‘ಬದಲಾವಣೆಯ ನಿರ್ವಹಣೆ’

7
ಬೋರ್ಡ್ ರೂಮಿನ್ ಸುತ್ತಮುತ್ತ

‘ಬದಲಾವಣೆಯ ನಿರ್ವಹಣೆ’

Published:
Updated:

ವಿಶ್ವದ ಎಲ್ಲ ಕಂಪೆನಿಗಳಲ್ಲಿ ಬದಲಾವಣೆಯ ನಿಯಂತ್ರಣದ ಕುರಿತಾದ ಕಾರ್ಯಕ್ರಮಗಳನ್ನು ಪರಿಷ್ಕರಿಸಿ, ಅಧ್ಯಯನ ನಡೆಸಿ, ಅಂತಹ ಕಾರ್ಯಕ್ರಮಗಳಲ್ಲಿ ಶೇಕಡಾ ಎಪ್ಪತ್ತರಷ್ಟು ಕಾರ್ಯಕ್ರಮಗಳು ಸಂಪೂರ್ಣವಾಗಿ ಸೋತಿವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಅಂದರೆ ಕಂಪೆನಿಯೊಂದರಲ್ಲಿ ನಡೆಸಲಾಗುವ ನೂರು ಬದಲಾವಣೆಗಳ ನಿಯಂತ್ರಣದ ಯೋಜನೆಗಳಲ್ಲಿ, ಸುಮಾರು ಮೂವತ್ತು ಮಾತ್ರ ಯಶಸ್ಸು ಕಾಣುತ್ತವೆ. ಇನ್ನುಳಿದ ಎಪ್ಪತ್ತು ಸೋಲನ್ನನುಭವಿಸುತ್ತವೆ. ಅಪೇಕ್ಷಿತ ಫಲವನ್ನು ಹೊಂದದೆ ಸದ್ದಿಲ್ಲದೆ ನೆಲ ಕಚ್ಚುತ್ತವೆ!ಬದಲಾಗದೆಯೆ ಗಿಡವು ಮರವು ತಾನಾದೀತೆ?/

ಇದ್ದ ರೀತಿಯೆ ಶಿಶುವು ಬೆಳೆದು ನಿಂತೀತೆ?//

ಬದಲಾವಣೆಯೆ ಜಗದ ಬೆಳವಣಿಗೆ ಸಂಕೇತ/

ಅದನರಿತು ಬದುಕುತಿರು –ನವ್ಯಜೀವಿ//ನೀವು ಅಂತರ್ಜಾಲದಲ್ಲಿ ಪುಸ್ತಕಗಳ ಮಾರಾಟದ ಅಮೆಜಾನ್‌ ತಾಣವನ್ನು ಸೇರಿ, ಅಲ್ಲಿ ‘ಚೇಂಜ್‌‘ ಹಾಗೂ ‘ಮ್ಯಾನೇಜ್‌ಮೆಂಟ್‌‘ ಎಂಬ ಎರಡು ಪದಗಳನ್ನೊಳಗೊಂಡ ಪುಸ್ತಕಗಳ ಪಟ್ಟಿಯನ್ನು ಕೇಳಿ ನೋಡಿ. ನಿಮಗೆ ಸುಮಾರು ಎಂಬತ್ತು ಸಾವಿರದಷ್ಟು ಪುಸ್ತಕಗಳ ರಾಶಿ ಎದುರಾಗುತ್ತದೆ. ಅವುಗಳಲ್ಲಿ ಕೆಲವನ್ನಾದರೂ ಓದಿ ಜೀರ್ಣಿಸಿಕೊಳ್ಳಬೇಕೆನ್ನಲು ಒಂದು ಜೀವಮಾನ ಪ್ರಾಯಶಃ ಸಾಕಾಗುವುದಿಲ್ಲ. ಹಾಗಾದರೆ ಈ ವಿಷಯ ಮ್ಯಾನೇಜ್‌ಮೆಂಟಿನ ವಲಯಗಳಲ್ಲಿ ನೂರಾರು ವರ್ಷಗಳಿಂದ ಚರ್ಚೆಯಾಗಿರುವ ಗಹನ­ವಾದ ವಿಚಾರವೇ ಆಗಿರಬೇಕೆಂದು ಅಂದುಕೊಳ್ಳು­ವುದೂ ತಪ್ಪಾದೀತು. ಏಕೆಂದರೆ, ಈ ವಿಷಯವನ್ನು ಬೋರ್ಡ್‌ರೂಮಿನ ಸುತ್ತಮುತ್ತ ಜನ ಮಾತನಾ­ಡಿಕೊಳ್ಳಲು ಶುರುವಿಟ್ಟದ್ದು ಇತ್ತೀಚೆಗಷ್ಟೆ. ಅಂದರೆ, ಸುಮಾರು ಐವತ್ತು ವರ್ಷಗಳಿಂದೀಚೆಗೆ.ಅದಕ್ಕೂ ಹಿಂದೆ ಈ ವಿಷಯವೇ ಯಾರಿಗೂ ಗೊತ್ತಿರಲಿಲ್ಲ ಎಂದಲ್ಲ, ಗೊತ್ತಿತ್ತು. ಗೊತ್ತಿಲ್ಲದೆಯೇ ಆ ದಿಸೆಯಲ್ಲಿ ಬದಲಾವಣೆಯ ನಿರ್ವಹಣೆಯನ್ನು ಜನ ಮಾಡುತ್ತಿದ್ದರು. ಆದರೆ, ಅದಕ್ಕೆ ನಿರ್ದಿಷ್ಟವಾದ ಕಲಿಕೆಯ ಸ್ವರೂಪವನ್ನು ಕೊಟ್ಟಿರಲಿಲ್ಲ. ಅದಕ್ಕಾಗಿಯೇ ಒಂದು ವಿಶೇಷವಾದ ವಿಭಾಗವನ್ನು ಕಂಪನಿಗಳಲ್ಲಿ ಸೃಷ್ಟಿಸಿರಲಿಲ್ಲ, ಅಷ್ಟೆ!ಈಗಿನಂತೆಯೇ ಜನ ಬಹಳ ಹಿಂದೆಯೂ ಸಾಯುತ್ತಿದ್ದರು. ಆದರೆ, ಆಗ ಬಹುತೇಕ ವೇಳೆಗಳಲ್ಲಿ ಅವರು ಸತ್ತದ್ದೇಕೆ ಎಂದು ತಿಳಿಯುತ್ತಿರಲಿಲ್ಲ, ಅಷ್ಟೆ. ‘ಸಮಯ ಮುಗಿದಿತ್ತು. ಪಾಪ, ಶಿವನ ಪಾದ ಸೇರ್ಕಂಡ‘ ಎಂದು ಜನರಾಡಿಕೊಳ್ಳುತ್ತಿದ್ದರು. ಆದರೆ, ವೈದ್ಯಕೀಯ ಕ್ಷೇತ್ರ ಬೆಳೆದಂತೆಲ್ಲ, ಪ್ರತಿಯೊಬ್ಬನ ಸಾವಿಗೂ ಇದೇ ಕಾರಣ ಎಂಬುದನ್ನಂತೂ ಅರಿತರಲ್ಲ. ಆದು ಬದಲಾವಣೆ. ಅಂದರೆ ಈಗ ಯಾರಾದರೂ ಸತ್ತರೆ– ‘ಈತ ರಕ್ತದ ಕ್ಯಾನ್ಸರಿನಿಂದ ಸತ್ತನಂತೆ. ಪಾಪ, ಕ್ಯಾನ್ಸರಿನ ಕಡೆಯ ಹಂತದಲ್ಲಿದ್ದ!’ ಎಂದು ಸ್ಪಷ್ಟತೆಯ ಕಣ್ಣೀರಿ­ಡುತ್ತಾರೆ.