ್ರಿಯಿಸಿದ ನಿತೀಶ್‌, ‘ಇದರಲ್ಲೇನು ತಪ್ಪಿದೆ. ಜನರ ಬೆಂಬಲ ಗಳಿಸಲು ಪ್ರತಿಯೊಂದು ಪಕ್ಷ ಮಾಡುವ ತಂತ್ರ ಇದು’ ಎಂದು ಹೇಳಿದರು.‘ತೃತೀಯ ರಂಗ ವಾಹನ ನಿಲುಗಡೆ ಸ್ಥಳವಿದ್ದಂತೆ’

ಕೋಲ್ಕತ್ತ (ಪಿಟಿಐ):
‘ತೃತೀಯ ರಂಗ ಎನ್ನುವುದು ವಾಹನ ನಿಲುಗಡೆಯ ಸ್ಥಳ ಇದ್ದಂತೆ. ಅಲ್ಲಿಗೆ ಪಕ್ಷಗಳು ಬರುತ್ತವೆ ಮತ್ತು ಹೋಗುತ್ತವೆ. ಹಾಗಾಗಿ ಅದರಿಂದ ಕೇಂದ್ರದಲ್ಲಿ ಸರ್ಕಾರ ರಚನೆಯ ಸಾಧ್ಯತೆಯೇ ಇಲ್ಲ’ ಎಂದು ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು ಹೇಳಿದ್ದಾರೆ.‘ಕೇಂದ್ರದಲ್ಲಿ ಸರ್ಕಾರ ರಚನೆಗೆ ಈ ಹಿಂದೆ ಕೂಡ ತೃತೀಯ ರಂಗ ಪ್ರಯತ್ನಿಸಿತ್ತು. ಆದರೆ, ಅಂತಿಮವಾಗಿ ಅದು ವೈಫಲ್ಯ ಕಂಡಿತ್ತು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ತೃತೀಯ ರಂಗದ ಪಕ್ಷಗಳಿಗೆ ಯಾವುದೇ ಸಾಮಾನ್ಯ ಕಾರ್ಯಸೂಚಿಯೂ ಇಲ್ಲ ಬದ್ಧತೆಯೂ ಇಲ್ಲ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.