‘ಪ್ರೇತಾತ್ಮದ ಬದಲು ಹುತಾತ್ಮರಾಗಿ’

ಬೆಂಗಳೂರು: ‘ಇಂದಿನ ಪೊಲೀಸರು ನಾಡಿಗಾಗಿ ಹೋರಾಡಿ ಹುತಾತ್ಮರಾಗುವ ಬದಲು, ಆತ್ಮಹತ್ಯೆ ಮಾಡಿಕೊಂಡು ಪ್ರೇತಾತ್ಮರಾಗುತ್ತಿದ್ದಾರೆ’ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಂ ಅಭಿಪ್ರಾಯಪಟ್ಟರು.
ಶನಿವಾರ ಕರುನಾಡ ಸಿಂಹ ಸೇನೆ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಎಂಇಎಸ್ ಕಾಲೇಜು ವತಿಯಿಂದ ಏರ್ಪಡಿಸಿದ್ದ ‘ವೀರಪ್ಪನ್ ಬಂಧನ ಕಾರ್ಯಾಚರಣೆಯಲ್ಲಿ ಮಡಿದ ಐಪಿಎಸ್ ಅಧಿಕಾರಿ ಟಿ. ಹರಿಕೃಷ್ಣ ಮತ್ತು ಸಬ್ಇನ್ಸ್ಪೆಕ್ಟರ್ ಶಕೀಲ್ ಅಹಮದ್ರ 24ನೇ ವರ್ಷದ ಸ್ಮರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇಂದು ಪೊಲೀಸರು ಅಂದಾಕ್ಷಣ ನೆನಪು ಆಗೋದು ಭ್ರಷ್ಟಾಚಾರ ಹಾಗೂ ದೌರ್ಜನ್ಯ ಎಂಬ ಅಂಶಗಳು. ಆದರೆ, ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಜವಾಬ್ದಾರಿ ಮಹತ್ವದ್ದು. ಅದನ್ನು ಮರೆಯಬಾರದು. ಕರ್ತವ್ಯವನ್ನು ಶಿಸ್ತಿನಿಂದ ನಿಭಾಯಿಸಿದ ಕಾರಣ ಇಬ್ಬರನ್ನು ಈಗಲೂ ನಾವು ಸ್ಮರಿಸುತ್ತೇವೆ’ ಎಂದು ತಿಳಿಸಿದರು.
ಮತ್ತೊಬ್ಬ ನಿವೃತ್ತ ಅಧಿಕಾರಿ ಬಿ.ಬಿ. ಅಶೋಕ್ ಕುಮಾರ್ ಮಾತನಾಡಿ, ‘ದೇಶವೆಂಬ ಮನೆ ಭದ್ರವಾಗಿರಲು ಯೋಧರು, ಪೊಲೀಸರು, ರೈತರು ಮತ್ತು ವೈದ್ಯರು ಎಂಬ ನಾಲ್ಕು ಗೋಡೆ ಬೇಕು’ ಎಂದು ಅಭಿಪ್ರಾಯಪಟ್ಟರು.
ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಹರಿಕೃಷ್ಣ ಹಾಗೂ ಶಕೀಲ್ ಅವರ ಸಾಹಸಗಳನ್ನು ಮೆಲುಕುಹಾಕಿದ ಅವರು, ‘ಇಬ್ಬರು ತಮ್ಮ ಜೀವದ ಹಂಗು ಬಿಟ್ಟು ಕರ್ತವ್ಯ ನಿಭಾಯಿಸುತ್ತಿದ್ದರು. ಆಗಸ್ಟ್ 14ರಂದು ಹುತಾತ್ಮರಾದ ಕಾರಣ ಸ್ವಾತಂತ್ರ್ಯ ದಿನಾಚರಣೆ ಬಂದಾಗಲೆಲ್ಲ ಅವರ ನೆನಪು ಕಾಡುತ್ತದೆ’ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.