ಆ ದಿಸೆಯಲ್ಲೇ ಮುಂದುವರಿದು ಅನೇಕರನ್ನು ಈ ಮಾರಕ ರೋಗದಿಂದ ಉಳಿಸಿದ್ದಾರಲ್ಲ ಅದು ವೈಜ್ಞಾನಿಕವಾಗಿ ಮುಂದುವರಿದ ಸಮಾಜದ ಕುರುಹು. ಅದನ್ನೇ ನಾವು ನಿರ್ವಹಣೆ ಎನ್ನುವುದು. ‘ಬದಲಾ­ವಣೆಯ ನಿರ್ವಹಣೆ’ ಎಂಬ ಮ್ಯಾನೇಜ್‌ಮೆಂಟ್‌ನ ಇತ್ತೀಚಿನ ತತ್ವವನ್ನೂ ಕೂಡ ಈ ಹಿನ್ನೆಲೆಯಲ್ಲೇ ವಿಶ್ಲೇಷಿಸಿದರೆ, ಕಾರ್ಪೊರೇಟ್‌ ಜಗತ್ತಿನಲ್ಲಿ ಈ ದಿನಗಳಲ್ಲಿ ಹೆಚ್ಚುತ್ತಿರುವ ಇದರ ಪಾತ್ರ ಹಾಗೂ ಸೂಕ್ತತೆಯನ್ನು ಅಲ್ಲಗೆಳೆಯಲಾಗುವುದಿಲ್ಲ.ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಈ ವಿಷಯದ ಬಗ್ಗೆ ಅಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಅತ್ಯಂತ ಗಹನವಾದ ಹಾಗೂ ಸೂಕ್ಷ್ಮವಾದ ವಿಚಾರಧಾರೆಗಳಿವೆ. ನಮ್ಮ ಧೀಮಂತ ಪೂರ್ವಿಕರು ಇಂದಿನ ಕಂಪೆನಿಗಳ ಮಾತಿರಲಿ, ಅನೇಕ ನಾಗರೀಕತೆಗಳು ಕಣ್ತರೆವ ಮುನ್ನವೇ ಈ ವಿಷಯವಾಗಿ ಕೂಲಂಕಷವಾದ ಹಾಗೂ ನಿರ್ವಹಣಾ ಸ್ವರೂಪವಾದ ಮಾಧ್ಯಮದಲ್ಲಿ ಸಂಪೂರ್ಣವಾದ ಅರ್ಥ ವಿವರಣೆ ನೀಡಿಬಿಟ್ಟಿದ್ದಾರೆ. ಅವರ ಅನೇಕ ಸಿದ್ಧಾಂತ ಹಾಗೂ ದರ್ಶನಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಉಲ್ಲೇಖಿಸಬಯಸುತ್ತೇನೆ.(1) ಜೀವನ ಎನ್ನುವುದು ಸಾಗರದ ಅಲೆಯಂತೆ ಒಮ್ಮೆ ಏಳು, ಒಮ್ಮೆ ಬೀಳು. ಇವುಗಳನ್ನೊಳಪಡಿಸಿ­ಕೊಂಡೇ ಮನುಷ್ಯ ದೋಣಿಯನ್ನು ನಡೆಸಬೇಕು.(2) ನಲಿವು ಹಾಗೂ ನೋವು, ಈ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ನಲಿವು ಕಂಡಾಗ ಅದರ ಬೆನ್ನಲ್ಲೇ ನೋವು ತನ್ನನ್ನೇ ತಾನು ತೋರ್ಪಡಿಸಿಕೊಳ್ಳಲು ಕಾದು ನಿಂತಿದೆ ಎಂಬುದೇ ಸತ್ಯ.(3) ನಮ್ಮ ಈ ದೇಹ ಕ್ಷಣದಿಂದ ಕ್ಷಣಕ್ಕೆ ಬದಲಾವಣೆ ಹೊಂದುತ್ತಲೇ ಇದೆ. ಆ ಬದಲಾವಣೆಗೆ ತಕ್ಕಂತೆ ನಿನ್ನ ಬದುಕನ್ನು ರೂಪಿಸಿಕೊಳ್ಳಬೇಕು.(4) ಜೀವನದಲ್ಲಿನ ಯಾವ ಬದಲಾವಣೆಯೂ ವ್ಯರ್ಥವಲ್ಲ. ಅವೆಲ್ಲ ಮನುಷ್ಯನ ಬೆಳವಣಿಗೆಗೆ ಹಾಗೂ ಮನೋವಿಕಾಸಕ್ಕೆ ಮೂಲ. ಹಾಗಾಗಿ ಅವುಗಳನ್ನು ಅರ್ಥೈಸಿಕೊಂಡು ನಿನ್ನ ಶ್ರೇಯಸ್ಸಿಗಾಗಿ ಅವುಗಳನ್ನು ನಿಯಂತ್ರಿಸು.(5) ಮೂಲ ಧ್ಯೇಯಗಳನ್ನು ಬಲಿಕೊಡದೆ, ಕಾಲಕ್ಕ­ನು­ಗುಣವಾಗಿ ಬದಲಾಗದ ಅದಾವ ಸಿದ್ದಾಂತವೇ ಆಗಿರಲಿ ಅಥವಾ ಅದಾವ ಧರ್ಮವೇ ಆಗಿರಲಿ ಅಥವಾ ಅದಾವ ಜೀವನಕ್ರಮವೇ ಆಗಿರಲಿ, ಅವಾವುದೂ ಪ್ರಗತಿಯ ಸಂಕೇತವೇ ಅಲ್ಲ. ಅವೆಲ್ಲ ಕಾಲಕ್ರಮದಲ್ಲಿ ವಿಗತಿಯ ದ್ಯೋತಕಗಳೇ ಆಗಿಬಿಡುವುದರಲ್ಲಿ ಸಂಶಯವೇ ಇಲ್ಲ.ಮೇಲಿನ ಉಲ್ಲೇಖಗಳಲ್ಲಿ ‘ಜೀವನ’ ಎಂಬ ಪದಕ್ಕೆ ‘ಕಂಪೆನಿಯ ಬೆಳವಣಿಗೆ’ ಎಂದೂ; ‘ನಲಿವು ಹಾಗೂ ನೋವು’ ಎಂಬ ಪದಗಳಿಗೆ ‘ಲಾಭ–ನಷ್ಟ’ ಎಂದೂ; ‘ದೇಹ’ ಎಂಬ ಪದಕ್ಕೆ ‘ಕಂಪೆನಿ’ ಎಂದೂ; ‘ಮೂಲ ಧ್ಯೇಯ’ ಎಂಬ ಪದಕ್ಕೆ ‘ಕಂಪೆನಿಯ ವಿಷನ್‌’ ಎಂದೂ ಬದಲಾಯಿಸಿಬಿಡಿ.ಅಮೆಜಾನ್‌ ತಾಣದಲ್ಲಿರುವ ಆ ಎಂಬತ್ತು ಸಾವಿರ ಪುಸ್ತಕಗಳ ಒಟ್ಟು ಜೀವಾಳ ಮೇಲಿನ ಐದು ವಾಕ್ಯಗಳಲ್ಲೇ ಸಮಗ್ರವಾಗಿ ಪ್ರತ್ಯಕ್ಷವಾಗಿಬಿ­ಡುತ್ತದೆ. ಸಾವಿರಾರು ವರ್ಷಗಳ ಹಿಂದೆಯೇ ಕುಳಿತಲ್ಲೇ ಕುಳಿತು ಬಾನಾಚೆ ದಿಟ್ಟಿಸುತ್ತ ನಮ್ಮ ಭಾರತೀಯ ಪರಂಪರೆ ಕಂಡುಕೊಂಡ ಸತ್ಯವನ್ನು ಈಗ ಐವತ್ತು ವರ್ಷಗಳಿಂದೀಚೆಗೆ ಮ್ಯಾನೇಜ್‌ಮೆಂಟ್‌ ಗುರುಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಬೇರೆ ಬೇರೆ ಪದಪ್ರ­ಯೋಗಗಳನ್ನು ಬಳಸಿಕೊಂಡು ಅರ್ಥೈಸಿಕೊಂಡಿದ್ದಾರೆ ಎಂದರೆ ನನಗಂತೂ ತಪ್ಪು ಎಂದು ಅನಿಸುವುದೇ ಇಲ್ಲ!ವ್ಯತ್ಯಾಸ ಇಷ್ಟೆ; ನಮ್ಮ ಪರಂಪರೆಯ ದರ್ಶನಗಳೆಲ್ಲ ಬೋರ್ಡ್‌ರೂಮಿನ ಸುತ್ತಮುತ್ತಲಿನ ಕಾರ್ಯಕ್ಷೇತ್ರದಲ್ಲಿ ಅದರದೇ ಆದ ಭಾಷೆಯ ಮಡಿಲಲ್ಲಿ ಸಮಂಜಸವಾ­ದರೂ, ಅದರ ನಿರ್ವಹಣೆಯಲ್ಲಿ ಮಾತ್ರ ಸ್ವಲ್ಪಮಟ್ಟಿಗಿನ ಸ್ವಂತತೆ ಇದೆ. ವಾಸ್ತವಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆಯಿಂದಾಗಿ ಉಂಟಾಗುವ ವಿವಿಧ ರಂಗುಗಳ ಓಕುಳಿ ಇದೆ. ಪ್ರತಿಯೊಂದು ಕಂಪೆನಿಯೂ ತನ್ನ ಬದಲಾವಣೆಗಳನ್ನು ನಿಯಂತ್ತಿಸುವುದು ತನ್ನದೇ ಸತ್ಯಾಸತ್ಯತೆಗಳ ಚೌಕಟ್ಟಿನಲ್ಲಿ, ತನ್ನದೇ ಆದ ಆಶೋತ್ತರಗಳ ಬೆನ್ನಲ್ಲಿ, ತನ್ನದೇ ಆದ ಧ್ಯೇಯಗಳ ಹಿನ್ನೆಲೆಯಲ್ಲಿ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ತನ್ನದೇ ಆದ ಸಮರ್ಥತೆಯ ಮತ್ತು ಸಂಚಯನಶಕ್ತಿಯ ಆಧಾರದಲ್ಲಿ ಹಾಗಾಗಿ ಈ ವಿಷಯ ಕುರಿತು ಈ ಐವತ್ತು ವರ್ಷಗಳಲ್ಲಿ ಆ ಪಾಟಿ ಪುಸ್ತಕಗಳ ರಾಶಿ ರಾಶಿ. ಇದರ ಕಲಿಕೆಯ ಹಿಂದೆ ವಿಶ್ವದ ಮ್ಯಾನೇಜ್‌ಮೆಂಟ್‌ ಗುರುಗಳೆಲ್ಲರ ಸಾಲು ಸಾಲು.ಈ ಹಂತದಲ್ಲಿ ನಾನು ನಿಮಗೊಂದು ಬಹಳ ಸ್ವಾರಸ್ಯವಾದ ವಿಷಯವನ್ನು ತಿಳಿಸಲಿಚ್ಛಿಸುತ್ತೇನೆ. ವಿಶ್ವದ ಎಲ್ಲ ಕಂಪೆನಿಗಳಲ್ಲಿ ಬದಲಾವಣೆಯ ನಿಯಂತ್ರಣದ ಕುರಿತಾದ ಕಾರ್ಯಕ್ರಮಗಳನ್ನು ಪರಿಷ್ಕರಿಸಿ, ಅಧ್ಯಯನ ನಡೆಸಿ, ಅಂತಹ ಕಾರ್ಯಕ್ರಮಗಳಲ್ಲಿ ಶೇಕಡಾ ಎಪ್ಪತ್ತರಷ್ಟು ಕಾರ್ಯಕ್ರಮಗಳು ಸಂಪೂರ್ಣವಾಗಿ ಸೋತಿವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಅಂದರೆ ಕಂಪೆನಿಯೊಂದರಲ್ಲಿ ನಡೆಸಲಾಗುವ ನೂರು ಬದಲಾವಣೆಗಳ ನಿಯಂತ್ರಣದ ಯೋಜನೆಗಳಲ್ಲಿ, ಸುಮಾರು ಮೂವತ್ತು ಮಾತ್ರ ಯಶಸ್ಸು ಕಾಣುತ್ತವೆ. ಇನ್ನುಳಿದ ಎಪ್ಪತ್ತು ಸೋಲನ್ನನುಭವಿಸುತ್ತವೆ. ಅಪೇಕ್ಷಿತ ಫಲವನ್ನು ಹೊಂದದೆ ಸದ್ದಿಲ್ಲದೆ ನೆಲ ಕಚ್ಚುತ್ತವೆ!ಈ ವಿಷಯ ಕುರಿತು ಈ ಪಾಟಿ ಪುಸ್ತಕಗಳಿವೆ, ಆ ಪಾಟಿ ಮ್ಯಾನೇಜ್‌ಮೆಂಟ್‌ ಗುರುಗಳಿದ್ದಾರೆ. ಕಂಪೆನಿ ನಡೆಸುವ ನಾಯಕರಂತೂ ತಾವೇ ವಿಶ್ವದಲ್ಲಿ ಅಗ್ರಮಾನ್ಯ ಮಹಿಮಾವಂತರು ಹಾಗೂ ಚತುರರಲ್ಲೇ ಚತುರರು ಎಂದೂ ನಂಬಿದ್ದಾರೆ.ಆದರೂ, ಕಂಪೆನಿಯೊಂದರ ಬದಲಾವಣೆಯ ನಿಯಂತ್ರಣದಲ್ಲಿ ಮಾತ್ರ ಅದೇಕೆ ಯಶಸ್ಸು ಮರೀಚಿಕೆಯಾಗಿದೆ? ಇದು ಅಷ್ಟೊಂದು ಕಷ್ಟವಾ? ಅಥವಾ ಮೇಲ್ನೋಟಕ್ಕೆ ಸುರಸುಂದರಿಯಂತೆ ಕಂಡರೂ ಇದು ಒಳಗೆಲ್ಲೋ ಅಡಗಿ ಕುಳಿತಿರುವ ಶೂರ್ಪಣಿಕೆಯಾ? ಅಥವಾ ಅರ್ಥಕ್ಕೆ ಬಹಳ ಸಲೀಸಾಗಿ ಎಟಕುವುದರಿಂದಲೇ ಅನುಷ್ಠಾನಕ್ಕೆ ಅನಗತ್ಯ ಕಾರ್ಪಣ್ಯವಾ? ಪ್ರಶ್ನೆಗಳು ಅಸಂಖ್ಯಾತ.ಹಾಗೆಂದು ಈ ವಿಷಯ ಕಬ್ಬಿಣದ ಕಡಲೆಯೂ ಅಲ್ಲ. ಅಂತೆಯೇ ಇದನ್ನು ಹುರಿದ ಕಡಲೇಪುರಿಯೆಂದು ಸರಳ­ವಾಗಿಸದೆ ಅದರ ಎಲ್ಲ ಸೂಕ್ಷ್ಮಗಳನ್ನೂ ಅರ್ಥ ಮಾಡಿ­ಕೊಂಡು ಸಂದರ್ಭೋಚಿತವಾದ ಪರಿಹಾರ­ಗಳನ್ನು ಹುಡುಕಿಕೊಳ್ಳುವುದೇ ಇಲ್ಲಿ ಯಶಸ್ಸಿನ ಗುಟ್ಟು. ಕಂಪೆನಿಗಳಲ್ಲಿ ಹಿಂದೆ ಇದ್ದ ಬದಲಾವಣೆಗಳಿಗೂ ಹಾಗೂ ಅಲ್ಲಿ ಇಂದು ಆಗುತ್ತಿರುವ ಬದಲಾವಣೆಗಳಿಗೂ ಇರುವ ಮೂಲಭೂತವಾದ ವ್ಯತ್ಯಾಸವನ್ನು ಅರಿತುಕೊಂಡು ಅದರ ಆಧಾರದ ಮೇಲೆಯೇ ಬದಲಾವಣೆಗಳನ್ನು ನಿಯಂತ್ರಿಸುವುದು ಸೂಕ್ತವಾದೀತು. ಒಂದು ಮಾತು ಸತ್ಯ. ‘ಬದಲಾವಣೆ ಅನಿವಾರ್ಯ’. ಯಾವುದೇ ಸಮಸ್ಯೆಯ ಅನಿವಾರ್ಯವಾದಾಗ ಅದನ್ನು ನಮ್ಮ ಒಳಿತಿಗಾಗಿ, ಶ್ರೇಯಸ್ಸಿಗಾಗಿ ನಿಯಂತ್ರಿಸಿಕೊಳ್ಳುವುದೇ ಜಾಣತನ. ನಮ್ಮ ಪರಂಪರೆ ಸ್ಪಷ್ಟವಾಗಿ ತಿಳಿಸಿಕೊ­ಡುವಂತೆ, ಅದೇ ಬೆಳವಣಿಗೆಯ ಹಾಗೂ ಏಳಿಗೆಯ ಹಾದಿ ಕೂಡ ಆಗಿದೆ!ಕಂಪೆನಿಯೊಂದರ ಬದಲಾವಣೆಗಳು ಯಾವುವು? ಅವುಗಳನ್ನು ಹೇಗೆ ನಿಯಂತ್ರಿಸಬಹುದು? ಬೋರ್ಡ್‌­ರೂಮಿನ ಸುತ್ತಮುತ್ತಲಿನ ಅಧಿಕಾರಿಗಳಲ್ಲಿ ಅದಕ್ಕೆ ಇರಬೇಕಾದ ಅರ್ಹತೆಗಳೇನು? ಬದಲಾವಣೆಯ ಅಥವಾ ಪರಿವರ್ತನೆಯ ಈ ಕಾಳಗಕ್ಕೆ ಸಜ್ಜಾಗುವುದು ಹೇಗೆ? ಹೀಗೆ ಅನೇಕ ಪ್ರಶ್ನೆಗಳನ್ನು ಮುಂದಿನ ಕೆಲ ಲೇಖನಗಳಲ್ಲಿ ಚರ್ಚಿಸುವ ಉದ್ದೇಶ ನನ್ನದು. ಈ ಚಿಂತನೆಯ ಹಾದಿಯಲ್ಲಿ ನೀವೆಲ್ಲ ನನ್ನ ಜೊತೆಗಿರುತ್ತೀರಿ ಎಂದು ನಂಬಿದ್ದೇನೆ.ಲೆಟ್‌ ಅಸ್‌ ಚೇಂಜ್‌ ಫಾರ್‌ ದಿ ಬೆಟರ್‌! ಒಳಿತಿಗಾಗಿ ಬದಲಾಗೋಣ, ಹಾಗೆಯೇ ಬದಲಾವಣೆಗಳನ್ನು ಒಳಿತಿಗಾಗಿ ನಿಯಂತ್ರಿಸೋಣ. ಅದೇ ಮನುಷ್ಯನ ಜೀವನ ಧರ್ಮ ಕೂಡ...

ಲೇಖಕರನ್ನು 

satyesh.bellur@gmail.com ಇ-ಮೇಲ್ ವಿಳಾಸದಲ್ಲಿ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry